* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 25 November 2021

ರಾಜ್ಯಪಾಲರುಗಳೊಂದಿಗೆ ವಿ.ಎಸ್.ರಾಮಚಂದ್ರನ್ / VSR with Governers

 ಕರ್ನಾಟಕದ ರಾಜ್ಯಪಾಲರುಗಳೊಂದಿಗೆ ನಮ್ಮ ತಂದೆ ..... with H'ble Governors of Karnataka






***************************
#ಫೋಟೊಆಲ್ಬಂ ನಲ್ಲಿ ಸಿಕ್ಕ ಅಪರೂಪದ ಫೋಟೊ
ಇದು 2008 ರ ಒಂದು ಅಪೂರ್ವ ಚಿತ್ರ. ಆಗ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ರವರು ಬೆಂಗಳೂರಿನ ರಾಜಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಾಂಕ 09-08-2008, ಶನಿವಾರ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸ್ಮರಣೀಯ ಕಾರ್ಯಕ್ರಮಕ್ಕೆ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರೂ ಆಹ್ವಾನಿತರಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯಪಾಲರೊಡನೆ ಇದ್ದಾಗ ತೆಗೆಯಲಾದ ಚಿತ್ರವಿದು. ಅಂದು ನಮ್ಮ ತಂದೆಯವರೊಡನೆ ನಮ್ಮ ಪ್ರೀತಿಯ ಸಹೋದರಿ, ನಮ್ಮನ್ನಗಲಿದ ದಿವಂಗತ ಶ್ರೀಮತಿ ಮಹಾಲಕ್ಷ್ಮೀ ಸಹ ಇದ್ದುದು ಈ ಚಿತ್ರದ ಮಹತ್ವವನ್ನು ನಮ್ಮ ಪಾಲಿಗೆ ದುಪ್ಪಟ್ಟುಗೊಳಿಸಿದೆ.

@ Raj Bhavan, Bangalore , With the H'ble Governer of Karnataka Sri Rameshwar Takur... Sri V S Ramachandran, Freedom Fighter and his daughter Late Smt Mahalakshmi Sridhar. 2008

----------------------------------------------------



2006 ರ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಸ್ವಾತಂತ್ರ್ಯ ಯೋಧರನ್ನು ಗೌರವಿಸುವ ಕಾರ್ಯಕ್ರಮ ಏರ್ಪಟ್ಟಿತ್ತು. ಅಂದಿನ ರಾಜ್ಯಪಾಲರಾದ ಶ್ರೀ ಟಿ.ಎನ್.ಚತುರ್ವೇದಿಯವರ ಆಹ್ವಾನದ ಮೇರೆಗೆ ತುಮಕೂರಿನಿಂದ ಶ್ರೀ ವಿ.ಎಸ್.ರಾಮಚಂದ್ರನ್ ಅವರು ಪಾಲ್ಗೊಂಡಿದ್ದರು. ಅವರ ಜೊತೆಯಲ್ಲಿ ಪುತ್ರ ಶ್ರೀ ಆರ್.ವಿಶ್ವನಾಥನ್ ಇದ್ದರು.



****************************************************


ಬೆಂಗಳೂರಿನ ರಾಜಭವನದಲ್ಲಿ 2006 ರಲ್ಲಿ ಆಗಿನ ಸಚಿವರಾದ ಶ್ರೀ ಹೆಚ್.ಎಸ್.ಮಹದೇವ ಪ್ರಸಾದ್ ರವರೊಂದಿಗೆ...


