* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 15 January 2023

VSR - 94, Birthday Celebration 14-01-2023, Saturday

 ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್. ರಾಮಚಂದ್ರನ್ ಅವರು 94 ನೇ ವಸಂತಕ್ಕೆ ಪದಾರ್ಪಣೆ ಮಾಡಿದ ಶುಭ ದಿನದಂದೇ (ದಿ. 14-01-2023, ಶನಿವಾರ) ಸಂಜೆ ಅನಿರೀಕ್ಷಿತವಾಗಿ ಮೊಮ್ಮಗಳು ಶ್ರೀಮತಿ ಸುನಯನ ಮತ್ತು ಆಕೆಯ ಪತಿ ಶ್ರೀ ಶಶಾಂಕ್ ಪಟ್ಟಾಜೆ (ಈರ್ವರೂ ಸಾಫ್ಟ್ ವೇರ್ ಇಂಜಿನಿಯರ್ ಗಳು) ದಂಪತಿ ತಮ್ಮ ಪುಟಾಣಿ ಮಗುವಿನೊಡನೆ ನಮ್ಮ ಮನೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಜನ್ಮದಿನದಂದೇ ನಮ್ಮ ತಂದೆಯವರು ಮರಿಮಗನೊಡನೆ ಸಂಭ್ರಮಿಸಿದ ಮಧುರ ಕ್ಷಣಗಳು ಮೂಡಿದವು.

ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ಮತ್ತು ಶ್ರೀ ಹೆಚ್.ಕೆ. ವೇಣುಗೋಪಾಲ್ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್) ರವರ ಸುಪುತ್ರಿಯೇ ಸುನಯನ. ಎರಡು ತಿಂಗಳುಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದು, ತಾತನ ಹುಟ್ಟುಹಬ್ಬದಂದೇ ಮಗುವಿನೊಡನೆ ಆಗಮಿಸಿ ಮಗುವಿಗೆ ಮುತ್ತಜ್ಜನ ದರ್ಶನ ಮಾಡಿಸಿದಳು. ಶ್ರೀಮತಿ ರಾಜೇಶ್ವರಿ, ಶ್ರೀ ಹೆಚ್.ಕೆ. ವೇಣುಗೋಪಾಲ್, ಇವರ ಪುತ್ರ ಇಂಜಿನಿಯರ್ ಶ್ರೀ ವಿ. ವಿವೇಕ್ ಸಹ ಜೊತೆಯಲ್ಲಿದ್ದರು.
ಮುತ್ತಜ್ಜನ ತೊಡೆಯಲ್ಲಿ ಮರಿಮಗ ನಲಿದಾಡಿದ. ಮರಿಮಗನ ಕಂಡು ಮುತ್ತಜ್ಜ ಸಂಭ್ರಮಿಸಿದರು. ಜನ್ಮದಿನದಂದು "ನಾಲ್ಕು ತಲೆಮಾರು ಒಂದೆಡೆ ಸೇರಿದ" ಅಪರೂಪದ ಸಂದರ್ಭ ಸೃಷ್ಟಿಗೊಂಡು, ಎಲ್ಲರ ಸಂತಸ ದುಪ್ಪಟ್ಟಾಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 15-01-2023, ಸಂಕ್ರಾಂತಿ.


















Wednesday 11 January 2023

Kalyanaraman Visit - 11-01- 2023

ನಮ್ಮ ಬಂಧು, ಪ್ರಸ್ತುತ ದುಬೈನಲ್ಲಿರುವ ಶ್ರೀ ಕಲ್ಯಾಣರಾಮನ್ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಲು ಇಂದು (ದಿ.11-01-2023, ಬುಧವಾರ) ಸಂಜೆ ಬೆಂಗಳೂರಿನಿಂದ ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು. ಅವರೊಡನೆ ಅವರ ಬಾಲ್ಯದ ಗೆಳೆಯ ಶ್ರೀ ವಿದ್ಯಾಶಂಕರ್ ರವರೂ (ನೀಲಿ ಅಂಗಿ ಧರಿಸಿರುವವರು) ಬಂದಿದ್ದರು.

