ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Wednesday, 3 June 2026

ಹೆಚ್.ಕೆ.ವೇಣುಗೋಪಾಲ್ ಮತ್ತು ರಾಜೇಶ್ವರಿ ಭೇಟಿ- 2026- H K Venugopal and Rajeshwari vishit...



ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ವೇಣುಗೋಪಾಲ್ ಮತ್ತು ಬಾವ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು ದಿ. 02-06-2026 ರಂದು ನಮ್ಮ ಮನೆಗೆ ಆಗಮಿಸಿದ್ದರು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (97) ರವರ ಯೋಗಕ್ಷೇಮ ವಿಚಾರಿಸಿ ಅವರ ಆಶೀರ್ವಾದ ಪಡೆದುಕೊಂಡರು.




 

with Ravishankar Bhat - Shobha Malavalli - 18-06-5-2026- ರವಿಶಂಕರ್ ಭಟ್ ಮತ್ತು ಶೋಭಾ ಮಳವಳ್ಳಿಯವರೊಡನೆ....


"ಉದಯವಾಣಿ" ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವಿಶಂಕರ್ ಕೆ.ಭಟ್ ರವರು ಮತ್ತು ರಿಪಬ್ಲಿಕ್ ಟಿ.ವಿ. ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತೆ ಶ್ರೀಮತಿ ಶೋಭಾ ಮಳವಳ್ಳಿರವರನ್ನು ಭೇಟಿಯಾಗಿ ಮಾತನಾಡುವ ಮತ್ತು ಅವರ ಮಾತುಗಳನ್ನಾಲಿಸುವ ಸದವಕಾಶ ಇಂದು (ದಿ.18-05-2026) ನಮಗೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಲಭ್ಯವಾಯಿತು.
ವಿ.ವಿ.ಯ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿ.ವಿ. ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ "imPRESSion 2026" ರಾಜ್ಯ ಮಟ್ಟದ ಮಾಧ್ಯಮ ಹಬ್ಬ ಏರ್ಪಟ್ಟಿದೆ. ಎರಡು ದಿನಗಳ ಅವಧಿಯ ಈ ಕಾರ್ಯಕ್ರಮಕ್ಕೆ ರಾಜ್ಯದ 15 ಜಿಲ್ಲೆಗಳಿಂದ ವಿದ್ಯಾರ್ಥಿ/ನಿಯರು ಆಗಮಿಸಿದ್ದಾರೆ. ಇದರ ಉದ್ಘಾಟನಾ ಸಮಾರಂಭ ಇಂದು ನಡೆದಿದ್ದು, "ಸಮಾರಂಭಕ್ಕೆ ಬನ್ನಿ" ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ, ಸ್ನೇಹಿತರೂ ಆದ ಡಾ.ಕೆ.ವಿ. ಸಿಬಂತಿ ಪದ್ಮನಾಭರವರು ನಮ್ಮನ್ನು ಆಹ್ವಾನಿಸಿದ್ದರು. ನಾನು ಮತ್ತು ವಿಶ್ವನಾಥನ್ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದಾಗ, ಶ್ರೀ ರವಿಶಂಕರ್ ಕೆ.ಭಟ್ ರವರು ಮತ್ತು ಶ್ರೀಮತಿ ಶೋಭಾ ಮಳವಳ್ಳಿಯವರ ಭೇಟಿ ಆಯಿತು.
ಇದೇ ಮೊದಲಿಗೆ ಇವರೀರ್ವರ ಭೇಟಿ. ಕುಲಪತಿಗಳ ಕೊಠಡಿಯಲ್ಲಿದ್ದ ಶ್ರೀ ರವಿಶಂಕರ್ ರವರನ್ನು ಭೇಟಿ ಆಗುತ್ತಿದ್ದಂತೆ ಅವರು ನನ್ನ ಫೇಸ್ ಬುಕ್ ಬರಹಗಳ ಮೂಲಕವೇ ನನ್ನನ್ನು ಗುರುತಿಸಿ ಸಂತಸದಿಂದ ಮಾತನಾಡಿಸಿದರು. ಫೇಸ್ ಬುಕ್ ನಲ್ಲಿ ನಾನು ಬರೆಯುವ ವಿಷಯಗಳ ಬಗ್ಗೆ ಹೇಳುತ್ತಲೇ ನನ್ನನ್ನು ಶ್ರೀಮತಿ ಶೋಭಾ ಮಳವಳ್ಳಿಯವರಿಗೆ ಅವರೇ ಸ್ವತಃ ಪರಿಚಯಿಸಿದರು. ಈರ್ವರೂ ತುಂಬ ಸೌಜನ್ಯದಿಂದ, ವಿಶ್ವಾಸದಿಂದ ನಮ್ಮೊಡನೆ ಮಾತನಾಡಿದರು. ತುಂಬ ಸಂತೋಷವಾಯಿತು.
