* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday, 28 April 2019

ಕಾಳಿಂಗಯ್ಯನ ಪಾಳ್ಯ ಮಠದಲ್ಲಿ... @ Kalingaiahna Palya Mutt 28-04-2019

ಶ್ರೀಗಳ ಆಶೀರ್ವಾದ ಪಡೆದಾಗ...
***************************
ತುಮಕೂರು ನಗರದಿಂದ ಹೊನ್ನುಡಿಕೆಗೆ ತೆರಳುವ ಮಾರ್ಗದಲ್ಲಿ ಕಾಳಿಂಗಯ್ಯನಪಾಳ್ಯ ಎಂಬ ಪುಟ್ಟ ಗ್ರಾಮವಿದೆ. ಇಲ್ಲಿನ ಪ್ರಶಾಂತ ಪರಿಸರದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆಯೇ ಇರುವ ವಿಶಾಲ ಪ್ರದೇಶದಲ್ಲಿ "ಶ್ರೀ ಬಾಲಕೃಷ್ಣಾನಂದ ಮಹಾ ಸಂಸ್ಥಾನಂ " (ತಲಕಾಡು) ಮಠವಿದೆ. ಇದರ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರ 43 ನೇ ವರ್ಧಂತಿ ಇಂದು (ದಿ. 28-04-2019, ಭಾನುವಾರ) ನೆರವೇರಿತು. ಇದರ ಅಂಗವಾಗಿ ಬೆಳಗಿನಿಂದ ಮಧ್ಯಾಹ್ನದವರೆಗೂ ಚಂಡಿಕಾ ಯಾಗ, ರುದ್ರ ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ಸಂಜೆಯ ಪ್ರಶಾಂತ ಸಮಯದಲ್ಲಿ ನಾನು ಮತ್ತು ವಿಶ್ವನಾಥನ್ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ದರ್ಶನ- ಆಶೀರ್ವಾದ ಪಡೆದೆವು. ಶ್ರೀಗಳು ಶಾಲು ಹೊದಿಸಿ ಗೌರವಿಸಿದ್ದು ನಮ್ಮಪಾಲಿನ ಸುಯೋಗವೆನಿಸಿತು. ಆತ್ಮೀಯ ಮಿತ್ರರಾದ ಶ್ರೀ ಹರೀಶ್ ಅಗಡೀಕರ್ ಸಹ ನಮ್ಮೊಡನಿದ್ದಾರೆ..
.. we are @ Sri Balakrishnananda Maha Samsthanam (Talakadu), Honnudike Road, Tumkur Taluk,,, on the eve of 43 rd Vardhanthi Mahothsavam of Peetadhipathi H.H.Sri Govindananda Saraswathi Swamiji, Date 28-04-2019, Sunday.




Wednesday, 24 April 2019

with Auto Nagaraj (R S Iyer Tumkur)

