ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Wednesday, 10 June 2026

ವಿದ್ಯಾಶಂಕರ ದೇಗುಲ ಮತ್ತು ದುರ್ಗದ ಹಳ್ಳಿ ಕೆರೆ- 2026- Vidyashankara Temple and Durgadahalli Lake


ಮಳೆಗಾಲದ ಈ ದಿನಗಳಲ್ಲಿ ದುರ್ಗದಹಳ್ಳಿಯ ಕೆರೆಯಂಗಳದ ಸೊಬಗು ಅವರ್ಣನೀಯ. ಸುತ್ತಲೂ ಬೆಟ್ಟಗುಡ್ಡಗಳು. ಅರಣ್ಯ ಪ್ರದೇಶ. ಹಸಿರು ಹಾಸಿದಂತಹ ಗಿಡಮರಗಳ ನೋಟ. ನೀಲಾಗಸದಲ್ಲಿ ಕಪ್ಪು-ಬಿಳುಪಿನ ಮೋಡಗಳ ನಡುವೆ ಇಣುಕುವ ಸೂರ್ಯ. ನಡುನಡುವೆ ಬೀಳುವ ತುಂತುರು ಮಳೆ. ರೊಯ್ಯನೆ ಬೀಸುವ ಗಾಳಿ. ಪ್ರಶಾಂತ ವಾತಾವರಣ. ಇವೆಲ್ಲದರ ಮಧ್ಯೆ ಈ ಪುಟ್ಟ ಕೆರೆ. ದಡದಲ್ಲಿ ಕುಳಿತರೆ ಅಥವಾ ನಿಂತರೆ ಹೊತ್ತು ಹೋಗುವುದೇ ಗೊತ್ತಾಗದಷ್ಟು ನಮ್ಮನ್ನು ಆವರಿಸುವ ಸುಂದರ ಪರಿಸರ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 10-06-2026








 -----------------------------------------------------------------------------------------------------------------------


ಬಹುದಿನಗಳ ಬಳಿಕ ಇಂದು ನಮಗೆ ಶ್ರೀ ವಿದ್ಯಾಶಂಕರ ಸ್ವಾಮಿಯ ದರ್ಶನವಾಯಿತು. "ನಮ್ಮ ತುಮಕೂರು" ನಗರಕ್ಕೆ ಸನಿಹದ ದೇವರಾಯನದುರ್ಗದ ಅರಣ್ಯ ಪ್ರದೇಶದ ಅಂಚಿನ ದುರ್ಗದ ಹಳ್ಳಿಯಲ್ಲಿ ಪುರಾತನವಾದ ಶ್ರೀ ವಿದ್ಯಾಶಂಕರ ದೇವಾಲಯವಿದೆ. ನಿಸರ್ಗದ ನಡುವಿನ ಸುಂದರ ಪರಿಸರದಲ್ಲಿರುವ ಈ ದೇಗುಲ ನಮ್ಮ ನೆಚ್ಚಿನ ತಾಣ. ಇಂದು (ದಿ. 09-06-2026) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಭೇಟಿ ಕೊಟ್ಟಿದ್ದೆವು.
ದೇವಾಲಯದ ಹೊರಗೆ ಒಂದು ಪಾರ್ಶ್ವದಲ್ಲಿ ಯಾರೋ ಭಕ್ತರು ಹೋಮ ಏರ್ಪಡಿಸಿದ್ದರು. ಅದಕ್ಕೆ ಆಗಮಿಸಿದ್ದ ವೈದಿಕರು ಶಾಸ್ತ್ರೋಕ್ತವಾಗಿ ಹೋಮವನ್ನು ನಡೆಸುತ್ತಾ ಮಂತ್ರ ಪಠಿಸುತ್ತಿದ್ದರು. ಸುಶ್ರಾವ್ಯವಾಗಿದ್ದ ಆ ಮಂತ್ರ ಪಠಣ ಅಲ್ಲಿನ ಪ್ರಶಾಂತ ಪರಿಸರದಲ್ಲಿ ಪ್ರತಿಧ್ವನಿಸುತ್ತ ದೈವೀಕ ವಾತಾವರಣವನ್ನು ಸೃಷ್ಟಿಸಿತ್ತು. ಇತ್ತ ದೇವಾಲಯದ ಒಳಗೆ ಅರ್ಚಕರಾದ ಶ್ರೀ ವಿಜಯಕುಮಾರ್ ರವರು ದೇವರಿಗೆ ನಿತ್ಯಪೂಜೆ, ಅಭಿಷೇಕ ನೆರವೇರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ನಡುವೆಯೇ ಅವರು ನಮಗಾಗಿ ದೇವರಿಗೆ ಆರತಿ ಬೆಳಗಿದರು.
ನಮ್ಮ ಹಳೆಯ ಮಿತ್ರರಾದ ಶ್ರೀ ವಿಜಯಕುಮಾರ್ ರವರು ಅರಣ್ಯ ಪ್ರದೇಶದ ಈ ದೇವಾಲಯದಲ್ಲಿ 2004 ನೇ ಇಸವಿಯಿಂದಲೂ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 22 ವರ್ಷಗಳಿಂದಲೂ ಇವರು ಪ್ರತಿನಿತ್ಯ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಇಲ್ಲಿದ್ದು ಪೂಜಾ ಕಾರ್ಯಗಳನ್ನು ಶ್ರದ್ಧೆ-ಭಕ್ತಿಯಿಂದ ನೆರವೇರಿಸುತ್ತಿದ್ದಾರೆ. ಆ ಕಾಲದಿಂದಲೂ ನಾವು ಈ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದೇವೆ. ಹಾಗೆಯೇ ಮಾತನಾಡುವಾಗ ಅನೇಕ ಹಳೆಯ ಪ್ರಸಂಗಗಳು ನೆನಪಾದವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 09-06-2026



No comments:

Post a Comment