* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 12 July 2024

ಸಸ್ಯೋದ್ಯಾನ, ಸಿದ್ಧಾರ್ಥ ನಗರ, ತುಮಕೂರು ದಿ. 11-07-2024- Tree Park, Tumakuru

 ತುಮಕೂರು-ಗುಬ್ಬಿ ರಸ್ತೆಯಲ್ಲಿ ದಿ. 11-07-2024 ರಂದು ನಾನು ಮತ್ತು ಆರ್. ವಿಶ್ವನಾಥನ್ ಬೈಕ್ ನಲ್ಲಿ ಹೋಗುವಾಗ ಅರಣ್ಯ ಇಲಾಖೆಯ “ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ”ದ ಫಲಕ ಕಣ್ಸೆಳೆಯಿತು. ಇದರೊಳಕ್ಕೆ ಹೋಗಿ ಅನೇಕ ವರ್ಷಗಳಾಯಿತೆಂದು, ಒಡನೆಯೇ ಒಳ ಹೊಕ್ಕೆವು. ಹಸಿರಿನಿಂದ ಕಂಗೊಳಿಸುತ್ತ ಇಡೀ ಆವರಣ ಆಕರ್ಷಕವೆನಿಸಿತು.

ಸುಮಾರು 70 ಎಕರೆ ವಿಸ್ತೀರ್ಣದ ಈ ಜಾಗದಲ್ಲಿ ಅರಣ್ಯ ಇಲಾಖೆಯು ವಿವಿಧ ರೀತಿಯ ಸಸಿಗಳನ್ನು ಬೆಳೆಸುವ ಬೃಹತ್ ನರ್ಸರಿಯನ್ನು ಹೊಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲ್ವಿಚಾರಣೆಯಲ್ಲಿ ಅನೇಕ ಕಾರ್ಮಿಕರು ಗಿಡಗಳನ್ನು ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದರು. ಪಕ್ಕದಲ್ಲೇ ಮಕ್ಕಳಿಗಾಗಿ ಮೀಸಲಾದ ಆಟೋಪಕರಣಗಳ ಉದ್ಯಾನ ಗಮನ ಸೆಳೆಯಿತು. ಇಲ್ಲಿ ಬಗೆಬಗೆಯ ಮನೋರಂಜಕ ಉಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳ ಆಟೋಟಗಳಿಗೆ ಯಥೇಚ್ಛ ಅವಕಾಶ ಕಲ್ಪಿಸಲಾಗಿದೆ. ಅಲ್ಲಲ್ಲಿ ಸಿಮೆಂಟಿನಲ್ಲಿ ನಿರ್ಮಿಸಿರುವ ವಿವಿಧ ಗೊಂಬೆಗಳ ಆಕೃತಿಗಳು, ಪಕ್ಷಿ-ಜಿಂಕೆಗಳ ಪ್ರತಿಕೃತಿಗಳು, ಗಿಡಮರಗಳ ನಡುವೆ ಇರುವ ವೀಕ್ಷಣಾ ಗೋಪುರಗಳು, ಮರಗಿಡಗಳ ಕೆಳಗೆ ತಂಪಾದ ವಾತಾವರಣದಲ್ಲಿ ಇರಿಸಿರುವ ಕಲ್ಲು ಬೆಂಚುಗಳು ಚೇತೋಹಾರಿಯಾಗಿವೆ. ಇವೆಲ್ಲಕ್ಕಿಂತ ಮಿಗಿಲಾಗಿ ನವದೆಹಲಿಯ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಲಿಯ ಅನುದಾನದಿಂದ “ಸಾರ್ವಜನಿಕ ಔಷಧಿ ಸಸ್ಯಗಳ ಉದ್ಯಾನವನ”ವನ್ನು ಅಭಿವೃದ್ಧಿಪಡಿಸಿದ್ದು, ವೈವಿಧ್ಯಮಯವಾದ ಔಷಧಿ ಸಸ್ಯಗಳು ಇಲ್ಲಿವೆ. ಈ ಆವರಣದಲ್ಲಿ ಸುಮಾರು 2 ಕಿ.ಮೀ.ಗಳಷ್ಟು ವಾಕಿಂಗ್ ಪಾತ್ ರೂಪಿಸಲಾಗಿದೆ. ಈ ಪರಿಸರದಲ್ಲಿ ನಿರಂತರವಾಗಿ ಕೇಳುವ ನವಿಲುಗಳ ಕೂಗು ರೋಮಾಂಚನಗೊಳಿಸುತ್ತದೆ.
ಈ ಸಸ್ಯೋದ್ಯಾನಕ್ಕೆ (Tree Park) ಪ್ರವೇಶದ ಸಮಯ ಮತ್ತು ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮತ್ತು ಸಂಜೆ 4 ರಿಂದ 6-30 ರವರೆಗೆ ಮಾತ್ರ ಪ್ರವೇಶದ ಸಮಯ. ರಜಾದಿನಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6-30 ರವರೆಗೆ ಪ್ರವೇಶಾವಕಾಶವಿರುತ್ತದೆ. 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಿದೆ. 10 ರಿಂದ 16 ವರ್ಷದ ಮಕ್ಕಳಿಗೆ 5 ರೂ, 16 ವರ್ಷ ಮೇಲ್ಪಟ್ಟವರಿಗೆ 10 ರೂ. ಪ್ರವೇಶ ಶುಲ್ಕವಿದೆ. ಮಾಸಿಕ ವಾಕಿಂಗ್ ಪಾಸ್ 100 ರೂ.ಗಳನ್ನು ಅರಣ್ಯ ಇಲಾಖೆ ನಿಗದಿಪಡಿಸಿದೆ.
ಈ ಸಸ್ಯೋದ್ಯಾನದ ಅಚ್ಚುಕಟ್ಟಾದ ನಿರ್ವಹಣೆಗಾಗಿ ಅರಣ್ಯ ಇಲಾಖೆಗೆ “ಭೇಷ್” ಎನ್ನಲೇಬೇಕು.
-ಆರ್.ಎಸ್.ಅಯ್ಯರ್, ತುಮಕೂರು, ದಿ.12-07-2024














