* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 4 October 2024

Kali Maa Statue- 2024- ಕಾಳಿ ಪ್ರತಿಮೆ ತಂಗನಹಳ್ಳಿ

 ಕಾಳಿ ಮಾತೆಯ ಈ ಆಕರ್ಷಕ ವಿಗ್ರಹದ ದರ್ಶನ ಶರನ್ನವರಾತ್ರಿಯ ಮೊದಲ ದಿನವಾದ ಇಂದು (03-10-2024, ಗುರುವಾರ) ನಮಗಾಯಿತು. ನಾನು ಮತ್ತು ಆರ್.ವಿಶ್ವನಾಥನ್ ಇಂದು ತಂಗನಹಳ್ಳಿ ಕೆರೆಯ ಬಳಿ ಹೋಗಿದ್ದಾಗ ಕೆರೆಯ ಕೋಡಿ ಹತ್ತಿರ ರಸ್ತೆ ಬದಿಯಲ್ಲೇ ಬಂಡೆಯೊಂದರ ಮೇಲೆ ನಿರ್ಮಿಸಿರುವ ಈ ಕಾಳಿ ಮಾತೆಯ ಬೃಹತ್ ವಿಗ್ರಹ ಗಮನಸೆಳೆಯಿತು. ಇದೇ ಮೊದಲ ಬಾರಿಗೆ ಕಾಳಿಯ ಇಂತಹುದೊಂದು ವಿಗ್ರಹವನ್ನು ಈ ಭಾಗದಲ್ಲಿ ನೋಡಿ ನಮಗೆ ಆನಂದಾಶ್ಚರ್ಯಗಳಾದವು.

ಸುಮಾರು ಮೂರು ಅಡಿಗಳಷ್ಟು ಎತ್ತರದ ಪೀಠದ ಮೇಲೆ ಏಳು ಅಡಿ ಎತ್ತರದ ಕಾಳಿ ಮಾತೆಯ ವಿಗ್ರಹವನ್ನು ಸುಂದರವಾಗಿ ನಿರ್ಮಿಸಲಾಗಿದೆ. ದೇವಿಯ ಎದುರುಬದಿ ದೊಡ್ಡದಾದ ತ್ರಿಶೂಲವಿದೆ. ಬಂಡೆಗಲ್ಲಿನ ಮೇಲೆ ಈ ವಿಗ್ರಹವಿದೆ. ಹಿಂಬದಿ ತಂಗನಹಳ್ಳಿ ಕೆರೆಯ ವಿಹಂಗಮ ನೋಟವಿದೆ. ಖಾಸಗಿ ವ್ಯಕ್ತಿಯೊಬ್ಬರು ತಮಿಳುನಾಡಿನ ಶಿಲ್ಪಿಗಳನ್ನು ಕರೆಸಿ ಅವರಿಂದ ಈ ವಿಗ್ರಹವನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru





Tanganahalli Lake- 2024- ತಂಗನಹಳ್ಳಿ ಕೆರೆ ಕೋಡಿ ದೃಶ್ಯ

 ತಂಗನಹಳ್ಳಿ ಕೆರೆ ಕೋಡಿ ಬಿದ್ದಿದೆ. ಹಾಲ್ನೊರೆಯಂಥ ನೀರು ಕೆರೆಯ ಕೋಡಿಯಿಂದ ಹೊರಹೊಮ್ಮಿ ಧೋ ಎಂದು ಸದ್ದು ಮಾಡುತ್ತ ಹರಿಯುತ್ತಿದೆ. ನಾನು ಮತ್ತು ಆರ್. ವಿಶ್ವನಾಥನ್ ಬೈಕ್ ನಲ್ಲಿ ಇಂದು (ದಿ. 03-10-2024, ಗುರುವಾರ) ಮಧ್ಯಾಹ್ನ ಈ ದಾರಿಯಲ್ಲಿ ಹೋಗುವಾಗ, ಧೋ ಎಂಬ ನೀರಿನ ಹರಿವಿನ ಸದ್ದು ಕೇಳಿ ಕುತೂಹಲದಿಂದ ಬಂಡೆಗಳ ಮಧ್ಯೆ ಒಳಹೊಕ್ಕುನೋಡಿದಾಗ ಕಂಡ ಈ ದೃಶ್ಯ ಮನಮೋಹಕವಾಗಿತ್ತು. ಮೈಮರೆಸುವಂತಿತ್ತು. ನಿನ್ನೆ ರಾತ್ರಿಯಿಡೀ ಸುರಿದ ಭರ್ಜರಿ ಮಳೆಯಿಂದ ಈ ಕೆರೆ ಇಂದು ಬೆಳಗ್ಗೆ ಕೋಡಿ ಬಿದ್ದಿದೆ.

