* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 16 October 2022

ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಗೌರವಾರ್ಪಣೆ- 16-10-2022- Dr. Babu Krishnamurthy- Felicitation Tumkur

ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಕುರಿತ 'ಅಜೇಯ' ಕೃತಿ ಖ್ಯಾತಿಯ ಪ್ರಸಿದ್ಧ ಸಾಹಿತಿಗಳೂ, ಪತ್ರಕರ್ತರೂ, ಮಿಗಿಲಾಗಿ ದಶಕಗಳ ಕಾಲದ ನಮ್ಮ ಆತ್ಮೀಯರೂ, 80 ವಸಂತಗಳ ಜ್ಞಾನವೃದ್ಧರೂ ಆದ ಸನ್ಮಾನ್ಯ ಡಾ. ಬಾಬು ಕೃಷ್ಣಮೂರ್ತಿಯವರನ್ನು ನೋಡುವ, ಅವರೊಡನೆ ಮಾತನಾಡುವ ಮತ್ತು ಅವರನ್ನು ಗೌರವಿಸಿ ಆಶೀರ್ವಾದ ಪಡೆಯುವ ಸದವಕಾಶ ಇಂದು (ದಿ.16-10-2022, ಭಾನುವಾರ) ನಮಗೊದಗಿಬಂದುದು ನಮ್ಮ ಸೌಭಾಗ್ಯವೆಂದೇ ಭಾವಿಸಿದ್ದೇವೆ.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಡಮಾಡಿದ 2021 ನೇ ಸಾಲಿನ "ಆದಿಕವಿ" ಪ್ರಶಸ್ತಿಗೆ ಡಾ. ಬಾಬು ಕೃಷ್ಣಮೂರ್ತಿಯವರು ಭಾಜನರಾಗಿದ್ದು, ಪ್ರಶಸ್ತಿ ಸ್ವೀಕಾರಕ್ಕಾಗಿ ಇಂದು ಬೆಳಗ್ಗೆ ಅವರು "ನಮ್ಮ ತುಮಕೂರು" ನಗರಕ್ಕೆ ಆಗಮಿಸಿದ್ದರು. ಆಗ ನಾನು ಮತ್ತು ವಿಶ್ವನಾಥನ್ ಅವರನ್ನು ಭೇಟಿಯಾಗಿ, ಸರಸ್ ಫೌಂಡೇಷನ್ ಮತ್ತು ಶ್ರೀ ಶಂಕರ ಜಯಂತಿ ಸಭಾ ಪರವಾಗಿ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಸಂತೋಷಿಸಿದೆವು. ಡಾ. ಬಾಬು ಕೃಷ್ಣಮೂರ್ತಿಯವರೂ ಅಷ್ಟೇ ಆನಂದಿಸಿದರು. ಅಂತರಂಗದಿಂದ ಮಾತನಾಡಿದರು.
ದೇವರು ಅವರಿಗೆ ಆಯುರಾರೋಗ್ಯ ನೀಡಲಿ. ಅವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಹೊಮ್ಮಲಿ ಎಂಬುದು ನಮ್ಮ ಹೃದಯಾಂತರಾಳದ ಹಾರೈಕೆ.
- ಆರ್.ಎಸ್.ಅಯ್ಯರ್, ತುಮಕೂರು, ದಿ. 16-10-2022 ಭಾನುವಾರ

