ಮಂಜು ಕವಿದ ದೇವರಾಯನದುರ್ಗ... -------------------------------
ದೀರ್ಘ ಕಾಲದ ಬಳಿಕ ನಮ್ಮ ನೆಚ್ಚಿನ ತಾಣ ದೇವರಾಯನದುರ್ಗಕ್ಕೆ ಇಂದು (ದಿ. 12-11-2021, ಶುಕ್ರವಾರ) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಬೈಕ್ ನಲ್ಲಿ ತೆರಳಿದಾಗ ನಮ್ಮನ್ನು ಸ್ವಾಗತಿಸಿದ್ದು ರೋಮಾಂಚನಗೊಳಿಸುವ ಮಂಜು ಕವಿದ ಸೊಬಗಿನ ವಾತಾವರಣ. https://youtu.be/v9ZRmDdB82U
ಸುರಿಯುತ್ತಲೇ ಇದ್ದ ಜಡಿಮಳೆಯಲ್ಲಿ ದೇವರಾಯನದುರ್ಗದ ಕಾಡಿನ ಹಾದಿಯಲ್ಲಿ ಸಾಗುವುದೇ ಒಂದು ವಿಶಿಷ್ಟಾನುಭವ. ಜೊತೆಗೆ ಶೀಥಲ ಗಾಳಿ. ಇದಕ್ಕೆ ಮೆರುಗುಕೊಡುವಂತೆ ಸುತ್ತಲೂ ಮಂಜು ಕವಿದಿದ್ದುದು ರೋಮಾಂಚನಗೊಳಿಸುತ್ತಿತ್ತು.
ಕೆಳಗಿನ ಬೆಟ್ಟದಲ್ಲಿರುವ ಶ್ರೀ ಭೋಗಾ ನರಸಿಂಹ ಸ್ವಾಮಿ ದೇವಾಲಯದ ಸುತ್ತಲೂ ಜಡಿಮಳೆಯೊಡನೆ, ಮಂಜು ಮುಸುಕಿತ್ತು. ಅಲ್ಲಿಂದ ಮೇಲಿನ ಬೆಟ್ಟವೇ ಕಾಣದಷ್ಟು ಬೆಳ್ಳಿಮೋಡ ಇಡೀ ಮೇಲಿನ ಬೆಟ್ಟವನ್ನು ಆವರಿಸಿಬಿಟ್ಟಿತ್ತು. ಸುತ್ತಲೂ ಆವರಿಸುತ್ತಿದ್ದ ಮಂಜನ್ನು ಭೇದಿಸಿಕೊಂಡು ಮೇಲಿನ ಬೆಟ್ಟದ ಹಾದಿಯಲ್ಲಿ ಸಾಗುವುದೇ ರೋಮಾಂಚನ ಉಂಟುಮಾಡುತ್ತಿತ್ತು. ದಾರಿಯೇ ಕಾಣದಷ್ಟು ದಟ್ಟವಾಗಿ ಮಂಜು ತುಂಬುತ್ತಿತ್ತು. ಪೊಲೀಸ್ ವೈರ್ ಲೆಸ್ ಸ್ಟೇಷನ್ ಇರುವ ಬಂಡೆಯ ಬಳಿ ತೆರಳಿದಾಗಲಂತೂ ಆ ಸುತ್ತಲೂ ಏನೂ ಕಾಣದಷ್ಟು ಮಂಜು ಕವಿದು, ವಿಶಿಷ್ಟ ವಾತಾವರಣ ಸೃಷ್ಟಿಯಾಗಿತ್ತು. ಬೆಟ್ಟ-ಬೆಟ್ಟಗಳೇ ಆ ಮಂಜಿನಲ್ಲಿ ಮಾಯವಾಗಿಬಿಟ್ಟಂತಾಗುತ್ತಿತ್ತು. ನಿಸರ್ಗದ ಆ ಅದ್ಭುತ ಪ್ರಕ್ರಿಯೆಗಳು ನಮ್ಮರಿವಿಗೇ ಬಾರದಂತೆ ನಮ್ಮಿಂದ ಅಚ್ಚರಿ-ಆನಂದದ ಉದ್ಗಾರ ಹೊರಡಿಸುತ್ತಿತ್ತು. ಸುಯ್ಗುಡುವ ಗಾಳಿಯ ವಿನಃ ಮತ್ತೆಲ್ಲವೂ ನಿಶ್ಯಬ್ದವಾಗಿದ್ದ ಆ ಪರಿಸರ ಅಲ್ಲೊಂದು ಅಲೌಕಿಕತೆಯನ್ನೇ ಸೃಷ್ಟಿಸಿತ್ತು.
ದೇವರಾಯನದುರ್ಗದತ್ತ ನಾವು ಹೋದದ್ದು ಆಕಸ್ಮಿಕವಾಗಿ. ಆದರೆ ಮಧ್ಯಾಹ್ನ 1 ಗಂಟೆಯ ಆ ಹೊತ್ತಿನಲ್ಲೂ ಮಂಜು ಕವಿದ ವಾತಾವರಣ ಆಸ್ವಾದಿಸಲು ಅದೆಷ್ಟೋ ಜನರು ಅಲ್ಲಿಗೆ ಬಂದುಬಿಟ್ಟಿದ್ದರು. ಕಾರುಗಳಲ್ಲಿ, ಸ್ಕೂಟರ್-ಬೈಕ್ ಗಳಲ್ಲಿ ಜನರು ಬಂದು ಹೋಗುತ್ತಲೇ ಇದ್ದರು. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ದಾರಿಯುದ್ದಕ್ಕೂ ಕಾಣುತ್ತಲೇ ಇದ್ದರು. ಬಹುತೇಕ ಎಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದು ಮಂಜು ತುಂಬಿದ ಆ ಅಪೂರ್ವ ವಾತಾವರಣವನ್ನು ತಮ್ಮ ಮೊಬೈಲ್ ನಲ್ಲಿ ಸಾಕ್ಷೀಕರಿಸುತ್ತಿದ್ದರು. ಪೋಟೋ ತೆಗೆದುಕೊಳ್ಳುತ್ತಿದ್ದರು. ಎಲ್ಲರೂ ಆನಂದದಲ್ಲಿ ತೇಲಿಹೋಗುತ್ತಿದ್ದರು.
ದೀರ್ಘಕಾಲದ ಬಳಿಕ ದೇವರಾಯನದುರ್ಗದ ನಿಸರ್ಗ ವೈಭವ ಕಾಣುವ, ಕಂಡು ಆನಂದಿಸುವ ಸುವರ್ಣಾವಕಾಶ ನಮಗೊದಗಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 12-11-2021
No comments:
Post a Comment