ತಂಗನಹಳ್ಳಿ ಕೆರೆಯು ದೇವರಾಯನದುರ್ಗದ ತಪ್ಪಲಿನಲ್ಲೇ ಇದೆ. ಆದರೆ ಇದು ಕೊರಟಗೆರೆ ತಾಲ್ಲೂಕಿಗೆ ಸೇರುತ್ತದೆ. ದುರ್ಗದ ಹಳ್ಳಿ ಮೂಲಕ ಅನುಪನಹಳ್ಳಿ ಮಾರ್ಗವಾಗಿ ಹೋಗುವಾಗ ಎಡಕ್ಕೆ ತಿರುಗಿ ಆ ದಾರಿಯಲ್ಲಿ ನೇರ ಹೋಗುವಾಗ ತಂಗನಹಳ್ಳಿ ಸಿಗುತ್ತದೆ. ಹಾಗೆಯೇ ಮುಂದೆ ಸಾಗಿದರೆ ದಾರಿಯ ಬಲಬದಿಯಲ್ಲಿ ರಸ್ತೆಯಿಂದ ಒಳಭಾಗದಲ್ಲಿ ಈ ಕೆರೆ ಕಾಣುತ್ತದೆ. ವಾತಾವರಣ ಸುಂದರವಾಗಿದೆ.
- ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru








Sunday, 29 September 2024

ಮರಿಮಗನೊಡನೆ ಮುತ್ತಜ್ಜ- Vivek- 2024- VSR with great grand son

 “ಹೊಸ ಚಿಗುರು ಹಳೆಬೇರು ಕೂಡಿರಲು ಮರಸೊಬಗು….”

-------------------------------------
ಈಗಷ್ಟೇ ಮೂರು ತಿಂಗಳು ತುಂಬಿದ ಮರಿಮಗನನ್ನು ಕಂಡು 95 ರ ಮುತ್ತಜ್ಜ ಆನಂದಿಸಿದರು.
ನಮ್ಮ ಸಹೋದರಿ ಶ್ರೀಮತಿ ಆರ್. ರಾಜೇಶ್ವರಿ- ಶ್ರೀ ಹೆಚ್.ಕೆ.ವೇಣುಗೋಪಾಲ್ ದಂಪತಿಯ ಪುತ್ರ ಇಂಜಿನಿಯರ್ ವಿ.ವಿವೇಕ್ ಮತ್ತು ಇಂಜಿನಿಯರ್ ಶ್ರೀಮತಿ ರಶ್ಮಿ ದಂಪತಿ ಇಂದು (ದಿ. 29-09-2024, ಭಾನುವಾರ) ಸಂಜೆ ತಮ್ಮ ಮೂರು ತಿಂಗಳ ಗಂಡು ಮಗುವಿನೊಂದಿಗೆ ನಮ್ಮ ಮನೆಗೆ ಆಗಮಿಸಿದ್ದರು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರಿಗೆ ಮಗುವನ್ನು ತೋರಿಸಿ, ಆಶೀರ್ವಾದ ಪಡೆದುಕೊಂಡರು. ಆಗ ಮಗುವನ್ನು ಮುತ್ತಜ್ಜ ತಮ್ಮ ತೊಡೆಯ ಮೇಲೆ ಕೂರಿಸಿಕೊಂಡರು. ಕೈಕಾಲು ಆಡಿಸುತ್ತ ಆಟವಾಡುತ್ತಿದ್ದ ಮರಿಮಗನನ್ನು ನೋಡುತ್ತ, ಮರಿಮಗನ ನಸುನಗು ಹಾಗೂ ಜೋರು ದನಿಯ ಅಳು ಕೇಳುತ್ತ ಮುತ್ತಜ್ಜ ಮೈಮರೆತರು. ಅದನ್ನು ನೋಡುತ್ತ ನಾವುಗಳೂ ಸಂತೋಷಪಟ್ಟೆವು. ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 29-09-2024