Insta: https://www.instagram.com/r_s_iyer/

Youtube: https://youtu.be/crdQhZDTVyY









-----------------------------------------------------------
VIDEO





Saturday, 15 October 2022

ದೇವರಾಯನದುರ್ಗದ ಸೊಬಗು- 11-10-2022- Beauty of Devarayanadurga Hills, Tumakuru

ದೇವರಾಯನದುರ್ಗದ ನಿಸರ್ಗ ಸೌಂದರ್ಯ ಈಗ ಮೈತುಂಬಿಕೊಂಡಿದೆ. ಮೋಡ ಕವಿದ ವಾತಾವರಣದ ಮಧ್ಯೆ ಆಗಾಗ ಸುರಿವ ಮಳೆಯ ಸೊಬಗು ಅವರ್ಣನೀಯ. ಮೇಲಿನ ಬೆಟ್ಟದ ಮೇಲೇರಿದರೆ, ಕಪ್ಪು-ಬಿಳುಪಿನ ಮೋಡಗಳ ಚಲನೆ, ತಂಗಾಳಿ, ದೂರದಲ್ಲಿ ಸುರಿವ ಮಳೆಯ ಸದ್ದು, ಹಸಿರು ಹೊದ್ದ ಬೆಟ್ಟಗುಡ್ಡಗಳು, ದಟ್ಟಾರಣ್ಯ -ಹೀಗೆ ಒಂದೊಂದೂ ರೋಮಾಂಚನಕಾರಿ. ದಿ.11-10-2022 ರಂದು ನಾನು ಮತ್ತು ವಿಶ್ವನಾಥನ್ ದೇವರಾಯನದುರ್ಗಕ್ಕೆ ಹೋದಾಗ ಕಂಡ ದೃಶ್ಯಗಳಿವು.

-R. S. Iyer, Tumakuru







-----------------------------------------------------------------


'ನಮ್ಮ ತುಮಕೂರು' ನಗರದ ಸನಿಹದ ದೇವರಾಯನದುರ್ಗದ ಮೇಲಿನ ಬೆಟ್ಟದ ಮೇಲೆ ದಿ. 11-10-2022 ರಂದು ನಾನು ಮತ್ತು ವಿಶ್ವನಾಥನ್ ನಿಂತಾಗ ಕಾಣಿಸಿದ ಕೆಳಗಿನ ಬೆಟ್ಟದಲ್ಲಿರುವ "ದೇವರಾಯನದುರ್ಗ" ಗ್ರಾಮದ ವಿಹಂಗಮ ನೋಟವಿದು (1 ನೇ ಚಿತ್ರ). ಅದೇ ರೀತಿ ಮೇಲಿನ ಬೆಟ್ಟದ ರಮಣೀಯ ನೋಟವೂ ಇಲ್ಲಿ ಲಭಿಸಿತು (2 ನೇ ಚಿತ್ರ). ಕೆಳಗಿನ ಬೆಟ್ಟದ ದೇವಾಲಯದ ಹಿಂಬದಿಯಲ್ಲಿರುವ ಕೊಳದ ಸೊಬಗಿದು (4 ನೇ ಚಿತ್ರ).





