ಸಿದ್ಧಗಂಗಾ ಮಠದ ಪಕ್ಕದ ರಸ್ತೆಯ ಮೂಲಕ ತುಮಕೂರಿಗೆ ಹೊಂದಿಕೊಂಡಿರುವ ದೇವರಾಯನದುರ್ಗ ಅರಣ್ಯದ ಕಡೆಗೆ ಹೋಗಿ-ಬರುವಾಗಲೆಲ್ಲ ಮಾರನಾಯಕನಹಳ್ಳಿ ತಿರುವಿನಲ್ಲಿರುವ ಸಣ್ಣ ಕೆರೆ ಹಾಗೂ ಆ ಕೆರೆಯ ಅತ್ತ ಕಡೆಯ ದಂಡೆಯ ಮೇಲಿರುವ ಪುರಾತನ ದೇಗುಲ ಮತ್ತು ದೊಡ್ಡ ಗಾತ್ರದ ಬಂಡೆಯೊಂದು ಸದಾ ಗಮನ ಸೆಳೆಯುತ್ತಲೇ ಇರುತ್ತದೆ. ದೇವರಾಯಪಟ್ಟಣಕ್ಕೆ ಸೇರಿರುವ ಆ ಸ್ಥಳಕ್ಕೊಮ್ಮೆ ಹೋಗಿ ನೋಡಬೇಕೆಂಬುದು ಬಹುಕಾಲದಿಂದಿದ್ದ ಆಸೆ. ಅದಿಂದು (ದಿ.01-08-2023) ಈಡೇರಿತು.
ಇಂದು ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ನಾನು ಮತ್ತು ವಿಶ್ವನಾಥನ್ ಬಂಡೆಪಾಳ್ಯದ ಮೂಲಕ ಅಲ್ಲಿಗೆ ತೆರಳಿದ್ದೆವು. ಇತ್ತೀಚಿನ ಸತತ ಮಳೆಯಿಂದ ಕೆರೆಯಲ್ಲಿ ನೀರು ತುಂಬಿದೆ. ಜೊತೆಗೆ ಹೇಮಾವತಿ ನೀರೂ ಸೇರ್ಪಡೆಯಾಗಿದೆ. ಕೆರೆಯ ದಂಡೆಯಲ್ಲಿ “ಹರಿಹರೇಶ್ವರ ದೇವಾಲಯ”ವಿದೆ. ನೋಡುತ್ತಿದ್ದಂತೆಯೇ ಇದೊಂದು ಪುರಾತನ ದೇಗುಲವೆಂಬುದು ಭಾಸವಾಗುತ್ತದೆ. ಅಲ್ಲೇ ಪಾರ್ಶ್ವದಲ್ಲಿ ದೊಡ್ಡದೊಂದು ಬಂಡೆಯಿದೆ. ಆ ಬಂಡೆಯ ಪಕ್ಕ ಕಾಂಕ್ರಿಟ್ ನಲ್ಲಿ ಆಂಜನೇಯನ ಮೂರ್ತಿಯನ್ನು ನಿರ್ಮಿಸಲಾಗಿದೆ. ಆಂಜನೇಯನು ತನ್ನ ಗದೆಯನ್ನು ಕೆಳಗಿಟ್ಟು ಈ ಬಂಡೆಯನ್ನು ಹಿಡಿದೆತ್ತಲು ಪ್ರಯತ್ನಿಸುತ್ತಿರುವ ಭಂಗಿಯಿದೆ. ವಿಗ್ರಹ ಸುಮಾರು ಹತ್ತು ಹನ್ನೆರಡು ಅಡಿ ಎತ್ತರವಿರಬಹುದು.
ಪುರಾತನ ದೇಗುಲ, ಪಕ್ಕದಲ್ಲೊಂದು ಬೃಹತ್ ಬಂಡೆ, ಅದಕ್ಕೆ ಹೊಂದಿಕೊಂಡಂತೆ ಆಂಜನೇಯನ ಕಾಂಕ್ರಿಟ್ ವಿಗ್ರಹ, ಮುಂಭಾಗ ಕೆರೆ, ಅದರ ತುಂಬ ತಿಳಿ ನೀರು, ಅಲ್ಲಿಂದ ಉತ್ತರ ಹಾಗೂ ಪೂರ್ವಕ್ಕೆ ಸಾಲು ಸಾಲು ಬೆಟ್ಟಗಳ ದೃಶ್ಯ, ಕೃಷಿ ಭೂಮಿಯ ಹಸಿರು ರಾಶಿ … ಹೀಗೆ ಇಲ್ಲಿ ಕುಳಿತು ಸೂರ್ಯೋದಯ, ಚಂದ್ರೋದಯ ನೋಡಲು, ಮೋಡ-ಮಂಜು ತುಂಬಿಕೊಂಡ ಆಗಸ ಕಾಣಲು, ಪ್ರಕೃತಿಯನ್ನು ಆಸ್ವಾದಿಸಲು ಇದೊಂದು ಆಕರ್ಷಣೀಯ ಸ್ಥಳವೇನೋ ಹೌದು. ಆದರೆ ಅದನ್ನೆಲ್ಲ ಪರಿಪೂರ್ಣ ಆಸ್ವಾದಿಸುವಷ್ಟು ಸ್ವಚ್ಛತೆ, ನೈರ್ಮಲ್ಯ ಇಲ್ಲಿಲ್ಲವೆಂಬುದು ವಿಷಾದವನ್ನುಂಟುಮಾಡುತ್ತದೆ.
ದೇವಾಲಯ ಹಾಗೂ ಸುತ್ತಲಿನ ಪರಿಸರವನ್ನು ಸಂಪೂರ್ಣ ಸ್ವಚ್ಛವಾಗಿಟ್ಟರೆ, ಸೂಕ್ತ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿದರೆ ಈ ಸ್ಥಳವು ಊರೊಳಗಿನ ಒಂದು ಪ್ರೇಕ್ಷಣೀಯ ತಾಣವಾಗಿ ನಿಸರ್ಗಪ್ರಿಯರನ್ನು ಆಕರ್ಷಿಸೀತು.
Instagram https://www.instagram.com/r_s_iyer/
No comments:
Post a Comment