Tuesday, 17 September 2024

Bhimanakatte Swamiji- ದಿ. 17-09-2024, ಮಂಗಳವಾರ - ಭೀಮನಕಟ್ಟೆ ಶ್ರೀಗಳೊಂದಿಗೆ






“ಎಲ್ಲರನ್ನೂ ತಿದ್ದುವುದು ಸಾಧ್ಯವಾಗದು; ಆದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು…”

-ಶ್ರೀ ಭೀಮನಕಟ್ಟೆ ಮಠದ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಈ ಮಾತುಗಳನ್ನು ಹೇಳುವಾಗ ಆ ಮಾತುಗಳಲ್ಲಿ ಹೃತ್ಪೂರ್ವಕತೆ ತುಂಬಿತ್ತು.
“ಚಾತುರ್ಮಾಸ್ಯ ವ್ರತ” ಮುಗಿಸಿ ನಾಳೆ (ದಿ.18-09-2024) ತುಮಕೂರಿನಿಂದ ತೆರಳಲಿರುವ ಹಿನ್ನೆಲೆಯಲ್ಲಿ ಶ್ರೀಗಳ ದರ್ಶನಾಶೀರ್ವಾದ ಪಡೆಯುವ ಸಲುವಾಗಿ ಇಂದು (ದಿ.17-09-2024) ಸಾಯಂಕಾಲ ನಾನು ಮತ್ತು ವಿಶ್ವನಾಥನ್ ತುಮಕೂರಿನ ಶ್ರೀಕೃಷ್ಣಮಂದಿರದಲ್ಲಿ ಶ್ರೀಗಳನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿದೆವು. ಆಗ ಶ್ರೀಗಳು ತುಂಬು ವಿಶ್ವಾಸದಿಂದ ಮಾತನಾಡಿದರು.
ದೇಶ-ಸಮಾಜದ ಪರಿಸ್ಥಿತಿ, ಧರ್ಮ-ಸಂಸ್ಕೃತಿ, ಜನರ ನಡೆ-ನುಡಿ ಹೀಗೆ ಅನೇಕ ವಿಚಾರಗಳ ಬಗ್ಗೆ ಶ್ರೀಗಳು ಸುಮಾರು ಅರ್ಧತಾಸು ಮುಕ್ತಕಂಠದಿಂದ ಚರ್ಚಿಸಿದರು. ಅವರ ಪ್ರತಿ ಮಾತಲ್ಲೂ ಅಪಾರ ಕಳಕಳಿಯಿತ್ತು. ಮಾತಿನ ಕೊನೆಯಲ್ಲಿ ಶ್ರೀಗಳು ನುಡಿದದ್ದು- “ನೋಡಿ, ಸಮಾಜದ ಎಲ್ಲರನ್ನೂ ಸಂಪೂರ್ಣವಾಗಿ ತಿದ್ದಲು ಸಾಧ್ಯವಾಗದು. ಆದರೆ ಪ್ರತಿ ವ್ಯಕ್ತಿಯೂ, ಯಾವುದೇ ಕ್ಷೇತ್ರದಲ್ಲಿರಲಿ, ಆತ ತನ್ನನ್ನು ತಾನು ಶುದ್ಧವಾಗಿಟ್ಟುಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಅಂದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು. ಅಂತಹವರಿಗೆ ಖಂಡಿತ ದೇವರ ಕೃಪೆ ಇರುತ್ತದೆ. ಅಂತಹವರ ಮನೆ-ಮನಸ್ಸಿನಲ್ಲಿ ಅತ್ಯಮೂಲ್ಯವಾದ ಶಾಂತಿ ನೆಲೆಸಿರುತ್ತದೆ”.
ಶ್ರೀಗಳ ದರ್ಶನ ಅಪಾರ ಸಂತಸ ಮೂಡಿಸಿತು. ಶ್ರೀಗಳ ಸರಳತೆ, ನಗುಮುಖ, ತೇಜಸ್ಸು, ಮಧುರವಾದ ಮಾತುಗಳು ಮನಸ್ಸನ್ನಾಕರ್ಷಿಸಿತು.
ಶ್ರೀಗಳಿಗೆ ನಾವು ಮಾಲಾರ್ಪಣೆ ಮಾಡಿ ಗೌರವಿಸಿದೆವು. ಅದೇ ಮಾಲೆಯನ್ನು ನನಗೆ ಹಾಕಿದ ಶ್ರೀಗಳು ಫಲ- ಮಂತ್ರಾಕ್ಷತೆ ನೀಡಿ ನಮ್ಮನ್ನು ಆಶೀರ್ವದಿಸಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆಯಲ್ಲಿ ಪುರಾಣೇತಿಹಾಸ ಪ್ರಸಿದ್ಧವಾದ “ಶ್ರೀ ಭೀಮನಕಟ್ಟೆ ಮಠ” ಇದೆ. ತುಂಗಾ ನದಿಯ ಪ್ರಶಾಂತ ಪರಿಸರದಲ್ಲಿರುವ ಈ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು 2024 ರ ತಮ್ಮ “16 ನೇ ಚಾತುರ್ಮಾಸ್ಯ ವ್ರತ”ವನ್ನು ತುಮಕೂರಿನಲ್ಲಿ ಕೈಗೊಂಡಿದ್ದಾರೆ. ಕಳೆದ ಜುಲೈ 21 ರಿಂದ ಶ್ರೀಗಳು ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀ ಕೃಷ್ಣ ಮಂದಿರದಲ್ಲಿ ಮೊಕ್ಕಾಂ ಮಾಡಿದ್ದಾರೆ. ಸೆಪ್ಟೆಂಬರ್ 18 ರಂದು ಶ್ರೀಗಳ ಚಾತುರ್ಮಾಸ್ಯ ವ್ರತ ಮುಕ್ತಾಯವಾಗಲಿದ್ದು, ಇಲ್ಲಿಂದ ಭೀಮನಕಟ್ಟೆಗೆ ತೆರಳಲಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ.17-09-2024 #rsiyertumakuru

