ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Wednesday, 22 January 2025

Vimala Visit- Date 21-01-2025

ಬೆಂಗಳೂರಿನಿಂದ ಇಂದು (ದಿ.21-01-2025) ಬೆಳಬೆಳಗ್ಗೆಯೇ ಆಗಮಿಸಿದ ನಮ್ಮ ಚಿಕ್ಕಮ್ಮ ಶ್ರೀಮತಿ ವಿಮಲ ಮತ್ತು ಚಿಕ್ಕಪ್ಪ ಶ್ರೀ ಹೆಚ್.ಎಸ್.ಶ್ರೀನಿವಾಸ್ ದಂಪತಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರಿಗೆ ಫಲತಾಂಬೂಲ ನೀಡಿ ಜನ್ಮದಿನದ ಶುಭಾಶಯ ಕೋರಿದ್ದು, ಉಭಯತ್ರರಲ್ಲೂ ಸಂತೋಷವನ್ನುಂಟುಮಾಡಿತು.






Monday, 20 January 2025

Hiremagaluru Kannan - 20-01-2025 - ಹಿರೇಮಗಳೂರು ಕಣ್ಣನ್ ರವರೊಡನೆ

ಡಿವಿಜಿ “ಕಗ್ಗ” : ಸುಬ್ಬುಲಕ್ಷ್ಮಿ ಭೇಟಿ ನೆನೆದ ಕಣ್ಣನ್…
------------------------

“ಕನ್ನಡದ ಪೂಜಾರಿ” ಶ್ರೀ ಹಿರೇಮಗಳೂರು ಕಣ್ಣನ್ ರವರು ಎದುರ್ಗೊಂಡರೆ ಸವಿಮಾತಿಗೇನು ಕೊರತೆ? ಕನ್ನಡದ ಮಂತ್ರ, ಸಾಹಿತ್ಯ ದಿಗ್ಗಜರ ನೆನಪು, ಮಂಕುತಿಮ್ಮನ ಕಗ್ಗದ ಮುಕ್ತಕ, ಮುದ್ದುರಾಮನ ಪದ್ಯ, ಮತ್ತಾವುದೋ ಕನ್ನಡದ ಕವಿತೆ, ಇನ್ನಾವುದೋ ಸ್ವಾರಸ್ಯಕರ ಪ್ರಸಂಗ…. ಹೀಗೆ ಒಂದರಹಿಂದೆ ಒಂದರಂತೆ ನೆನಪಿನಾಳದಿಂದ ಮಾತಿನ ಚಿಲುಮೆ ಓತಪ್ರೋತವಾಗಿ ಹೊಮ್ಮುತ್ತಲೇ ಇತ್ತು. ಆ ಮಾತಿನ ಓಘಕ್ಕೆ ಬೆರಗಾಗುತ್ತ, ಅದರಲ್ಲಿನ ಅಂತಃಸತ್ವವನ್ನು ಆಸ್ವಾದಿಸುತ್ತ ಕುಳಿತಾಗ ಹೊತ್ತು ಹೋದುದು ಗೊತ್ತೇ ಆಗಲಿಲ್ಲ!
ಅಂತಹುದೊಂದು ಅನುಭವ ಇಂದು ನಮ್ಮದಾಯಿತು. ಶ್ರೀ ಕಣ್ಣನ್ ರವರು ಇಂದು (ದಿ. 20-01-2025) ತುಮಕೂರಿಗೆ ಆಗಮಿಸಿದ್ದರು. ಅವರು ತಂಗಿದ್ದ ಶ್ರೀ ರಮೇಶ್ ಬಾಬುರವರ ನಿವಾಸಕ್ಕೆ ಇಂದು ಸಂಜೆ ನಾನು ಮತ್ತು ವಿಶ್ವನಾಥನ್ R. Vishwanathan Tumkur ತೆರಳಿದ್ದೆವು. ಸಂಜೆಯ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗಿದ್ದ ಶ್ರೀ ಕಣ್ಣನ್ ರವರು ನಮ್ಮನ್ನು ನೋಡಿದೊಡನೆ ಅತ್ಯಂತ ಸಂತಸದಿಂದ ಮಾತಿಗಿಳಿದರು. ಸುಮಾರು 30 ವರ್ಷಗಳ ಹಿಂದೆ ನಮ್ಮ ಶ್ರೀ ಶಂಕರ ಜಯಂತಿ ಸಭಾ ಕಾರ್ಯಕ್ರಮಕ್ಕೆ ಅವರು ಅತಿಥಿಗಳಾಗಿ ಬಂದಿದ್ದುದು, ಇತ್ತೀಚೆಗೆ ನಮ್ಮ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಸಂದರ್ಭ ಇತ್ಯಾದಿಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದೆವು. ಆಗ ಅವರು ಸುಮಾರು 35-40 ವರ್ಷಗಳ ಹಿಂದಿನ ಅವಿಸ್ಮರಣೀಯ ಪ್ರಸಂಗವೊಂದರ ನೆನಪಿಗೆ ಜಾರಿದರು.