-------------------------------------------------------------------------


VIDEO


Friday, 14 October 2022

Beauty of the Guluru Lake - 07-10-2022- ಗೂಳೂರು ಕೆರೆಯ ಸೊಬಗು

 ಹೌದು, ಇದು ನಮ್ಮೂರಿನ "ದೂದ್ ಸಾಗರ್" ! 'ನಮ್ಮ ತುಮಕೂರು' ನಗರಕ್ಕೆ ಹೊಂದಿಕೊಂಡಿರುವ "ಗೂಳೂರು" ಗ್ರಾಮದ ಕೆರೆ ಇತ್ತೀಚಿನ ಮಳೆಯಿಂದ ತುಂಬಿ ಹರಿಯುತ್ತಿದೆ. ಕೋಡಿಯಿಂದ ನೀರು ಧುಮ್ಮಿಕ್ಕುವುದು ಇನ್ನೂ ಮುಂದುವರೆದಿದೆ. "ಹಾಲಿನಂಥ ನೀರು" ಧೋ ಎಂಬ ಶಬ್ದದೊಡನೆ ಧುಮ್ಮಿಕ್ಕುವ ದೃಶ್ಯ ಮನೋಹರವಾಗಿದೆ. ದೂರದ "ದೂದ್ ಸಾಗರ್" ಜಲಪಾತವನ್ನು ನೆನಪಿಸುವಂತಿದೆ. ಇನ್ನೂ ಈಗಲೂ ಗೂಳೂರು ಕೆರೆ ಜನರನ್ನು ಆಕರ್ಷಿಸುತ್ತಲೇ ಇದೆ. ದಿ. 06-10-2022, ಗುರುವಾರ ಸಂಜೆ ಗೂಳೂರು ಗಣಪನ ದರ್ಶನಕ್ಕೆ ಹೋಗಿದ್ದ ನಾನು ಮತ್ತು ವಿಶ್ವನಾಥನ್ ಹಾಗೆಯೇ ಗೂಳೂರು ಕೆರೆಯತ್ತಲೂ ಹೋಗಿ ಬಂದೆವು. "ಧೋ" ಎಂದು ಸುರಿವ ನೀರಿನ ಶಬ್ದ, ಹಾಲು ಬಣ್ಣದಲ್ಲಿ ಧುಮ್ಮಿಕ್ಕುವ ನೀರು ..... ಹೊತ್ತು ಹೋಗುವುದೇ ಗೊತ್ತಾಗದು. Beauty of the Guluru Lake, very near to Tumakuru.

-ಆರ್.ಎಸ್.ಅಯ್ಯರ್, ತುಮಕೂರು, ದಿ. 07-10-2022 ಶುಕ್ರವಾರ








    VIDEO


Making Guluru Ganapa 2022 ಗೂಳೂರು ಗಣಪತಿಯ ನಿರ್ಮಾಣ....

 ಇತಿಹಾಸ ಪ್ರಸಿದ್ಧ "ಗೂಳೂರು ಗಣಪತಿ"ಯ ನಿರ್ಮಾಣ ಕಾರ್ಯ ಬಹುತೇಕ ಪೂರ್ಣವಾಗುವ ಹಂತ ತಲುಪಿದೆ. ಕಳೆದೊಂದು ತಿಂಗಳಿನಿಂದ 12 ಅಡಿ ಅಗಲ ಹಾಗೂ 12 ಅಡಿ ಎತ್ತರದ ಬೃಹತ್ ಗಣಪನ ತಯಾರಿ ಕೆಲಸವು ಎಂದಿನ ಶ್ರದ್ಧೆ-ಭಕ್ತಿಯಿಂದ ನಡೆಯುತ್ತಿದೆ. ದೀಪಾವಳಿ ಹಬ್ಬದ ದಿನ ಅಧಿಕೃತವಾಗಿ "ಗೂಳೂರು ಗಣೇಶೋತ್ಸವ" ಆರಂಭವಾಗಿ, ಮುಂದಿನ ಒಂದು ತಿಂಗಳ ಕಾಲ ನೆರವೇರಲಿದೆ. ಇದೇ ಗ್ರಾಮದ ಶ್ರೀ ಮೂರ್ತಿ ಅವರು ತಮ್ಮ ಕುಟುಂಬದ ಪರಂಪರೆಯಿಂದ ಬಂದ ಪದ್ಧತಿಯಂತೆ ಶ್ರೀ ಗಣಪತಿಯ ಮೂರ್ತಿಯನ್ನು ಮಣ್ಣಿನಿಂದ ನಿರ್ಮಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

ಇಂದು (ದಿ.06-10-2022, ಗುರುವಾರ) ಸಂಜೆ ನಾನು ಮತ್ತು ವಿಶ್ವನಾಥನ್ ಗೂಳೂರು ಗಣಪತಿ ದೇವಾಲಯಕ್ಕೆ ಭೇಟಿ ಕೊಟ್ಟಾಗ ಕಂಡ ದೃಶ್ಯಗಳಿವು. ತುಮಕೂರು ನಗರದಿಂದ ಕುಣಿಗಲ್ ಕಡೆಗೆ ತೆರಳುವ ಮಾರ್ಗದಲ್ಲಿ ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಗೂಳೂರು ಗ್ರಾಮವಿದೆ. Making the Historic "Guluru Ganapathi" (12 feet width & 12 feet hight) is almost final stage. From Deepavali festival the Guluru Ganeshothsava will be commencing. Today we visited the temple.
-ಆರ್.ಎಸ್.ಅಯ್ಯರ್, ತುಮಕೂರು, ದಿ. 06-10-2022