Thursday, 12 September 2024

Ganesha Chaturthi-2024 - ಗಣೇಶ ಚತುರ್ಥಿ - ದಿ. 07-09-2024, ಶನಿವಾರ









---------------------------------


Video-2


Video-1

ಈ ವರ್ಷದ -ಶ್ರೀ ಕ್ರೋಧಿ ಸಂವತ್ಸರದ- ಶ್ರೀ ಗಣೇಶ ಚತುರ್ಥಿಯ ಪೂಜೆಯನ್ನು ಇಂದು (07-09-2024, ಶನಿವಾರ) ನಮ್ಮ ಮನೆಯಲ್ಲಿ ಆಚರಿಸಲಾಯಿತು.
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರು ಮಹಾಮಂಗಳಾರತಿ ಮಾಡುವುದರೊಂದಿಗೆ ಪೂಜೆ ಸಂಪನ್ನಗೊಂಡಿತು. ನಾನು ಮತ್ತು ವಿಶ್ವನಾಥನ್ ಇದ್ದೆವು.
||ಸರ್ವೇ ಜನಾಃ ಸುಖಿನೋ ಭವಂತು||
-ಆರ್.ಎಸ್.ಅಯ್ಯರ್, ತುಮಕೂರು, ದಿ. 07-09-2024, ಗಣೇಶ ಚತುರ್ಥಿ #rsiyertumakuru https://x.com/rsitmk https://www.instagram.com/r_s_iyer/?hl=en

Today (07-09-2024, Saturday) the Puja of Shri Ganesha Chaturthi of this year -Shri Krodhi Samvatsara- was celebrated at our house.
The pooja concluded with Mahamangalarathi performed by our father the freedom fighter Sri VS Ramachandran (95). Viswanathan and I were present.
||Sarve Janah Sukhino Bhavantu||
- R S Iyer Tumakuru, 07-09-2024, Ganesha Chaturthi

