ಮದ್ದೂರಿನಲ್ಲೊಂದು ಸುತ್ತು….
--------------------------
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀಕ್ಷಣೆ ಬಳಿಕ ಪಕ್ಕದ ಮದ್ದೂರು ಪಟ್ಟಣಕ್ಕೆ ನಾನು ಮತ್ತು ಬಿ.ಎಸ್. ವೆಂಕಟೇಶ್ ( ದಿ.30-11-2024) ತೆರಳಿದೆವು. ಗೌಡಗೆರೆಯು ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರಿದ್ದರೆ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆಗೆ ಸೇರಿದೆ.
ಮದ್ದೂರಿನ ಮುಖ್ಯರಸ್ತೆ ಪಕ್ಕದ ಕ್ರಾಸ್ ನಲ್ಲಿ ಶಿಂಶಾ ನದಿ ದಂಡೆಯಲ್ಲಿರುವ ಸುಪ್ರಸಿದ್ಧ ಹಾಗೂ ಪುರಾತನವಾದ, ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋದಾಗ ಮಧ್ಯಾಹ್ನ 1-30 ದಾಟಿತ್ತು. ಆದರೂ ಜನಜಂಗುಳಿ ಇತ್ತು. ಪ್ರಶಾಂತ ಪರಿಸರದಲ್ಲಿ ದೇವರ ದರ್ಶನ ಆಯಿತು. ಪ್ರಸಾದ ಸ್ವೀಕರಿಸಿದೆವು. ಪಕ್ಕದಲ್ಲೇ ಖಾಸಗಿಯವರಿಗೆ ಸೇರಿದ ಶ್ರೀ ಶ್ರೀನಿವಾಸ ದೇವಾಲಯವಿದ್ದು ಅದನ್ನೂ ವೀಕ್ಷಿಸಿದೆವು. ಅಲ್ಲಿ ಗೋಶಾಲೆಯೂ ಇದೆ. ಬಳಿಕ ಅಲ್ಲಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ಪುರಾತನ ಹಾಗೂ ಸುಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಹೋದೆವು. ಆದರೆ ಆ ಹೊತ್ತಿಗೆ ದೇವಾಲಯದ ಬಾಗಿಲು ಮುಚ್ಚಿತ್ತು. ಇದೂ ಸಹ ಮುಜರಾಯಿ ಇಲಾಖೆಯದ್ದು. ಹೊರಗಿಂದಲೇ ಅನೇಕ ಭಕ್ತರು ದೇವರಿಗೆ ನಮಿಸುತ್ತಿದ್ದರು. ಈ ದೇವಾಲಯವೂ ಶಿಂಶಾ ನದಿಯ ದಂಡೆಯಲ್ಲಿದ್ದು, ಭಕ್ತರು ನದಿಗೂ ಪೂಜಿಸುತ್ತಾರೆ. ಇದರ ಪಕ್ಕದಲ್ಲೇ ಖಾಸಗಿ ಟ್ರಸ್ಟ್ ಒಂದು ದಾಸೋಹ ಭವನ ನಿರ್ಮಿಸಿಕೊಂಡು ನಿತ್ಯ ದಾಸೋಹ ವ್ಯವಸ್ಥೆ ಮಾಡಿದೆ. ಅಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಅನ್ನ ದಾಸೋಹ (ಅನ್ನ, ಸಾರು, ಮಜ್ಜಿಗೆ ಮತ್ತು ಪಾಯಸ) ನಡೆಯುತ್ತದೆ. ನಾವು ದೇವಾಲಯದ ಆವರಣದಲ್ಲಿದ್ದಾಗ ನಮ್ಮನ್ನು ಟ್ರಸ್ಟ್ ಸಿಬ್ಬಂದಿ ಪ್ರಸಾದ ಸ್ವೀಕರಿಸಲು ಆಹ್ವಾನಿಸಿದರು. ಅಲ್ಲೇ ನಾವು ಪ್ರಸಾದ ಸ್ವೀಕರಿಸಿದೆವು. ಅಚ್ಚುಕಟ್ಟಾದ ಕಟ್ಟಡಗಳು, ಅಚ್ಚುಕಟ್ಟಾದ ಊಟದ ವ್ಯವಸ್ಥೆ ಗಮನ ಸೆಳೆದವು.