VIDEO



Tuesday, 4 October 2022

Sriranjini with Sri Ramesh Aravind 2022 ರಮೇಶ್ ಅರವಿಂದ್ ಸಮ್ಮುಖ ಶ್ರೀರಂಜಿನಿ ಗಾಯನ

 ರಮೇಶ್ ಅರವಿಂದ್ ಸಮ್ಮುಖ ಶ್ರೀರಂಜಿನಿ ಗಾಯನ ------------------------------------------

ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾಶಿವಸತ್ಯ ಮತ್ತು ಶ್ರೀ ಶಿವಸತ್ಯ (ಸಂಗೀತ ಸಂಯೋಜಕರು) ದಂಪತಿಗಳ ಸುಪುತ್ರಿ ಕು|| ಶ್ರೀರಂಜಿನಿ ನಾಡಿನ ಪ್ರಸಿದ್ಧ ಚಲನಚಿತ್ರ ನಟರಾದ ಶ್ರೀ ರಮೇಶ್ ಅರವಿಂದ್ ಅವರ ಸಮ್ಮುಖದಲ್ಲಿ ಹಾಡೊಂದನ್ನು ಹಾಡಿ ಸಂಭ್ರಮಿಸಿರುವ ಕಾರ್ಯಕ್ರಮದ ದೃಶ್ಯಾವಳಿ "ಟಿ.ವಿ. 9" ವಾಹಿನಿಯಲ್ಲಿ ದಿ.03-10-2022 ರಂದು ಸಂಜೆ ಪ್ರಸಾರವಾಯಿತು.
ಕು|| ಶ್ರೀರಂಜಿನಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಟಿವಿ 9" ವತಿಯಿಂದ ಅಲ್ಲಿನ ವಿದ್ಯಾರ್ಥಿಗಳಿಗಾಗಿ "ಸ್ಫೂರ್ತಿಯಿಂದ ರಮೇಶ್" ಶೀರ್ಷಿಕೆಯ ಕಾರ್ಯಕ್ರಮ ಏರ್ಪಟ್ಟಿತ್ತು. ಅಲ್ಲಿ ಶ್ರೀ ರಮೇಶ್ ಅರವಿಂದ್ ರವರ ಅಭಿನಯದ "ನಮ್ಮೂರ ಮಂದಾರ ಹೂವೆ" ಚಿತ್ರದ ಜನಪ್ರಿಯ ಗೀತೆಯನ್ನು ಕು|| ಶ್ರೀರಂಜಿನಿ ಹಾಡಿದ್ದು, ಶ್ರೀ ರಮೇಶ್ ಅರವಿಂದ್ ರವರೂ ಸೇರಿದಂತೆ ಅಲ್ಲಿದ್ದ ಎಲ್ಲರೂ ಖುಷಿಪಟ್ಟಿರುವುದು ವಿಶೇಷ. ಶ್ರೀ ರಮೇಶ್ ಅರವಿಂದ್ ರವರು ತಾವು ಕುಳಿತಿದ್ದ ಸ್ಥಳದಿಂದ ಎದ್ದುಬಂದು ವೇದಿಕೆಯಲ್ಲೇ ನಿಂತು ಹುರಿದುಂಬಿಸಿದ್ದು ವಿಶೇಷದಲ್ಲಿ ವಿಶೇಷ. ಕು|| ಶ್ರೀರಂಜಿನಿಗೆ ಅಭಿನಂದನೆಗಳು.
ಕು|| ಶ್ರೀರಂಜಿನಿ ದಿ. 02-10-2022 ರಂದು ತುಮಕೂರಿನ ನಮ್ಮ ಮನೆಗೆ ತಂದೆ ಶ್ರೀ ಶಿವಸತ್ಯ ಮತ್ತು ತಾಯಿ ಶ್ರೀಮತಿ ವಿದ್ಯಾ ಜೊತೆ ಆಗಮಿಸಿದ್ದು ನಮ್ಮೆಲ್ಲರಿಗೂ ಸಂತೋಷವನ್ನುಂಟುಮಾಡಿತು.
-ಆರ್.ಎಸ್.ಅಯ್ಯರ್, ತುಮಕೂರು 04-10-2022

