* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday, 20 September 2023

ಸಾಲಿಗ್ರಾಮ ಹಸ್ತಾಂತರ - ದಿ. 20-09-2023 Saligrama

 ನಮ್ಮ ಮನೆಯಲ್ಲಿ ಪಾರಂಪರಿಕವಾಗಿ ಪೂಜಿಸಲ್ಪಡುತ್ತಿದ್ದ ಸಾಲಿಗ್ರಾಮಗಳನ್ನು ಇಂದು (ದಿ.20-09-2023, ಬುಧವಾರ) ಬೆಳಗ್ಗೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (94) ರವರು ಅನಿವಾರ್ಯ ಕಾರಣಗಳಿಂದ ನಮ್ಮ ತುಮಕೂರಿನ ಆಚಾರ್ಯರ ಬೀದಿ ನಿವಾಸಿಗಳೂ, ಕುಟುಂಬ ಸ್ನೇಹಿತರೂ ಆಗಿದ್ದ ದಿ|| ಶ್ರೀ ಶಾಮಾಚಾರ್ ಕುಟುಂಬ ವರ್ಗಕ್ಕೆ ಸೇರಿದ ಶ್ರೀ ಗುರುಪ್ರಸಾದ್ ರವರಿಗೆ ಹಸ್ತಾಂತರಿಸಿದರು. ಅದನ್ನು ಅವರು ಅತ್ಯಂತ ಶ್ರದ್ಧೆ-ಭಕ್ತಿಯಿಂದ ಸ್ವೀಕರಿಸಿ, ಪ್ರತಿನಿತ್ಯ ತಮ್ಮ ಮನೆಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದಾಗಿ ಕೃತಜ್ಞತೆಯಿಂದ ತಿಳಿಸಿದರು. ಅವರ ಮಿತ್ರ ಶ್ರೀ ಪ್ರವೀಣ್, ನಾನು ಮತ್ತು ಆರ್.ವಿಶ್ವನಾಥನ್ ಇದ್ದೆವು.

ನಮ್ಮ ತಂದೆಯವರ ತಂದೆ ಶ್ರೀ ವಿ.ಎಸ್.ರಾಮಯ್ಯರ್ (ಇವರು ಆಗಿನ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು. ಅದಕ್ಕೂ ಮೊದಲು 2 ನೇ ಮಹಾಯುದ್ಧದಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸಿದ್ದರಂತೆ) ಕೇರಳದ ಪಾಲಕ್ಕಾಡ್ ಊರಿನವರು. ಆ ಕಾಲದಲ್ಲಿ ದಿನವೂ ಮನೆಗೆ ಪುರೋಹಿತರು ಬಂದು ಈ ಸಾಲಿಗ್ರಾಮಗಳನ್ನು ಪೂಜಿಸುತ್ತಿದ್ದರಂತೆ. ಈ ಸಾಲಿಗ್ರಾಮಗಳು ಅವರ ಹಿಂದಿನವರಿಂದ ಬಂದಿದ್ದಂತೆ. ತಾತ ರಾಮಯ್ಯರ್ ಅವರು ರೈಲ್ವೆ ವೃತ್ತಿ ಸಂಬಂಧ ವಿವಿಧೆಡೆ ವರ್ಗಾವಣೆಯಾಗುತ್ತ ಕೊನೆಗೆ ತುಮಕೂರಿಗೆ ಬಂದು ನಿವೃತ್ತರಾಗಿದ್ದರು. ಆಗೆಲ್ಲ ಅವರೇ ಪೂಜಿಸುತ್ತಿದ್ದರಂತೆ. ಅವರ ಬಳಿಕ ನಮ್ಮ ತಂದೆಯವರು ಇದನ್ನು ದಶಕಗಳ ಕಾಲದಿಂದ ಪೂಜಿಸುತ್ತಿದ್ದರು. ತೀರಾ ಇತ್ತೀಚಿನವರೆಗೂ ದಿನವೂ ಪೂಜೆ ಮಾಡುತ್ತಲೇ ಇದ್ದರು. ಆದರೆ ಇತ್ತೀಚೆಗೆ ಆರೋಗ್ಯದ ಕಾರಣದಿಂದ ಅವರಿಂದ ಪೂಜಿಸಲು ಆಗುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ಪೂಜಿಸುವವರಿಗೆ ಇದನ್ನು ಹಸ್ತಾಂತರಿಸಬೇಕೆಂಬ ಆಶಯ ನಮ್ಮೆಲ್ಲರಲ್ಲೂ ಇತ್ತು. ಅತ್ತ ಗುರುಪ್ರಸಾದ್ ರವರೂ ಸಾಲಿಗ್ರಾಮಕ್ಕಾಗಿ ಹುಡುಕಾಟ ನಡೆಸಿದ್ದು, ಅವರಿಗೆ ಈ ಮಾಹಿತಿ ದೊರೆತೊಡನೆ ಇಂದು ನಮ್ಮ ಮನೆಗೆ ಆಗಮಿಸಿ ಭಕ್ತಿಯಿಂದ ಸ್ವೀಕರಿಸಿದರು. ಉಭಯತ್ರರಿಗೂ ಸಮಾಧಾನ, ಸಂತೋಷ ಆಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-09-2023













No comments:

Post a Comment