* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 21 January 2024

Sri Ramayana Books in our Home.... 57 ವರ್ಷಗಳ ಹಿಂದಣ ಶ್ರೀ ರಾಮಾಯಣ ಗ್ರಂಥ- 22-01-2024

 

57 ವರ್ಷಗಳ ಹಿಂದಣ “ಶ್ರೀರಾಮಾಯಣ ಗ್ರಂಥ”

-------------------------------------

ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸ್ಥಾಪಕರೂ ಆಗಿರುವ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರು ಇಲ್ಲಿನ ಚಿತ್ರದಲ್ಲಿರುವಂತೆ ತಮ್ಮ ಕೈಲಿ ಹಿಡಿದಿರುವ ಈ ಗ್ರಂಥದ ಹೆಸರು “ಶ್ರೀ ಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ”. ಇದನ್ನು ಬೆಂಗಳೂರಿನ “ಶ್ರೀಮದ್ರಾಮಾಯಣ ಮಹಾಭಾರತಾದಿ ಪ್ರಕಟನ ಸಮಿತಿ”ಯು 1967 ರಲ್ಲಿ ಪ್ರಕಾಶನಗೊಳಿಸಿದೆ. ಅದೇ ವರ್ಷದ ಜುಲೈ ಮಾಹೆಯಲ್ಲಿ ನಮ್ಮ ತಂದೆ ಇದನ್ನು ಖರೀದಿಸಿದ್ದಾರೆ. 600 ಪುಟಗಳುಳ್ಳ ಹಾಗೂ “ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯ ಕಾಂಡ ಮತ್ತು ಕಿಷ್ಕಿಂದಾ ಕಾಂಡ” ಒಳಗೊಂಡ ಈ “ಮೊದಲನೇ ಸಂಪುಟ”ದ ಆಗಿನ ಬೆಲೆ 12 ರೂಪಾಯಿಗಳು. ಈ ಗ್ರಂಥಕ್ಕೆ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಮುನ್ನುಡಿ ಬರೆದಿದ್ದು, ಖ್ಯಾತ ಸಾಹಿತಿ-ದಾರ್ಶನಿಕ ಡಾ. ಡಿ.ವಿ.ಗುಂಡಪ್ಪನವರು ಪ್ರಸ್ತಾವನೆ ಬರೆದಿದ್ದಾರೆ. ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ಎನ್. ರಂಗನಾಥ ಶರ್ಮಾರವರು ಪ್ರಧಾನ ಸಂಪಾದಕರಾಗಿದ್ದರೆಂಬುದು ಉಲ್ಲೇಖಾರ್ಹ.

 ರಾಮಾಯಣದ “ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ” ಒಳಗೊಂಡ “ಎರಡನೇ ಸಂಪುಟ” 1968 ರಲ್ಲಿ ಪ್ರಕಾಶಗೊಂಡಿದ್ದು, ಅದನ್ನೂ ನಮ್ಮ ತಂದೆ ಆಗಲೇ ಖರೀದಿಸಿದ್ದಾರೆ. 600 ಪುಟಗಳ ಈ ಗ್ರಂಥದ ಬೆಲೆಯೂ ಆಗ 12 ರೂ.ಗಳು. ಈ ಗ್ರಂಥವನ್ನು ಇಲ್ಲಿರುವ ಚಿತ್ರದಲ್ಲಿ ಆರ್.ವಿಶ್ವನಾಥನ್ ಹಿಡಿದಿದ್ದಾರೆ.

 ಇನ್ನು ನನ್ನ ಕೈಲಿರುವ ಗ್ರಂಥದ ಹೆಸರು “ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ”. ಇದನ್ನು ಡಾ.ಹೆಚ್.ರಾಮಚಂದ್ರಸ್ವಾಮಿರವರು ರಚಿಸಿದ್ದು, ಮೈಸೂರಿನ ಶ್ರೀರಾಮಕೃಷ್ಣಾಶ್ರಮವು ಪ್ರಕಟಿಸಿದೆ. 496 ಪುಟಗಳ ಈ ಗ್ರಂಥದ ಬೆಲೆ 160 ರೂ. ಆಗಿದ್ದು, ಸುಮಾರು 7-8 ವರ್ಷಗಳ ಹಿಂದೆ ನಾವು ಖರೀದಿಸಿದ್ದೇವೆ.

 ನಮ್ಮ ಮನೆಯಲ್ಲಿರುವ ಈ ಮೂರೂ ಅಮೂಲ್ಯ ಗ್ರಂಥಗಳನ್ನು ನಾವು ಓದಿ ಆನಂದಿಸಿದ್ದೇವೆ. ಆಗಾಗ ಮತ್ತೆ ಮತ್ತೆ ಓದುತ್ತಲೂ ಇರುತ್ತೇವೆ.

 ಅಯೋಧ್ಯೆಯ ಪವಿತ್ರ ಶ್ರೀರಾಮಮಂದಿರದ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಈ ಶುಭ ಸಂದರ್ಭದಲ್ಲಿ “ಶ್ರೀಮದ್ರಾಮಾಯಣ” ಗ್ರಂಥವು ನಮ್ಮ ಚೈತನ್ಯವನ್ನು ನೂರ್ಮಡಿಗೊಳಿಸುತ್ತಿದೆ.

 -ಆರ್.ಎಸ್.ಅಯ್ಯರ್, ತುಮಕೂರು, ದಿ. 22-01-2024






No comments:

Post a Comment