Video








Saturday, 24 September 2022

ಕ್ರಿಸ್ಟಲ್ ಕೆರೆ, ಅನುಪನಹಳ್ಳಿ, ತುಮಕೂರು Crystal Lake, Anupanahalli, Tumakuru 20-09-2022

    ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿದೆ ಈ ಸುಂದರ ಪ್ರಾಕೃತಿಕ ತಾಣ. ದುರ್ಗದಹಳ್ಳಿಯಿಂದ ಮುಂದಕ್ಕೆ ಅನುಪನಹಳ್ಳಿ ಇದೆ. ಆ ಪುಟ್ಟ ಹಳ್ಳಿಯೊಳಗಿಂದ ನಿರ್ಜನ ಪ್ರದೇಶದ ಕಾಲುದಾರಿಯಲ್ಲಿ (ದ್ವಿಚಕ್ರ ವಾಹನದಲ್ಲಿ ತುಂಬ ಕಷ್ಟ ಪಟ್ಟು ಹೋಗಬೇಕು) ಸುಮಾರು ಎರಡು ಕಿ.ಮೀ. ಸಾಗಿದಾಗ  ಈ ತಾಣ ಕಾಣುತ್ತದೆ. ಬೆಟ್ಟ ಗುಡ್ಡಗಳ ಮಧ್ಯೆ ಇರುವ ಈ ಕೆರೆಯನ್ನು "ಕ್ರಿಸ್ಟಲ್ ಕೆರೆ" ಎಂದು ಗುರುತಿಸಲಾಗಿದೆ. ಹಿಂಬದಿ ಮರಳಿನ ಕಾಲುವೆಯೇ ಇದೆ. ಅದರ ಮೇಲೆ ತಿಳಿನೀರು ಹರಿದುಬರುತ್ತದೆ. ಈ ತಾಣದಲ್ಲಿ ಮೌನವೇ ಹೆಪ್ಪುಗಟ್ಟಿದಂತಿರುತ್ತದೆ. ಕೆರೆಯಿಂದ ನೀರು ಕೋಡಿ ಬಿದ್ದು ಹರಿಯುವ ಸದ್ದು ಬಿಟ್ಟರೆ, ಪಕ್ಷಿಗಳ ಕಲರವ ಆಲಿಸಬಹುದು. ನವಿಲುಗಳ ಹಿಂಡು ಕಂಡರೆ ಅದು ಅದೃಷ್ಟ. ಆ ನಿಶ್ಯಬ್ಧ ಪರಿಸರದಲ್ಲಿ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತ ಕುಳಿತರೆ ಅದೊಂದು ಧ್ಯಾನಸ್ಥ ಸ್ಥಿತಿಯಂತಾಗಿಬಿಡುತ್ತದೆ. 
    ಸರ್ವೋದಯ ಕಾಲೇಜಿನ ಎನ್.ಸಿ.ಸಿ. ಶಿಕ್ಷಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಪ್ರದೀಪ್ ಕುಮಾರ್ ಅವರು ನೀಡಿದ ಮಾಹಿತಿ ಮೇರೆಗೆ ನಾನು ಮತ್ತು ಆರ್.ವಿಶ್ವನಾಥನ್ ಈ ತಾಣ ನೋಡಿ ಸಂತೋಷಿಸಿದೆವು.
    -ಆರ್.ಎಸ್.ಅಯ್ಯರ್, ತುಮಕೂರು