ಕಲ್ಯಾಣ ನಮ್ಮ ತಂದೆಯ ತಂಗಿ ದಿ|| ಶ್ರೀಮತಿ ವೇದವತಿ ರವರ ಹಿರಿಯ ಪುತ್ರ. ಬಾಲ್ಯದಲ್ಲೇ ತುಮಕೂರಿನ ಮನೆಯ ಜೊತೆ ಬಲವಾದ ನಂಟು. ಶಾಲೆಗೆ ರಜೆ ಬಂತೆಂದರೆ ಬೆಂಗಳೂರಿನಿಂದ ಇಲ್ಲಿಗೆ ಬರುತ್ತಿದ್ದ. ಹೀಗಾಗಿ ಸುದೀರ್ಘ ಕಾಲದ ಮಾತುಕತೆ ನಮ್ಮ ಕುಟುಂಬದ ಅನೇಕ ಮಧುರ ಸಂದರ್ಭಗಳನ್ನು ಕಣ್ಮುಂದೆ ತಂದಿತು. ದಶಕಗಳ ಹಿಂದಿನ ಹಳೆಯ ತುಮಕೂರಿನ ಹಲವು ಪ್ರಸಂಗಗಳನ್ನು ನೆನಪಿಸಿತು. ನಮ್ಮ ಕುಟುಂಬದ ಅನೇಕ ಸದಸ್ಯರು ಹಾಗೂ ಕುಟುಂಬದ ಸ್ನೇಹಿತರಾಗಿದ್ದ ಹಲವು ವ್ಯಕ್ತಿಗಳು ಸ್ಮರಣೆಗೆ ಬಂದರು. ಹಲವು ಮಧುರಸ್ಮೃತಿಗಳು ನೆನಪಿನಂಗಳದಲ್ಲಿ ತೇಲಿಹೋದವು. ಕಲ್ಯಾಣನಿಗಷ್ಟೇ ಅಲ್ಲದೆ, ನಮ್ಮ ತಂದೆಯವರಿಗೆ, ನನಗೆ ಮತ್ತು ವಿಶ್ವನಾಥನ್ ಗೆ ಹೊತ್ತು ಹೋದುದೇ ಗೊತ್ತಾಗಲಿಲ್ಲ.
ಕಲ್ಯಾಣರಾಮನ್ ಈಗ ದುಬೈನಲ್ಲಿ ಕ್ಯಾಟರ್ ಪಿಲ್ಲರ್ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ದೊಡ್ಡದೊಡ್ಡ ಹಡಗುಗಳ ಮುಖ್ಯ ಎಂಜಿನ್ ಗಳನ್ನು ದುರಸ್ತಿಗೊಳಿಸುವಲ್ಲಿ ನಿಷ್ಣಾತನಾಗಿದ್ದು, ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಹಾಗೂ ವೈವಿಧ್ಯಮಯ ಅನುಭವ ಹೊಂದಿದ್ದಾರೆ. ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ.
ಜೊತೆಯಲ್ಲಿ ಬಂದಿದ್ದ ಶ್ರೀ ವಿದ್ಯಾಶಂಕರ್ ರವರು ಕಲ್ಯಾಣ್ ರವರ ಬಾಲ್ಯದ ಸ್ನೇಹಿತರು. ಇವರು ದುಬೈನ ಪ್ರತಿಷ್ಠಿತ ಮೇಸ್ ಎಂಬ ಕಂಪನಿಯಲ್ಲಿ ರೀಜನಲ್ ಫೈನಾನ್ಸ್ ಮ್ಯಾನೇಜರ್ ಆಗಿ 26 ವರ್ಷಗಳಷ್ಟು ಸುದೀರ್ಘ ಅವಧಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯುಳ್ಳವರು. ದುಬೈನ ಭಾರತೀಯರ ಬಳಗದಲ್ಲಿ ಸುಪರಿಚಿತರಾಗಿದ್ದವರು. ಶ್ರೀಯುತರು ಇದೀಗ ಬೆಂಗಳೂರಿಗೆ ವಾಪಸ್ಸಾಗಿ ಬೆಂಗಳೂರಿನಲ್ಲೇ ನೆಲೆಸಿರುವವರು. ಇವರು ಶ್ರೀ ಆಂಜನೇಯ ಸ್ವಾಮಿಯ ಆರಾಧಕರು.
ವಿದೇಶದಲ್ಲಿ ಇಷ್ಟೆಲ್ಲ ಉನ್ನತ ಹುದ್ದೆಯಲ್ಲಿದ್ದರೂ, ಅದ್ಯಾವುದರ ಹಮ್ಮುಬಿಮ್ಮುಗಳಿಲ್ಲದೆ ಸರಳತೆಯಲ್ಲಿ ಸರಳರಾಗಿ ಅದೇ ಮುಗ್ಧತೆಯಿಂದ ಬಂದು, ಒಂದಷ್ಟು ಹೊತ್ತು ಇದ್ದುದು ನಮ್ಮೆಲ್ಲರ ಮನಸ್ಸು ತುಂಬಿದಂತಾಯಿತು. ಈ ಭೇಟಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹುದು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 11-01-2023