“ಅಂತರ ರಾಷ್ಟ್ರೀಯ ಖ್ಯಾತಿ ಗಳಿಸಿದ್ದ, ಕರ್ನಾಟಕ ಸಂಗೀತದ ಅಪ್ರತಿಮ ಗಾಯಕರೆನಿಸಿದ್ದ ಶ್ರೀಮತಿ ಎಂ.ಎಸ್.ಸುಬ್ಬುಲಕ್ಷ್ಮೀರವರು ಮತ್ತು ಅವರ ಪತಿ ಶ್ರೀ ಸದಾಶಿವಂರವರು ಹಿರೇಮಗಳೂರಿನ ನಮ್ಮ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಅದೊಂದು ದಿನ ಆಗಮಿಸಿದ್ದರು. ಹೂಮಾಲೆ ಅರ್ಪಿಸಿ ಸ್ವಾಗತ ಕೋರಿದೆ. ಬಳಿಕ ಶ್ರೀ ಸದಾಶಿವಂರವರು ತಮಿಳಿನಲ್ಲೇ ನನ್ನೊಡನೆ ಮಾತನಾಡುವಾಗ, “ಕಣ್ಣನ್ ರವರ ಬಾಯಿಂದ ಡಿವಿಜಿಯವರ “ಕಗ್ಗ”ದ ಪದ್ಯ ಕೇಳಬೇಕು ಎಂದು ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ರವರು ಹೇಳಿದ್ದಾಗಿ” ನುಡಿದರು. ಇದನ್ನು ಕೇಳಿ ನನಗೆ ಆನಂದಾಶ್ಚರ್ಯವಾಯ್ತು. ಅವರ ಕೋರಿಕೆಯಂತೆ ಒಂದು ಕಗ್ಗವನ್ನು ಅರ್ಥಸಹಿತ ಹೇಳಿದೆ. ಅದನ್ನು ಕೇಳಿ ಈರ್ವರೂ ಹರ್ಷಪಟ್ಟರು’’ ಎಂದು ವಿವರಿಸುವಾಗ ಕಣ್ಣನ್ ರವರ ಮುಖದಲ್ಲಿ ಅವರ್ಣನೀಯ ಆನಂದ. ಕೇಳುತ್ತಿದ್ದ ನಮಗೂ ರೋಮಾಂಚನ.
ಹೀಗೆಯೇ ಸುಮಾರು ಮುಕ್ಕಾಲು ಗಂಟೆಯ ಮಾತುಕತೆ. ಅವರು ಕಾರ್ಯಕ್ರಮಕ್ಕೆ ಹೊರಡುವ ಸಮಯವಾಯಿತು. ಹೊರಡುವ ಮುನ್ನ ನಾವು ನಡೆಸುವ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಮತ್ತೊಮ್ಮೆ ಉಪನ್ಯಾಸ ನೀಡಲು ಬರುವುದಾಗಿ ಅವರು ಹೇಳಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-01-2025, #rsiyertumakuru



 






Friday, 17 January 2025

VSR-96 Happy moments ವಿ.ಎಸ್.ಆರ್.-96 ಸಂತಸದ ಕ್ಷಣಗಳು...

96 ರ ಹೊಸ್ತಿಲಲ್ಲಿ ಸಂತಸದ ಕ್ಷಣಗಳು…
-------------------------------------
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ವಿ.ಎಸ್.ರಾಮಚಂದ್ರನ್ ರವರು ಇದೇ ಜನವರಿ 14 “ಸಂಕ್ರಾಂತಿ”ಯಂದು (ದಿ.14-01-2025) 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು.

