ನಮ್ಮ ಬಂಧು, ಪ್ರಸ್ತುತ ದುಬೈನಲ್ಲಿರುವ ಶ್ರೀ ಕಲ್ಯಾಣರಾಮನ್ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಲು ಇಂದು (ದಿ.11-01-2023, ಬುಧವಾರ) ಸಂಜೆ ಬೆಂಗಳೂರಿನಿಂದ ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು. ಅವರೊಡನೆ ಅವರ ಬಾಲ್ಯದ ಗೆಳೆಯ ಶ್ರೀ ವಿದ್ಯಾಶಂಕರ್ ರವರೂ (ನೀಲಿ ಅಂಗಿ ಧರಿಸಿರುವವರು) ಬಂದಿದ್ದರು.
ಕಲ್ಯಾಣ ನಮ್ಮ ತಂದೆಯ ತಂಗಿ ದಿ|| ಶ್ರೀಮತಿ ವೇದವತಿ ರವರ ಹಿರಿಯ ಪುತ್ರ. ಬಾಲ್ಯದಲ್ಲೇ ತುಮಕೂರಿನ ಮನೆಯ ಜೊತೆ ಬಲವಾದ ನಂಟು. ಶಾಲೆಗೆ ರಜೆ ಬಂತೆಂದರೆ ಬೆಂಗಳೂರಿನಿಂದ ಇಲ್ಲಿಗೆ ಬರುತ್ತಿದ್ದ. ಹೀಗಾಗಿ ಸುದೀರ್ಘ ಕಾಲದ ಮಾತುಕತೆ ನಮ್ಮ ಕುಟುಂಬದ ಅನೇಕ ಮಧುರ ಸಂದರ್ಭಗಳನ್ನು ಕಣ್ಮುಂದೆ ತಂದಿತು. ದಶಕಗಳ ಹಿಂದಿನ ಹಳೆಯ ತುಮಕೂರಿನ ಹಲವು ಪ್ರಸಂಗಗಳನ್ನು ನೆನಪಿಸಿತು. ನಮ್ಮ ಕುಟುಂಬದ ಅನೇಕ ಸದಸ್ಯರು ಹಾಗೂ ಕುಟುಂಬದ ಸ್ನೇಹಿತರಾಗಿದ್ದ ಹಲವು ವ್ಯಕ್ತಿಗಳು ಸ್ಮರಣೆಗೆ ಬಂದರು. ಹಲವು ಮಧುರಸ್ಮೃತಿಗಳು ನೆನಪಿನಂಗಳದಲ್ಲಿ ತೇಲಿಹೋದವು. ಕಲ್ಯಾಣನಿಗಷ್ಟೇ ಅಲ್ಲದೆ, ನಮ್ಮ ತಂದೆಯವರಿಗೆ, ನನಗೆ ಮತ್ತು ವಿಶ್ವನಾಥನ್ ಗೆ ಹೊತ್ತು ಹೋದುದೇ ಗೊತ್ತಾಗಲಿಲ್ಲ.
ಕಲ್ಯಾಣರಾಮನ್ ಈಗ ದುಬೈನಲ್ಲಿ ಕ್ಯಾಟರ್ ಪಿಲ್ಲರ್ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ದೊಡ್ಡದೊಡ್ಡ ಹಡಗುಗಳ ಮುಖ್ಯ ಎಂಜಿನ್ ಗಳನ್ನು ದುರಸ್ತಿಗೊಳಿಸುವಲ್ಲಿ ನಿಷ್ಣಾತನಾಗಿದ್ದು, ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಹಾಗೂ ವೈವಿಧ್ಯಮಯ ಅನುಭವ ಹೊಂದಿದ್ದಾರೆ. ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ.
ಜೊತೆಯಲ್ಲಿ ಬಂದಿದ್ದ ಶ್ರೀ ವಿದ್ಯಾಶಂಕರ್ ರವರು ಕಲ್ಯಾಣ್ ರವರ ಬಾಲ್ಯದ ಸ್ನೇಹಿತರು. ಇವರು ದುಬೈನ ಪ್ರತಿಷ್ಠಿತ ಮೇಸ್ ಎಂಬ ಕಂಪನಿಯಲ್ಲಿ ರೀಜನಲ್ ಫೈನಾನ್ಸ್ ಮ್ಯಾನೇಜರ್ ಆಗಿ 26 ವರ್ಷಗಳಷ್ಟು ಸುದೀರ್ಘ ಅವಧಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯುಳ್ಳವರು. ದುಬೈನ ಭಾರತೀಯರ ಬಳಗದಲ್ಲಿ ಸುಪರಿಚಿತರಾಗಿದ್ದವರು. ಶ್ರೀಯುತರು ಇದೀಗ ಬೆಂಗಳೂರಿಗೆ ವಾಪಸ್ಸಾಗಿ ಬೆಂಗಳೂರಿನಲ್ಲೇ ನೆಲೆಸಿರುವವರು. ಇವರು ಶ್ರೀ ಆಂಜನೇಯ ಸ್ವಾಮಿಯ ಆರಾಧಕರು.
No comments:
Post a Comment