karate Krishnamurthy visit 2023

 “ಕರಾಟೆ ಕೃಷ್ಣಮೂರ್ತಿ” ಎಂದೇ “ನಮ್ಮ ತುಮಕೂರು” ನಗರದಲ್ಲಿ ಕೀರ್ತಿಶಾಲಿಗಳಾಗಿರುವ ಶ್ರೀ ಕೃಷ್ಣಮೂರ್ತಿಯವರು ಸುಮಾರು ನಾಲ್ಕು ದಶಕಗಳಿಂದ ನನಗೆ ಆತ್ಮೀಯರು. ತುಮಕೂರಿನ ಚಿಕ್ಕಪೇಟೆಯ ಹರಿಸಿಂಗರ ಬೀದಿ ನಿವಾಸಿಗಳು. ನಾಲ್ಕು ದಶಕಗಳ ಹಿಂದೆಯೇ ಖ್ಯಾತ ಕರಾಟೆ ಪಟುವಾಗಿ ಅವರು ಮಾಡಿರುವ ಸಾಧನೆಗಳು ಗಮನೀಯ. ಜೊತೆಗೆ ಕರಾಟೆ ಶಿಕ್ಷಕರಾಗಿ ಒಳ್ಳೆಯ ಹೆಸರು ಮಾಡಿರುವವರು. ಈವರೆಗೆ ಸಾವಿರಾರು ಜನರಿಗೆ ಕರಾಟೆ ಕಲಿಸಿ, ದೈಹಿಕವಾಗಿ-ಮಾನಸಿಕವಾಗಿ ಸಶಕ್ತರನ್ನಾಗಿಸಿರುವವರು. ಈಗಲೂ ಇವರ ಈ ಸೇವೆ ಯಶಸ್ವಿಯಾಗಿ ಸಾಗಿದೆಯೆಂಬುದು ಹೆಮ್ಮೆಯ ಸಂಗತಿ.

ಇಂದು (ದಿ. 08-01-2023, ಭಾನುವಾರ) ಬೆಳಗ್ಗೆ ಶ್ರೀ ಕರಾಟೆ ಕೃಷ್ಣಮೂರ್ತಿಯವರು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರ ಯೋಗಕ್ಷೇಮ ವಿಚಾರಿಸಲೆಂದೇ ಅನಿರೀಕ್ಷಿತವಾಗಿ ನಮ್ಮಮನೆಗೆ ಬಂದಿದ್ದರು. ಅತ್ಯಂತ ಪ್ರೀತಿಯಿಂದ ನಮ್ಮ ತಂದೆಯವರಿಗೆ ಫಲ ಸಮರ್ಪಣೆ ಮಾಡಿ ನಮಿಸಿದರು. ನಮ್ಮೊಡನೆ ಕುಳಿತು ಹಲವು ಪ್ರಸಂಗಗಳನ್ನು ಮೆಲುಕು ಹಾಕಿದರು. ಹಳೆಯ ತುಮಕೂರಿನ ಹಲವು ಸಾಧಕರನ್ನು ನೆನಪು ಮಾಡಿಕೊಂಡರು. ಬಹುಹೊತ್ತಿನ ಮಾತುಕತೆ ಎಲ್ಲರಲ್ಲೂ ಅದೊಂದು ರೀತಿಯ ಸಂತಸ ತಂದಿತು. ಇಂತಹ ನಿರ್ಮಲವಾದ ಪ್ರೀತಿ-ವಿಶ್ವಾಸ-ಸ್ನೇಹಗಳೇ ಬದುಕಿಗೆ ಚೈತನ್ಯ ಮೂಡಿಸುವಂತಹುದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-01-2023