ಅಂದೇ ರಾತ್ರಿ ಮೊಮ್ಮಗ ವಿ.ವಿವೇಕ್ - ಶ್ರೀಮತಿ ರಶ್ಮಿ ದಂಪತಿ (ಈರ್ವರೂ ಇಂಜಿನಿಯರ್ ಗಳು) ತಮ್ಮ ಏಳು ತಿಂಗಳ ಪುಟಾಣಿ ಗಂಡು ಮಗುವಿನೊಡನೆ ಆಗಮಿಸಿದ್ದರು. ನಮ್ಮ ತಂದೆಗೆ ಸಂಕ್ರಾಂತಿಯ ಎಳ್ಳುಬೆಲ್ಲದೊಡನೆ, ಫಲತಾಂಬೂಲ ನೀಡಿ ಜನ್ಮದಿನದ ಶುಭ ಕೋರಿದರು. ಇದೇ ಸಂದರ್ಭದಲ್ಲಿ 7 ತಿಂಗಳ “ಮರಿಮಗ” 96 ನೇ ವಸಂತಕ್ಕೆ ಕಾಲಿಟ್ಟ ತನ್ನ “ಮುತ್ತಜ್ಜನ ಮಡಿಲಲ್ಲಿ” ಕೆಲ ನಿಮಿಷ ಇದ್ದು ಮುತ್ತಜ್ಜನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಲಿದದ್ದು ಹಾಗೂ ವಿಶ್ವನಾಥನ್ ಎತ್ತಿಕೊಂಡಾಗ ಜೋರು ನಗುವಿನ ಪ್ರತಿಕ್ರಿಯೆ ನೀಡಿದ್ದು ಚೇತೋಹಾರಿಯಾಗಿತ್ತು.

ಹಿಂದಿನ ದಿನವಷ್ಟೇ ವಿವೇಕ್ ತನ್ನ ಹುಟ್ಟುಹಬ್ಬ ಆಚರಿಸಿದ್ದು, ಆ ಹಿನ್ನೆಲೆಯಲ್ಲಿ ನಮ್ಮ ತಂದೆ ತನ್ನ ಮೊಮ್ಮಗನಿಗೆ ಶಾಲುಹೊದಿಸಿ, ಹಾರ ಹಾಕಿ ಜನ್ಮದಿನದ ಶುಭಾಶಯ ಕೋರಿ ಸಂತಸ ಹಂಚಿಕೊಂಡರು.

ಜನವರಿ 15 ರಂದು ಮಗಳು ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಬೆಂಗಳೂರಿನಿಂದ ಆಗಮಿಸಿ, ತಂದೆಗೆ ಶುಭಾಶಯ ಕೋರಿದ್ದು ಉಭಯತ್ರರಲ್ಲೂ ಉಲ್ಲಾಸವನ್ನುಂಟುಮಾಡಿತು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 17-01-2025



 








------------------------------







_______________________________


Youtube Video






Tuesday, 14 January 2025

VSR-96 14-01-2025 ವಿ.ಎಸ್.ರಾಮಚಂದ್ರನ್ ರವರ ಹುಟ್ಟುಹಬ್ಬ ವಿ.ಎಸ್.ಆರ್ -96

 96 ನೇ ವಸಂತಕ್ಕೆ ಪಾದಾರ್ಪಣೆ

---------------------
ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ. 14-01-2025)- "ಸಂಕ್ರಾಂತಿ"ಯ ಶುಭದಿನದಂದು- ದೈವಕೃಪೆಯಿಂದ, ಗುರುಹಿರಿಯರ ಆಶೀರ್ವಾದಗಳಿಂದ, ಬಂಧುಮಿತ್ರರ ಶುಭಹಾರೈಕೆಗಳಿಂದ 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಶುಭ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಮನೆದೇವರಾದ "ಶ್ರೀ ಪಳನಿ ಸುಬ್ರಹ್ಮಣ್ಯಸ್ವಾಮಿ"ಗೆ ಅವರು ದೀಪಾರತಿ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡದ್ದು ನಮಗೆಲ್ಲ ಅಪಾರ ಹರ್ಷೋಲ್ಲಾಸವನ್ನುಂಟುಮಾಡಿತು.
-ಆರ್.ಎಸ್.ಅಯ್ಯರ್. ತುಮಕೂರು, ದಿ. 14-01-2025, "ಸಂಕ್ರಾಂತಿ".
Our father, freedom fighter Shri V.S.Ramachandran turned 96 today (14-01-2025) - on the auspicious day of "Sankranti" - by the grace of God, the blessings of his Gurus, the best wishes of relatives & friends. On this auspicious occasion, he celebrated his birthday by lighting the house deity "Sri Palani Subrahmanyaswamy" in our house, which brought great joy to all of us.









