ಭಾರಿ ಮಳೆ ಪರಿಣಾಮ ದೀರ್ಘ ಕಾಲದ ಬಳಿಕ
ತುಮಕೂರು ಅಮಾನಿಕೆರೆ ಕೋಡಿ
------------------------------
‘ನಮ್ಮ ತುಮಕೂರಿನ’ ಹೆಮ್ಮೆಯ ಅಮಾನಿಕೆರೆ ಇಂದು (ದಿ.19-11-2021, ಶುಕ್ರವಾರ) ಕೋಡಿ ಬಿದ್ದಿದೆ.
ಕಳೆದ ಕೆಲ ದಿನಗಳಿಂದ ಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ, ದೀರ್ಘ ಕಾಲದ ಬಳಿಕ ಇದೀಗ ಅಮಾನಿಕೆರೆ ಭರ್ತಿ ಆಗಿದ್ದು, ಶಿರಾಗೇಟ್ ರಸ್ತೆಯಲ್ಲಿರುವ ದೊಡ್ಡ ಕೋಡಿ ಮೂಲಕ ನೀರು ಹೊರಕ್ಕೆ ಹರಿಯತೊಡಗಿದೆ. ಸುದ್ದಿ ಕಿವಿಗೆ ಬಿದ್ದೊಡನೆ ಇಂದು ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಶಿರಾಗೇಟ್ ರಸ್ತೆಯ ದೊಡ್ಡ ಕೋಡಿ ಬಳಿ ಹೋದೆವು. ಅದಾಗಲೇ ಅಲ್ಲಿ ಕೋಡಿ ನೋಡಲು ಜನಜಾತ್ರೆಯೇ ಇತ್ತು. ಕೋಡಿ ಇರುವ ಆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಜನ ಮತ್ತು ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಶ್ರಮಿಸುತ್ತಿದ್ದರು.
ಹೌದು, ದಶಕಗಳ ಹಿಂದೆ (ಆಗ ನಾವು ಚಿಕ್ಕಪೇಟೆ ನಿವಾಸಿಗಳಾಗಿದ್ದೆವು) ಚಿಕ್ಕಪೇಟೆ ಮನೆಯಿಂದ ನಾವೆಲ್ಲ ಓಡೋಡಿ ಬಂದು ಭೋರ್ಗರೆಯುತ್ತಿದ್ದ ದೊಡ್ಡ ಕೋಡಿಯನ್ನು ವೀಕ್ಷಿಸಿದ್ದುದು ಚೆನ್ನಾಗಿ ನೆನಪಿನಲ್ಲಿದೆ. ಊರಿನ ಜನರೆಲ್ಲ ಸಂಭ್ರಮದಿಂದ ಅಲ್ಲಿ ಜಾತ್ರೆಯೋಪಾದಿ ಸೇರಿದ್ದರು. ಕೆರೆಯ ಕೋಡಿಯಿಂದ ಹೊರಕ್ಕೆ ಚಿಮ್ಮುತ್ತಿದ್ದ ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ನೂರಾರು ಜನರು ಪೈಪೋಟಿಯಿಂದ ಬಲೆ ಬೀಸುತ್ತಿದ್ದ ದೃಶ್ಯಗಳೆಲ್ಲ ಮತ್ತೊಮ್ಮೆ ನೆನಪಾಯಿತು.
ಪುನಃ ಜೋರು ಮಳೆ ಬಂದಲ್ಲಿ, ಕೆರೆಯ ನೀರು ಭೋರ್ಗರೆಯುತ್ತ ಹೊರಕ್ಕೆ ಹರಿವುದು ಗ್ಯಾರಂಟಿ.
-ಆರ್.ಎಸ್.ಅಯ್ಯರ್, ತುಮಕೂರು, ದಿ.19-11-2021
Youtube: https://youtu.be/A749EE0DoqA
@ Tumkur Amani kere.. R S Iyer Tumkur and R Vishwanathan Tumkur
‘ಗಾರೆ ನರಸಯ್ಯನ ಕಟ್ಟೆ’ಗೆ ಹರಿದ ನೀರು
----------------------------------
“ನಮ್ಮ ತುಮಕೂರು” ನಗರದ “ಗಾರೆ ನರಸಯ್ಯನ ಕಟ್ಟೆ”ಗೆ ಈಗ “ಜಲ ಭಾಗ್ಯ” ದೊರಕಿದಂತಿದೆ. ಕಳೆದ ಕೆಲ ದಿನಗಳ ಜಡಿ ಮಳೆ ಮತ್ತು ಕಳೆದ ರಾತ್ರಿ ಸುರಿದ ಸತತ ಮಳೆಯ ಪರಿಣಾಮವಾಗಿ ಈ ಕಟ್ಟೆಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದುಬಂದಿದೆ.
ನವೆಂಬರ್ 19 ರಂದು ಶುಕ್ರವಾರ ಬೆಳ್ಳಂಬೆಳಗ್ಗೆಯೇ ಈ ವ್ಯಾಪ್ತಿಯ (30 ನೇ ವಾರ್ಡ್) ಕಾರ್ಪೊರೇಟರ್ ಹಾಗೂ ಆತ್ಮೀಯರಾದ ಶ್ರೀ ವಿಷ್ಣುವರ್ಧನ್ ಅವರು ಕರೆ ಮಾಡಿ ಕಟ್ಟೆಗೆ ನೀರು ಹರಿದು ಬಂದ ಸಂಗತಿಯನ್ನು ಸಂತಸದಿಂದ ಹಂಚಿಕೊಂಡರು.
ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಸ್ಥಳಕ್ಕೆ ಹೋಗಿ ನೋಡಿದಾಗ ಖುಷಿಯಾಯಿತು. ಈ ಕಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಸುತ್ತಲಿನ ವಸತಿ ಪ್ರದೇಶಕ್ಕೊಂದು ಸೊಬಗೇ ಬಂದಂತಿದೆ. ಕಟ್ಟೆಯ ನಡುವಿನ ಮರದಲ್ಲಿ ಅನೇಕ ಪಕ್ಷಿಗಳು ಗೋಚರಿಸಿದವು. ಪಕ್ಕದಲ್ಲೇ ನವಿಲುಗಳು ಕಂಡವು. ಹೀಗೆ ಈ ಜಲಕಾಯವು ಪಕ್ಷಿಗಳ ಆವಾಸವೂ ಆಗಿದೆ.
ನಗರದ ರಿಂಗ್ ರಸ್ತೆಗೆ ಈ “ಗಾರೆ ನರಸಯ್ಯನ ಕಟ್ಟೆ” ಹೊಂದಿಕೊಂಡಂತಿದೆ. ಪಕ್ಕದಲ್ಲೇ ಸಪ್ತಗಿರಿ ಬಡಾವಣೆಯೂ ಇದೆ. ದಶಕಗಳ ಕಾಲದಿಂದ ನೀರಿಲ್ಲದೆ ಈ ಕಟ್ಟೆ ಪಾಳು ಬಿದ್ದಿತ್ತು. ಕೆಲವು ಹಿತಾಸಕ್ತಿಗಳು ಇದನ್ನು ಅನ್ಯ ಉದ್ದೇಶಕ್ಕೆ ಬಳಸಲು ಯತ್ನಿಸಿದ್ದವು. ಆದರೆ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಈ ಜಲಕಾಯವು ಉಳಿಯುವಂತಾಯಿತು. ಪಾಳು ಬಿದ್ದಿದ್ದ ಈ ಕಟ್ಟೆಯ ಅಭಿವೃದ್ಧಿಗೆ ಇತ್ತೀಚೆಗೆ ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನ್ ಅವರು ಕಾಳಜಿ ತೋರಿದ್ದು, ವಿವಿಧ ಸಂಘ ಸಂಸ್ಥೆಗಳ ಹಾಗೂ ಸರ್ಕಾರದ ನೆರವು ಲಭಿಸಿದ್ದು, ಈಗ ಸಾರ್ಥಕ ಆದಂತಾಗಿದೆ. ಅವರೆಲ್ಲರೂ ಅಭಿನಂದನಾರ್ಹರು. ಇನ್ನೊಂದೆರಡು ದಿನ ಇದೇ ರೀತಿ ಮಳೆ ಸುರಿದರೆ ಈ ಕಟ್ಟೆ ತುಂಬಿ ತುಳುಕೀತು.
-ಆರ್.ಎಸ್.ಅಯ್ಯರ್, ತುಮಕೂರು, ದಿ.19-11-2021
No comments:
Post a Comment