ಊಟ ಮುಗಿಸಿ ಹೊರಟಾಗ ಮದ್ದೂರಿನ ಪತ್ರಕರ್ತ ಮಿತ್ರರಾದ ಶ್ರೀ ಕೆ.ಎನ್.ಪುಟ್ಟಲಿಂಗಯ್ಯನವರ ಭೇಟಿ ಆಯಿತು. ಇವರು ನನಗೆ ಸುಮಾರು 20-22 ವರ್ಷಗಳಿಗೂ ಹಿಂದಿನ ಪರಿಚಯ. ಆಗ ಇವರು ತುಮಕೂರಿನಲ್ಲಿ “ವಿಜಯಕರ್ನಾಟಕ”ದ ಜಿಲ್ಲಾ ವರದಿಗಾರರಾಗಿದ್ದರು. ದಶಕದ ಹಿಂದೆ ತುಮಕೂರಿಗೆ ಮತ್ತೆ ಬಂದ ಇವರು, “ತುಮಕೂರು ವಾರ್ತೆ” ಜಿಲ್ಲಾ ಪತ್ರಿಕೆಯ ಸಂಪಾದಕರಾದರು. ಬಳಿಕ ಅದರ ಪ್ರಕಾಶಕರೂ ಆದರು. ಕೆಲವರ್ಷಗಳ ಬಳಿಕ “ತುಮಕೂರು ವಾರ್ತೆ”ಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿದರು. ಇವರು ಮಂಡ್ಯದಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ “ಉದಯಕಾಲ” ಎಂಬ ದಿನಪತ್ರಿಕೆಯ ಸಂಪಾದಕರಾಗಿ ಅದರ ತುಮಕೂರು ಆವೃತ್ತಿಯನ್ನು ಹೊರತಂದರು. ಸ್ವಲ್ಪ ಕಾಲದಲ್ಲೇ ಅದನ್ನು ರಾಜ್ಯ ಮಟ್ಟದ ಪತ್ರಿಕೆಯಾಗಿ ಉನ್ನತೀಕರಿಸಿದ್ದು, ಇದೀಗ “ಉದಯಕಾಲ” ದಿನಪತ್ರಿಕೆಯ ಸಂಪಾದಕರಾಗಿ ಶ್ರೀ ಪುಟ್ಟಲಿಂಗಯ್ಯರವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರವನ್ನು ಕೆಲವರ್ಷಗಳ ಹಿಂದೆಯಷ್ಟೇ ತುಮಕೂರಿನಿಂದ ತಮ್ಮ ಸ್ವಂತ ತಾಲ್ಲೂಕಾದ ಮದ್ದೂರು ಪಟ್ಟಣಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ.
ಶ್ರೀ ಪುಟ್ಟಲಿಂಗಯ್ಯನವರ ಭೇಟಿ ಮತ್ತು ಮಾತುಕತೆ ಸಂತೋಷವನ್ನುಂಟುಮಾಡಿತು. ಬಳಿಕ ಅವರು ಮದ್ದೂರಿನ ಶ್ರೀ ನರಸಿಂಹಸ್ವಾಮಿ ದೇವಾಲಯ ನೋಡಲೇಬೇಕು ಎಂದು ನಮ್ಮನ್ನು ಊರೊಳಗಿರುವ ದೇಗುಲಕ್ಕೆ ಕರೆದೊಯ್ದರು. ಆಗ ವೇಳೆ ಮಧ್ಯಾಹ್ನ 3 ಗಂಟೆ ಆಗುತ್ತಿತ್ತು. ದೇವಾಲಯ ಮುಚ್ಚುವ ಹೊತ್ತು. ಆದರೂ ನಮಗೆ ದೇವರ ದರ್ಶನವಾಯಿತು. ಪ್ರಸಾದವೂ ಲಭಿಸಿತು. ಇಲ್ಲಿರುವ ದೇವರು ಉಗ್ರನರಸಿಂಹಸ್ವಾಮಿ. ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆಯುತ್ತಿರುವ ಉಗ್ರ ಸ್ವರೂಪಿ ನರಸಿಂಹನ ಅಪರೂಪದ ವಿಗ್ರಹವಿರುವುದು ಇಲ್ಲಿನ ವಿಶೇಷ. ಪುರಾಣ ಪ್ರಸಿದ್ಧವಾದ ಈ ಬೃಹತ್ ದೇವಾಲಯವು ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಪಕ್ಕದಲ್ಲೇ ಸುಪ್ರಸಿದ್ಧ ಶ್ರೀ ವರದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ಪಟ್ಟಾಭಿರಾಮ ದೇವಾಲಯವಿದ್ದು, ಆ ಹೊತ್ತಿಗೆ ದೇವಾಲಯದ ವೇಳೆ ಮುಗಿದು ಬಾಗಿಲು ಹಾಕಲ್ಪಟ್ಟಿದ್ದವು. ಹೊರಗಿನಿಂದಲೇ ನೋಡಿ, ನಮಿಸಿದೆವು. ಶ್ರೀ ಪುಟ್ಟಲಿಂಗಯ್ಯನವರಿಂದ ಬೀಳ್ಕೊಂಡು, ಮಧ್ಯಾಹ್ನ 3-15 ಕ್ಕೆ ಅಲ್ಲಿಂದ ಹೊರಟೆವು. ಸಂಜೆ 4-45 ರ ಹೊತ್ತಿಗೆ ತುಮಕೂರಿನಲ್ಲಿದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-12-2024, #rsiyertumakuru