ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿದೆ ಈ ಸುಂದರ ಪ್ರಾಕೃತಿಕ ತಾಣ. ದುರ್ಗದಹಳ್ಳಿಯಿಂದ ಮುಂದಕ್ಕೆ ಅನುಪನಹಳ್ಳಿ ಇದೆ. ಆ ಪುಟ್ಟ ಹಳ್ಳಿಯೊಳಗಿಂದ ನಿರ್ಜನ ಪ್ರದೇಶದ ಕಾಲುದಾರಿಯಲ್ಲಿ (ದ್ವಿಚಕ್ರ ವಾಹನದಲ್ಲಿ ತುಂಬ ಕಷ್ಟ ಪಟ್ಟು ಹೋಗಬೇಕು) ಸುಮಾರು ಎರಡು ಕಿ.ಮೀ. ಸಾಗಿದಾಗ ಈ ತಾಣ ಕಾಣುತ್ತದೆ. ಬೆಟ್ಟ ಗುಡ್ಡಗಳ ಮಧ್ಯೆ ಇರುವ ಈ ಕೆರೆಯನ್ನು "ಕ್ರಿಸ್ಟಲ್ ಕೆರೆ" ಎಂದು ಗುರುತಿಸಲಾಗಿದೆ. ಹಿಂಬದಿ ಮರಳಿನ ಕಾಲುವೆಯೇ ಇದೆ. ಅದರ ಮೇಲೆ ತಿಳಿನೀರು ಹರಿದುಬರುತ್ತದೆ. ಈ ತಾಣದಲ್ಲಿ ಮೌನವೇ ಹೆಪ್ಪುಗಟ್ಟಿದಂತಿರುತ್ತದೆ. ಕೆರೆಯಿಂದ ನೀರು ಕೋಡಿ ಬಿದ್ದು ಹರಿಯುವ ಸದ್ದು ಬಿಟ್ಟರೆ, ಪಕ್ಷಿಗಳ ಕಲರವ ಆಲಿಸಬಹುದು. ನವಿಲುಗಳ ಹಿಂಡು ಕಂಡರೆ ಅದು ಅದೃಷ್ಟ. ಆ ನಿಶ್ಯಬ್ಧ ಪರಿಸರದಲ್ಲಿ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತ ಕುಳಿತರೆ ಅದೊಂದು ಧ್ಯಾನಸ್ಥ ಸ್ಥಿತಿಯಂತಾಗಿಬಿಡುತ್ತದೆ.
ಸರ್ವೋದಯ ಕಾಲೇಜಿನ ಎನ್.ಸಿ.ಸಿ. ಶಿಕ್ಷಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಪ್ರದೀಪ್ ಕುಮಾರ್ ಅವರು ನೀಡಿದ ಮಾಹಿತಿ ಮೇರೆಗೆ ನಾನು ಮತ್ತು ಆರ್.ವಿಶ್ವನಾಥನ್ ಈ ತಾಣ ನೋಡಿ ಸಂತೋಷಿಸಿದೆವು.
-ಆರ್.ಎಸ್.ಅಯ್ಯರ್, ತುಮಕೂರು