Wednesday, 4 December 2024

Hole Anjaneya & Vaidyanatheshwara Temple, Madduru- ಮದ್ದೂರು- 30-11-2024

ಮದ್ದೂರಿನಲ್ಲೊಂದು ಸುತ್ತು….
--------------------------
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀಕ್ಷಣೆ ಬಳಿಕ ಪಕ್ಕದ ಮದ್ದೂರು ಪಟ್ಟಣಕ್ಕೆ ನಾನು ಮತ್ತು ಬಿ.ಎಸ್. ವೆಂಕಟೇಶ್ ( ದಿ.30-11-2024) ತೆರಳಿದೆವು. ಗೌಡಗೆರೆಯು ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರಿದ್ದರೆ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆಗೆ ಸೇರಿದೆ.
ಮದ್ದೂರಿನ ಮುಖ್ಯರಸ್ತೆ ಪಕ್ಕದ ಕ್ರಾಸ್ ನಲ್ಲಿ ಶಿಂಶಾ ನದಿ ದಂಡೆಯಲ್ಲಿರುವ ಸುಪ್ರಸಿದ್ಧ ಹಾಗೂ ಪುರಾತನವಾದ, ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋದಾಗ ಮಧ್ಯಾಹ್ನ 1-30 ದಾಟಿತ್ತು. ಆದರೂ ಜನಜಂಗುಳಿ ಇತ್ತು. ಪ್ರಶಾಂತ ಪರಿಸರದಲ್ಲಿ ದೇವರ ದರ್ಶನ ಆಯಿತು. ಪ್ರಸಾದ ಸ್ವೀಕರಿಸಿದೆವು. ಪಕ್ಕದಲ್ಲೇ ಖಾಸಗಿಯವರಿಗೆ ಸೇರಿದ ಶ್ರೀ ಶ್ರೀನಿವಾಸ ದೇವಾಲಯವಿದ್ದು ಅದನ್ನೂ ವೀಕ್ಷಿಸಿದೆವು. ಅಲ್ಲಿ ಗೋಶಾಲೆಯೂ ಇದೆ. ಬಳಿಕ ಅಲ್ಲಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ಪುರಾತನ ಹಾಗೂ ಸುಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಹೋದೆವು. ಆದರೆ ಆ ಹೊತ್ತಿಗೆ ದೇವಾಲಯದ ಬಾಗಿಲು ಮುಚ್ಚಿತ್ತು. ಇದೂ ಸಹ ಮುಜರಾಯಿ ಇಲಾಖೆಯದ್ದು. ಹೊರಗಿಂದಲೇ ಅನೇಕ ಭಕ್ತರು ದೇವರಿಗೆ ನಮಿಸುತ್ತಿದ್ದರು. ಈ ದೇವಾಲಯವೂ ಶಿಂಶಾ ನದಿಯ ದಂಡೆಯಲ್ಲಿದ್ದು, ಭಕ್ತರು ನದಿಗೂ ಪೂಜಿಸುತ್ತಾರೆ. ಇದರ ಪಕ್ಕದಲ್ಲೇ ಖಾಸಗಿ ಟ್ರಸ್ಟ್ ಒಂದು ದಾಸೋಹ ಭವನ ನಿರ್ಮಿಸಿಕೊಂಡು ನಿತ್ಯ ದಾಸೋಹ ವ್ಯವಸ್ಥೆ ಮಾಡಿದೆ. ಅಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಅನ್ನ ದಾಸೋಹ (ಅನ್ನ, ಸಾರು, ಮಜ್ಜಿಗೆ ಮತ್ತು ಪಾಯಸ) ನಡೆಯುತ್ತದೆ. ನಾವು ದೇವಾಲಯದ ಆವರಣದಲ್ಲಿದ್ದಾಗ ನಮ್ಮನ್ನು ಟ್ರಸ್ಟ್ ಸಿಬ್ಬಂದಿ ಪ್ರಸಾದ ಸ್ವೀಕರಿಸಲು ಆಹ್ವಾನಿಸಿದರು. ಅಲ್ಲೇ ನಾವು ಪ್ರಸಾದ ಸ್ವೀಕರಿಸಿದೆವು. ಅಚ್ಚುಕಟ್ಟಾದ ಕಟ್ಟಡಗಳು, ಅಚ್ಚುಕಟ್ಟಾದ ಊಟದ ವ್ಯವಸ್ಥೆ ಗಮನ ಸೆಳೆದವು.
