ಕನ್ನಡ ಚಿತ್ರರಂಗದ/ಕಿರುತೆರೆಯ ಕಲಾವಿದರಾಗಿ ಜನಪ್ರಿಯರಾದವರೂ, ಚಿತ್ರರಂಗದಲ್ಲಿ ನಿರ್ದೇಶಕರಾಗಿ-ನಿರ್ಮಾಪಕರಾಗಿ ಹೆಸರುಗಳಿಸಿರುವವರೂ ಆದ ಶ್ರೀ ಬೀಸು ಸುರೇಶ್ ಅವರು ಸದಾ ಹಸನ್ಮುಖಿಗಳು. ತುಂಬ ಸೌಜನ್ಯದಿಂದ ನಡೆದುಕೊಳ್ಳುವವರು. ಬೆಂಗಳೂರಿನ “ಸುಚಿತ್ರ”ದಲ್ಲಿ ಭಾನುವಾರ (ದಿನಾಂಕ 28-02-2021) ಏರ್ಪಟ್ಟಿದ್ದ “ಕು.ರ. ಸೀತಾರಾಮ ಶಾಸ್ತ್ರಿ ಜನ್ಮ ಶತಮಾನೋತ್ಸವ” ಸಮಾರಂಭದಲ್ಲಿ ಶ್ರೀ ಬೀಸು ಸುರೇಶ್ ರವರನ್ನು ಭೇಟಿಯಾಗುವ, ಅವರೊಡನೆ ಮಾತನಾಡುವ ಸದವಕಾಶ ನಮಗೆ ಲಭಿಸಿತು. ಚಿತ್ರದಲ್ಲಿ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್, ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಹೆಚ್.ಎಸ್.ಪವನ್ ಇದ್ದೇವೆ.
Monday, 22 March 2021
R S Iyer & R Vishwanathan with Sri Shivaram, veteran film actor 2021
ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯ ಕಲಾವಿದರಾದ ಶ್ರೀ ಶಿವರಾಂರವರ ಸಾತ್ವಿಕ ವ್ಯಕ್ತಿತ್ವ ಸದಾ ಆಕರ್ಷಣೀಯ. ಅಂತೆಯೇ ಅವರ ಮಾತೂ ಸಹ ಅಷ್ಟೇ ಸಾತ್ವಿಕ. ಬೆಂಗಳೂರಿನ “ಸುಚಿತ್ರ”ದಲ್ಲಿ ಭಾನುವಾರ (ದಿನಾಂಕ 28-02-2021) ಏರ್ಪಟ್ಟಿದ್ದ “ಕು.ರ. ಸೀತಾರಾಮ ಶಾಸ್ತ್ರಿ ಜನ್ಮ ಶತಮಾನೋತ್ಸವ” ಸಮಾರಂಭದಲ್ಲಿ ಶ್ರೀ ಶಿವರಾಂರವರನ್ನು ಭೇಟಿಯಾಗಿ, ಅವರೊಡನೆ ಮಾತನಾಡುವ ಸುಸಂದರ್ಭ ನಮಗೆ ಲಭಿಸಿದ್ದು, ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹುದು. ಚಿತ್ರದಲ್ಲಿ ಶ್ರೀ ಶಿವರಾಂ ರವರೊಡನೆ ನಾನು, ವಿಶ್ವನಾಥನ್, ಖ್ಯಾತ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯ, ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಶ್ರೀ ಹೆಚ್.ಎಸ್.ಪವನ್ ಅವರು ಇದ್ದೇವೆ.
ವೀಕೆಂಡ್ ವಿತ್ ರಮೇಶ್.. R S Iyer & R Vishwanathan with Sri Ramesh Aravind, 2021
"ವೀಕೆಂಡ್ ವಿತ್ ಶ್ರೀ ರಮೇಶ್ ಅರವಿಂದ್…"
*****************************************
ಕನ್ನಡ ಚಲನಚಿತ್ರ ರಂಗದ ಖ್ಯಾತ ಕಲಾವಿದರಾದ ಶ್ರೀ ರಮೇಶ್ ಅರವಿಂದ್ ಅವರ ಭೇಟಿ ಮತ್ತೊಮ್ಮೆ ಭಾನುವಾರ (ದಿನಾಂಕ 28-02-2021) ಸಂಜೆ ಬೆಂಗಳೂರಿನ “ಸುಚಿತ್ರ”ದಲ್ಲಿ ಆದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ.
