* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday, 25 April 2023

Sri Shankara Jayanthi - 2023 ಶ್ರೀ ಶಂಕರ ಜಯಂತಿ ಆಚರಣೆ

ಇಂದು (ದಿ.25-04-2023) ವೈಶಾಖ ಶುದ್ಧ ಪಂಚಮಿ. “ಶ್ರೀ ಶಂಕರ ಜಯಂತಿ". ನಮ್ಮ ತಂದೆ ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (94) ಅವರು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರನ್ನು ಭಕ್ತಿ ಶ್ರದ್ಧೆಯಿಂದ ಸ್ಮರಿಸಿ, ಪೂಜಿಸಿ, ನಮಿಸಿದರು.

1966 ರಲ್ಲಿ ತುಮಕೂರಿಗೆ ಆಗಿನ ದ್ವಾರಕಾ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ಸಚ್ಚಿದಾನಂದ ತೀರ್ಥ ಮಹಾಸ್ವಾಮಿಗಳು ಆಗಮಿಸಿದ್ದರು. ನಮ್ಮ ತಂದೆ ರಾಮಚಂದ್ರನ್ ಮತ್ತು ಗೆಳೆಯರು ಶ್ರೀಗಳನ್ನು ಭೇಟಿ ಆಗಿದ್ದಾಗ, “ಮನೆ-ಮನೆಗಳಲ್ಲೂ ಶ್ರೀ ಶಂಕರಜಯಂತಿ ಆಚರಿಸಬೇಕು” ಎಂಬ ಆಶಯ ವ್ಯಕ್ತಪಡಿಸಿದ್ದರು. ಇದರಿಂದ ಸ್ಫೂರ್ತಿಗೊಂಡು ರಾಮಚಂದ್ರನ್ ಅವರು ತಮ್ಮ ಸ್ನೇಹಿತರೊಂದಿಗೆ 1968 ರಲ್ಲಿ ಶ್ರೀ ಶಂಕರ ಜಯಂತಿ ಸಭಾ ಸ್ಥಾಪಿಸಿ, ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿಯನ್ನು ಆರಂಭಿಸಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಸಂತಮಹಂತರು, ವಿದ್ವಾಂಸರುಗಳನ್ನು ಆಹ್ವಾನಿಸಿ ಪ್ರವಚನ, ಉಪನ್ಯಾಸಗಳನ್ನು ಏರ್ಪಡಿಸಿದರು. ಶೃಂಗೇರಿ ಜಗದ್ಗುರುಗಳಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥ ಮಹಾ ಸ್ವಾಮಿಗಳು, ಕಂಚಿ ಪೀಠಾಧಿಪತಿಗಳಾಗಿದ್ದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳು, ನಾಡಿನ ಮಹಾನ್ ವಿದ್ವಾಂಸರಾಗಿದ್ದ ಪ್ರೊ.ಎಸ್.ಕೆ.