* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 4 October 2024

Kali Maa Statue- 2024- ಕಾಳಿ ಪ್ರತಿಮೆ ತಂಗನಹಳ್ಳಿ

 ಕಾಳಿ ಮಾತೆಯ ಈ ಆಕರ್ಷಕ ವಿಗ್ರಹದ ದರ್ಶನ ಶರನ್ನವರಾತ್ರಿಯ ಮೊದಲ ದಿನವಾದ ಇಂದು (03-10-2024, ಗುರುವಾರ) ನಮಗಾಯಿತು. ನಾನು ಮತ್ತು ಆರ್.ವಿಶ್ವನಾಥನ್ ಇಂದು ತಂಗನಹಳ್ಳಿ ಕೆರೆಯ ಬಳಿ ಹೋಗಿದ್ದಾಗ ಕೆರೆಯ ಕೋಡಿ ಹತ್ತಿರ ರಸ್ತೆ ಬದಿಯಲ್ಲೇ ಬಂಡೆಯೊಂದರ ಮೇಲೆ ನಿರ್ಮಿಸಿರುವ ಈ ಕಾಳಿ ಮಾತೆಯ ಬೃಹತ್ ವಿಗ್ರಹ ಗಮನಸೆಳೆಯಿತು. ಇದೇ ಮೊದಲ ಬಾರಿಗೆ ಕಾಳಿಯ ಇಂತಹುದೊಂದು ವಿಗ್ರಹವನ್ನು ಈ ಭಾಗದಲ್ಲಿ ನೋಡಿ ನಮಗೆ ಆನಂದಾಶ್ಚರ್ಯಗಳಾದವು.

ಸುಮಾರು ಮೂರು ಅಡಿಗಳಷ್ಟು ಎತ್ತರದ ಪೀಠದ ಮೇಲೆ ಏಳು ಅಡಿ ಎತ್ತರದ ಕಾಳಿ ಮಾತೆಯ ವಿಗ್ರಹವನ್ನು ಸುಂದರವಾಗಿ ನಿರ್ಮಿಸಲಾಗಿದೆ. ದೇವಿಯ ಎದುರುಬದಿ ದೊಡ್ಡದಾದ ತ್ರಿಶೂಲವಿದೆ. ಬಂಡೆಗಲ್ಲಿನ ಮೇಲೆ ಈ ವಿಗ್ರಹವಿದೆ. ಹಿಂಬದಿ ತಂಗನಹಳ್ಳಿ ಕೆರೆಯ ವಿಹಂಗಮ ನೋಟವಿದೆ. ಖಾಸಗಿ ವ್ಯಕ್ತಿಯೊಬ್ಬರು ತಮಿಳುನಾಡಿನ ಶಿಲ್ಪಿಗಳನ್ನು ಕರೆಸಿ ಅವರಿಂದ ಈ ವಿಗ್ರಹವನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru





Tanganahalli Lake- 2024- ತಂಗನಹಳ್ಳಿ ಕೆರೆ ಕೋಡಿ ದೃಶ್ಯ

 ತಂಗನಹಳ್ಳಿ ಕೆರೆ ಕೋಡಿ ಬಿದ್ದಿದೆ. ಹಾಲ್ನೊರೆಯಂಥ ನೀರು ಕೆರೆಯ ಕೋಡಿಯಿಂದ ಹೊರಹೊಮ್ಮಿ ಧೋ ಎಂದು ಸದ್ದು ಮಾಡುತ್ತ ಹರಿಯುತ್ತಿದೆ. ನಾನು ಮತ್ತು ಆರ್. ವಿಶ್ವನಾಥನ್ ಬೈಕ್ ನಲ್ಲಿ ಇಂದು (ದಿ. 03-10-2024, ಗುರುವಾರ) ಮಧ್ಯಾಹ್ನ ಈ ದಾರಿಯಲ್ಲಿ ಹೋಗುವಾಗ, ಧೋ ಎಂಬ ನೀರಿನ ಹರಿವಿನ ಸದ್ದು ಕೇಳಿ ಕುತೂಹಲದಿಂದ ಬಂಡೆಗಳ ಮಧ್ಯೆ ಒಳಹೊಕ್ಕುನೋಡಿದಾಗ ಕಂಡ ಈ ದೃಶ್ಯ ಮನಮೋಹಕವಾಗಿತ್ತು. ಮೈಮರೆಸುವಂತಿತ್ತು. ನಿನ್ನೆ ರಾತ್ರಿಯಿಡೀ ಸುರಿದ ಭರ್ಜರಿ ಮಳೆಯಿಂದ ಈ ಕೆರೆ ಇಂದು ಬೆಳಗ್ಗೆ ಕೋಡಿ ಬಿದ್ದಿದೆ.

ತಂಗನಹಳ್ಳಿ ಕೆರೆಯು ದೇವರಾಯನದುರ್ಗದ ತಪ್ಪಲಿನಲ್ಲೇ ಇದೆ. ಆದರೆ ಇದು ಕೊರಟಗೆರೆ ತಾಲ್ಲೂಕಿಗೆ ಸೇರುತ್ತದೆ. ದುರ್ಗದ ಹಳ್ಳಿ ಮೂಲಕ ಅನುಪನಹಳ್ಳಿ ಮಾರ್ಗವಾಗಿ ಹೋಗುವಾಗ ಎಡಕ್ಕೆ ತಿರುಗಿ ಆ ದಾರಿಯಲ್ಲಿ ನೇರ ಹೋಗುವಾಗ ತಂಗನಹಳ್ಳಿ ಸಿಗುತ್ತದೆ. ಹಾಗೆಯೇ ಮುಂದೆ ಸಾಗಿದರೆ ದಾರಿಯ ಬಲಬದಿಯಲ್ಲಿ ರಸ್ತೆಯಿಂದ ಒಳಭಾಗದಲ್ಲಿ ಈ ಕೆರೆ ಕಾಣುತ್ತದೆ. ವಾತಾವರಣ ಸುಂದರವಾಗಿದೆ.
- ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru