* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday, 29 January 2018

Kuppali- Kavi Shayla 14-01-2018 Sunday

ಕುವೆಂಪು ಮನೆ ಮತ್ತು ಕವಿಶೈಲದಲ್ಲಿ…
******************************************
ಶೃಂಗೇರಿಗೆ ತೆರಳುವ ಮಾರ್ಗಮಧ್ಯೆ (ದಿ.14-01-2018, ಭಾನುವಾರ) ಮಧ್ಯಾಹ್ನ ನಾವು (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್) ಕುಪ್ಪಳಿಯಲ್ಲಿರುವ ರಸಋಷಿ ಕುವೆಂಪು ಅವರ ನಿವಾಸಕ್ಕೆ ಭೇಟಿ ಕೊಟ್ಟೆವು. ಮಲೆನಾಡಿನ ಸುಂದರ ಪ್ರಶಾಂತ ಶುಭ್ರ ಪರಿಸರದಲ್ಲಿರುವ ಆ ಭವ್ಯ ನಿವಾಸದ ಒಳಹೊಕ್ಕು ಹೊರಬರುವಷ್ಟರಲ್ಲಿ ನಮಗಾದ ಅನುಭವ ಅಷ್ಟಿಷ್ಟಲ್ಲ. ಜೊತೆಗೆ ಕವಿಶೈಲವನ್ನೂ ನೋಡಿದೆವು. ಎರಡೂ ಕಡೆ ಕಲಾತ್ಮಕತೆ ಚಿತ್ತಕರ್ಷಕವಾಗಿತ್ತು. ಇವೆರಡೂ ಸ್ಥಳಗಳಿಗೆ ಹರಿದು ಬರುತ್ತಿದ್ದ ಜನಸಮೂಹವು ಇದೊಂದು ಪ್ರವಾಸಿ ಕ್ಷೇತ್ರ ಆಗಿದೆಯೆಂಬುದನ್ನು ಸಂಕೇತಿಸುತ್ತಿತ್ತು. ಅಲ್ಲಿಂದ ನಿರ್ಗಮಿಸುವಾಗ ನಮ್ಮ ಮನದಲ್ಲಿಮೂಡಿದ ಪ್ರಶ್ನೆ- “ಈಗಲೂ ನಮ್ಮನ್ನಾಕರ್ಷಿಸುವ ಮಲೆನಾಡಿನ ನಿಸರ್ಗ ವೈಭವ ಆರೆಂಟು ದಶಕಗಳ ಹಿಂದೆ- ಕುವೆಂಪು ಅವರ ಬಾಲ್ಯದ ದಿನಗಳಲ್ಲಿ –ಹೇಗಿದ್ದಿರಬಹುದು?”








