* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 3 October 2023

Felicitation by Niveditha Sports Club- ನಿವೇದಿತಾ ಕ್ರೀಡಾ ಸಂಸ್ಥೆಯಿಂದ V S R ಸನ್ಮಾನ

ತುಮಕೂರಿನ ಅಗ್ರಹಾರದ ನಿವೇದಿತಾ ಕ್ರೀಡಾ ಸಂಸ್ಥೆಯ ಪ್ರಮುಖರುಗಳು ಇಂದು (ದಿ. 03-10-2023 ಮಂಗಳವಾರ) ಸಂಜೆ ನಮ್ಮ ನಿವಾಸಕ್ಕೆ ಆಗಮಿಸಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (94) ಅವರನ್ನು ಅಕ್ಕರೆಯಿಂದ ಸನ್ಮಾನಿಸಿದರು.

 ಸಂಸ್ಥೆಯ ಅಧ್ಯಕ್ಷರೂ, ತಿಪಟೂರು ತಾಲ್ಲೂಕು ಬಿಳಿಗೆರೆ ಸರ್ಕಾರಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯರೂ, ಹಾಲಿ ಬೆಂಗಳೂರಿನ ನಿವಾಸಿಗಳೂ ಆಗಿರುವ ಶ್ರೀ ಜಿ.ಕೆ.ಗುಂಡಣ್ಣರವರ ನೇತೃತ್ವದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳೂ, ನಿವೃತ್ತ ತಹಸೀಲ್ದಾರರೂ, ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷರೂ ಆದ ಶ್ರೀ ಕೆ.ವಿ.ಕುಮಾರ್ ರವರು, ಸಂಸ್ಥೆಯ ಸಹಕಾರ್ಯದರ್ಶಿಗಳಾದ ನಿವೃತ್ತ ಎಸ್.ಬಿ.ಎಂ. ಉದ್ಯೋಗಿ ಶ್ರೀ ಎ.ಎಸ್.ಕೃಷ್ಣಮೂರ್ತಿ ರವರು, ಸಂಸ್ಥೆಯ ಖಜಾಂಚಿಗಳಾದ ವೈಶ್ಯ ಕೋ ಆಪರೇಟೀವ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಶ್ರೀ ಎಸ್.ಕೆ.ಶ್ರೀಧರ ಮೂರ್ತಿರವರು ಆಗಮಿಸಿ, ಈ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ಆರ್.ವಿಶ್ವನಾಥನ್ ಇದ್ದೆವು.

ನಿವೇದಿತಾ ಕ್ರೀಡಾ ಸಂಸ್ಥೆ 1975 ರಲ್ಲಿ ಅಗ್ರಹಾರದಲ್ಲಿ ಶ್ರೀ ಗುಂಡಣ್ಣನವರು ಮತ್ತು ಇತರ ಆ ಕಾಲದ ಅವರ ತರುಣ ಮಿತ್ರರ ನೇತೃತ್ವದಲ್ಲಿ ಪ್ರಾರಂಭವಾಯಿತು. ಕ್ರೀಡಾ ಚಟುವಟಿಕೆಗಳ ಜೊತೆಗೆ ಪ್ರತಿ ವರ್ಷ ಅಗ್ರಹಾರದಲ್ಲಿ ಗಣಪತಿ ಉತ್ಸವ ಆಚರಿಸಲಾರಂಭಿಸಿದರು. ಅದೇ ಹೊತ್ತಿಗೆ ಬಹುತೇಕ ಆ ಎಲ್ಲ ತರುಣರು ಉದ್ಯೋಗಸ್ಥರಾಗಿ ವಿವಿಧೆಡೆ ಚದುರಿದರು. ಆದರೂ ವರ್ಷಕ್ಕೊಮ್ಮೆ ಗಣೇಶೋತ್ಸವವನ್ನು ತಪ್ಪದೆ ಆಚರಿಸುತ್ತ, ಸತತ 21 ವರ್ಷಗಳ ಕಾಲ ಗಣೇಶೋತ್ಸವ ನೆರವೇರಿಸಿದರು. ಇದು ಆ ಕಾಲದಲ್ಲಿ ಬಹು ಪ್ರಸಿದ್ಧಿ ಪಡೆದಿತ್ತು. ಆ ಬಳಿಕ 1999 ರಿಂದ ನಿರಂತರವಾಗಿ ವರ್ಷಕ್ಕೊಮ್ಮೆ ಗಣಪತಿ ಹೋಮ ಏರ್ಪಡಿಸುತ್ತಿದ್ದಾರೆ. ಆ ಮೂಲಕ  ಆಗಿನ ಎಲ್ಲ ಹಳೆಯ ಮಿತ್ರರು ಮತ್ತು ಕುಟುಂಬ ವರ್ಗದವರು ಒಂದೆಡೆ ಸೇರುವಂತೆ ಮಾಡುತ್ತಿದ್ದಾರೆ. ಈ ವರ್ಷ (ದಿ. 29-10-2023) ಕೊರಟಗೆರೆ ರಸ್ತೆಯಲ್ಲಿರುವ ಗೊಲ್ಲಹಳ್ಳಿಯ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಗಣಪತಿ ಹೋಮ ಆಯೋಜಿಸಿದ್ದಾರೆ. ಇದರ ಜೊತೆ-ಜೊತೆಯಲ್ಲೇ ತುಮಕೂರಿನಲ್ಲಿ ವಾಸವಿರುವ ಸಮುದಾಯದ ಅತ್ಯಂತ ಹಿರಿಯ ವಯಸ್ಸಿನವರನ್ನು ಅವರ ಮನೆಗೇ ತೆರಳಿ ಗೌರವಿಸುವ ಸತ್ಸಂಪ್ರದಾಯವನ್ನು ಶ್ರೀ ಜಿ.ಕೆ.ಗುಂಡಣ್ಣನವರು ಆರಂಭಿಸಿದ್ದು, ಅದರ ಭಾಗವಾಗಿ ಇಂದು ನಮ್ಮ ಮನೆಗೆ ಆಗಮಿಸಿದ್ದರು.

 ಶ್ರೀ ಗುಂಡಣ್ಣನವರು ಮತ್ತು ಮಿತ್ರ ವೃಂದದ ಪ್ರೀತಿ-ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ದೇವರು ಅವರೆಲ್ಲರಿಗೂ ಒಳಿತನ್ನುಂಟುಮಾಡಲಿ ಎಂದು ಹಾರೈಸುತ್ತೇವೆ.

 -ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2023