ಕಾರಿನಿಂದಿಳಿದು “ಸುಚಿತ್ರ” ಆವರಣ ಪ್ರವೇಶಿಸುತ್ತಿದ್ದ ಶ್ರೀ ರಮೇಶ್ ರವರು ಅಲ್ಲೇ ಮೆಟ್ಟಿಲುಗಳ ಮೇಲೆ ನಿಂತಿದ್ದ ನಮ್ಮತ್ತ ನೋಟ ಬೀರಿ ಹಸನ್ಮುಖರಾದರು. ವಿಶ್ವನಾಥನ್ ಕಡೆಗೆ ಕೈಬೀಸುತ್ತ “ಹೇಗಿದ್ದೀರಿ?” ಎಂದರು. ಸರಿಯಾಗಿ ಎರಡು ವರ್ಷಗಳ ಹಿಂದೆ (ದಿ. 23-12-2018) ಅವರನ್ನು ನಾವು ಬೆಂಗಳೂರಿನಲ್ಲೇ ಭೇಟಿ ಮಾಡಿ, “ಡಿವಿಜಿ ನೆನಪು” ಕಾರ್ಯಕ್ರಮದ ಬಗ್ಗೆ ಹೇಳಿದ್ದೆವು. ಅದನ್ನು ಇನ್ನೂ ನೆನಪಿಟ್ಟುಕೊಂಡೇ ಅವರಿಂದು ಮಾತನಾಡಿಸಿದ್ದು ನಮಗೆ ಅಚ್ಚರಿಯೋ ಅಚ್ಚರಿ ; ಜೊತೆಗೆ ಸಂತಸ. ಒಡನೆಯೇ ನಾವು ಅವರತ್ತ ಹೆಜ್ಜೆ ಹಾಕಿದೆವು. ಕೆಲ ನಿಮಿಷ ನಿಂತು ನಮ್ಮೊಡನೆ ಉಲ್ಲಾಸದಿಂದ ಮಾತನಾಡಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು. ದೀಪ ಬೆಳಗುವ ಮುನ್ನ ತಮ್ಮ ಪಾದರಕ್ಷೆ (ಶೂ) ಕಳಚಿಟ್ಟು ದೀಪ ಬೆಳಗುವ ಮೂಲಕ ಸಂವೇದನಾಶೀಲತೆಯನ್ನು ಮೆರೆದರು. ಮಾತನಾಡುವಾಗ ಚಲನಚಿತ್ರ ಕ್ಷೇತ್ರದ ಹಳೆಯ ದಿಗ್ಗಜರನ್ನು ನೆನೆಯುತ್ತ “ಅವರಿಂದಷ್ಟೇ ಇಂದು ನಾವು” ಎಂಬ ವಿನಯ ಪ್ರದರ್ಶಿಸಿದರು. ಬಳಿಕ ವೇದಿಕೆ ಮುಂಭಾಗ ಸಾರ್ವಜನಿಕರೊಡನೆ ಕುಳಿತು ಕೆಲಹೊತ್ತು ಕಾರ್ಯಕ್ರಮ ಆಸ್ವಾದಿಸಿ ನಿರ್ಗಮಿಸಿದರು. ಬಂದು –ಹೋಗುವಾಗ ಅಲ್ಲಿದ್ದ ಅನೇಕರು ಫೋಟೋ ತೆಗೆಸಿಕೊಳ್ಳಲು ಮುಂದಾದಾಗ ಖುಷಿಯಿಂದ ಅದಕ್ಕೆ ಅನುವು ಮಾಡಿಕೊಟ್ಟರು.
ಅವರ ಸರಳತೆ, ಸಹೃದಯತೆ, ಲವಲವಿಕೆ, ಉಲ್ಲಾಸಪೂರ್ಣ ವ್ಯಕ್ತಿತ್ವ ನಮ್ಮೆಲ್ಲರ ಮನಸೂರೆಗೊಂಡಿತು. ಹೀಗೆ ಈ ಭಾನುವಾರ ನಮ್ಮ ಪಾಲಿಗೆ ಅಕ್ಷರಶಃ “ವೀಕೆಂಡ್ ವಿತ್ ರಮೇಶ್” ಆಯಿತು. (ಇಲ್ಲಿರುವ ಚಿತ್ರಗಳಲ್ಲಿ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್, ಖ್ಯಾತ ಸಂಗೀತ ಸಂಯೋಜಕರಾದ ಶ್ರೀ ಶಿವಸತ್ಯ, ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಶ್ರೀ ಹೆಚ್.ಎಸ್.ಪವನ್ ಇದ್ದೇವೆ.)
-ಆರ್.ಎಸ್.ಅಯ್ಯರ್, ತುಮಕೂರು