ಇಂತಹ ನಿಷ್ಕಲ್ಮಷ ಪ್ರೀತಿ-ವಿಶ್ವಾಸಗಳಿಂದಲೇ …
*****************************************
ನಮ್ಮೊಂದಿಗಿರುವವರು ಆಟೋ ಚಾಲಕರಾದ ಶ್ರೀ ನಾಗರಾಜ್ ರವರು. ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮ ಕುಟುಂಬಕ್ಕೆ ಪರಿಚಿತರು. ಆ ಕಾಲದಲ್ಲಿ ಇವರು ತಳ್ಳುವ ಗಾಡಿಯ ಮೂಲಕ ತುಮಕೂರಿನ ಚಿಕ್ಕಪೇಟೆಯಲ್ಲಿ ನಮ್ಮ ಮನೆಯ ಬಳಿಯಿದ್ದ ಡಿಪೋ ಬಳಿಗೆ ಸೀಮೆಎಣ್ಣೆ ತಂದು ಮಾರಾಟ ಮಾಡುತ್ತಿದ್ದವರು. ಆ ಕಾಲದಿಂದಲೂ ಇವರು ನಮಗೆ ವಿಶ್ವಾಸಿಗರು. ಕಾಲಾನಂತರದಲ್ಲಿ ಜೀವನೋಪಾಯಕ್ಕಾಗಿ ಆಟೋ ಚಾಲಕ ವೃತ್ತಿ ಹಿಡಿದು ಶ್ರದ್ಧೆಯಿಂದ ಕೆಲಸ ಮಾಡುತ್ತಿರುವವರು.
ಸುಮಾರು 15 ವರ್ಷಗಳ ಹಿಂದೆ ನಾವು ಚಿಕ್ಕಪೇಟೆ ಬಿಟ್ಟು ನೃಪತುಂಗ ಬಡಾವಣೆಗೆ ಸ್ಥಳಾಂತರಗೊಂಡೆವು. ನಮ್ಮ ತಂದೆ-ತಾಯಿ ಬೆಂಗಳೂರಿಗೆ ತೆರಳಿ ತುಮಕೂರಿಗೆ ಹಿಂತಿರುಗಿದಾಗ ಸರ್ಕಾರಿ ಕಾಲೇಜು (ಈಗಿನ ವಿಶ್ವವಿದ್ಯಾನಿಲಯ) ಸ್ಟಾಪ್ ನಲ್ಲಿ ಬಸ್ ನಿಂದ ಇಳಿದು ಆಟೋ ಹಿಡಿದು ಮನೆಗೆ ಬರುತ್ತಿದ್ದರು. ಆ ಸ್ಟಾಪ್ ಬಳಿ ಇರುವ ಆಟೋ ನಿಲ್ದಾಣದಲ್ಲಿ ನಾಗರಾಜ್ ಅವರು ಇದ್ದರೆಂದರೆ ಖುಷಿಯಿಂದ ಓಡೋಡಿ ಬಂದು “ಸ್ವಾಮಿ ಬನ್ನಿ…” ಎಂದು ಕರೆಯುತ್ತ ಲಗೇಜ್ ಪಡೆದುಕೊಂಡು ಆಟೋದಲ್ಲಿಟ್ಟು ಇವರನ್ನು ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆತಂದು ಬಿಟ್ಟು ಹೋಗುತ್ತಿದ್ದರು. ಇಂಥ ಪ್ರಸಂಗಗಳು ಅನೇಕ ಬಾರಿ ನಡೆದಿವೆ.
ತೀರಾ ಇತ್ತೀಚೆಗೂ ನಮ್ಮ ತಂದೆಯವರು ಜಯನಗರ ಸುತ್ತಮುತ್ತ ಸಂಜೆ ವಾಕಿಂಗ್ ಹೋಗುತ್ತಿದ್ದರೆಂದರೆ ಅಕಸ್ಮಾತ್ ಅಲ್ಲೆಲ್ಲಾದರೂ ಈ ನಾಗರಾಜ್ ಬಂದರೆ, ಒಡನೆಯೇ “ಸ್ವಾಮಿ ಬನ್ನಿ..” ಎಂದು ಪ್ರೀತಿಯಿಂದ ಕೂಗಿ ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆತಂದು ಬಿಟ್ಟಿರುವ ಪ್ರಸಂಗಗಳಿಗೂ ಕೊರತೆಯಿಲ್ಲ.
ಸಾಮಾನ್ಯವಾಗಿ ಇವರು ನಮ್ಮ ತುಮಕೂರಿನ ವಿಶ್ವವಿದ್ಯಾನಿಲಯದ ಎದುರಿನ ಆಟೋ ನಿಲ್ದಾಣದಲ್ಲಿ ಇರುತ್ತಾರೆ. ನಾನು ಯಾವಾಗಲಾದರೂ ಆ ದಾರಿಯಲ್ಲಿ ಸಂಚರಿಸುವಾಗ ಈ ನಾಗರಾಜ್ ಸಿಕ್ಕರೆ ಮೊದಲು ಕೇಳುವ ಪ್ರಶ್ನೆಯೇ- “ಸರ್, ಯಜಮಾನರು ಚೆನ್ನಾಗಿದ್ದಾರಾ?’’ ಎಂದು!
ಇಂದು (24-04-2019, ಬುಧವಾರ) ಸಂಜೆಯೂ ಹಾಗೆಯೇ ಆಯಿತು. ನಾನು ನಮ್ಮ ತಂದೆಯವರೊಡನೆ ಬೈಕ್ ನಲ್ಲಿ ಬಿ.ಎಚ್.ರಸ್ತೆಯಲ್ಲಿ ಬರುತ್ತಿದ್ದಾಗ, ವಿಶ್ವವಿದ್ಯಾನಿಲಯದ ಎದುರಿನ ಆಟೋ ನಿಲ್ದಾಣದಲ್ಲಿ ನಾಗರಾಜ್ ನಿಂತಿದ್ದರು. ನಮ್ಮನ್ನು ನೋಡಿದೊಡನೆ ಓಡೋಡಿ ಬಂದರು. ನಮ್ಮ ತಂದೆಯವರಿಗೆ ಕೈಮುಗಿಯುತ್ತ “ಸ್ವಾಮಿ ಚೆನ್ನಾಗಿದ್ದೀರಾ?’’ ಎಂದು ಕುಶಲೋಪರಿ ವಿಚಾರಿಸಿದರು. ಆ ಕಾಲದಲ್ಲಿ ಹಳೆ ಮಾರ್ಕೆಟ್ ವೃತ್ತದಲ್ಲಿದ್ದ “ದಾಸ್ ಕ್ಲಿನಿಕ್” ನಲ್ಲಿ ನಮ್ಮ ತಂದೆಯವರ ಕೈಯಿಂದ ಔಷಧಿ ಸ್ವೀಕರಿಸುತ್ತಿದ್ದುದೂ ಸೇರಿದಂತೆ ಹಳೆಯದೆಲ್ಲವನ್ನೂ ನಾಗರಾಜ್ ಕೃತಜ್ಞತೆಯಿಂದ, ಖುಷಿಯಿಂದ ಮೆಲುಕು ಹಾಕಿದರು. ನಮ್ಮ ತಂದೆ ಎಂದಿನಂತೆ ಅವರಿಗೆ ಚಾಕಲೇಟ್ ಕೊಟ್ಟರು. ಸಾಮಾನ್ಯ ಜನಜೀವನದಲ್ಲಿರುವ ಇಂತಹ ನಿಷ್ಕಲ್ಮಷ ಪ್ರೀತಿ-ವಿಶ್ವಾಸಗಳಿಂದಲೇ ನಮ್ಮ ಸಮಾಜ ಇನ್ನೂ ಸುಸ್ಥಿರವಾಗಿದೆ ಅಲ್ಲವೇ?



