ಬೆಂಗಳೂರಿನ ಪ್ರಖ್ಯಾತ “ನಾರಾಯಣ ನೇತ್ರಾಲಯ” ಸಮೂಹದ ಉಪಾಧ್ಯಕ್ಷರೂ, ನೇತ್ರ ತಜ್ಞರೂ ಆದ ಡಾ. ನರೇನ್ ಶೆಟ್ಟಿ ಅವರನ್ನು ಭೇಟಿಯಾಗಿ ಮಾತನಾಡುವ ಸುಸಂದರ್ಭ ಇಂದು (ದಿ. 07-12-2023, ಗುರುವಾರ) ನಮಗೊದಗಿತು.
“ನಮ್ಮ ತುಮಕೂರು” ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆಯಲ್ಲಿ “ನಾರಾಯಣ ದೇವಾಲಯ” ಎಂಬ ಕಣ್ಣಾಸ್ಪತ್ರೆ ಇದೆ. ಬಡವರಿಗೆ ಅಂದರೆ ಬಿ.ಪಿ.ಎಲ್. ಕಾರ್ಡುದಾರರಿಗೆ ಸಂಪೂರ್ಣ ಉಚಿತವಾಗಿ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಮಾಡುವ ಅತ್ಯಾಧುನಿಕ ತಾಂತ್ರಿಕ ಸೌಲಭ್ಯದ ಹಾಗೂ ನುರಿತ ನೇತ್ರತಜ್ಞರು, ಸಿಬ್ಬಂದಿಯುಳ್ಳ ಆಸ್ಪತ್ರೆಯಿದು.
“ನಾರಾಯಣ ನೇತ್ರಾಲಯ”ದ ರೂವಾರಿಗಳೂ, ಸುಪ್ರಸಿದ್ಧ ನೇತ್ರ ತಜ್ಞರೂ ಆಗಿದ್ದ ದಿವಂಗತ ಡಾ. ಭುಜಂಗ ಶೆಟ್ಟಿ ಅವರು ಸ್ಥಾಪಿಸಿರುವ ಈ ಆಸ್ಪತ್ರೆಯು, ಬಡಜನರಿಗೆ ನೆರವಾಗಬೇಕೆಂಬ ಅವರ ಕನಸಿನ ಕೂಸೂ ಹೌದು. ಈ ಆಸ್ಪತ್ರೆ ಸ್ಥಾಪಿತವಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ಮೊದಲ ವಾರ್ಷಿಕೋತ್ಸವ ಸಂಭ್ರಮ. ಈ ಪ್ರಯುಕ್ತ ದಿವಂಗತ ಡಾ.ಭುಜಂಗ ಶೆಟ್ಟಿ ಅವರ ಸುಪುತ್ರರಾದ ಡಾ. ನರೇನ್ ಶೆಟ್ಟಿ ಅವರು ಇಲ್ಲಿಗೆ ಆಗಮಿಸಿದ್ದರು. ಆಗ ಅವರನ್ನು ನಾನು ಮತ್ತು ವಿಶ್ವನಾಥನ್ ಭೇಟಿಯಾದೆವು. ಅವರ ವಿನಯಶೀಲ - ಸೌಜನ್ಯಪೂರ್ಣ ವ್ಯಕ್ತಿತ್ವ ಆಕರ್ಷಿಸಿತು. ಅವರ ತಂದೆಯವರನ್ನು ನೆನಪಿಸಿತು. ಕಣ್ಣಿನ ಆರೋಗ್ಯಕ್ಕೆ ಮಧುಮೇಹಿಗಳು ವಹಿಸಬೇಕಾದ ಎಚ್ಚರಿಕೆ, ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದ ಆಹಾರಕ್ರಮ-ಜೀವನಶೈಲಿ ಕುರಿತು ವಿವರಿಸಿದರು. ನಾವು ತುಮಕೂರಿನಲ್ಲಿ ನಡೆಸುವ “ಡಿವಿಜಿ ನೆನಪು” ಕಾರ್ಯಕ್ರಮದ ಬಗ್ಗೆ ತಿಳಿದು ಅಚ್ಚರಿಯೊಡನೆ ಸಂತಸ ವ್ಯಕ್ತಪಡಿಸಿದರು. ಡಾ. ನರೇನ್ ಶೆಟ್ಟಿಯವರ ಜೊತೆಗಿನ ಈ ಭೇಟಿ ಅಪಾರ ಸಂತಸ ಮೂಡಿಸಿತು. ಈ ಭೇಟಿಗೆ ಕಾರಣಕರ್ತರಾದ “ನಾರಾಯಣ ನೇತ್ರಾಲಯ”ದ ಸಾರ್ವಜನಿಕ ಸಂಪರ್ಕಾಧಿಕಾರಿಗಳೂ, ಆತ್ಮೀಯರೂ ಆದ ಶ್ರೀ ಮುಳುಕುಂಟೆ ಪ್ರಕಾಶ್ ಅವರೂ ಇದ್ದರು.