ರಾಮಚಂದ್ರರಾವ್ ರವರು, ವಿದ್ವಾನ್ ರಂಗನಾಥ ಶರ್ಮಾ ರವರು ಒಳಗೊಂಡು ಹಲವು ಮಹನೀಯರು ಇಲ್ಲಿಗೆ ಆಗಮಿಸಿದ್ದರೆಂಬುದು ಹೆಮ್ಮೆಯ ವಿಷಯ. ಆ ಕಾಲದಲ್ಲಿ ಶ್ರೀ ಶಂಕರ ಜಯಂತಿಯೆಂದರೆ ಚಿಕ್ಕಪೇಟೆಯಲ್ಲಿ ಹಬ್ಬದ ವಾತಾವರಣವೇ ಉಂಟಾಗುತ್ತಿತ್ತು. ಶ್ರೀ ಶಂಕರರ ಭಾವಚಿತ್ರ ಉತ್ಸವ, ಲಕ್ಷ್ಮೀಕಾಂತ ದೇಗುಲದಲ್ಲಿ ಮಠಮುದ್ರೆ ಮತ್ತು ಸಭಾಮುದ್ರೆ ವೇ.ಬ್ರ.ಶ್ರೀ ಟಿ.ಎಸ್. ವೆಂಕಟೇಶ ಜೋಯಿಸರ (ಶಾಮಣ್ಣನವರು) ನೇತೃತ್ವದಲ್ಲಿ ವಿಶೇಷ ಪೂಜಾದಿಗಳು, ಸಂಜೆ ಖ್ಯಾತನಾಮರಿಂದ ಉಪನ್ಯಾಸ, ಗಣ್ಯರಿಗೆ ಸನ್ಮಾನ ಹೀಗೆ ದಿನವಿಡೀ ಸಂಭ್ರಮಾಚರಣೆ ಇರುತ್ತಿತ್ತು. ಶಂಕರ ಜಯಂತಿಯಲ್ಲಿ ರಾಮಚಂದ್ರನ್ ರವರ ನೇತೃತ್ವದಲ್ಲಿ ಸಮಾಜದ ಎಲ್ಲ ವರ್ಗಗಳವರೂ ಪಾಲ್ಗೊಳ್ಳುತ್ತಿದ್ದುದು ಒಂದು ವಿಶೇಷವಾಗಿರುತ್ತಿತ್ತಲ್ಲದೆ, ಜಯಂತಿ ಸಂದರ್ಭದಲ್ಲಿ ನಡೆಯುತ್ತಿದ್ದ ವಿವಿಧ ಪ್ರತಿಭಾ ಸ್ಪರ್ಧೆಗಳಲ್ಲಿ ಸಮಾಜದ ಎಲ್ಲ ವರ್ಗಗಳವರೂ ಭಾಗವಹಿಸಿ ಬಹುಮಾನಿತರಾಗುತ್ತಿದ್ದುದು ಮತ್ತೊಂದು ವಿಶೇಷವಾಗಿರುತ್ತಿತ್ತು. (ಉದಾಹರಣೆಗೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ|| ಶ್ರೀ ಹೆಚ್.ಎಂ.ಗಂಗಾಧರಯ್ಯರವರು ಬಹುಮಾನ ವಿತರಣೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನಿತರಾಗಿದ್ದುದು ಹಾಗೂ ನಗರದ ಎನ್.ಆರ್.ಕಾಲೋನಿ ನಿವಾಸಿಯಾಗಿದ್ದ ವಿದ್ಯಾರ್ಥಿ ದಿ|| ಶ್ರೀ ಯಶವಂತ ಕುಮಾರ್ ಪ್ರಬಂಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಿತರಾಗಿದ್ದುದು ಸ್ಮರಣೀಯ.)
ದಶಕಗಳ ಕಾಲ ಈ ರೀತಿ ಶಂಕರ ಜಯಂತಿ ಮೂಲಕ ಸಪ್ತಾಹ, ಪ್ರವಚನ, ಪೂಜಾದಿಗಳನ್ನು ಆಚರಿಸಿದ ಹೆಮ್ಮೆ ಶ್ರೀ ವಿ.ಎಸ್.ರಾಮಚಂದ್ರನ್ ಅವರದ್ದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 25-04-2023