Sunday, 7 April 2019

ವಿದುರಾಶ್ವತ್ಥ "ಸ್ವಾತಂತ್ರ್ಯ ಸ್ಮಾರಕ".. "Freedom Memorial" at Vidurashwatha

ವಿದುರಾಶ್ವತ್ಥವು "ದಕ್ಷಿಣದ ಜಲಿಯನ್ ವಾಲಾಬಾಗ್ "ಸಹ ಹೌದು..
*****************************************************
ವಿದುರಾಶ್ವತ್ಥವು ಕೇವಲ ನಾಗವಿಗ್ರಹಗಳಿಗಷ್ಟೇ ಪ್ರಸಿದ್ಧವಲ್ಲ; ಜೊತೆ-ಜೊತೆಗೇ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಿಂದಲೂ ಗಮನ ಸೆಳೆದ ವೀರ ಭೂಮಿ. 1938 ರಲ್ಲಿ ಇಲ್ಲಿ ಸತ್ಯಾಗ್ರಹ ನಡೆಯುತ್ತಿದ್ದಾಗ, ಬ್ರಿಟಿಷ್ ಆಡಳಿತದ ಪೊಲೀಸರು ಏಕಾಏಕಿ ನುಗ್ಗಿ 96 ಸುತ್ತು ಗುಂಡು ಹಾರಿಸಿದ್ದರಿಂದ 32 ಕ್ಕೂ ಅಧಿಕ ಸತ್ಯಾಗ್ರಹಿಗಳು ಹುತಾತ್ಮರಾದರು ಎಂಬುದು ಇಲ್ಲಿನ ಉಜ್ವಲ ಇತಿಹಾಸ. ಹೀಗಾಗಿ ಇದು "ದಕ್ಷಿಣದ ಜಲಿಯನ್ ವಾಲಾಬಾಗ್" ಎಂದೂ ಗುರುತಿಸಲ್ಪಟ್ಟಿದೆ.
ನಮ್ಮ ತಂದೆ -ಸ್ವಾತಂತ್ರ್ಯ ಹೋರಾಟಗಾರರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ದಿ.06-04-2019, ಶನಿವಾರ ಸಂಜೆ ವಿದುರಾಶ್ವತ್ಥಕ್ಕೆ ತೆರಳಿದ್ದಾಗ, ದೇವಾಲಯದ ಪಕ್ಕದಲ್ಲೇ ಇರುವ "ಸ್ವಾತಂತ್ರ್ಯ ಸ್ಮಾರಕ"ಕ್ಕೂ ಭೇಟಿ ಕೊಟ್ಟೆವು. ಆದರೆ ಶನಿವಾರ "ಯುಗಾದಿ" ಹಬ್ಬದ ಕಾರಣಕ್ಕೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಪ್ರವೇಶದ್ವಾರದ ಹೊರಗಿನಿಂದಲೇ ವೀಕ್ಷಿಸುತ್ತ, ಹುತಾತ್ಮರಿಗೆಲ್ಲ ಮನದಲ್ಲೇ ನಮಿಸಿದೆವು. ಸ್ಮಾರಕಕ್ಕೆ ಸಂಬಂಧಿಸಿದಂತೆ ಫಲಕದಲ್ಲಿದ್ದ ವಿವರಣೆಯನ್ನು ಓದುವಾಗ ಕ್ಷಣಕಾಲ ಭಾವುಕರಾದೆವು. ಇಂತಹ ಸ್ಥಳಗಳನ್ನು ಪ್ರತಿಯೊಬ್ಬರೂ ನೋಡಲೇಬೇಕು. (ಪ್ರವೇಶದ ವೇಳೆಯನ್ನು ಬೆಳಗ್ಗೆ 9-30 ರಿಂದ ಸಂಜೆ 4 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಮಕ್ಕಳಿಗೆ 5 ರೂ. ಹಾಗೂ ವಯಸ್ಕರಿಗೆ ತಲಾ 10 ರೂ. ಪ್ರವೇಶ ಶುಲ್ಕ ನಿಗದಿಯಾಗಿದೆ. ಪ್ರತಿ ಮಂಗಳವಾರ ರಜೆ ಇರುತ್ತದೆ.).







