hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Monday, 27 January 2025

H S Rajarao Visit- 24-01-2025- ಹೆಚ್.ಎಸ್.ರಾಜಾರಾವ್ ಭೇಟಿ

ನಮ್ಮ ತುಮಕೂರು ನಗರದ ಅಗ್ರಹಾರದ ನಿವಾಸಿಗಳೂ, ಪ್ರಸಿದ್ಧ ಪುರೋಹಿತರೂ, ಜ್ಯೋತಿಷಿಗಳೂ ಆಗಿರುವ ವೇ||ಬ್ರ||ಶ್ರೀ ಹೆಚ್.ಎಸ್.ರಾಜಾರಾವ್ ರವರು ತಮ್ಮ ಪತ್ನಿ ಶ್ರೀಮತಿ ನಾಗರತ್ನಮ್ಮ, ಪುತ್ರ -ಪುರೋಹಿತರಾದ ಶ್ರೀ ಮಧುಸೂಧನರಾವ್ ಮತ್ತು ಅಗ್ರಹಾರದ ಮತ್ತೋರ್ವ ಪ್ರಸಿದ್ಧ ವೈದಿಕರಾದ ವೇ||ಬ್ರ||ಶ್ರೀ ಅಶ್ವತ್ಥನಾರಾಯಣ ಶಾಸ್ತ್ರಿ ಅವರೊಂದಿಗೆ ಇಂದು (ದಿ.24-01-2025) ರಾತ್ರಿ ನಮ್ಮ ಮನಗೆ ಆಗಮಿಸಿ, ಮೊನ್ನೆಯಷ್ಟೇ 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ಫಲತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿ, ಆಶೀರ್ವಾದ ಪಡೆದುಕೊಂಡರು.
ಶ್ರೀ ರಾಜಾರಾವ್ ರವರು ನಮಗೆ ಸುಮಾರು 40 ವರ್ಷಗಳಿಗೂ ಅಧಿಕ ಕಾಲದ ಪರಿಚಯ. ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದ ಅವರು, ಆ ನಂತರ ಪೌರೋಹಿತ್ಯ ಕ್ಷೇತ್ರದಲ್ಲಿ ಸಾಗಿದರು. ಇನ್ನು ಅವರ ಕುಟುಂಬದ ಹಿರಿಯರು ನಮ್ಮ ತಂದೆಯವರಿಗೆ ಇನ್ನೂ ಹಳೆಯ ಪರಿಚಯ. ಈ ಭೇಟಿಯ ಸಂದರ್ಭದಲ್ಲಿ ಆ ಹಳೆಯ ಸವಿನೆನಪುಗಳು ಮಾತುಕತೆಯಲ್ಲಿ ಸಾಗಿ, ಸಂತೋಷ ಮೂಡಿಸಿತು. ಅವರ ಈ ಪ್ರೀತಿ-ವಿಶ್ವಾಸದ ಭೇಟಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂಥದ್ದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 24-01-2025, #rsiyertumakuru



 




Wednesday, 22 January 2025

VSR-96 - Sanmana- C M Temple 2025

 ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದ ಧರ್ಮದರ್ಶಿಗಳೂ, ಪ್ರಧಾನ ಅರ್ಚಕರೂ ಆದ ಶ್ರೀ ಕೆ.ವೈ. ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಇಂದು (ದಿ.22-01-2025) ಸಂಜೆ ಅನಿರೀಕ್ಷಿತವಾಗಿ ನಮ್ಮ ಮನೆಗೆ ಬಂದರು. ಮೊನ್ನೆ "ಸಂಕ್ರಾಂತಿ" ಹಬ್ಬದಂದು 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ದೇವರ ಪ್ರಸಾದ ನೀಡಿ, ಕೇಸರಿ ವಸ್ತ್ರ ಹೊದಿಸಿ ಗೌರವಿಸಿ ಸಂತೋಷಪಟ್ಟರು. ಶಾಸ್ತ್ರಿಗಳ ಈ ವಿಶ್ವಾಸ ನಮ್ಮೆಲ್ಲರಲ್ಲೂ ಸಂತೋಷ ಮೂಡಿಸಿತು.

