R S Iyer With veteran freedom fighter Sri H.S. Doreswamy. -------------------------------------------------------- *************************************
|
ಪಾಪು ಸ್ಮರಣೆ…
■ ಆರೆಂಟು ವರ್ಷಗಳ ಹಿಂದೆ
ಅದೊಂದು ದಿನ. ನಾಡಿನ ಹಿರಿಯ ಚೇತನ, ಪತ್ರಕರ್ತರಾದ ಡಾ. ಪಾಟೀಲ ಪುಟ್ಟಪ್ಪನವರು ತುಮಕೂರಿನ ನಮ್ಮ “ಪ್ರಜಾಪ್ರಗತಿ”
ಪತ್ರಿಕಾ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 2 ಗಂಟೆ. ಪುಟ್ಟಪುಟ್ಟ ಹೆಜ್ಜೆಗಳನ್ನಿಡುತ್ತ
ಊಟಕ್ಕೆ ಹೊರಟಿದ್ದರು. ಜೊತೆಯಲ್ಲಿದ್ದವರು ನನ್ನನ್ನು ಅವರಿಗೆ ಪರಿಚಯಿಸಿದರು. “ಅಯ್ಯರ್” ಎಂಬ ಶಬ್ದ
ಕಿವಿಗೆ ಬಿದ್ದೊಡನೆ ಸಹಜ ಕುತೂಹಲದಿಂದ “ಯಾವ ಊರಿನವರು?” ಎಂದು ಪ್ರಶ್ನಿಸಿದರು. ನಾನು ವಿವರ ನೀಡುವುದರ ಜೊತೆ-ಜೊತೆಗೇ ಹಿಂದೊಮ್ಮೆ ಅವರು
“ಟಿಯೆಸ್ಸಾರ್ ಪ್ರಶಸ್ತಿ” ಬಂದಾಗ ಪ್ರತಿಕ್ರಿಯಿಸುತ್ತ “ಪತ್ರಕರ್ತನಿಗೆ ಬ್ಯಾಂಕ್ ಬ್ಯಾಲೆನ್ಸ್ ಗಿಂತ
ಮರ್ಯಾದೆಯ ಬ್ಯಾಲೆನ್ಸ್ ಇರಬೇಕು” ಎಂದು ಹೇಳಿದ್ದುದನ್ನು, ಈ ಹೇಳಿಕೆ ಬೆಂಬಲಿಸಿ ನಾನು “ವಾಚಕರ ವಾಣಿ”ಗೆ
ಪತ್ರ ಬರೆದಿದ್ದುದನ್ನು ಪ್ರಸ್ತಾಪಿಸಿದೆ. ಅವರು ಕುತೂಹಲದಿಂದ,
ಖುಷಿಯಿಂದ, ಪ್ರೀತಿಯಿಂದ ನನ್ನ ಹೆಗಲ ಮೇಲೆ ಕೈಯಿಟ್ಟು ಮಾತಿಗಿಳಿದರು. ಆದರೆ ಜೊತೆಯಲ್ಲಿದ್ದವರಿಗೆ
ಏನನ್ನಿಸಿತೋ- “ಊಟಕ್ಕೆ ಹೊತ್ತಾಯಿತು” -ಎಂದು ಕರೆದೊಯ್ಯಲು ಮುಂದಾದರು. ಆದರೆ ಪುಟ್ಟಪ್ಪನವರು ಅದನ್ನು
ನಿರ್ಲಕ್ಷಿಸುತ್ತ ಮತ್ತೆ ನನ್ನೊಡನೆ ಮಾತು ಮುಂದುವರೆಸಿದರು. ಮಾತಿನ ನಡುವೆ ನಾನು ದಶಕಗಳ ಹಿಂದೆ
“ತರಂಗ” ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಅವರ ಜನಪ್ರಿಯ ಅಂಕಣ ಬರಹ “ಪಾಪು ಪ್ರಪಂಚ” ಕುರಿತು
ಪ್ರಸ್ತಾಪಿಸಿದೆ. ವಾರ-ವಾರವೂ ನಾನು ಕಾದು-ಕಾದು ಓದುತ್ತಿದ್ದ ಪರಿಯನ್ನು ಹೇಳಿದೆ. ಅಗಾಧ ನೆನಪಿನ
ಶಕ್ತಿ, ನಿರ್ದಾಕ್ಷಿಣ್ಯ ಬರಹಗಳನ್ನು ಬೆರಗಿನಿಂದ ಉಲ್ಲೇಖಿಸಿದೆ. ಅದು ಮುಂದುವರೆಯದೆ ಸ್ಥಗಿತಗೊಂಡುದನ್ನೂ
ಹೇಳಿದೆ. ಆಗ ಅವರು ಹಳೆಯ ಪ್ರಸಂಗಗಳನ್ನು ಮೆಲುಕು ಹಾಕತೊಡಗಿದರು. ಆಗ ಮತ್ತೆ ಜೊತೆಯಲ್ಲಿದ್ದವರು
“ಊಟಕ್ಕೆ ಲೇಟ್ ಆಗುತ್ತೆ ಬನ್ನಿ… ಬನ್ನಿ” ಎಂದು ಕರೆದೊಯ್ಯಲು ಮುಂದಾದಾಗ ಅವರು ಮಾತ್ರ ಅದನ್ನು ನಿರ್ಲಕ್ಷಿಸಿ
ನನ್ನೊಡನೆ ಮಾತು ಮುಂದುವರೆಸಿದರು. “ನೋಡಿ, ಅಯ್ಯರ್ ರೇ, ನಾನು ಬರೆದುದನ್ನು ಯಥಾವತ್ತಾಗಿ ಹಾಕಲಿಲ್ಲ.
ಆಗ ನಾನು ಬೇಸರಗೊಂಡೆ. ಬರೆಯುವುದನ್ನು ನಿಲ್ಲಿಸಿದೆ. ಈ ಮಾಲೀಕತ್ವವೆಂಬುದೇ ಹೀಗೆ” ಎಂದು ತಮ್ಮ ಎಂದಿನ
ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಹೀಗೆ ಸುಮಾರು 20 ನಿಮಿಷಗಳ ಕಾಲ ಅವರು ಮೆಟ್ಟಿಲಿಳಿಯುವ ದಾರಿಯಲ್ಲಿ
ನಿಂತುಕೊಂಡೇ, ನನ್ನ ಹೆಗಲಿನ ಮೇಲೆ ಕೈಯಿರಿಸಿಕೊಂಡೇ, ನನ್ನೊಡನೆ ಮಾತನಾಡಿದ್ದು ನನ್ನ ಪಾಲಿಗೆ ಒಂದು
ಅವಿಸ್ಮರಣೀಯ ಪ್ರಸಂಗವಾಗಿದೆ.
■ಇದಕ್ಕೂ ಹಿಂದೆ ಅಂದರೆ ದಿನಾಂಕ 16-07-2009 ರಲ್ಲಿ ಡಾ. ಪಾಟೀಲ ಪುಟ್ಟಪ್ಪನವರು ಮತ್ತೋರ್ವ ಹಿರಿಯ ಪತ್ರಕರ್ತರಾಗಿದ್ದ ಶ್ರೀ ಎಸ್.ವಿ.ಜಯಶೀಲರಾವ್ ಅವರೊಂದಿಗೆ ಆಗಮಿಸಿದ್ದಾಗ ಆ ಹಿರಿಯ ಚೇತನಗಳೊಂದಿಗೆ ನಾನಿರುವ ಅವಿಸ್ಮರಣೀಯ ಫೋಟೋಗಳಿವು.
- ಆರ್.ಎಸ್.ಅಯ್ಯರ್, ತುಮಕೂರು
No comments:
Post a Comment