ಊಟ ಮುಗಿಸಿ ಹೊರಟಾಗ ಮದ್ದೂರಿನ ಪತ್ರಕರ್ತ ಮಿತ್ರರಾದ ಶ್ರೀ ಕೆ.ಎನ್.ಪುಟ್ಟಲಿಂಗಯ್ಯನವರ ಭೇಟಿ ಆಯಿತು. ಇವರು ನನಗೆ ಸುಮಾರು 20-22 ವರ್ಷಗಳಿಗೂ ಹಿಂದಿನ ಪರಿಚಯ. ಆಗ ಇವರು ತುಮಕೂರಿನಲ್ಲಿ “ವಿಜಯಕರ್ನಾಟಕ”ದ ಜಿಲ್ಲಾ ವರದಿಗಾರರಾಗಿದ್ದರು. ದಶಕದ ಹಿಂದೆ ತುಮಕೂರಿಗೆ ಮತ್ತೆ ಬಂದ ಇವರು, “ತುಮಕೂರು ವಾರ್ತೆ” ಜಿಲ್ಲಾ ಪತ್ರಿಕೆಯ ಸಂಪಾದಕರಾದರು. ಬಳಿಕ ಅದರ ಪ್ರಕಾಶಕರೂ ಆದರು. ಕೆಲವರ್ಷಗಳ ಬಳಿಕ “ತುಮಕೂರು ವಾರ್ತೆ”ಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿದರು. ಇವರು ಮಂಡ್ಯದಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ “ಉದಯಕಾಲ” ಎಂಬ ದಿನಪತ್ರಿಕೆಯ ಸಂಪಾದಕರಾಗಿ ಅದರ ತುಮಕೂರು ಆವೃತ್ತಿಯನ್ನು ಹೊರತಂದರು. ಸ್ವಲ್ಪ ಕಾಲದಲ್ಲೇ ಅದನ್ನು ರಾಜ್ಯ ಮಟ್ಟದ ಪತ್ರಿಕೆಯಾಗಿ ಉನ್ನತೀಕರಿಸಿದ್ದು, ಇದೀಗ “ಉದಯಕಾಲ” ದಿನಪತ್ರಿಕೆಯ ಸಂಪಾದಕರಾಗಿ ಶ್ರೀ ಪುಟ್ಟಲಿಂಗಯ್ಯರವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರವನ್ನು ಕೆಲವರ್ಷಗಳ ಹಿಂದೆಯಷ್ಟೇ ತುಮಕೂರಿನಿಂದ ತಮ್ಮ ಸ್ವಂತ ತಾಲ್ಲೂಕಾದ ಮದ್ದೂರು ಪಟ್ಟಣಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ.
ಶ್ರೀ ಪುಟ್ಟಲಿಂಗಯ್ಯನವರ ಭೇಟಿ ಮತ್ತು ಮಾತುಕತೆ ಸಂತೋಷವನ್ನುಂಟುಮಾಡಿತು. ಬಳಿಕ ಅವರು ಮದ್ದೂರಿನ ಶ್ರೀ ನರಸಿಂಹಸ್ವಾಮಿ ದೇವಾಲಯ ನೋಡಲೇಬೇಕು ಎಂದು ನಮ್ಮನ್ನು ಊರೊಳಗಿರುವ ದೇಗುಲಕ್ಕೆ ಕರೆದೊಯ್ದರು. ಆಗ ವೇಳೆ ಮಧ್ಯಾಹ್ನ 3 ಗಂಟೆ ಆಗುತ್ತಿತ್ತು. ದೇವಾಲಯ ಮುಚ್ಚುವ ಹೊತ್ತು. ಆದರೂ ನಮಗೆ ದೇವರ ದರ್ಶನವಾಯಿತು. ಪ್ರಸಾದವೂ ಲಭಿಸಿತು. ಇಲ್ಲಿರುವ ದೇವರು ಉಗ್ರನರಸಿಂಹಸ್ವಾಮಿ. ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆಯುತ್ತಿರುವ ಉಗ್ರ ಸ್ವರೂಪಿ ನರಸಿಂಹನ ಅಪರೂಪದ ವಿಗ್ರಹವಿರುವುದು ಇಲ್ಲಿನ ವಿಶೇಷ. ಪುರಾಣ ಪ್ರಸಿದ್ಧವಾದ ಈ ಬೃಹತ್ ದೇವಾಲಯವು ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಪಕ್ಕದಲ್ಲೇ ಸುಪ್ರಸಿದ್ಧ ಶ್ರೀ ವರದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ಪಟ್ಟಾಭಿರಾಮ ದೇವಾಲಯವಿದ್ದು, ಆ ಹೊತ್ತಿಗೆ ದೇವಾಲಯದ ವೇಳೆ ಮುಗಿದು ಬಾಗಿಲು ಹಾಕಲ್ಪಟ್ಟಿದ್ದವು. ಹೊರಗಿನಿಂದಲೇ ನೋಡಿ, ನಮಿಸಿದೆವು. ಶ್ರೀ ಪುಟ್ಟಲಿಂಗಯ್ಯನವರಿಂದ ಬೀಳ್ಕೊಂಡು, ಮಧ್ಯಾಹ್ನ 3-15 ಕ್ಕೆ ಅಲ್ಲಿಂದ ಹೊರಟೆವು. ಸಂಜೆ 4-45 ರ ಹೊತ್ತಿಗೆ ತುಮಕೂರಿನಲ್ಲಿದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-12-2024, #rsiyertumakuru