-ಆರ್.ಎಸ್.ಅಯ್ಯರ್, ತುಮಕೂರು ದಿ. 22-01-2025 #rsiyertumakuru



                                                        ___________________

                                                                Youtube Video




Vimala Visit- Date 21-01-2025

ಬೆಂಗಳೂರಿನಿಂದ ಇಂದು (ದಿ.21-01-2025) ಬೆಳಬೆಳಗ್ಗೆಯೇ ಆಗಮಿಸಿದ ನಮ್ಮ ಚಿಕ್ಕಮ್ಮ ಶ್ರೀಮತಿ ವಿಮಲ ಮತ್ತು ಚಿಕ್ಕಪ್ಪ ಶ್ರೀ ಹೆಚ್.ಎಸ್.ಶ್ರೀನಿವಾಸ್ ದಂಪತಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರಿಗೆ ಫಲತಾಂಬೂಲ ನೀಡಿ ಜನ್ಮದಿನದ ಶುಭಾಶಯ ಕೋರಿದ್ದು, ಉಭಯತ್ರರಲ್ಲೂ ಸಂತೋಷವನ್ನುಂಟುಮಾಡಿತು.






Monday, 20 January 2025

Hiremagaluru Kannan - 20-01-2025 - ಹಿರೇಮಗಳೂರು ಕಣ್ಣನ್ ರವರೊಡನೆ

ಡಿವಿಜಿ “ಕಗ್ಗ” : ಸುಬ್ಬುಲಕ್ಷ್ಮಿ ಭೇಟಿ ನೆನೆದ ಕಣ್ಣನ್…
------------------------

“ಕನ್ನಡದ ಪೂಜಾರಿ” ಶ್ರೀ ಹಿರೇಮಗಳೂರು ಕಣ್ಣನ್ ರವರು ಎದುರ್ಗೊಂಡರೆ ಸವಿಮಾತಿಗೇನು ಕೊರತೆ? ಕನ್ನಡದ ಮಂತ್ರ, ಸಾಹಿತ್ಯ ದಿಗ್ಗಜರ ನೆನಪು, ಮಂಕುತಿಮ್ಮನ ಕಗ್ಗದ ಮುಕ್ತಕ, ಮುದ್ದುರಾಮನ ಪದ್ಯ, ಮತ್ತಾವುದೋ ಕನ್ನಡದ ಕವಿತೆ, ಇನ್ನಾವುದೋ ಸ್ವಾರಸ್ಯಕರ ಪ್ರಸಂಗ…. ಹೀಗೆ ಒಂದರಹಿಂದೆ ಒಂದರಂತೆ ನೆನಪಿನಾಳದಿಂದ ಮಾತಿನ ಚಿಲುಮೆ ಓತಪ್ರೋತವಾಗಿ ಹೊಮ್ಮುತ್ತಲೇ ಇತ್ತು. ಆ ಮಾತಿನ ಓಘಕ್ಕೆ ಬೆರಗಾಗುತ್ತ, ಅದರಲ್ಲಿನ ಅಂತಃಸತ್ವವನ್ನು ಆಸ್ವಾದಿಸುತ್ತ ಕುಳಿತಾಗ ಹೊತ್ತು ಹೋದುದು ಗೊತ್ತೇ ಆಗಲಿಲ್ಲ!
ಅಂತಹುದೊಂದು ಅನುಭವ ಇಂದು ನಮ್ಮದಾಯಿತು. ಶ್ರೀ ಕಣ್ಣನ್ ರವರು ಇಂದು (ದಿ. 20-01-2025) ತುಮಕೂರಿಗೆ ಆಗಮಿಸಿದ್ದರು. ಅವರು ತಂಗಿದ್ದ ಶ್ರೀ ರಮೇಶ್ ಬಾಬುರವರ ನಿವಾಸಕ್ಕೆ ಇಂದು ಸಂಜೆ ನಾನು ಮತ್ತು ವಿಶ್ವನಾಥನ್ R. Vishwanathan Tumkur ತೆರಳಿದ್ದೆವು. ಸಂಜೆಯ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗಿದ್ದ ಶ್ರೀ ಕಣ್ಣನ್ ರವರು ನಮ್ಮನ್ನು ನೋಡಿದೊಡನೆ ಅತ್ಯಂತ ಸಂತಸದಿಂದ ಮಾತಿಗಿಳಿದರು. ಸುಮಾರು 30 ವರ್ಷಗಳ ಹಿಂದೆ ನಮ್ಮ ಶ್ರೀ ಶಂಕರ ಜಯಂತಿ ಸಭಾ ಕಾರ್ಯಕ್ರಮಕ್ಕೆ ಅವರು ಅತಿಥಿಗಳಾಗಿ ಬಂದಿದ್ದುದು, ಇತ್ತೀಚೆಗೆ ನಮ್ಮ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಸಂದರ್ಭ ಇತ್ಯಾದಿಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದೆವು. ಆಗ ಅವರು ಸುಮಾರು 35-40 ವರ್ಷಗಳ ಹಿಂದಿನ ಅವಿಸ್ಮರಣೀಯ ಪ್ರಸಂಗವೊಂದರ ನೆನಪಿಗೆ ಜಾರಿದರು.
“ಅಂತರ ರಾಷ್ಟ್ರೀಯ ಖ್ಯಾತಿ ಗಳಿಸಿದ್ದ, ಕರ್ನಾಟಕ ಸಂಗೀತದ ಅಪ್ರತಿಮ ಗಾಯಕರೆನಿಸಿದ್ದ ಶ್ರೀಮತಿ ಎಂ.ಎಸ್.ಸುಬ್ಬುಲಕ್ಷ್ಮೀರವರು ಮತ್ತು ಅವರ ಪತಿ ಶ್ರೀ ಸದಾಶಿವಂರವರು ಹಿರೇಮಗಳೂರಿನ ನಮ್ಮ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಅದೊಂದು ದಿನ ಆಗಮಿಸಿದ್ದರು. ಹೂಮಾಲೆ ಅರ್ಪಿಸಿ ಸ್ವಾಗತ ಕೋರಿದೆ. ಬಳಿಕ ಶ್ರೀ ಸದಾಶಿವಂರವರು ತಮಿಳಿನಲ್ಲೇ ನನ್ನೊಡನೆ ಮಾತನಾಡುವಾಗ, “ಕಣ್ಣನ್ ರವರ ಬಾಯಿಂದ ಡಿವಿಜಿಯವರ “ಕಗ್ಗ”ದ ಪದ್ಯ ಕೇಳಬೇಕು ಎಂದು ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ರವರು ಹೇಳಿದ್ದಾಗಿ” ನುಡಿದರು. ಇದನ್ನು ಕೇಳಿ ನನಗೆ ಆನಂದಾಶ್ಚರ್ಯವಾಯ್ತು. ಅವರ ಕೋರಿಕೆಯಂತೆ ಒಂದು ಕಗ್ಗವನ್ನು ಅರ್ಥಸಹಿತ ಹೇಳಿದೆ. ಅದನ್ನು ಕೇಳಿ ಈರ್ವರೂ ಹರ್ಷಪಟ್ಟರು’’ ಎಂದು ವಿವರಿಸುವಾಗ ಕಣ್ಣನ್ ರವರ ಮುಖದಲ್ಲಿ ಅವರ್ಣನೀಯ ಆನಂದ. ಕೇಳುತ್ತಿದ್ದ ನಮಗೂ ರೋಮಾಂಚನ.
ಹೀಗೆಯೇ ಸುಮಾರು ಮುಕ್ಕಾಲು ಗಂಟೆಯ ಮಾತುಕತೆ. ಅವರು ಕಾರ್ಯಕ್ರಮಕ್ಕೆ ಹೊರಡುವ ಸಮಯವಾಯಿತು. ಹೊರಡುವ ಮುನ್ನ ನಾವು ನಡೆಸುವ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಮತ್ತೊಮ್ಮೆ ಉಪನ್ಯಾಸ ನೀಡಲು ಬರುವುದಾಗಿ ಅವರು ಹೇಳಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-01-2025, #rsiyertumakuru



 






Friday, 17 January 2025

VSR-96 Happy moments ವಿ.ಎಸ್.ಆರ್.-96 ಸಂತಸದ ಕ್ಷಣಗಳು...

96 ರ ಹೊಸ್ತಿಲಲ್ಲಿ ಸಂತಸದ ಕ್ಷಣಗಳು…
-------------------------------------
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ವಿ.ಎಸ್.ರಾಮಚಂದ್ರನ್ ರವರು ಇದೇ ಜನವರಿ 14 “ಸಂಕ್ರಾಂತಿ”ಯಂದು (ದಿ.14-01-2025) 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು.

