* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 22 January 2024

Ratha Yathra ರಾಮ ರಥ ಯಾತ್ರೆ 1990

 1990 ರ ದಶಕದ ರಾಮ ರಥ ಯಾತ್ರೆಗಳ ಸಂಭ್ರಮ "ನಮ್ಮ ತುಮಕೂರು" ನಗರದಲ್ಲೂ ಅತ್ಯುತ್ಸಾಹದಿಂದ ಕೂಡಿತ್ತು. ಅಸಂಖ್ಯಾತ ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಿದ್ದರು. ಅಂತಹ ಒಂದು ಯಾತ್ರೆಯ ಮೆರವಣಿಗೆಯ ವಾಹನದ ಮೇಲೆ ನಾನು (ಬಲತುದಿ) ಮತ್ತು ಕೇಸರಿ ಪೇಟ ತೊಟ್ಟಿರುವ ಆತ್ಮೀಯ ಮಿತ್ರರಾದ ಪೃಥ್ವಿ ಮಲ್ಲಣ್ಣ (ಎಡಗಡೆ) ಪಾಲ್ಗೊಂಡಿದ್ದೆವು. ಈಗಿನ ವಿವೇಕಾನಂದ ರಸ್ತೆಯ ದ್ವಾರಕಾ ಹೋಟೆಲ್ ಕ್ರಾಸ್ ನಲ್ಲಿ ಈ ಫೋಟೋ ತೆಗೆಯಲಾಗಿದೆ. ಫೋಟೋ ಆಲ್ಬಂನಲ್ಲಿ ಆಕಸ್ಮಿಕವಾಗಿ ಈ ಹಳೆಯ ಫೋಟೋ ಕಾಣಿಸಿ, ಆ ಹೋರಾಟದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 22-01-2024








Sunday 21 January 2024

Sri Ramayana Books in our Home.... 57 ವರ್ಷಗಳ ಹಿಂದಣ ಶ್ರೀ ರಾಮಾಯಣ ಗ್ರಂಥ- 22-01-2024

 

57 ವರ್ಷಗಳ ಹಿಂದಣ “ಶ್ರೀರಾಮಾಯಣ ಗ್ರಂಥ”

-------------------------------------

ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸ್ಥಾಪಕರೂ ಆಗಿರುವ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರು ಇಲ್ಲಿನ ಚಿತ್ರದಲ್ಲಿರುವಂತೆ ತಮ್ಮ ಕೈಲಿ ಹಿಡಿದಿರುವ ಈ ಗ್ರಂಥದ ಹೆಸರು “ಶ್ರೀ ಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ”. ಇದನ್ನು ಬೆಂಗಳೂರಿನ “ಶ್ರೀಮದ್ರಾಮಾಯಣ ಮಹಾಭಾರತಾದಿ ಪ್ರಕಟನ ಸಮಿತಿ”ಯು 1967 ರಲ್ಲಿ ಪ್ರಕಾಶನಗೊಳಿಸಿದೆ. ಅದೇ ವರ್ಷದ ಜುಲೈ ಮಾಹೆಯಲ್ಲಿ ನಮ್ಮ ತಂದೆ ಇದನ್ನು ಖರೀದಿಸಿದ್ದಾರೆ. 600 ಪುಟಗಳುಳ್ಳ ಹಾಗೂ “ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯ ಕಾಂಡ ಮತ್ತು ಕಿಷ್ಕಿಂದಾ ಕಾಂಡ” ಒಳಗೊಂಡ ಈ “ಮೊದಲನೇ ಸಂಪುಟ”ದ ಆಗಿನ ಬೆಲೆ 12 ರೂಪಾಯಿಗಳು. ಈ ಗ್ರಂಥಕ್ಕೆ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಮುನ್ನುಡಿ ಬರೆದಿದ್ದು, ಖ್ಯಾತ ಸಾಹಿತಿ-ದಾರ್ಶನಿಕ ಡಾ. ಡಿ.ವಿ.ಗುಂಡಪ್ಪನವರು ಪ್ರಸ್ತಾವನೆ ಬರೆದಿದ್ದಾರೆ. ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ಎನ್. ರಂಗನಾಥ ಶರ್ಮಾರವರು ಪ್ರಧಾನ ಸಂಪಾದಕರಾಗಿದ್ದರೆಂಬುದು ಉಲ್ಲೇಖಾರ್ಹ.