------------------------------------------ VIDEO----------------------------------------
 




Monday, 2 December 2024

Gowdagere - 30-11-2024- ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರ

ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ...
---------------------------



ಇದ್ದಕ್ಕಿದ್ದಂತೆ ಇಂದು (ದಿ.30-11-2024) ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಗೌಡಗೆರೆಯು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಗಡಿಯಂಚಿನಲ್ಲಿ ಇದ್ದರೂ, ಇದು ಪಕ್ಕದ ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರುತ್ತದೆ. ಮಿತ್ರರಾದ ಹಾಗೂ ಈ ಕ್ಷೇತ್ರದಲ್ಲಿ ಸುಪರಿಚಿತರಾಗಿರುವ ಶ್ರೀ ಬಿ.ಎಸ್.ವೆಂಕಟೇಶ್ (ಬೆಳಗುಂಬ) ರವರು ನಿನ್ನೆ ಭೇಟಿಯಾದಾಗ "ನಾಳೆ ಬೆಳಿಗ್ಗೆ ಹೋಗೋಣ ಬನ್ನಿ" ಎಂದು ಆಹ್ವಾನಿಸಿದರು. ಅಲ್ಲಿಗೆ ಹೋಗಬೇಕೆಂಬ ಬಹುಕಾಲದ ನನ್ನ ಅಪೇಕ್ಷೆ ಹೀಗೆ ಅನಿರೀಕ್ಷಿತವಾಗಿ ಈಡೇರಲಿದೆಯೆಂದರೆ ಇಲ್ಲ ಎನ್ನಲಾದೀತೇ? ತಕ್ಷಣವೇ ಒಪ್ಪಿದೆ. ಇಂದು ಅವರೊಂದಿಗೆ ಹೋಗಿಬಂದೆ.
ಗೌಡಗೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಭವ್ಯ ದೇಗುಲವಿದೆ. ಬಸವಣ್ಣನಿಗೂ ಪ್ರಖ್ಯಾತಿ ಹೊಂದಿದೆ. ದೇಗುಲದ ಪಾರ್ಶ್ವದಲ್ಲೇ ಭವ್ಯ ಹಾಗೂ ದಿವ್ಯವಾದ ಶ್ರೀ ಚಾಮುಂಡೇಶ್ವರಿ ವಿಗ್ರಹವಿದೆ. ಸುಮಾರು 20 ಅಡಿಗಳಷ್ಟು ಎತ್ತರದ ಪೀಠದ ಮೇಲೆ ಇದನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. 18 ಕೈಗಳುಳ್ಳ ದೇವಿಯ ವಿಗ್ರಹವೇ ಸುಮಾರು 40 ಅಡಿಗಳಷ್ಟು ಎತ್ತರವಿದೆ. ದೇವಿಯ ಹಿಂಬದಿ ಬೃಹತ್ ಸಿಂಹವಿದೆ. ಹಿನ್ನೆಲೆಯಲ್ಲಿ ನೆಲದಿಂದ ಸುಮಾರು 112 ಅಡಿಗಳಷ್ಟು ಎತ್ತರ ಬರುವಷ್ಟು ಪರ್ವತವನ್ನು ಹಾಗೂ ಜಲಪಾತವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ದೇವಿಯ ಇಕ್ಕೆಲಗಳಲ್ಲಿ ಜಿಂಕೆ, ಸಿಂಹ, ಹುಲಿ ಮೊದಲಾದ ಪ್ರಾಣಿಗಳ ಆಕೃತಿಗಳನ್ನು ನಿರ್ಮಿಸಲಾಗಿದೆ. ಅಂದರೆ ಪ್ರಕೃತಿಯ ನಡುವೆ ಪಂಚಲೋಹದಿಂದ ಕೂಡಿದ ದೇವಿಯ ವಿಗ್ರಹ ವಿಜೃಂಭಿಸುತ್ತಿದೆ. 2021 ರ ಆಗಸ್ಟ್ 8 ರಂದು ಈ ವಿಗ್ರಹ ಲೋಕಾರ್ಪಣೆಗೊಂಡಿದೆ. ಅಂದಿನಿಂದ ಪ್ರತಿನಿತ್ಯ ರಾಜ್ಯ ಹಾಗೂ ಹೊರರಾಜ್ಯಗಳ ಸಹಸ್ರಾರು ಭಕ್ತಾದಿಗಳನ್ನು ಈ ಕ್ಷೇತ್ರ ಆಕರ್ಷಿಸುತ್ತಿದೆ.