ಅಂದೇ ರಾತ್ರಿ ಮೊಮ್ಮಗ ವಿ.ವಿವೇಕ್ - ಶ್ರೀಮತಿ ರಶ್ಮಿ ದಂಪತಿ (ಈರ್ವರೂ ಇಂಜಿನಿಯರ್ ಗಳು) ತಮ್ಮ ಏಳು ತಿಂಗಳ ಪುಟಾಣಿ ಗಂಡು ಮಗುವಿನೊಡನೆ ಆಗಮಿಸಿದ್ದರು. ನಮ್ಮ ತಂದೆಗೆ ಸಂಕ್ರಾಂತಿಯ ಎಳ್ಳುಬೆಲ್ಲದೊಡನೆ, ಫಲತಾಂಬೂಲ ನೀಡಿ ಜನ್ಮದಿನದ ಶುಭ ಕೋರಿದರು. ಇದೇ ಸಂದರ್ಭದಲ್ಲಿ 7 ತಿಂಗಳ “ಮರಿಮಗ” 96 ನೇ ವಸಂತಕ್ಕೆ ಕಾಲಿಟ್ಟ ತನ್ನ “ಮುತ್ತಜ್ಜನ ಮಡಿಲಲ್ಲಿ” ಕೆಲ ನಿಮಿಷ ಇದ್ದು ಮುತ್ತಜ್ಜನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಲಿದದ್ದು ಹಾಗೂ ವಿಶ್ವನಾಥನ್ ಎತ್ತಿಕೊಂಡಾಗ ಜೋರು ನಗುವಿನ ಪ್ರತಿಕ್ರಿಯೆ ನೀಡಿದ್ದು ಚೇತೋಹಾರಿಯಾಗಿತ್ತು.

ಹಿಂದಿನ ದಿನವಷ್ಟೇ ವಿವೇಕ್ ತನ್ನ ಹುಟ್ಟುಹಬ್ಬ ಆಚರಿಸಿದ್ದು, ಆ ಹಿನ್ನೆಲೆಯಲ್ಲಿ ನಮ್ಮ ತಂದೆ ತನ್ನ ಮೊಮ್ಮಗನಿಗೆ ಶಾಲುಹೊದಿಸಿ, ಹಾರ ಹಾಕಿ ಜನ್ಮದಿನದ ಶುಭಾಶಯ ಕೋರಿ ಸಂತಸ ಹಂಚಿಕೊಂಡರು.

ಜನವರಿ 15 ರಂದು ಮಗಳು ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಬೆಂಗಳೂರಿನಿಂದ ಆಗಮಿಸಿ, ತಂದೆಗೆ ಶುಭಾಶಯ ಕೋರಿದ್ದು ಉಭಯತ್ರರಲ್ಲೂ ಉಲ್ಲಾಸವನ್ನುಂಟುಮಾಡಿತು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 17-01-2025



 








------------------------------







_______________________________


Youtube Video






Tuesday, 14 January 2025

VSR-96 14-01-2025 ವಿ.ಎಸ್.ರಾಮಚಂದ್ರನ್ ರವರ ಹುಟ್ಟುಹಬ್ಬ ವಿ.ಎಸ್.ಆರ್ -96

 96 ನೇ ವಸಂತಕ್ಕೆ ಪಾದಾರ್ಪಣೆ

---------------------
ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ. 14-01-2025)- "ಸಂಕ್ರಾಂತಿ"ಯ ಶುಭದಿನದಂದು- ದೈವಕೃಪೆಯಿಂದ, ಗುರುಹಿರಿಯರ ಆಶೀರ್ವಾದಗಳಿಂದ, ಬಂಧುಮಿತ್ರರ ಶುಭಹಾರೈಕೆಗಳಿಂದ 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಶುಭ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಮನೆದೇವರಾದ "ಶ್ರೀ ಪಳನಿ ಸುಬ್ರಹ್ಮಣ್ಯಸ್ವಾಮಿ"ಗೆ ಅವರು ದೀಪಾರತಿ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡದ್ದು ನಮಗೆಲ್ಲ ಅಪಾರ ಹರ್ಷೋಲ್ಲಾಸವನ್ನುಂಟುಮಾಡಿತು.
-ಆರ್.ಎಸ್.ಅಯ್ಯರ್. ತುಮಕೂರು, ದಿ. 14-01-2025, "ಸಂಕ್ರಾಂತಿ".
Our father, freedom fighter Shri V.S.Ramachandran turned 96 today (14-01-2025) - on the auspicious day of "Sankranti" - by the grace of God, the blessings of his Gurus, the best wishes of relatives & friends. On this auspicious occasion, he celebrated his birthday by lighting the house deity "Sri Palani Subrahmanyaswamy" in our house, which brought great joy to all of us.