Saturday, 20 November 2021

Tumakuru Amanikere Kodi & Gare Narasaiah katte ತುಮಕೂರು ಅಮಾನಿಕೆರೆ ಕೋಡಿ & ಗಾರೆ ನರಸಯ್ಯ ಕಟ್ಟೆ 19-11-2021

ಭಾರಿ ಮಳೆ ಪರಿಣಾಮ ದೀರ್ಘ ಕಾಲದ ಬಳಿಕ
ತುಮಕೂರು ಅಮಾನಿಕೆರೆ ಕೋಡಿ
------------------------------
‘ನಮ್ಮ ತುಮಕೂರಿನ’ ಹೆಮ್ಮೆಯ ಅಮಾನಿಕೆರೆ ಇಂದು (ದಿ.19-11-2021, ಶುಕ್ರವಾರ) ಕೋಡಿ ಬಿದ್ದಿದೆ.
ಕಳೆದ ಕೆಲ ದಿನಗಳಿಂದ ಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ, ದೀರ್ಘ ಕಾಲದ ಬಳಿಕ ಇದೀಗ ಅಮಾನಿಕೆರೆ ಭರ್ತಿ ಆಗಿದ್ದು, ಶಿರಾಗೇಟ್ ರಸ್ತೆಯಲ್ಲಿರುವ ದೊಡ್ಡ ಕೋಡಿ ಮೂಲಕ ನೀರು ಹೊರಕ್ಕೆ ಹರಿಯತೊಡಗಿದೆ. ಸುದ್ದಿ ಕಿವಿಗೆ ಬಿದ್ದೊಡನೆ ಇಂದು ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಶಿರಾಗೇಟ್ ರಸ್ತೆಯ ದೊಡ್ಡ ಕೋಡಿ ಬಳಿ ಹೋದೆವು. ಅದಾಗಲೇ ಅಲ್ಲಿ ಕೋಡಿ ನೋಡಲು ಜನಜಾತ್ರೆಯೇ ಇತ್ತು. ಕೋಡಿ ಇರುವ ಆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಜನ ಮತ್ತು ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಶ್ರಮಿಸುತ್ತಿದ್ದರು.
ಹೌದು, ದಶಕಗಳ ಹಿಂದೆ (ಆಗ ನಾವು ಚಿಕ್ಕಪೇಟೆ ನಿವಾಸಿಗಳಾಗಿದ್ದೆವು) ಚಿಕ್ಕಪೇಟೆ ಮನೆಯಿಂದ ನಾವೆಲ್ಲ ಓಡೋಡಿ ಬಂದು ಭೋರ್ಗರೆಯುತ್ತಿದ್ದ ದೊಡ್ಡ ಕೋಡಿಯನ್ನು ವೀಕ್ಷಿಸಿದ್ದುದು ಚೆನ್ನಾಗಿ ನೆನಪಿನಲ್ಲಿದೆ. ಊರಿನ ಜನರೆಲ್ಲ ಸಂಭ್ರಮದಿಂದ ಅಲ್ಲಿ ಜಾತ್ರೆಯೋಪಾದಿ ಸೇರಿದ್ದರು. ಕೆರೆಯ ಕೋಡಿಯಿಂದ ಹೊರಕ್ಕೆ ಚಿಮ್ಮುತ್ತಿದ್ದ ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ನೂರಾರು ಜನರು ಪೈಪೋಟಿಯಿಂದ ಬಲೆ ಬೀಸುತ್ತಿದ್ದ ದೃಶ್ಯಗಳೆಲ್ಲ ಮತ್ತೊಮ್ಮೆ ನೆನಪಾಯಿತು.
ಪುನಃ ಜೋರು ಮಳೆ ಬಂದಲ್ಲಿ, ಕೆರೆಯ ನೀರು ಭೋರ್ಗರೆಯುತ್ತ ಹೊರಕ್ಕೆ ಹರಿವುದು ಗ್ಯಾರಂಟಿ.
-ಆರ್.ಎಸ್.ಅಯ್ಯರ್, ತುಮಕೂರು, ದಿ.19-11-2021