 ರಾಮಾಯಣದ “ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ” ಒಳಗೊಂಡ “ಎರಡನೇ ಸಂಪುಟ” 1968 ರಲ್ಲಿ ಪ್ರಕಾಶಗೊಂಡಿದ್ದು, ಅದನ್ನೂ ನಮ್ಮ ತಂದೆ ಆಗಲೇ ಖರೀದಿಸಿದ್ದಾರೆ. 600 ಪುಟಗಳ ಈ ಗ್ರಂಥದ ಬೆಲೆಯೂ ಆಗ 12 ರೂ.ಗಳು. ಈ ಗ್ರಂಥವನ್ನು ಇಲ್ಲಿರುವ ಚಿತ್ರದಲ್ಲಿ ಆರ್.ವಿಶ್ವನಾಥನ್ ಹಿಡಿದಿದ್ದಾರೆ.

 ಇನ್ನು ನನ್ನ ಕೈಲಿರುವ ಗ್ರಂಥದ ಹೆಸರು “ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ”. ಇದನ್ನು ಡಾ.ಹೆಚ್.ರಾಮಚಂದ್ರಸ್ವಾಮಿರವರು ರಚಿಸಿದ್ದು, ಮೈಸೂರಿನ ಶ್ರೀರಾಮಕೃಷ್ಣಾಶ್ರಮವು ಪ್ರಕಟಿಸಿದೆ. 496 ಪುಟಗಳ ಈ ಗ್ರಂಥದ ಬೆಲೆ 160 ರೂ. ಆಗಿದ್ದು, ಸುಮಾರು 7-8 ವರ್ಷಗಳ ಹಿಂದೆ ನಾವು ಖರೀದಿಸಿದ್ದೇವೆ.

 ನಮ್ಮ ಮನೆಯಲ್ಲಿರುವ ಈ ಮೂರೂ ಅಮೂಲ್ಯ ಗ್ರಂಥಗಳನ್ನು ನಾವು ಓದಿ ಆನಂದಿಸಿದ್ದೇವೆ. ಆಗಾಗ ಮತ್ತೆ ಮತ್ತೆ ಓದುತ್ತಲೂ ಇರುತ್ತೇವೆ.

 ಅಯೋಧ್ಯೆಯ ಪವಿತ್ರ ಶ್ರೀರಾಮಮಂದಿರದ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಈ ಶುಭ ಸಂದರ್ಭದಲ್ಲಿ “ಶ್ರೀಮದ್ರಾಮಾಯಣ” ಗ್ರಂಥವು ನಮ್ಮ ಚೈತನ್ಯವನ್ನು ನೂರ್ಮಡಿಗೊಳಿಸುತ್ತಿದೆ.

 -ಆರ್.ಎಸ್.ಅಯ್ಯರ್, ತುಮಕೂರು, ದಿ. 22-01-2024






Monday 15 January 2024

VSR Sankranthi- 15-01- 2024 ಸಂಕ್ರಾಂತಿಯಂದು ಮುತ್ತಜ್ಜನ ಆಶೀರ್ವಾದ ಪಡೆದುಕೊಂಡ ಮರಿಮಗ

 ಮರಿಮಗನೊಂದಿಗೆ (ಮಗಳ ಮೊಮ್ಮಗ) ಮುತ್ತಜ್ಜ ಒಂದಿಷ್ಟು ಹೊತ್ತು ಸಂತಸದಿಂದ ಕಾಲಕಳೆದ ಸಂಭ್ರಮ ನೀಡಿತು ಇಂದಿನ ಮಕರ ಸಂಕ್ರಾಂತಿ.

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95) ರವರ ಯೋಗಕ್ಷೇಮ ವಿಚಾರಿಸಿ, ಸಂಕ್ರಾಂತಿಯ ಶುಭಾಶಯ ತಿಳಿಸಿ ಆಶೀರ್ವಾದ ಪಡೆಯಲು ಇಂದು (ದಿ. 15-01-2024, ಸೋಮವಾರ) ರಾತ್ರಿ ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ಮತ್ತು ಅವರ ಪತಿ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು ತಮ್ಮ ಮೊಮ್ಮಗ (ಮಗಳ ಮಗ) "ಕೃಷ್ಣ"ನೊಂದಿಗೆ ನಮ್ಮ ಮನೆಗೆ ಆಗಮಿಸಿದ್ದರು. ಆಗ 95 ವಸಂತಗಳ ಮುತ್ತಜ್ಜ ರಾಮಚಂದ್ರನ್ ಅವರು ತಮ್ಮ ಮರಿಮಗ ಒಂದು ವರ್ಷ ವಯಸ್ಸಿನ ಕೃಷ್ಣನ ಜೊತೆ ಒಂದಿಷ್ಟು ಹೊತ್ತು ಖುಷಿಯಾಗಿ ಕಾಲಕಳೆಯುವ ಅವಕಾಶ ದೊರೆಯಿತು. ಈ "ಬಾಲ ಕೃಷ್ಣ" ಎಲ್ಲರಲ್ಲೂ ಹರ್ಷದ ಹೊನಲನ್ನೇ ಹರಿಸಿದ.






