hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Tuesday, 1 April 2025

VSR Felicitated by MLA Jyothi Ganesh/ 2025/ ಶಾಸಕರಿಂದ ವಿ.ಎಸ್.ಆರ್. ಅವರಿಗೆ ಗೌರವಾರ್ಪಣೆ

 


ಶಾಸಕರಿಂದ ವಿ.ಎಸ್.ಆರ್. ಅವರಿಗೆ ಗೌರವಾರ್ಪಣೆ

---------------------------------

"ಎಲ್ಲಿದ್ದೀರಿ? ನಿಮ್ಮ ಮನೆಗೆ ಈಗ ಬರುತ್ತಿದ್ದೇನೆ" - ಶಾಸಕ ಮಿತ್ರರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಇಂದು (ದಿ. 31-03-2025) ಸಂಜೆ 6 ಗಂಟೆಯಲ್ಲಿ ಕರೆ ಮಾಡಿದರು. ಮುಂದಿನ ಹತ್ತು ನಿಮಿಷಗಳಲ್ಲಿ ನಮ್ಮ ಮನೆಯಲ್ಲಿದ್ದರು. "ಯುಗಾದಿ" ಹಬ್ಬದ ಹಿನ್ನೆಲೆಯಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಯೋಧರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆದುಕೊಂಡರು.

ಬಳಿಕ ನಮ್ಮೊಡನೆ (ಅಂದರೆ ನನ್ನ ಮತ್ತು ವಿಶ್ವನಾಥನ್ ಜೊತೆ) ಚರ್ಚಿಸುತ್ತ ಕುಳಿತರು. ಮೂಲತಃ ಕೇರಳದ ಪಾಲಕ್ಕಾಡ್ ನವರಾದ ನಮ್ಮ ತಾತ ಶ್ರೀ ವಿ.ಎಸ್.ರಾಮ ಅಯ್ಯರ್ ಅವರು ಆ ಕಾಲದ ಸೈನ್ಯದಲ್ಲಿ ಸೇರಿ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಏಡನ್ ವರೆಗೆ ಹೋಗಿದ್ದದ್ದು, ಆ ಬಳಿಕ ಅವರು ಉತ್ತರ ಭಾರತದ ರೈಲ್ವೆಯಲ್ಲಿದ್ದದ್ದು, ನಂತರ ಮೈಸೂರು ರೈಲ್ವೆಗೆ ಬಂದು, ಆಗಿನ ಮೈಸೂರು ಪ್ರಾಂತ್ಯದ ಹಲವೆಡೆ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿದ್ದು ಕೊನೆಗೆ ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ ನಿವೃತ್ತರಾದುದು, ಬಳಿಕ ತುಮಕೂರಿನಲ್ಲಿ ನೆಲೆನಿಂತ ವಿಷಯದಿಂದ ಹಿಡಿದು ಅನೇಕ ವಿಷಯಗಳು ಮಾತುಕತೆಯಲ್ಲಿ ಬಂದುಹೋದವು. ಮಾತನಾಡುತ್ತಾ ಸರಿಸುಮಾರು ಎರಡು ತಾಸು ಸರಿದದ್ದು ಗೊತ್ತಾದದ್ದೇ ಅವರು ರಾತ್ರಿ 8-15 ರಲ್ಲಿ ಹೊರಟಾಗ! ಈ ಅನಿರೀಕ್ಷಿತ ಭೇಟಿ ಹಾಗೂ ಸುದೀರ್ಘ ಮಾತುಕತೆ ಉಭಯತ್ರರಲ್ಲೂ ಸಂತೋಷವನ್ನುಂಟುಮಾಡಿತು. ಕೊನೆಯಲ್ಲಿ ಅವರಿಗೆ ಶುಭ ಕೋರುತ್ತಾ, ಆತ್ಮೀಯವಾಗಿ ಬೀಳ್ಕೊಟ್ಟೆವು.
ಶ್ರೀ ಜ್ಯೋತಿಗಣೇಶ್ ರವರು ಸತತ ಎರಡನೇ ಬಾರಿ "ನಮ್ಮ ತುಮಕೂರು" ನಗರದ ಶಾಸಕರಾಗಿದ್ದಾರೆ. ಬಿ.ಇ. ಮತ್ತು ಎಂ.ಬಿ.ಎ. ಪದವೀಧರರು. ನಮಗೆ ಸುಮಾರು 25 ವರ್ಷಗಳಷ್ಟು ದೀರ್ಘಕಾಲದ ಸನ್ಮಿತ್ರರು. ಸರಳತೆ, ಸಜ್ಜನಿಕೆಗಳಿಂದ ಕೂಡಿದವರು. ಶಾಸಕರಾಗುವ ಮೊದಲು ಹಾಗೂ ಶಾಸಕರಾದ ಬಳಿಕ ನಾವು ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿಯೂ ಪಾಲ್ಗೊಂಡಿದ್ದವರು. ಶ್ರೀಯುತರ ಇಂದಿನ ಸೌಜನ್ಯಯುತ ಭೇಟಿಗೆ ಕೃತಜ್ಞತೆಗಳು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 31-03-2025, #rsiyertumakuru



-----Video---