ಈ ಬೃಹತ್ ವಿಗ್ರಹವು ಹೊರಭಾಗದಲ್ಲಿದ್ದರೆ, ನೆಲ ಅಂತಸ್ತಿನಲ್ಲಿ ಒಳಭಾಗಕ್ಕೆ ಅದ್ಭುತವಾದ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ 50 ರೂ. ಪ್ರವೇಶ ಶುಲ್ಕವಿದೆ. ಒಳಹೊಕ್ಕು ಹೊರಬರುವಷ್ಟರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಹಾಗೂ ಗ್ರಾಮೀಣ ಪರಿಸರದ ಬಹುಮುಖ ವ್ಯಕ್ತಿತ್ವಗಳನ್ನು / ಜನಜೀವನವನ್ನು ಪರಿಚಯಿಸುವ ಶಿಲ್ಪಕಲಾಕೃತಿಗಳು ಮನಸೂರೆಗೊಳ್ಳುತ್ತವೆ. ಈ ಮ್ಯೂಸಿಯಂ ಅನ್ನು ಈಗ ಇನ್ನೊಂದು ಹಂತಕ್ಕೆ ವಿಸ್ತರಿಸಿದ್ದು, ಅಲ್ಲಿ ನವದುರ್ಗೆಯರ ದೊಡ್ಡದೊಡ್ಡ ವಿಗ್ರಹಗಳು ರಾರಾಜಿಸುತ್ತಿವೆ.
ಪಕ್ಕದಲ್ಲೇ ದಾಸೋಹ ಭವನವಿದೆ. ಒಮ್ಮೆಲೆ ಒಂದು ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸಬಹುದು. ಬೆಳಗ್ಗೆ ಉಪಹಾರ ಹಾಗೂ ಬೆಳಗ್ಗೆ 11 ಗಂಟೆಯ ನಂತರ ರಾತ್ರಿಯತನಕ ನಿರಂತರವಾಗಿ ಭೋಜನ (ಅನ್ನ, ಸಾರು, ಮಜ್ಜಿಗೆ, ಪಾಯಸ) ವಿತರಿಸಲಾಗುತ್ತಿರುತ್ತದೆ. ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಸಾದ ಸ್ವೀಕರಿಸುತ್ತಿರುತ್ತಾರೆ.
ಇಂತಹುದೊಂದು ಕ್ಷೇತ್ರದ ರೂವಾರಿಗಳೂ, ಧರ್ಮದರ್ಶಿಗಳೂ ಆಗಿರುವ ಶ್ರೀ ಮಲ್ಲೇಶ್ ರವರನ್ನು ಭೇಟಿ ಮಾಡುವ ಸದವಕಾಶವನ್ನೂ ಶ್ರೀ ಬಿ.ಎಸ್.ವೆಂಕಟೇಶ್ ರವರು ಕಲ್ಪಿಸಿದರು. ಅತ್ಯಂತ ಸರಳ ವ್ಯಕ್ತಿತ್ವದ ಶ್ರೀ ಮಲ್ಲೇಶ್ ರವರು ಅತ್ಯಂತ ಪ್ರೀತಿಯಿಂದ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನನ್ನೊಡನೆ ಮಾತನಾಡಿದರು. ಈ ಕ್ಷೇತ್ರ ಪ್ರಾರಂಭವಾದ ಬಗೆ, ಕೇದಾರನಾಥದಲ್ಲಿ ಅಘೋರಿಯೊಬ್ಬರು ದೇವಿ ವಿಗ್ರಹ ಸ್ಥಾಪಿಸುವಂತೆ ನೀಡಿದ ಸಲಹೆ, ಆನಂತರ ಅದಕ್ಕಾಗಿ ಪಟ್ಟ ಶ್ರಮ, ಇಲ್ಲಿಗೇ ಅಘೋರಿಗಳು ಬಂದಿದ್ದಾಗ ಪಂಚಲೋಹದಲ್ಲೇ ವಿಗ್ರಹ ಸ್ಥಾಪಿಸುವಂತೆ ನೀಡಿದ ಸೂಚನೆ, ಆನಂತರ ಅದರ ಅನುಷ್ಠಾನ, ಕೊನೆಗೆ 2021 ರ ಆಗಸ್ಟ್ 8 ರಂದು ದೇವಿಯ ಬೃಹತ್ ವಿಗ್ರಹ ಲೋಕಾರ್ಪಣೆಗೊಂಡ ಸಂದರ್ಭದವರೆಗೆ ಎಲ್ಲವನ್ನೂ ಸುದೀರ್ಘವಾಗಿ ವಿವರಿಸಿದರು. ಪ್ರಸಾದ ನಿಲಯಕ್ಕೆ ನಮ್ಮನ್ನು ಕರೆದೊಯ್ದು ಅಲ್ಲಿನ ವ್ಯವಸ್ಥೆಯನ್ನು ವಿವರಿಸಿದರು. ಈಗ ಮ್ಯೂಸಿಯಂನಲ್ಲಿ ಸಿದ್ಧಗೊಳ್ಳುತ್ತಿರುವ ನವದುರ್ಗೆಯರ ವಿಗ್ರಹಗಳ ವಿಭಾಗಕ್ಕೂ ಕರೆದೊಯ್ದು ವಿವರಿಸಿದರು. ಅವರ ಈ ಎಲ್ಲ ಸಾಧನೆ ಬೆರಗುಗೊಳಿಸಿತು. ಎಲ್ಲರಿಂದಲೂ ಗುರೂಜಿಯೆಂದು ಗೌರವಿಸಲ್ಪಡುತ್ತಿರುವ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ. ಹೊರಡುವ ಮುನ್ನ ಶ್ರೀ ಮಲ್ಲೇಶ್ ರವರು ನನಗೂ ಕಿರು ಶಾಲು ಹೊದಿಸಿ, ದೇವಿಯ ಭಾವಚಿತ್ರದ ಫೋಟೋ ನೀಡಿ ಗೌರವಿಸಿದರು. ಅತ್ಯಂತ ಸಂತೋಷವಾಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 30-11-2024, #rsiyertumakuru