ವಿದುರಾಶ್ವತ್ಥದ ದೇಗುಲದಲ್ಲಿ... Vidurashwatha Temple 06-04-2019

ಆಂಧ್ರದ ಲೇಪಾಕ್ಷಿಯಿಂದ ತುಮಕೂರಿಗೆ ಹಿಂತಿರುಗುವಾಗ (06-04-2019) ಮಾರ್ಗಮಧ್ಯೆ ನಾವು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಧಕ್ಕೂ ಭೇಟಿ ಕೊಟ್ಟೆವು. ಪುರಾತನ 'ಅಶ್ವತ್ಥನಾರಾಯಣಸ್ವಾಮಿ' ಯ ದೇವಾಲಯವನ್ನು ಪ್ರದಕ್ಷಿಣೆ ಹಾಕುವಾಗ ಸುತ್ತಲೂ ಕಂಡಿದ್ದು ಭಕ್ತಾದಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಅಸಂಖ್ಯಾತ ನಾಗ ವಿಗ್ರಹಗಳು.





Saturday, 6 April 2019

at Lepakshi ( R S Iyer Tumkur) 06-04-2019 ಲೇಪಾಕ್ಷಿಯಲ್ಲಿ...

ಸರ್ವರಿಗೂ ಯುಗಾದಿಯ ಶುಭಾಶಯಗಳು.
ಶ್ರೀ ವಿಕಾರಿ ಸಂವತ್ಸರದ ಮೊದಲ ದಿನವೂ ಆಗಿರುವ "ಯುಗಾದಿ" ಹಬ್ಬದ ಶುಭ ಸಂದರ್ಭದಲ್ಲಿ ಇಂದು (06-04-2019, ಶನಿವಾರ) ಬೆಳಗ್ಗೆ ಪಕ್ಕದ ಆಂಧ್ರಪ್ರದೇಶದ ಲೇಪಾಕ್ಷಿಯ ಐತಿಹಾಸಿಕ ಹಾಗೂ ಪುರಾತನ ಶ್ರೀ ವೀರಭದ್ರ ಸ್ವಾಮಿ ದೇವಾಲಯಕ್ಕೆ ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಭೇಟಿ ನೀಡಿದ್ದೆವು. ವಿಪರೀತ ಬಿಸಿಲಿನ ಧಗೆಯ ನಡುವೆಯೂ ಈ ದೇವಾಲಯದ ಶಿಲ್ಪಕಲಾ ವೈಭವವು ಮನಕ್ಕೆ ಮುದ ನೀಡಿತು. ಆರೇಳು ವರ್ಷಗಳ ಬಳಿಕ ಇದು ನಮ್ಮ ಎರಡನೆಯ ಭೇಟಿ. ಬೃಹತ್ ನಂದಿ ವಿಗ್ರಹದ ಸಮೀಪ ಮತ್ತೊಂದು ಬದಿಯ ಬೆಟ್ಟದ ಬಂಡೆಯ ಮೇಲೆ ಬೃಹತ್ ಜಟಾಯು ಪಕ್ಷಿಯ ವಿಗ್ರಹವನ್ನು ರೂಪಿಸಿರುವುದನ್ನು ಬಿಟ್ಟರೆ, ಉಳಿದೆಲ್ಲ ಯಥಾಸ್ಥಿತಿಯಲ್ಲೇ ಇದೆ.