Monday, 1 July 2024

Devarayanadurga - 01- 07- 2024 - ದೇವರಾಯನದುರ್ಗ

 ಹಸಿರು ಹೊದಿಕೆ ಹೊದ್ದ ದೇವರಾಯನದುರ್ಗ...

-----------------------
ತುಮಕೂರಿನ ಹೆಮ್ಮೆಯೆಂದರೆ "ದೇವರಾಯನದುರ್ಗ ಅರಣ್ಯ". ಇತ್ತೀಚಿನ ಸತತ ಮಳೆಯಿಂದ ಇಡೀ ಅರಣ್ಯ ಪ್ರದೇಶ ಹಸಿರಿನಿಂದ ನಳನಳಿಸುತ್ತಿದೆ. ಬೋಳು ಬೋಳಾಗಿದ್ದ ಬೆಟ್ಟಗುಡ್ಡಗಳೆಲ್ಲ ಹಸಿರು-ಹಸಿರಾಗಿ ಕಂಗೊಳಿಸುತ್ತಿದೆ. ಹಸಿರಸಿರಿಯನ್ನೊಮ್ಮೆ ನೋಡಿಬರೋಣವೆಂದು ಇಂದು (ದಿ. 01-07-2024) ಮಧ್ಯಾಹ್ನಾನಂತರ ನಾನು ಮತ್ತು ಆರ್. ವಿಶ್ವನಾಥನ್ ಬೈಕ್ ನಲ್ಲಿ ಹೋದೆವು. ಕೆಳಗಿನ ಬೆಟ್ಟದ ಹಿಂಬದಿ ಬಂಡೆಯೊಂದರ ಮೇಲೆ ಕುಳಿತಾಗ ಕಂಡ ದೃಶ್ಯ ಮೈಮರೆಸಿಬಿಟ್ಟಿತು. ಇಡೀ ಸಾಲು-ಸಾಲು ಬೆಟ್ಟಗಳೇ ಹಸಿರು ಹೊದಿಕೆ ಹೊದ್ದಂತೆ ಹಸಿರ ಸಿರಿ ನಲಿದಾಡುತ್ತಿತ್ತು.
- ಆರ್.ಎಸ್.ಅಯ್ಯರ್, ತುಮಕೂರು, ದಿ. 01-07-2024
Devarayanadurga covered with green...
---------------------
The pride of Tumkur is "Devarayanadurga Forest". Due to the recent continuous rains, the entire forest area is green. All the bald hills are turning green. R. Viswanathan and I went on a bike in the afternoon today (01-07-2024) to see Green atmosphere.. Sitting on a rock at the back of the hill below, the scene was mesmerizing. Entire rows of hills looked like they were covered with green.
-R.S. Iyer Tumakuru, 01-07-2024