 



*********************************************



Saturday, 10 September 2022

Mydala Lake overflow -2022 ಕೋಡಿ ಬಿದ್ದ ಮೈದಾಳ ಕೆರೆ

 “ಮೈದಾಳ ಕೆರೆ” ತುಂಬಿ ತುಳುಕುತ್ತಿದೆ. ತುಮಕೂರು ತಾಲ್ಲೂಕು ಮೈದಾಳ ಗ್ರಾಮದಲ್ಲಿರುವ ಈ ಕೆರೆಯು, ಜೈನ ಧರ್ಮೀಯರ ಪವಿತ್ರ ಸ್ಥಳವಾದ ಮಂದರಗಿರಿ ಬೆಟ್ಟದ ಹಿಂಬದಿಯಲ್ಲಿ, ಬೆಟ್ಟಗುಡ್ಡಗಳ ರಮ್ಯ ಪರಿಸರದ ನಡುವೆ ಹರಡಿಕೊಂಡಿದೆ. ಕೆರೆಯನ್ನೆಲ್ಲ ವ್ಯಾಪಿಸಿರುವ ಶುದ್ಧ ತಿಳಿನೀರು ಮನೋಹರವಾಗಿದೆ. ಕೆರೆಯಿಂದ ನೀರು ಧುಮ್ಮಿಕ್ಕುತ್ತಿದೆ. ರಭಸವಾಗಿ ನೀರು ಮುನ್ನುಗ್ಗುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತಿದೆ. ಇಂದು (ದಿ.06-09-2022, ಮಂಗಳವಾರ) ಸಂಜೆ ನಾನು ಮತ್ತು ವಿಶ್ವನಾಥನ್ ತೆರಳಿದ್ದಾಗ, ಹೊತ್ತು ಜಾರಿದ್ದು ಗೊತ್ತೇ ಆಗಲಿಲ್ಲ!

ಇತ್ತೀಚಿನ ಭರ್ಜರಿ ಮಳೆಯಿಂದ ಕೆರೆ ತುಂಬಿ, ಕೋಡಿ ಬಿದ್ದು ನೀರು ಹೊರಕ್ಕೆ ಹರಿಯುತ್ತಿದೆ. ಆ ನೀರು ಕೆಸರಮಡು ರಸ್ತೆ ಮೂಲಕ ಶೆಟ್ಟಿಹಳ್ಳಿ ಕೆರೆಕಟ್ಟೆಯನ್ನು ತುಂಬಿಸಿದೆ. ಅಲ್ಲಿಂದ ಹೊರಹೊಮ್ಮುವ ನೀರು, ಕಾಲುವೆ ಮೂಲಕ ಮರಳೂರು ಕೆರೆಯತ್ತ ಹರಿಯುತ್ತಿದೆ.
ದಶಕಗಳ ಹಿಂದೆ, ಒಂದು ಕಾಲದಲ್ಲಿ ತುಮಕೂರು ನಗರದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದುದೇ ಇಲ್ಲಿಂದ. ಮೈದಾಳ ಕೆರೆಯಿಂದ ಬೆಳಗುಂಬ ಮಾರ್ಗವಾಗಿ ತುಮಕೂರಿನ ವಿದ್ಯಾನಗರದ ಜಲಸಂಗ್ರಹಾಗಾರಕ್ಕೆ ಬಂದು, ಅಲ್ಲಿನ ಶುದ್ಧೀಕರಣ ಘಟಕದ ಮೂಲಕ ನಗರದಾದ್ಯಂತ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಹೇಮಾವತಿ ನೀರು ಬರಲಾರಂಭಿಸಿದ ಬಳಿಕ ಪ್ರಸ್ತುತ ಈ ನೀರಿನ ಬಳಕೆ ಸೀಮಿತವಾಗಿದೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ.06-09-2022








-------------------------------------------
VIDEOS