********************************** VIDEO **********************








Friday, 4 October 2024

Kali Maa Statue- 2024- ಕಾಳಿ ಪ್ರತಿಮೆ ತಂಗನಹಳ್ಳಿ

 ಕಾಳಿ ಮಾತೆಯ ಈ ಆಕರ್ಷಕ ವಿಗ್ರಹದ ದರ್ಶನ ಶರನ್ನವರಾತ್ರಿಯ ಮೊದಲ ದಿನವಾದ ಇಂದು (03-10-2024, ಗುರುವಾರ) ನಮಗಾಯಿತು. ನಾನು ಮತ್ತು ಆರ್.ವಿಶ್ವನಾಥನ್ ಇಂದು ತಂಗನಹಳ್ಳಿ ಕೆರೆಯ ಬಳಿ ಹೋಗಿದ್ದಾಗ ಕೆರೆಯ ಕೋಡಿ ಹತ್ತಿರ ರಸ್ತೆ ಬದಿಯಲ್ಲೇ ಬಂಡೆಯೊಂದರ ಮೇಲೆ ನಿರ್ಮಿಸಿರುವ ಈ ಕಾಳಿ ಮಾತೆಯ ಬೃಹತ್ ವಿಗ್ರಹ ಗಮನಸೆಳೆಯಿತು. ಇದೇ ಮೊದಲ ಬಾರಿಗೆ ಕಾಳಿಯ ಇಂತಹುದೊಂದು ವಿಗ್ರಹವನ್ನು ಈ ಭಾಗದಲ್ಲಿ ನೋಡಿ ನಮಗೆ ಆನಂದಾಶ್ಚರ್ಯಗಳಾದವು.

ಸುಮಾರು ಮೂರು ಅಡಿಗಳಷ್ಟು ಎತ್ತರದ ಪೀಠದ ಮೇಲೆ ಏಳು ಅಡಿ ಎತ್ತರದ ಕಾಳಿ ಮಾತೆಯ ವಿಗ್ರಹವನ್ನು ಸುಂದರವಾಗಿ ನಿರ್ಮಿಸಲಾಗಿದೆ. ದೇವಿಯ ಎದುರುಬದಿ ದೊಡ್ಡದಾದ ತ್ರಿಶೂಲವಿದೆ. ಬಂಡೆಗಲ್ಲಿನ ಮೇಲೆ ಈ ವಿಗ್ರಹವಿದೆ. ಹಿಂಬದಿ ತಂಗನಹಳ್ಳಿ ಕೆರೆಯ ವಿಹಂಗಮ ನೋಟವಿದೆ. ಖಾಸಗಿ ವ್ಯಕ್ತಿಯೊಬ್ಬರು ತಮಿಳುನಾಡಿನ ಶಿಲ್ಪಿಗಳನ್ನು ಕರೆಸಿ ಅವರಿಂದ ಈ ವಿಗ್ರಹವನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru