“ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ - ಹಿನ್ನೆಲೆ” ಕೃತಿ ಸಮರ್ಪಣೆ
--------------------------------------
ಮೂಲತಃ ತುಮಕೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಆಡಿಟರ್
ಆಗಿರುವ ಶ್ರೀ ಸನಂದನ ಕರಣೀಕರವರು ತಮ್ಮ ಧರ್ಮಪತ್ನಿ ಶ್ರೀಮತಿ ಸರಳರವರೊಂದಿಗೆ ಇಂದು (ದಿ.
05-09-2023, ಮಂಗಳವಾರ) ಮಧ್ಯಾಹ್ನ ತುಮಕೂರಿನ ನಮ್ಮ ನಿವಾಸಕ್ಕೆ ಆಗಮಿಸಿ, ನಮ್ಮ ತಂದೆ ಸ್ವಾತಂತ್ರ್ಯ
ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರನ್ನು
ಭೇಟಿ ಮಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ “ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು
: ನೆಲೆ - ಹಿನ್ನೆಲೆ” ಎಂಬ ಐತಿಹಾಸಿಕ ಮಾಹಿತಿಯ ಬೃಹತ್ ಗ್ರಂಥವನ್ನು ಸಮರ್ಪಿಸಿದರು.
562 ಪ್ಲಸ್ ಪುಟಗಳ, 36 ಲೇಖನಗಳುಳ್ಳ ಈ ಗ್ರಂಥವನ್ನು ಖ್ಯಾತ ಬರಹಗಾರ ಹಾಗೂ
ಭೂವಿಜ್ಞಾನಿಗಳಾದ ಡಾ. ಟಿ.ಆರ್.ಅನಂತರಾಮು ರವರು ಸಂಪಾದಿಸಿದ್ದಾರೆ. ಕನ್ನಡದ ಪ್ರಸಿದ್ಧ ವಿದ್ವಾಂಸರಾದ
ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಮುನ್ನುಡಿ ಬರೆದಿದ್ದಾರೆ. ಶತಾವಧಾನಿಗಳೂ, ಬಹುಶ್ರುತ ವಿದ್ವಾಂಸರೂ
ಆದ ಡಾ. ಆರ್.ಗಣೇಶ್ ರವರು ಹಿನ್ನುಡಿ ಬರೆದಿದ್ದಾರೆ. ಕರ್ನಾಟಕದ ಸ್ಮಾರ್ತ ಬ್ರಾಹ್ಮಣ ಸಮುದಾಯದ ಎಲ್ಲ
ಒಳಪಂಗಡಗಳ ಸಮಗ್ರ ಐತಿಹಾಸಿಕ ಮಾಹಿತಿ ಈ ಗ್ರಂಥದಲ್ಲಿದ್ದು, “ವಂಗೀಪುರಂ ಬ್ರಾಹ್ಮಣರು” ಕುರಿತಂತೆ
ಆಡಿಟರ್ ಶ್ರೀ ಸನಂದನ ಕರಣೀಕರವರು ಲೇಖನ ಬರೆದಿದ್ದಾರೆ. ಈ ಗ್ರಂಥದ ಮುಖಬೆಲೆ 800 ರೂ. ಆಗಿದ್ದು,
ಹರಿವು ಕ್ರಿಯೇಷನ್ಸ್ ಪ್ರೈ.ಲಿ. ಇದನ್ನು ಪ್ರಕಟಿಸಿದೆ.
ಶ್ರೀ ಸನಂದನ ಕರಣೀಕರವರ ತಂದೆ ದಿ. ಶ್ರೀ ಟಿ.ಕೆ.ನಲ್ಲಪ್ಪನವರು ನಮ್ಮ ತಂದೆಯವರಿಗೆ
ಪರಿಚಿತರಾಗಿದ್ದವರು. ಶ್ರೀ ನಲ್ಲಪ್ಪನವರ ಸಹೋದರರೂ, ಖ್ಯಾತ ಸಂಗೀತ-ಸಂಸ್ಕೃತ ವಿದ್ವಾಂಸರೂ ಆಗಿದ್ದ ದಿ. ಟಿ.ಕೆ.ರಾಮಮೂರ್ತಿರವರು
ಮತ್ತು ದಿ. ಶ್ರೀ ಟಿ.ಕೆ.ಪುಟ್ಟಣ್ಣಯ್ಯರವರು ತುಮಕೂರಿನ ಚಿಕ್ಕಪೇಟೆಯ ನಿವಾಸಿಗಳೇ ಆಗಿದ್ದು, ನಮ್ಮ
ತಂದೆಗೆ ಅತ್ಯಂತ ಆತ್ಮೀಯರಾಗಿದ್ದರು. ಶ್ರೀಮತಿ ಸರಳರವರ ತಂದೆ ತುಮಕೂರಿನ ಅಗ್ರಹಾರದ ನಿವಾಸಿಗಳಾಗಿದ್ದ
ದಿ. ಶ್ರೀ ನರಸಿಂಹಮೂರ್ತಿ (ಹಲ್ಲಿನ ಡಾಕ್ಟರ್) ರವರೂ, ತಾತ ಶ್ರೀ ರಾಮಾಶಾಸ್ತ್ರಿಗಳೂ ನಮ್ಮ ತಂದೆಯವರಿಗೆ
ತುಂಬ ಹತ್ತಿರದವರಾಗಿದ್ದವರು. ಇಂದಿನ ಭೇಟಿಯ ಮಾತುಕತೆಯಲ್ಲಿ ಹಳೆಯ ತುಮಕೂರಿನ ಗತವೈಭವದ ಇವೆಲ್ಲ ಮಧುರ
ಸಂಗತಿಗಳೂ ಮತ್ತೊಮ್ಮೆ ನೆನಪಿಗೆ ಬಂದು, ಎಲ್ಲರಲ್ಲೂ ಹರ್ಷವನ್ನುಂಟುಮಾಡಿತು.
ಶ್ರೀ ಸನಂದನ ಕರಣೀಕ ಮತ್ತು ಶ್ರೀಮತಿ ಸರಳ ದಂಪತಿಗಳು ನಮ್ಮ ತಂದೆಯವರಿಗೆ
ನಮಿಸಿ ಆಶೀರ್ವಾದ ಪಡೆದುಕೊಂಡರು. ಈ ಭೇಟಿಯ ಸವಿನೆನಪಿಗಾಗಿ ನಮ್ಮ ತಂದೆಯವರೂ ಶ್ರೀ ಸನಂದನರವರಿಗೆ
ಶಾಲುಹೊದಿಸಿ ಗೌರವಿಸಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 05-09-2023