------------------------------------------------


 ಹಳೆಯ ತುಮಕೂರಿನ ಹೆಮ್ಮೆಯ ಕಲಾವಿದರಲ್ಲಿ ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರೂ ಒಬ್ಬರಾಗಿದ್ದರು. ವಿಶೇಷವಾಗಿ ಮಣ್ಣಿನ ಗಣಪತಿ ವಿಗ್ರಹಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿ, ತಮ್ಮದೇ ಛಾಪು ಮೂಡಿಸಿದ್ದರು. ಇವರ ಜೊತೆಯಲ್ಲಿ ಸಹೋದರರಾದ ದಿವಂಗತ ಶ್ರೀ ರಾಜು ರವರು ಮತ್ತು ಶ್ರೀ ಕುಮಾರ್ ರವರೂ ಕೈಜೋಡಿಸುತ್ತಿದ್ದರು.

ಗಣಪತಿ ಹಬ್ಬ ಬಂತೆಂದರೆ ತುಮಕೂರಿನ ಬಹುತೇಕ ಎಲ್ಲ ಬಡಾವಣೆಗಳಿಂದ ನೂರಾರು ಜನರು ಗಣಪತಿ ವಿಗ್ರಹಗಳನ್ನು ಖರೀದಿಸಲು ತುಮಕೂರಿನ ಚಿಕ್ಕಪೇಟೆಯ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಎದುರು ಬದಿ ಇರುವ ಇವರ ಮನೆಗೇ ಬರುತ್ತಿದ್ದರು. ಇವರು ಸಿದ್ಧಪಡಿಸುತ್ತಿದ್ದ ಗಣಪತಿ ವಿಗ್ರಹಗಳೆಂದರೆ ಅದೇನೋ ಆಕರ್ಷಣೆ. ಸುಮಾರು 60 ವರ್ಷಗಳಿಗೂ ಹಿಂದಿನಿಂದಲೂ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಲ್ಲಿಂದಲೇ ಗಣಪತಿಯನ್ನು ತರುತ್ತಿದ್ದರು. ಅದೇ ಪರಂಪರೆ ಈಗಲೂ ಮುಂದುವರೆದಿದೆ. ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರ ಸುಪುತ್ರ ಶ್ರೀ ಮಂಜುನಾಥ್ ರವರು ತಮ್ಮ ಈ ಕುಲಕಸುಬನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ಈಗಲೂ ನಗರದ ನಾನಾ ಭಾಗಗಳಿಂದ ಗಣಪತಿ ವಿಗ್ರಹ ಕೊಳ್ಳಲು ಜನರು ಇಲ್ಲಿಗೇ ಹುಡುಕಿಕೊಂಡು ಬರುತ್ತಾರೆಂಬುದು ಇಲ್ಲಿನ ವೈಶಿಷ್ಟ್ಯ.
ನಾನು ಮತ್ತು ವಿಶ್ವನಾಥನ್ ಇಂದು (ದಿನಾಂಕ 04-09-2024, ಬುಧವಾರ) ಮಧ್ಯಾಹ್ನ ಅಲ್ಲಿಗೆ ತೆರಳಿ ಶ್ರೀ ಗೌರಿ ಮತ್ತು ಶ್ರೀ ಗಣೇಶನ ಮಣ್ಣಿನ ಮೂರ್ತಿಗಳನ್ನು ಖರೀದಿಸಿ ಮನೆಗೆ ತಂದೆವು. ಇಲ್ಲಿಂದ ಮೂರ್ತಿಗಳನ್ನು ತರುವುದೇ ಅದೇನೋ ಖುಷಿಯ ಸಂಗತಿ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 04-09-2024 #rsiyertumakuru

Thursday, 15 August 2024

Great-grandfather and Great-grandson face off- 14-08-2024- ಮುತ್ತಜ್ಜ-ಮರಿಮಗನ ಮುಖಾಮುಖಿ

 ಮುತ್ತಜ್ಜ-ಮರಿಮಗನ ಮುಖಾಮುಖಿ

ಮುತ್ತಜ್ಜ ವಿ.ಎಸ್.ರಾಮಚಂದ್ರನ್ (95) ಮತ್ತು ಮರಿಮಗ ಕೃಷ್ಣ (ಒಂದೂಮುಕ್ಕಾಲು ವರ್ಷ) ಪರಸ್ಪರ ಮುಖಾಮುಖಿ ಆಗಿ ಖುಷಿಪಟ್ಟರು.  