ಬಳಿಕ ವಿ.ವಿ. ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ್ ಕೆ.ಭಟ್ ರವರು ಅರ್ಥಪೂರ್ಣವಾಗಿ ಮಾತನಾಡಿದರು. ಮೂರು-ಮೂರೂವರೆ ದಶಕಗಳ ಹಿಂದೆ ಮಾಧ್ಯಮ ಮತ್ತು ಸಂವಹನಕ್ಕೆ ನಮ್ಮ ತಲೆಮಾರಿಗೆ ಇದ್ದದ್ದು ಎಂದರೆ, ದೂರದರ್ಶನ, ರೇಡಿಯೋ, ವಾರ್ತಾ ಪತ್ರಿಕೆ, ಲ್ಯಾಂಡ್ ಲೈನ್ ಟೆಲಿಫೋನ್, ಇನ್ ಲ್ಯಾಂಡ್ ಲೆಟರ್, ಪೋಸ್ಟ್ ಕಾರ್ಡ್ ಮತ್ತು ತುರ್ತು ಸಂದರ್ಭಕ್ಕಾಗಿ ಟೆಲಿಗ್ರಾಂ ಮಾತ್ರ. ಆಗ ಯಾವುದೇ ದಾವಂತ ಇರುತ್ತಿರಲಿಲ್ಲ. ಸಾವಕಾಶದ ಬದುಕು ಅದಾಗಿತ್ತು. ಆ ಕಾಲ ಮುಗಿದುಹೋಯಿತು. ಈಗ ಎಲ್ಲವೂ ಬದಲಾಗಿದೆ. ಈಗ ಎಲ್ಲದರಲ್ಲೂ ವಿಪರೀತ ವೇಗದ ಜೊತೆಗೆ ವಿಪರೀತ ಗೊಂದಲವೂ ಸೇರಿಕೊಂಡಿದೆ. ಸೋಷಿಯಲ್ ಮೀಡಿಯಾಗಳು, ಯೂಟ್ಯೂಬ್ ಎಲ್ಲ ಆಗಿ ಕೊನೆಗೆ ದಿನಪತ್ರಿಕೆಗಳು ಬರುವಂತಾಗಿದೆ. ಸಂವಹನಕ್ಕೆ ನೂರಾರು ವೇದಿಕೆಗಳಿವೆ. ಯಾವುದು ನಿಜ, ಯಾವುದು ಸುಳ್ಳು ಎಂಬುದೇ ಗೊತ್ತಾಗದಷ್ಟು ಗೊಂದಲಕಾರಿಯಾಗುತ್ತಿದೆ. ಅಂಗೈಯಲ್ಲೇ ಎಲ್ಲವೂ ಸಿಗುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಕಲಿ ಮಾಹಿತಿಗಳಿಗೆ ಬಲಿಯಾಗದಿರಲು ವಿವೇಚನೆ ಬಳಸಬೇಕಾಗಿದೆ. ವಿಶೇಷವಾಗಿ ಯುವಜನರು ನಕಾರಾತ್ಮಕ ಮಾಹಿತಿಗಳ ಬದಲು, ಸಕಾರಾತ್ಮಕ ವಿಷಯಗಳನ್ನೇ ಸಂವಹನಕ್ಕೆ ಬಳಸಬೇಕು. ಇದಲ್ಲದೆ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸಬೇಕು ಎಂದು ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡರು.
ಶ್ರೀಮತಿ ಶೋಭಾ ಮಳವಳ್ಳಿರವರು ಮಾತನಾಡಿ, ಇಂದು ಸ್ಪರ್ಧಾತ್ಮಕ ಕಾಲ. ಯಾರಿಗೆ ಪ್ರತಿಭೆಯಿದೆಯೋ ಅವರಿಗೆ ಬೇಕಾದಷ್ಟು ಉದ್ಯೋಗಾವಕಾಶಗಳು ಲಭಿಸುವ ಕಾಲವಾಗಿದೆ ಎಂದರು. ಮಾಧ್ಯಮ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಆಧುನಿಕ ತಾಂತ್ರಿಕತೆ ಅಂಗೈಯಲ್ಲೇ ಸಿಗುವ ಈ ಕಾಲಘಟ್ಟದಲ್ಲಿ ಇದನ್ನು ಸದ್ಬಳಕೆ ಮಾಡಿಕೊಂಡು ಸ್ವಯಂ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಮಾಧ್ಯಮಕ್ಕೆ ಸಂಬಂಧಿಸಿದಂತೆ ಒಂದೊಳ್ಳೆಯ ಉಪನ್ಯಾಸ ಕೇಳಿದ ಸಂತೋಷವಾಯಿತು. ಇಂತಹ ಉತ್ತಮ ಕಾರ್ಯಕ್ರಮದ ಆಯೋಜಕರಾದ ಡಾ. ಸಿಬಂತಿ ಪದ್ಮನಾಭರವರು ಅಭಿನಂದನಾರ್ಹರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 18-05-2026 #rsiyertumakuru