ನಾಡಿನ ಪ್ರಸಿದ್ಧ ಪರಿಸರ ತಜ್ಞರೂ, ವಿಶೇಷವಾಗಿ ಜಲಸಂರಕ್ಷಣಾ ಪರಿಣತರಾಗಿ ಹೆಸರು ಗಳಿಸಿರುವ ಶಿರಸಿಯ ಶ್ರೀ ಶಿವಾನಂದ ಕಳವೆಯವರನ್ನು ಭೇಟಿ ಮಾಡುವ, ಅವರ ಮಾತುಗಳನ್ನಾಲಿಸುವ ಸುಸಂದರ್ಭ ಇಂದು (ದಿ.16-05-2026) ನನಗೆ ಮತ್ತು ವಿಶ್ವನಾಥನ್ ಗೆ ಒದಗಿಬಂತು.
ಜಯಮಂಗಲಿ ನದಿ ನಮ್ಮ ತುಮಕೂರು ಜಿಲ್ಲೆಯ ಹೆಮ್ಮೆ. ಪ್ರಸಿದ್ಧ ಯಾತ್ರಾಸ್ಥಳ ದೇವರಾಯನದುರ್ಗದಲ್ಲಿ ಹುಟ್ಟಿ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟಾರೆ ಸುಮಾರು 110 ಕಿ.ಮೀ. ಹರಿದು ಕೊನೆಗೊಳ್ಳುತ್ತದೆ. ಈ ನದಿಯನ್ನು ಪುನಶ್ಚೇತನಗೊಳಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಇಂದು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಒಂದು ದಿನದ ಕಾರ್ಯಾಗಾರ ವಿ.ವಿ. ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏರ್ಪಟ್ಟಿತ್ತು. ಆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲು ಶಿವಾನಂದ ಕಳವೆಯವರು ಆಗಮಿಸಿದ್ದರು. ಈ ವಿಶೇಷ ಕಾರ್ಯಕ್ರಮ ನಡೆಯುವ ಮಾಹಿತಿ ತಿಳಿದಾಗಲೇ ಇದರಲ್ಲಿ ಪಾಲ್ಗೊಳ್ಳಬೇಕೆಂಬಾಸೆ ಮೂಡಿತ್ತು. ಬಳಿಕ ಕಳವೆಯವರು ಭಾಗವಹಿಸುತ್ತಿರುವುದು ತಿಳಿದಾಗ ಅವರನ್ನು ಭೇಟಿ ಮಾಡಬೇಕೆಂಬ ಮತ್ತು ಅವರ ಮಾತುಗಳನ್ನು ಕೇಳಬೇಕೆಂಬ ಆಕಾಂಕ್ಷೆ ಮತ್ತಷ್ಟು ಬಲವಾಯಿತು. ನಾವಿಂದು ಅಲ್ಲಿಗೆ ಹೋದಾಗ ಇದು ಫಲಿಸಿತು.
ಶಿವಾನಂದ ಕಳವೆಯವರ ದಿಕ್ಸೂಚಿ ಭಾಷಣ ತಜ್ಞತೆಯಿಂದ ಕೂಡಿತ್ತು. "ನಮ್ಮ ನದಿಗಳ ಹಂತಕರು ನಾವೇ" ಎಂಬ ಅವರ ತೀಕ್ಷ್ಣವಾದ ಮಾತು ಕಠೋರ ಸತ್ಯವನ್ನು ಸಾರಿ ಹೇಳುತ್ತಿತ್ತು. ನದಿ ಮೂಲದ ಬಂಡೆಗಲ್ಲುಗಳನ್ನು ನಾಶ ಮಾಡಿದ್ದು, ನದಿ ಪಾತ್ರದ ಮರಳನ್ನು ಲೂಟಿ ಮಾಡಿದ್ದು, ನದಿ ಮೂಲ ಮತ್ತು ಪಾತ್ರದಲ್ಲಿನ ನೈಸರ್ಗಿಕ ಅರಣ್ಯವನ್ನು ನಾಶಗೊಳಿಸಿದ್ದು, ನದಿಗೆ ಕಲುಷಿತ/ತ್ಯಾಜ್ಯ ನೀರು ಸೇರುವಂತೆ ಮಾಡಿದ್ದು, ನದಿಮೂಲದ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿದ್ದು, ಗುಡ್ಡ-ಬೆಟ್ಟಗಳನ್ನು ಬೋಳುಗೊಳಿಸಿದ್ದು, ಕಾಡು- ಕಣಿವೆಗಳನ್ನು ನಿರ್ನಾಮಗೊಳಿಸಿದ್ದು, ಹೆದ್ದಾರಿಗಳ ನಿರ್ಮಾಣದ ನೆಪದಲ್ಲಿ ಕೆರೆ-ಕಾಲುವೆಗಳನ್ನು ನಿರ್ಲಕ್ಷಿಸಿದ್ದು - ಹೀಗೆ ನಮ್ಮ ಅಪರಾಧಗಳನ್ನು ಒಂದೊಂದಾಗಿ ಪಟ್ಟಿಮಾಡಿ ಸಭಿಕರನ್ನು ಚಿಂತನೆಗೆ ಹಚ್ಚಿದರು.
"ನಾವೆಲ್ಲ ಚಿಕ್ಕವರಾಗಿದ್ದಾಗ ಏಪ್ರಿಲ್, ಮೇ ತಿಂಗಳು ಬಂತೆಂದರೆ ನದಿ, ಕಾಲುವೆ, ಕೆರೆ-ಕಟ್ಟೆಗಳಿಗೆ ಈಜಲು ಹೋಗುತ್ತಿದ್ದೆವು. ಆದರೆ ಈಗ ಏಪ್ರಿಲ್ -ಮೇ ತಿಂಗಳು ಬಂದರೆ ನೀರಿನ ಟ್ಯಾಂಕರ್ ಪೂರೈಸುವವರ ನಂಬರ್ ಹುಡುಕಬೇಕಾದ ಸ್ಥಿತಿ ಬಂದಿದೆ" ಎಂದು ಮಾತಿನ ನಡುವೆ ಶಿವಾನಂದ ಕಳವೆಯವರು ಹೇಳಿದ್ದು ಈ ಹೊತ್ತಿನ ಆತಂಕಕಾರಿ ಸನ್ನಿವೇಶವನ್ನು ಮನಗಾಣುವಂತೆ ಮಾಡಿತು.
ಅನೇಕ ದಿನಗಳ ಬಳಿಕ ವಿ.ವಿ.ಯಲ್ಲಿ ಇಂತಹುದೊಂದು ಒಳ್ಳೆಯ ಕಾರ್ಯಕ್ರಮ ನಡೆದುದು ಸಂತೋಷ ತಂದಿತು. ಸಂಯೋಜಕರಲ್ಲೊಬ್ಬರಾದ ಧಾನ್ಯ ಸಂಸ್ಥೆಯ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯರವರು ಅಭಿನಂದನಾರ್ಹರು.



No comments:
Post a Comment