ಪುಟಾಣಿ ಕೃಷ್ಣ  ತನ್ನ ತಾಯಿ ಶ್ರೀಮತಿ ಸುನಯನ (ರಾಮಚಂದ್ರನ್ ರವರ ಮೊಮ್ಮಗಳು- ಸಾಫ್ಟ್ ವೇರ್ ಇಂಜಿನಿಯರ್),  ತನ್ನ ಅಜ್ಜಿ ಶ್ರೀಮತಿ ರಾಜೇಶ್ವರಿ (ರಾಮಚಂದ್ರನ್ ರವರ ಮಗಳು) ಮತ್ತು ತನ್ನ ತಾತ ಶ್ರೀ ಹೆಚ್.ಕೆ.ವೇಣುಗೋಪಾಲ್ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್) ರವರ ಜೊತೆಯಲ್ಲಿ ದಿನಾಂಕ 14-08-2024 ರಂದು ಸಂಜೆ ನಮ್ಮ ಮನೆಗೆ ಆಗಮಿಸಿದ್ದಾಗ ಈ ಮುಖಾಮುಖಿ ಆಯಿತು. 

ಮರಿಮಗ ಕೃಷ್ಣ ತನ್ನ ಮುತ್ತಜ್ಜನ ಕೆನ್ನೆ ಸವರಿದ. ಗಡ್ಡ ಹಿಡಿದುಕೊಂಡ. ಕೈಕುಲುಕಿದ. ಪಾದಕ್ಕೆ ನಮಸ್ಕರಿಸಿದ. ಇವೆಲ್ಲ ಸಂದರ್ಭಗಳಲ್ಲೂ ಈರ್ವರ ಮೊಗದಲ್ಲೂ ಅನಿರ್ವಚನೀಯ ಸಂತಸ ಭೋರ್ಗರೆಯಿತು. ನಾನು ಮತ್ತು ಆರ್.ವಿಶ್ವನಾಥನ್ ಇದಕ್ಕೆ ಸಾಕ್ಷಿಯಾದೆವು. 

-ಆರ್.ಎಸ್.ಅಯ್ಯರ್, ತುಮಕೂರು, ದಿ. 14-08-2024




















Sunday, 11 August 2024

VSR Sanmana- 2024 August- ಜಿಲ್ಲಾಡಳಿತದಿಂದ ವಿ.ಎಸ್.ರಾಮಚಂದ್ರನ್ ರವರಿಗೆ ಸನ್ಮಾನ

 ಜಿಲ್ಲಾಡಳಿತದಿಂದ ವಿ.ಎಸ್.ರಾಮಚಂದ್ರನ್ ರವರಿಗೆ ಸನ್ಮಾನ 2024 ---------------------------------

ತುಮಕೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷಗಳು) ಅವರನ್ನು 78 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತವು ಇಂದು (ದಿ. 09-08-2024) ಸಂಜೆ ನಮ್ಮ ಮನೆಗೇ ಆಗಮಿಸಿ ಸನ್ಮಾನಿಸಿತು. ತುಮಕೂರು ತಾಲ್ಲೂಕು ಕಚೇರಿಯ ಅಧಿಕಾರಿಗಳು ಆಗಮಿಸಿ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 09-08-2024 #rsiyertumakuru
Tumkur district administration honored our father Shri V.S. Ramachandran (95 Years), a senior freedom fighter of Tumkur, on the occasion of 78th Independence Day celebrations by arriving at our home today (09-08-2024) evening. Officials of Tumkur taluk office came and honored Sri V S Ramachandran. Viswanathan and I were present on this occasion.
-R S Iyer, Tumakuru, Karnataka,




__________________________________________________





--------------------------------------------------
---------------------------------------------------
-------------------------------------------------------------
-------------------------------------------------------------
--------------------------------------------------------------------