ನಾಡಿನ ಉದಯೋನ್ಮುಖ ಯುವ ಗಾಯಕಿಯರಾದ ವಿದುಷಿ ಲಕ್ಷ್ಮೀ ನಾಗರಾಜ್ ಮತ್ತು ವಿದುಷಿ ಇಂದೂ ನಾಗರಾಜ್ ಸಹೋದರಿಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೆಲಹೊತ್ತು ಮಾತನಾಡುವ ಸದವಕಾಶ ನನಗೆ ಮತ್ತು ವಿಶ್ವನಾಥನ್ ಗೆ ಇಂದು (ದಿ.10-04-2023, ಸೋಮವಾರ) ಸಂಜೆ ತುಮಕೂರಿನಲ್ಲಿ ಒದಗಿತು.
ಜೊತೆಯಲ್ಲೇ ಇದೇ ಮೊದಲ ಬಾರಿಗೆ ಮತ್ತೋರ್ವ ಯುವ ಕಲಾವಿದರಾದ ಮೃದಂಗ ವಿದ್ವಾನ್ ವಿನೋದ್ ಶ್ಯಾಮ್ ಆನೂರು ಮತ್ತು ಹಿರಿಯ ಪಿಟೀಲು ವಾದಕರಾದ ವಿದ್ವಾನ್ ಎಸ್.ಯಶಸ್ವೀ ಅವರನ್ನೂ ಭೇಟಿ ಮಾಡುವ ಸುಸಂದರ್ಭ ದೊರಕಿತು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಶ್ರೇಷ್ಠ ಗಾಯಕಿಯರಾಗಿ ಶ್ರೀಮತಿ ಲಕ್ಷ್ಮೀ ನಾಗರಾಜ್ ಮತ್ತು ಶ್ರೀಮತಿ ಇಂದೂ ನಾಗರಾಜ್ ಸಹೋದರಿಯರದ್ದು ಪ್ರಸ್ತುತ ದೊಡ್ಡ ಹೆಸರು. ಕೀರ್ತಿ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ ಅದಾವುದರ ಕಿಂಚಿತ್ ಸುಳಿವೂ ಇಲ್ಲದ ಸೌಜನ್ಯಶೀಲ, ಸುಸಂಸ್ಕೃತ ನಡವಳಿಕೆ ಇವರದ್ದು. ಇದೇ ರೀತಿ ಶ್ರೀ ವಿನೋದ್ ಶ್ಯಾಮ್ ಆನೂರು ಅವರೂ ಪ್ರತಿಭಾವಂತ ಕಲಾವಿದರು. ಅಷ್ಟೇ ಅಲ್ಲದೆ ನಾಡಿನ ಪ್ರಖ್ಯಾತ ಪಕ್ಕವಾದ್ಯ ಕಲಾವಿದರಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾರವರ ಸುಪುತ್ರರು. ಪಿಟೀಲು ವಾದಕರಾದ ವಿದ್ವಾನ್ ಎಸ್.ಯಶಸ್ವೀ ಅವರು “ತಾರಕ್ಕ ಬಿಂದಿಗೆ” ಹಾಡಿನ ಖ್ಯಾತಿಯ ವಿದ್ವಾನ್ ಸುಬ್ಬರಾವ್ ರವರ ಸುಪುತ್ರರು. ಈ ನಾಲ್ವರೂ ಪ್ರಸಿದ್ಧ ಕಲಾವಿದರೊಂದಿಗೆ ಕಲೆ-ಕಲಾವಿದರ ಬಗ್ಗೆ ನಡೆಸಿದ ಸಂಕ್ಷಿಪ್ತ ಸಂವಾದದ ಸಂದರ್ಭದಲ್ಲಿ ನಮಗಾದ ಸಂತಸ ಅಪಾರ. “ವಿದ್ಯಾ ದದಾತಿ ವಿನಯಂ” ಎಂಬುದಕ್ಕೆ ನಾಲ್ವರೂ ಉದಾಹರಣೆಯಂತಿದ್ದರು.
ಅಂದ ಹಾಗೆ ಈ ಕಲಾವಿದರು ಇಂದು ಸಂಜೆ ತುಮಕೂರಿನ ಚಿಕ್ಕಪೇಟೆಯ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ನಡೆಯುತ್ತಿರುವ “ಶ್ರೀರಾಮೋತ್ಸವ”ದಲ್ಲಿ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲು ಆಗಮಿಸಿದ್ದರು. ಆಗ ರಾಮೋತ್ಸವದ ರೂವಾರಿಗಳಾದ ಮಾಜಿ ನಗರಸಭಾ ಸದಸ್ಯ ಶ್ರೀ ಹೆಚ್.ಕೆ.ನಾಗರಾಜ್ ರವರ ನಿವಾಸದಲ್ಲಿ ಇವರೆಲ್ಲರ ಭೇಟಿ ಆಯಿತು. ಶ್ರೀ ನಾಗರಾಜ್ ಮತ್ತು ಅವರ ಪುತ್ರ ಶ್ರೀ ಹೆಚ್.ಎನ್.ಗಣೇಶ್ ಭಟ್ ಮತ್ತು ಕುಟುಂಬ ವರ್ಗದವರಿಗೆ ಧನ್ಯವಾದಗಳು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 10-04-2023
No comments:
Post a Comment