**********************************************************************

ಬಾಲ “ಕೃಷ್ಣ”ನ ಲೀಲೆಗಳು.. !!!
--------------------------
“ಸಂಕ್ರಾಂತಿ”ಯ ಶುಭದಿನ (ದಿ.15-01-2024, ಸೋಮವಾರ) ರಾತ್ರಿ ಈ ನಮ್ಮ “ಕೃಷ್ಣ” ನಮ್ಮ ಮನೆಗೆ ಆಗಮಿಸಿದ ಹೊತ್ತಲ್ಲಿ ಅವನ ಮುತ್ತಜ್ಜ (ನಮ್ಮ ತಂದೆ) ವಿ.ಎಸ್.ರಾಮಚಂದ್ರನ್ (95) ರವರು ಮಲಗಿದ್ದರು. ಈಗಷ್ಟೇ ಒಂದು ವರ್ಷ ದಾಟಿರುವ ಈ ಮುದ್ದು “ಕೃಷ್ಣ” ಮುತ್ತಜ್ಜನ ಕೈಕುಲುಕಿ ಖುಷಿಪಟ್ಟ. ಅವರಿಗೆ ಬೀಸಣಿಕೆಯಿಂದ ಗಾಳಿ ಬೀಸಿ ಆನಂದಿಸಿದ. ಅಲ್ಲೇ ಇದ್ದ ಚೆಂಡನ್ನು ಎಸೆದು ಅವರೊಡನೆ ಕ್ಷಣ ಕಾಲ ಆಟವಾಡಿದ. ಎದ್ದುಕುಳಿತ ಮುತ್ತಜ್ಜನ ತಲೆಯನ್ನು ಬಾಚಣಿಕೆಯಿಂದ ಬಾಚಿ ನಗೆಚೆಲ್ಲಿದ. ಕೊನೆಗೆ ತನ್ನ ತಾತ ಶ್ರೀ ಹೆಚ್.ಕೆ.ವೇಣುಗೋಪಾಲ್ ಮತ್ತು ಅಜ್ಜಿ ಆರ್.ರಾಜೇಶ್ವರಿ ಅವರ ಜೊತೆ ಹೊರಡುವಾಗ ಮುತ್ತಜ್ಜನ ಪಾದಕ್ಕೆ ಶಿರಬಾಗಿ ನಮಿಸಿದ. ಪಕ್ಕದಲ್ಲೇ ಇದ್ದ ಮುತ್ತಜ್ಜಿ ದಿವಂಗತ ಶ್ರೀಮತಿ ಪಾರ್ವತಿ ಅವರ ಭಾವಚಿತ್ರ ನೋಡಿ ಕಣ್ಣಿಗೊತ್ತಿಕೊಂಡ. ನಂತರ ಪಕ್ಕದ ದೇವರ ಕೋಣೆಗೆ ಹೋಗಿ ಕೈಚಾಚಿ ಹಣೆಗೊತ್ತಿಕೊಂಡ. ಇವುಗಳೇ ಅಲ್ಲವೇ ಬಾಲ-ಮುದ್ದು “ಕೃಷ್ಣ”ನ ಲೀಲೆಗಳು…!!!
-ಆರ್.ಎಸ್.ಅಯ್ಯರ್, ತುಮಕೂರು,











-----------------------------------------------
YouTube video






Sunday 14 January 2024

V S Ramachandran- 95 (14-01-2024) ವಿ.ಎಸ್.ರಾಮಚಂದ್ರನ್-95

 95 ನೇ ವಸಂತಕ್ಕೆ ಪಾದಾರ್ಪಣೆ

-------------------------

ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸ್ಥಾಪಕರೂ ಆದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ. 14-01-2024, ಭಾನುವಾರ) 95 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ನಮ್ಮ ಮನೆದೇವರಾದ ಶ್ರೀ ಪಳನಿ ಮುರುಗನ್, ಆರಾಧ್ಯ ದೈವವಾದ ಶ್ರೀ ಶೃಂಗೇರಿ ಶಾರದಾಂಬೆ, ಜಗದ್ಗುರು ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶ್ರೀಮಾತೆ ಶಾರದಾದೇವಿಯವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
Sri V S Ramachandran, Freedom Fighter & Founder of Sri Shankara Jayanthi Sabha, Tumakuru today entered 95 th birth anniversery. He celebrated his birthday through performing pooja to our home deity Sri Palani Murugan, along with Sri Shringeri Sharadambe, Sri Jagadguru Shankaracharya, Sri Ramakrishna Paramahamsa & Srimathe Sharada Devi.







------------------------------------------------------------------
Youtube Video