Sirimane Water Falls, 15-01-2018 Monday Sankranthi

ಸಿರಿಮನೆ ಜಲಪಾತದಲ್ಲಿ... (Sirimane Water Falls)
**************************
ದಟ್ಟಕಾನನ ಪ್ರಶಾಂತ ಪರಿಸರದ ನಡುವೆ, ಬೆಟ್ಟಗಳ ಮಧ್ಯೆ "ಧೋ'' ಎಂದು ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ಒಂದು ವಿಶಿಷ್ಟಾನುಭವ. ಇದು ಶೃಂಗೇರಿ ಸನಿಹದ (ಸುಮಾರು 16 ಕಿ.ಮೀ,) ಸಿರಿಮನೆ ಜಲಪಾತದ ಸೊಬಗು. ದಿ.15-01-2018 ರಂದು ಸೋಮವಾರ ನಾವು ತೆರಳಿದಾಗ ವೇಳೆ ಮಧ್ಯಾಹ್ನ 12 ಗಂಟೆ ಆಗಿತ್ತು. ಬಿಸಿಲ ತಾಪ ಚುರುಗುಟ್ಟುತ್ತಿತ್ತು. ಆದರೆ ಪ್ರವೇಶದ್ವಾರದ ಮೂಲಕ ಸುಮಾರು 50 ಕ್ಕೂ ಅಧಿಕ ಮೆಟ್ಟಿಲುಗಳನ್ನು ಇಳಿದು ಹೋದೊಡನೆ "ಧೋ" ಎಂಬ ಲಯಬದ್ಧ ಶಬ್ದದೊಡನೆ ಮೇಲಿನಿಂದ ಧುಮ್ಮಿಕ್ಕುತ್ತಿದ್ದ ಹಾಲಿನ ಬಣ್ಣದ ನೀರು ನಮ್ಮ ಮನವನ್ನು ಸಂಪೂರ್ಣ ಆವರಿಸಿ, ಆಯಾಸವನ್ನೆಲ್ಲ ಕ್ಷಣಾರ್ಧದಲ್ಲಿ ಪರಿಹರಿಸಿಬಿಟ್ಟಿತು. ಜಲಪಾತಕ್ಕೆ ಮೈಯೊಡ್ಡಿ ಆನಂದೋತ್ಸಾಹದಲ್ಲಿ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ಪ್ರವಾಸಿಗರನ್ನು ನೋಡಿದಾಗ ಆದ ಖುಷಿ ಅವರ್ಣನೀಯ. ಅಲ್ಲಿದ್ದ ಅಷ್ಟೂ ಹೊತ್ತೂ ಅಕ್ಷರಶಃ ನಾವೂ ಮೈಮರೆತು ಆ ಜಲಧಾರೆಯನ್ನು ವೀಕ್ಷಿಸುತ್ತ ಆನಂದಿಸಿದೆವು. ಸಿರಿಮನೆ ಜಲಪಾತದ ವೀಕ್ಷಣೆಯೊಂದಿಗೆ ಈ ಬಾರಿಯ ನಮ್ಮ ಶೃಂಗೇರಿ ಪ್ರವಾಸ ಸಂಪನ್ನಗೊಂಡಿತು.








Shringeri visit Jan 14-15th 2018 (R S Iyer Tumkur and R Vishwanathan Tumkur)

ಶೃಂಗೇರಿಯ ದಿವ್ಯ ಸನ್ನಿಧಿಯಲ್ಲಿ...
********************************
ಶೃಂಗೇರಿಯ ದಿವ್ಯ ಸನ್ನಿಧಿಯಲ್ಲಿ ಎರಡನೆಯ ದಿನವಾದ ದಿ.15.01.2018, ಸೋಮವಾರ ಬೆಳಗ್ಗೆಯೂ ಮತ್ತೊಮ್ಮೆ ದೈವದರ್ಶನದ ಸುಯೋಗ ನಮಗೆ ಲಭಿಸಿತು. ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ- ಶ್ರೀ ವಿ.ಎಸ್.ರಾಮಚಂದ್ರನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾವು ಕಳೆದ ವರ್ಷದಂತೆ ಈ ವರ್ಷವೂ ಶೃಂಗೇರಿಯಲ್ಲಿ ಜನವರಿ 14 ಮತ್ತು 15 ರಂದು ಇದ್ದು, ಜ. 14 ರ ಸಂಜೆ ಮತ್ತು ಜ.15 ರಂದು ಬೆಳಗ್ಗೆ ಶ್ರೀ ಶಾರದಾಂಬೆ, ಶ್ರೀ ವಿದ್ಯಾಶಂಕರ ಮತ್ತು ಜಗದ್ಗುರುಗಳೀರ್ವರ ದರ್ಶನ ಪಡೆದೆವು. ಬೆಳಗಿನ ಪ್ರಶಾಂತ ಪರಿಸರ ನಮ್ಮೆಲ್ಲರ ಮನವರಳಿಸಿತು..




R S Iyer Tumkur, V S Ramachandran and R Vishwanathan @ Shringeri


R S Iyer Tumkur, V S Ramachandran and R Vishwanathan @ Shringeri