* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 17 September 2024

Bhimanakatte Swamiji- ದಿ. 17-09-2024, ಮಂಗಳವಾರ - ಭೀಮನಕಟ್ಟೆ ಶ್ರೀಗಳೊಂದಿಗೆ






“ಎಲ್ಲರನ್ನೂ ತಿದ್ದುವುದು ಸಾಧ್ಯವಾಗದು; ಆದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು…”

-ಶ್ರೀ ಭೀಮನಕಟ್ಟೆ ಮಠದ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಈ ಮಾತುಗಳನ್ನು ಹೇಳುವಾಗ ಆ ಮಾತುಗಳಲ್ಲಿ ಹೃತ್ಪೂರ್ವಕತೆ ತುಂಬಿತ್ತು.
“ಚಾತುರ್ಮಾಸ್ಯ ವ್ರತ” ಮುಗಿಸಿ ನಾಳೆ (ದಿ.18-09-2024) ತುಮಕೂರಿನಿಂದ ತೆರಳಲಿರುವ ಹಿನ್ನೆಲೆಯಲ್ಲಿ ಶ್ರೀಗಳ ದರ್ಶನಾಶೀರ್ವಾದ ಪಡೆಯುವ ಸಲುವಾಗಿ ಇಂದು (ದಿ.17-09-2024) ಸಾಯಂಕಾಲ ನಾನು ಮತ್ತು ವಿಶ್ವನಾಥನ್ ತುಮಕೂರಿನ ಶ್ರೀಕೃಷ್ಣಮಂದಿರದಲ್ಲಿ ಶ್ರೀಗಳನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿದೆವು. ಆಗ ಶ್ರೀಗಳು ತುಂಬು ವಿಶ್ವಾಸದಿಂದ ಮಾತನಾಡಿದರು.
ದೇಶ-ಸಮಾಜದ ಪರಿಸ್ಥಿತಿ, ಧರ್ಮ-ಸಂಸ್ಕೃತಿ, ಜನರ ನಡೆ-ನುಡಿ ಹೀಗೆ ಅನೇಕ ವಿಚಾರಗಳ ಬಗ್ಗೆ ಶ್ರೀಗಳು ಸುಮಾರು ಅರ್ಧತಾಸು ಮುಕ್ತಕಂಠದಿಂದ ಚರ್ಚಿಸಿದರು. ಅವರ ಪ್ರತಿ ಮಾತಲ್ಲೂ ಅಪಾರ ಕಳಕಳಿಯಿತ್ತು. ಮಾತಿನ ಕೊನೆಯಲ್ಲಿ ಶ್ರೀಗಳು ನುಡಿದದ್ದು- “ನೋಡಿ, ಸಮಾಜದ ಎಲ್ಲರನ್ನೂ ಸಂಪೂರ್ಣವಾಗಿ ತಿದ್ದಲು ಸಾಧ್ಯವಾಗದು. ಆದರೆ ಪ್ರತಿ ವ್ಯಕ್ತಿಯೂ, ಯಾವುದೇ ಕ್ಷೇತ್ರದಲ್ಲಿರಲಿ, ಆತ ತನ್ನನ್ನು ತಾನು ಶುದ್ಧವಾಗಿಟ್ಟುಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಅಂದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು. ಅಂತಹವರಿಗೆ ಖಂಡಿತ ದೇವರ ಕೃಪೆ ಇರುತ್ತದೆ. ಅಂತಹವರ ಮನೆ-ಮನಸ್ಸಿನಲ್ಲಿ ಅತ್ಯಮೂಲ್ಯವಾದ ಶಾಂತಿ ನೆಲೆಸಿರುತ್ತದೆ”.
ಶ್ರೀಗಳ ದರ್ಶನ ಅಪಾರ ಸಂತಸ ಮೂಡಿಸಿತು. ಶ್ರೀಗಳ ಸರಳತೆ, ನಗುಮುಖ, ತೇಜಸ್ಸು, ಮಧುರವಾದ ಮಾತುಗಳು ಮನಸ್ಸನ್ನಾಕರ್ಷಿಸಿತು.
ಶ್ರೀಗಳಿಗೆ ನಾವು ಮಾಲಾರ್ಪಣೆ ಮಾಡಿ ಗೌರವಿಸಿದೆವು. ಅದೇ ಮಾಲೆಯನ್ನು ನನಗೆ ಹಾಕಿದ ಶ್ರೀಗಳು ಫಲ- ಮಂತ್ರಾಕ್ಷತೆ ನೀಡಿ ನಮ್ಮನ್ನು ಆಶೀರ್ವದಿಸಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆಯಲ್ಲಿ ಪುರಾಣೇತಿಹಾಸ ಪ್ರಸಿದ್ಧವಾದ “ಶ್ರೀ ಭೀಮನಕಟ್ಟೆ ಮಠ” ಇದೆ. ತುಂಗಾ ನದಿಯ ಪ್ರಶಾಂತ ಪರಿಸರದಲ್ಲಿರುವ ಈ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು 2024 ರ ತಮ್ಮ “16 ನೇ ಚಾತುರ್ಮಾಸ್ಯ ವ್ರತ”ವನ್ನು ತುಮಕೂರಿನಲ್ಲಿ ಕೈಗೊಂಡಿದ್ದಾರೆ. ಕಳೆದ ಜುಲೈ 21 ರಿಂದ ಶ್ರೀಗಳು ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀ ಕೃಷ್ಣ ಮಂದಿರದಲ್ಲಿ ಮೊಕ್ಕಾಂ ಮಾಡಿದ್ದಾರೆ. ಸೆಪ್ಟೆಂಬರ್ 18 ರಂದು ಶ್ರೀಗಳ ಚಾತುರ್ಮಾಸ್ಯ ವ್ರತ ಮುಕ್ತಾಯವಾಗಲಿದ್ದು, ಇಲ್ಲಿಂದ ಭೀಮನಕಟ್ಟೆಗೆ ತೆರಳಲಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ.17-09-2024 #rsiyertumakuru

No comments:

Post a Comment