Youtube: https://youtu.be/A749EE0DoqA



          
@ Tumkur Amani kere.. R S Iyer Tumkur and R Vishwanathan Tumkur







‘ಗಾರೆ ನರಸಯ್ಯನ ಕಟ್ಟೆ’ಗೆ ಹರಿದ ನೀರು
----------------------------------
“ನಮ್ಮ ತುಮಕೂರು” ನಗರದ “ಗಾರೆ ನರಸಯ್ಯನ ಕಟ್ಟೆ”ಗೆ ಈಗ “ಜಲ ಭಾಗ್ಯ” ದೊರಕಿದಂತಿದೆ. ಕಳೆದ ಕೆಲ ದಿನಗಳ ಜಡಿ ಮಳೆ ಮತ್ತು ಕಳೆದ ರಾತ್ರಿ ಸುರಿದ ಸತತ ಮಳೆಯ ಪರಿಣಾಮವಾಗಿ ಈ ಕಟ್ಟೆಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದುಬಂದಿದೆ.

ನವೆಂಬರ್ 19 ರಂದು ಶುಕ್ರವಾರ ಬೆಳ್ಳಂಬೆಳಗ್ಗೆಯೇ ಈ ವ್ಯಾಪ್ತಿಯ (30 ನೇ ವಾರ್ಡ್) ಕಾರ್ಪೊರೇಟರ್ ಹಾಗೂ ಆತ್ಮೀಯರಾದ ಶ್ರೀ ವಿಷ್ಣುವರ್ಧನ್ ಅವರು ಕರೆ ಮಾಡಿ ಕಟ್ಟೆಗೆ ನೀರು ಹರಿದು ಬಂದ ಸಂಗತಿಯನ್ನು ಸಂತಸದಿಂದ ಹಂಚಿಕೊಂಡರು.

ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಸ್ಥಳಕ್ಕೆ ಹೋಗಿ ನೋಡಿದಾಗ ಖುಷಿಯಾಯಿತು. ಈ ಕಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಸುತ್ತಲಿನ ವಸತಿ ಪ್ರದೇಶಕ್ಕೊಂದು ಸೊಬಗೇ ಬಂದಂತಿದೆ. ಕಟ್ಟೆಯ ನಡುವಿನ ಮರದಲ್ಲಿ ಅನೇಕ ಪಕ್ಷಿಗಳು ಗೋಚರಿಸಿದವು. ಪಕ್ಕದಲ್ಲೇ ನವಿಲುಗಳು ಕಂಡವು. ಹೀಗೆ ಈ ಜಲಕಾಯವು ಪಕ್ಷಿಗಳ ಆವಾಸವೂ ಆಗಿದೆ.

ನಗರದ ರಿಂಗ್ ರಸ್ತೆಗೆ ಈ “ಗಾರೆ ನರಸಯ್ಯನ ಕಟ್ಟೆ” ಹೊಂದಿಕೊಂಡಂತಿದೆ. ಪಕ್ಕದಲ್ಲೇ ಸಪ್ತಗಿರಿ ಬಡಾವಣೆಯೂ ಇದೆ. ದಶಕಗಳ ಕಾಲದಿಂದ ನೀರಿಲ್ಲದೆ ಈ ಕಟ್ಟೆ ಪಾಳು ಬಿದ್ದಿತ್ತು. ಕೆಲವು ಹಿತಾಸಕ್ತಿಗಳು ಇದನ್ನು ಅನ್ಯ ಉದ್ದೇಶಕ್ಕೆ ಬಳಸಲು ಯತ್ನಿಸಿದ್ದವು. ಆದರೆ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಈ ಜಲಕಾಯವು ಉಳಿಯುವಂತಾಯಿತು. ಪಾಳು ಬಿದ್ದಿದ್ದ ಈ ಕಟ್ಟೆಯ ಅಭಿವೃದ್ಧಿಗೆ ಇತ್ತೀಚೆಗೆ ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ ಅವರು ಕಾಳಜಿ ತೋರಿದ್ದು, ವಿವಿಧ ಸಂಘ ಸಂಸ್ಥೆಗಳ ಹಾಗೂ ಸರ್ಕಾರದ ನೆರವು ಲಭಿಸಿದ್ದು, ಈಗ ಸಾರ್ಥಕ ಆದಂತಾಗಿದೆ. ಅವರೆಲ್ಲರೂ ಅಭಿನಂದನಾರ್ಹರು. ಇನ್ನೊಂದೆರಡು ದಿನ ಇದೇ ರೀತಿ ಮಳೆ ಸುರಿದರೆ ಈ ಕಟ್ಟೆ ತುಂಬಿ ತುಳುಕೀತು.

