ಹೆಸರಾಂತ ಸಂಗೀತ ನಿರ್ದೇಶಕರೂ, ಸಂಗೀತ ಸಂಯೋಜಕರೂ, ಪಕ್ಕವಾದ್ಯ ಕಲಾವಿದರೂ (ವಿಶೇಷವಾಗಿ ತಬಲ), ಅಸಂಖ್ಯಾತ ಧಾರಾವಾಹಿಗಳಿಗೆ ಹಿನ್ನೆಲೆ ಸಂಗೀತ ನೀಡಿರುವವರೂ ಆಗಿರುವ ಬಹುಮುಖ ಪ್ರತಿಭೆಯ ಕಲಾವಿದ ಶ್ರೀ ಶಿವಸತ್ಯ ಅವರ ನೇರ ಸಂದರ್ಶನ (ಲೈವ್) ಬೆಂಗಳೂರು ದೂರದರ್ಶನ “ಚಂದನ” ವಾಹಿನಿಯಲ್ಲಿ ಇಂದು (ದಿ. 02-07-2025) ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಪ್ರಸಾರವಾಯಿತು. ನಿರೂಪಕಿ ಶ್ರೀಮತಿ ಸಂಧ್ಯಾಭಟ್ ರವರು ನಡೆಸಿಕೊಟ್ಟ ಈ ಸುಂದರ ಕಾರ್ಯಕ್ರಮದಲ್ಲಿ ಶ್ರೀ ಶಿವಸತ್ಯ ರವರು ತಮ್ಮ ಕಲಾ ಸಾಧನೆಯನ್ನು ಮನಮುಟ್ಟುವಂತೆ ವಿವರಿಸಿದರು.
ಶ್ರೀ ಶಿವಸತ್ಯ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಗಾಯಕ ದಿ|| ಶ್ರೀ ಸಿ.ಅಶ್ವಥ್ ರವರು ಹಾಡು ಹಾಡಿದ್ದಾರೆ. ಪ್ರಖ್ಯಾತ ಗಾಯಕರಾದ ದಿ|| ಶ್ರೀ ಪಿ.ಬಿ. ಶ್ರೀನಿವಾಸ್ ರವರು, ದಿ|| ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು, ಗಾನ ಕೋಗಿಲೆ ಶ್ರೀಮತಿ ಎಸ್.ಜಾನಕಿಯವರು ಮೊದಲಾದ ದಿಗ್ಗಜರಿಗೆ ಪಕ್ಕವಾದ್ಯ ನುಡಿಸಿದ ಹೆಗ್ಗಳಿಕೆಯನ್ನು ಶ್ರೀ ಶಿವಸತ್ಯ ಹೊಂದಿದ್ದಾರೆ.
ಶ್ರೀ ಶಿವಸತ್ಯರವರು ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿದ್ದ ದಿ|| ಶ್ರೀ ಎಂ.ಎಸ್.ಸತ್ಯರವರ ಸುಪುತ್ರರು. ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಅವರ ಪತಿ.
ಇಂದು ಟಿ.ವಿ.ಯಲ್ಲಿ ಈ ಕಾರ್ಯಕ್ರಮವನ್ನು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಅತ್ಯುತ್ಸಾಹದಿಂದ ವೀಕ್ಷಿಸಿ ಆನಂದಿಸಿದರು. ತಮ್ಮ ಅಳಿಯನ ಸಾಧನೆಯನ್ನು ಹೆಮ್ಮೆಯಿಂದ ನೋಡಿ ಸಂತೋಷಪಟ್ಟರು. ಆ ಸಂತೋಷದಲ್ಲಿ ನಾನು ಮತ್ತು ವಿಶ್ವನಾಥನ್ ಸಹಾ ಭಾಗಿಯಾದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-07-2025 #rsiyertumakuru
No comments:
Post a Comment