Monday, 10 April 2023

with Vidushis Lakshmi Nagaraj & Indu Nagaraj, Tumakuru- 10-04-2023

ನಾಡಿನ ಉದಯೋನ್ಮುಖ ಯುವ ಗಾಯಕಿಯರಾದ ವಿದುಷಿ ಲಕ್ಷ್ಮೀ ನಾಗರಾಜ್ ಮತ್ತು ವಿದುಷಿ ಇಂದೂ ನಾಗರಾಜ್ ಸಹೋದರಿಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೆಲಹೊತ್ತು ಮಾತನಾಡುವ ಸದವಕಾಶ ನನಗೆ ಮತ್ತು ವಿಶ್ವನಾಥನ್ ಗೆ ಇಂದು (ದಿ.10-04-2023, ಸೋಮವಾರ) ಸಂಜೆ ತುಮಕೂರಿನಲ್ಲಿ ಒದಗಿತು.

ಜೊತೆಯಲ್ಲೇ ಇದೇ ಮೊದಲ ಬಾರಿಗೆ ಮತ್ತೋರ್ವ ಯುವ ಕಲಾವಿದರಾದ ಮೃದಂಗ ವಿದ್ವಾನ್ ವಿನೋದ್ ಶ್ಯಾಮ್ ಆನೂರು ಮತ್ತು ಹಿರಿಯ ಪಿಟೀಲು ವಾದಕರಾದ ವಿದ್ವಾನ್ ಎಸ್.ಯಶಸ್ವೀ ಅವರನ್ನೂ ಭೇಟಿ ಮಾಡುವ ಸುಸಂದರ್ಭ ದೊರಕಿತು.

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಶ್ರೇಷ್ಠ ಗಾಯಕಿಯರಾಗಿ ಶ್ರೀಮತಿ ಲಕ್ಷ್ಮೀ ನಾಗರಾಜ್ ಮತ್ತು ಶ್ರೀಮತಿ ಇಂದೂ ನಾಗರಾಜ್ ಸಹೋದರಿಯರದ್ದು ಪ್ರಸ್ತುತ ದೊಡ್ಡ ಹೆಸರು. ಕೀರ್ತಿ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ ಅದಾವುದರ ಕಿಂಚಿತ್ ಸುಳಿವೂ ಇಲ್ಲದ ಸೌಜನ್ಯಶೀಲ, ಸುಸಂಸ್ಕೃತ ನಡವಳಿಕೆ ಇವರದ್ದು. ಇದೇ ರೀತಿ ಶ್ರೀ ವಿನೋದ್ ಶ್ಯಾಮ್ ಆನೂರು ಅವರೂ ಪ್ರತಿಭಾವಂತ ಕಲಾವಿದರು. ಅಷ್ಟೇ ಅಲ್ಲದೆ ನಾಡಿನ ಪ್ರಖ್ಯಾತ ಪಕ್ಕವಾದ್ಯ ಕಲಾವಿದರಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾರವರ ಸುಪುತ್ರರು. ಪಿಟೀಲು ವಾದಕರಾದ ವಿದ್ವಾನ್ ಎಸ್.ಯಶಸ್ವೀ ಅವರು “ತಾರಕ್ಕ ಬಿಂದಿಗೆ” ಹಾಡಿನ ಖ್ಯಾತಿಯ ವಿದ್ವಾನ್ ಸುಬ್ಬರಾವ್ ರವರ ಸುಪುತ್ರರು. ಈ ನಾಲ್ವರೂ ಪ್ರಸಿದ್ಧ ಕಲಾವಿದರೊಂದಿಗೆ ಕಲೆ-ಕಲಾವಿದರ ಬಗ್ಗೆ ನಡೆಸಿದ ಸಂಕ್ಷಿಪ್ತ ಸಂವಾದದ ಸಂದರ್ಭದಲ್ಲಿ ನಮಗಾದ ಸಂತಸ ಅಪಾರ. “ವಿದ್ಯಾ ದದಾತಿ ವಿನಯಂ” ಎಂಬುದಕ್ಕೆ ನಾಲ್ವರೂ ಉದಾಹರಣೆಯಂತಿದ್ದರು.

ಅಂದ ಹಾಗೆ ಈ ಕಲಾವಿದರು ಇಂದು ಸಂಜೆ ತುಮಕೂರಿನ ಚಿಕ್ಕಪೇಟೆಯ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ನಡೆಯುತ್ತಿರುವ “ಶ್ರೀರಾಮೋತ್ಸವ”ದಲ್ಲಿ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲು ಆಗಮಿಸಿದ್ದರು. ಆಗ ರಾಮೋತ್ಸವದ ರೂವಾರಿಗಳಾದ ಮಾಜಿ ನಗರಸಭಾ ಸದಸ್ಯ ಶ್ರೀ ಹೆಚ್.ಕೆ.ನಾಗರಾಜ್ ರವರ ನಿವಾಸದಲ್ಲಿ ಇವರೆಲ್ಲರ ಭೇಟಿ ಆಯಿತು. ಶ್ರೀ ನಾಗರಾಜ್ ಮತ್ತು ಅವರ ಪುತ್ರ ಶ್ರೀ ಹೆಚ್.ಎನ್.ಗಣೇಶ್ ಭಟ್ ಮತ್ತು ಕುಟುಂಬ ವರ್ಗದವರಿಗೆ ಧನ್ಯವಾದಗಳು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 10-04-2023