-ಆರ್.ಎಸ್.ಅಯ್ಯರ್, ತುಮಕೂರು, ದಿ.19-11-2021



 

Friday, 12 November 2021

ಮಂಜು ಕವಿದ ದೇವರಾಯನದುರ್ಗ ಬೆಟ್ಟ - Devarayanadurga Hills 12-11-2021 Friday- R S Iyer Tumkur and R Vishwanathan Tumkur



Devarayana Durga Hills- R S Iyer Tumkur and R Vishwanathan Tumkur









Devarayana Durga Road... R S Iyer Tumkur and R Vishwanathan Tumkur


ಮಂಜು ಕವಿದ ದೇವರಾಯನದುರ್ಗ... -------------------------------

ದೀರ್ಘ ಕಾಲದ ಬಳಿಕ ನಮ್ಮ ನೆಚ್ಚಿನ ತಾಣ ದೇವರಾಯನದುರ್ಗಕ್ಕೆ ಇಂದು (ದಿ. 12-11-2021, ಶುಕ್ರವಾರ) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಬೈಕ್ ನಲ್ಲಿ ತೆರಳಿದಾಗ ನಮ್ಮನ್ನು ಸ್ವಾಗತಿಸಿದ್ದು ರೋಮಾಂಚನಗೊಳಿಸುವ ಮಂಜು ಕವಿದ ಸೊಬಗಿನ ವಾತಾವರಣ. https://youtu.be/v9ZRmDdB82U
ಸುರಿಯುತ್ತಲೇ ಇದ್ದ ಜಡಿಮಳೆಯಲ್ಲಿ ದೇವರಾಯನದುರ್ಗದ ಕಾಡಿನ ಹಾದಿಯಲ್ಲಿ ಸಾಗುವುದೇ ಒಂದು ವಿಶಿಷ್ಟಾನುಭವ. ಜೊತೆಗೆ ಶೀಥಲ ಗಾಳಿ. ಇದಕ್ಕೆ ಮೆರುಗುಕೊಡುವಂತೆ ಸುತ್ತಲೂ ಮಂಜು ಕವಿದಿದ್ದುದು ರೋಮಾಂಚನಗೊಳಿಸುತ್ತಿತ್ತು.
ಕೆಳಗಿನ ಬೆಟ್ಟದಲ್ಲಿರುವ ಶ್ರೀ ಭೋಗಾ ನರಸಿಂಹ ಸ್ವಾಮಿ ದೇವಾಲಯದ ಸುತ್ತಲೂ ಜಡಿಮಳೆಯೊಡನೆ, ಮಂಜು ಮುಸುಕಿತ್ತು. ಅಲ್ಲಿಂದ ಮೇಲಿನ ಬೆಟ್ಟವೇ ಕಾಣದಷ್ಟು ಬೆಳ್ಳಿಮೋಡ ಇಡೀ ಮೇಲಿನ ಬೆಟ್ಟವನ್ನು ಆವರಿಸಿಬಿಟ್ಟಿತ್ತು. ಸುತ್ತಲೂ ಆವರಿಸುತ್ತಿದ್ದ ಮಂಜನ್ನು ಭೇದಿಸಿಕೊಂಡು ಮೇಲಿನ ಬೆಟ್ಟದ ಹಾದಿಯಲ್ಲಿ ಸಾಗುವುದೇ ರೋಮಾಂಚನ ಉಂಟುಮಾಡುತ್ತಿತ್ತು. ದಾರಿಯೇ ಕಾಣದಷ್ಟು ದಟ್ಟವಾಗಿ ಮಂಜು ತುಂಬುತ್ತಿತ್ತು. ಪೊಲೀಸ್ ವೈರ್ ಲೆಸ್ ಸ್ಟೇಷನ್ ಇರುವ ಬಂಡೆಯ ಬಳಿ ತೆರಳಿದಾಗಲಂತೂ ಆ ಸುತ್ತಲೂ ಏನೂ ಕಾಣದಷ್ಟು ಮಂಜು ಕವಿದು, ವಿಶಿಷ್ಟ ವಾತಾವರಣ ಸೃಷ್ಟಿಯಾಗಿತ್ತು. ಬೆಟ್ಟ-ಬೆಟ್ಟಗಳೇ ಆ ಮಂಜಿನಲ್ಲಿ ಮಾಯವಾಗಿಬಿಟ್ಟಂತಾಗುತ್ತಿತ್ತು. ನಿಸರ್ಗದ ಆ ಅದ್ಭುತ ಪ್ರಕ್ರಿಯೆಗಳು ನಮ್ಮರಿವಿಗೇ ಬಾರದಂತೆ ನಮ್ಮಿಂದ ಅಚ್ಚರಿ-ಆನಂದದ ಉದ್ಗಾರ ಹೊರಡಿಸುತ್ತಿತ್ತು. ಸುಯ್ಗುಡುವ ಗಾಳಿಯ ವಿನಃ ಮತ್ತೆಲ್ಲವೂ ನಿಶ್ಯಬ್ದವಾಗಿದ್ದ ಆ ಪರಿಸರ ಅಲ್ಲೊಂದು ಅಲೌಕಿಕತೆಯನ್ನೇ ಸೃಷ್ಟಿಸಿತ್ತು.
ದೇವರಾಯನದುರ್ಗದತ್ತ ನಾವು ಹೋದದ್ದು ಆಕಸ್ಮಿಕವಾಗಿ. ಆದರೆ ಮಧ್ಯಾಹ್ನ 1 ಗಂಟೆಯ ಆ ಹೊತ್ತಿನಲ್ಲೂ ಮಂಜು ಕವಿದ ವಾತಾವರಣ ಆಸ್ವಾದಿಸಲು ಅದೆಷ್ಟೋ ಜನರು ಅಲ್ಲಿಗೆ ಬಂದುಬಿಟ್ಟಿದ್ದರು. ಕಾರುಗಳಲ್ಲಿ, ಸ್ಕೂಟರ್-ಬೈಕ್ ಗಳಲ್ಲಿ ಜನರು ಬಂದು ಹೋಗುತ್ತಲೇ ಇದ್ದರು. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ದಾರಿಯುದ್ದಕ್ಕೂ ಕಾಣುತ್ತಲೇ ಇದ್ದರು. ಬಹುತೇಕ ಎಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದು ಮಂಜು ತುಂಬಿದ ಆ ಅಪೂರ್ವ ವಾತಾವರಣವನ್ನು ತಮ್ಮ ಮೊಬೈಲ್ ನಲ್ಲಿ ಸಾಕ್ಷೀಕರಿಸುತ್ತಿದ್ದರು. ಪೋಟೋ ತೆಗೆದುಕೊಳ್ಳುತ್ತಿದ್ದರು. ಎಲ್ಲರೂ ಆನಂದದಲ್ಲಿ ತೇಲಿಹೋಗುತ್ತಿದ್ದರು.
ದೀರ್ಘಕಾಲದ ಬಳಿಕ ದೇವರಾಯನದುರ್ಗದ ನಿಸರ್ಗ ವೈಭವ ಕಾಣುವ, ಕಂಡು ಆನಂದಿಸುವ ಸುವರ್ಣಾವಕಾಶ ನಮಗೊದಗಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 12-11-2021