ಡಿವಿಜಿ “ಕಗ್ಗ” : ಸುಬ್ಬುಲಕ್ಷ್ಮಿ ಭೇಟಿ ನೆನೆದ ಕಣ್ಣನ್…
------------------------
“ಕನ್ನಡದ ಪೂಜಾರಿ” ಶ್ರೀ ಹಿರೇಮಗಳೂರು ಕಣ್ಣನ್ ರವರು ಎದುರ್ಗೊಂಡರೆ ಸವಿಮಾತಿಗೇನು ಕೊರತೆ? ಕನ್ನಡದ ಮಂತ್ರ, ಸಾಹಿತ್ಯ ದಿಗ್ಗಜರ ನೆನಪು, ಮಂಕುತಿಮ್ಮನ ಕಗ್ಗದ ಮುಕ್ತಕ, ಮುದ್ದುರಾಮನ ಪದ್ಯ, ಮತ್ತಾವುದೋ ಕನ್ನಡದ ಕವಿತೆ, ಇನ್ನಾವುದೋ ಸ್ವಾರಸ್ಯಕರ ಪ್ರಸಂಗ…. ಹೀಗೆ ಒಂದರಹಿಂದೆ ಒಂದರಂತೆ ನೆನಪಿನಾಳದಿಂದ ಮಾತಿನ ಚಿಲುಮೆ ಓತಪ್ರೋತವಾಗಿ ಹೊಮ್ಮುತ್ತಲೇ ಇತ್ತು. ಆ ಮಾತಿನ ಓಘಕ್ಕೆ ಬೆರಗಾಗುತ್ತ, ಅದರಲ್ಲಿನ ಅಂತಃಸತ್ವವನ್ನು ಆಸ್ವಾದಿಸುತ್ತ ಕುಳಿತಾಗ ಹೊತ್ತು ಹೋದುದು ಗೊತ್ತೇ ಆಗಲಿಲ್ಲ!
ಅಂತಹುದೊಂದು ಅನುಭವ ಇಂದು ನಮ್ಮದಾಯಿತು. ಶ್ರೀ ಕಣ್ಣನ್ ರವರು ಇಂದು (ದಿ. 20-01-2025) ತುಮಕೂರಿಗೆ ಆಗಮಿಸಿದ್ದರು. ಅವರು ತಂಗಿದ್ದ ಶ್ರೀ ರಮೇಶ್ ಬಾಬುರವರ ನಿವಾಸಕ್ಕೆ ಇಂದು ಸಂಜೆ ನಾನು ಮತ್ತು ವಿಶ್ವನಾಥನ್ R. Vishwanathan Tumkur ತೆರಳಿದ್ದೆವು. ಸಂಜೆಯ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗಿದ್ದ ಶ್ರೀ ಕಣ್ಣನ್ ರವರು ನಮ್ಮನ್ನು ನೋಡಿದೊಡನೆ ಅತ್ಯಂತ ಸಂತಸದಿಂದ ಮಾತಿಗಿಳಿದರು. ಸುಮಾರು 30 ವರ್ಷಗಳ ಹಿಂದೆ ನಮ್ಮ ಶ್ರೀ ಶಂಕರ ಜಯಂತಿ ಸಭಾ ಕಾರ್ಯಕ್ರಮಕ್ಕೆ ಅವರು ಅತಿಥಿಗಳಾಗಿ ಬಂದಿದ್ದುದು, ಇತ್ತೀಚೆಗೆ ನಮ್ಮ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಸಂದರ್ಭ ಇತ್ಯಾದಿಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದೆವು. ಆಗ ಅವರು ಸುಮಾರು 35-40 ವರ್ಷಗಳ ಹಿಂದಿನ ಅವಿಸ್ಮರಣೀಯ ಪ್ರಸಂಗವೊಂದರ ನೆನಪಿಗೆ ಜಾರಿದರು.
“ಅಂತರ ರಾಷ್ಟ್ರೀಯ ಖ್ಯಾತಿ ಗಳಿಸಿದ್ದ, ಕರ್ನಾಟಕ ಸಂಗೀತದ ಅಪ್ರತಿಮ ಗಾಯಕರೆನಿಸಿದ್ದ ಶ್ರೀಮತಿ ಎಂ.ಎಸ್.ಸುಬ್ಬುಲಕ್ಷ್ಮೀರವರು ಮತ್ತು ಅವರ ಪತಿ ಶ್ರೀ ಸದಾಶಿವಂರವರು ಹಿರೇಮಗಳೂರಿನ ನಮ್ಮ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಅದೊಂದು ದಿನ ಆಗಮಿಸಿದ್ದರು. ಹೂಮಾಲೆ ಅರ್ಪಿಸಿ ಸ್ವಾಗತ ಕೋರಿದೆ. ಬಳಿಕ ಶ್ರೀ ಸದಾಶಿವಂರವರು ತಮಿಳಿನಲ್ಲೇ ನನ್ನೊಡನೆ ಮಾತನಾಡುವಾಗ, “ಕಣ್ಣನ್ ರವರ ಬಾಯಿಂದ ಡಿವಿಜಿಯವರ “ಕಗ್ಗ”ದ ಪದ್ಯ ಕೇಳಬೇಕು ಎಂದು ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ರವರು ಹೇಳಿದ್ದಾಗಿ” ನುಡಿದರು. ಇದನ್ನು ಕೇಳಿ ನನಗೆ ಆನಂದಾಶ್ಚರ್ಯವಾಯ್ತು. ಅವರ ಕೋರಿಕೆಯಂತೆ ಒಂದು ಕಗ್ಗವನ್ನು ಅರ್ಥಸಹಿತ ಹೇಳಿದೆ. ಅದನ್ನು ಕೇಳಿ ಈರ್ವರೂ ಹರ್ಷಪಟ್ಟರು’’ ಎಂದು ವಿವರಿಸುವಾಗ ಕಣ್ಣನ್ ರವರ ಮುಖದಲ್ಲಿ ಅವರ್ಣನೀಯ ಆನಂದ. ಕೇಳುತ್ತಿದ್ದ ನಮಗೂ ರೋಮಾಂಚನ.
ಹೀಗೆಯೇ ಸುಮಾರು ಮುಕ್ಕಾಲು ಗಂಟೆಯ ಮಾತುಕತೆ. ಅವರು ಕಾರ್ಯಕ್ರಮಕ್ಕೆ ಹೊರಡುವ ಸಮಯವಾಯಿತು. ಹೊರಡುವ ಮುನ್ನ ನಾವು ನಡೆಸುವ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಮತ್ತೊಮ್ಮೆ ಉಪನ್ಯಾಸ ನೀಡಲು ಬರುವುದಾಗಿ ಅವರು ಹೇಳಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-01-2025, #rsiyertumakuru
No comments:
Post a Comment