* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday, 24 April 2019

with Auto Nagaraj (R S Iyer Tumkur)

ಇಂತಹ ನಿಷ್ಕಲ್ಮಷ ಪ್ರೀತಿ-ವಿಶ್ವಾಸಗಳಿಂದಲೇ …
*****************************************
ನಮ್ಮೊಂದಿಗಿರುವವರು ಆಟೋ ಚಾಲಕರಾದ ಶ್ರೀ ನಾಗರಾಜ್ ರವರು. ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮ ಕುಟುಂಬಕ್ಕೆ ಪರಿಚಿತರು. ಆ ಕಾಲದಲ್ಲಿ ಇವರು ತಳ್ಳುವ ಗಾಡಿಯ ಮೂಲಕ ತುಮಕೂರಿನ ಚಿಕ್ಕಪೇಟೆಯಲ್ಲಿ ನಮ್ಮ ಮನೆಯ ಬಳಿಯಿದ್ದ ಡಿಪೋ ಬಳಿಗೆ ಸೀಮೆಎಣ್ಣೆ ತಂದು ಮಾರಾಟ ಮಾಡುತ್ತಿದ್ದವರು. ಆ ಕಾಲದಿಂದಲೂ ಇವರು ನಮಗೆ ವಿಶ್ವಾಸಿಗರು. ಕಾಲಾನಂತರದಲ್ಲಿ ಜೀವನೋಪಾಯಕ್ಕಾಗಿ ಆಟೋ ಚಾಲಕ ವೃತ್ತಿ ಹಿಡಿದು ಶ್ರದ್ಧೆಯಿಂದ ಕೆಲಸ ಮಾಡುತ್ತಿರುವವರು.
ಸುಮಾರು 15 ವರ್ಷಗಳ ಹಿಂದೆ ನಾವು ಚಿಕ್ಕಪೇಟೆ ಬಿಟ್ಟು ನೃಪತುಂಗ ಬಡಾವಣೆಗೆ ಸ್ಥಳಾಂತರಗೊಂಡೆವು. ನಮ್ಮ ತಂದೆ-ತಾಯಿ ಬೆಂಗಳೂರಿಗೆ ತೆರಳಿ ತುಮಕೂರಿಗೆ ಹಿಂತಿರುಗಿದಾಗ ಸರ್ಕಾರಿ ಕಾಲೇಜು (ಈಗಿನ ವಿಶ್ವವಿದ್ಯಾನಿಲಯ) ಸ್ಟಾಪ್ ನಲ್ಲಿ ಬಸ್ ನಿಂದ ಇಳಿದು ಆಟೋ ಹಿಡಿದು ಮನೆಗೆ ಬರುತ್ತಿದ್ದರು. ಆ ಸ್ಟಾಪ್ ಬಳಿ ಇರುವ ಆಟೋ ನಿಲ್ದಾಣದಲ್ಲಿ ನಾಗರಾಜ್ ಅವರು ಇದ್ದರೆಂದರೆ ಖುಷಿಯಿಂದ ಓಡೋಡಿ ಬಂದು “ಸ್ವಾಮಿ ಬನ್ನಿ…” ಎಂದು ಕರೆಯುತ್ತ ಲಗೇಜ್ ಪಡೆದುಕೊಂಡು ಆಟೋದಲ್ಲಿಟ್ಟು ಇವರನ್ನು ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆತಂದು ಬಿಟ್ಟು ಹೋಗುತ್ತಿದ್ದರು. ಇಂಥ ಪ್ರಸಂಗಗಳು ಅನೇಕ ಬಾರಿ ನಡೆದಿವೆ.
ತೀರಾ ಇತ್ತೀಚೆಗೂ ನಮ್ಮ ತಂದೆಯವರು ಜಯನಗರ ಸುತ್ತಮುತ್ತ ಸಂಜೆ ವಾಕಿಂಗ್ ಹೋಗುತ್ತಿದ್ದರೆಂದರೆ ಅಕಸ್ಮಾತ್ ಅಲ್ಲೆಲ್ಲಾದರೂ ಈ ನಾಗರಾಜ್ ಬಂದರೆ, ಒಡನೆಯೇ “ಸ್ವಾಮಿ ಬನ್ನಿ..” ಎಂದು ಪ್ರೀತಿಯಿಂದ ಕೂಗಿ ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆತಂದು ಬಿಟ್ಟಿರುವ ಪ್ರಸಂಗಗಳಿಗೂ ಕೊರತೆಯಿಲ್ಲ.
ಸಾಮಾನ್ಯವಾಗಿ ಇವರು ನಮ್ಮ ತುಮಕೂರಿನ ವಿಶ್ವವಿದ್ಯಾನಿಲಯದ ಎದುರಿನ ಆಟೋ ನಿಲ್ದಾಣದಲ್ಲಿ ಇರುತ್ತಾರೆ. ನಾನು ಯಾವಾಗಲಾದರೂ ಆ ದಾರಿಯಲ್ಲಿ ಸಂಚರಿಸುವಾಗ ಈ ನಾಗರಾಜ್ ಸಿಕ್ಕರೆ ಮೊದಲು ಕೇಳುವ ಪ್ರಶ್ನೆಯೇ- “ಸರ್, ಯಜಮಾನರು ಚೆನ್ನಾಗಿದ್ದಾರಾ?’’ ಎಂದು!
ಇಂದು (24-04-2019, ಬುಧವಾರ) ಸಂಜೆಯೂ ಹಾಗೆಯೇ ಆಯಿತು. ನಾನು ನಮ್ಮ ತಂದೆಯವರೊಡನೆ ಬೈಕ್ ನಲ್ಲಿ ಬಿ.ಎಚ್.ರಸ್ತೆಯಲ್ಲಿ ಬರುತ್ತಿದ್ದಾಗ, ವಿಶ್ವವಿದ್ಯಾನಿಲಯದ ಎದುರಿನ ಆಟೋ ನಿಲ್ದಾಣದಲ್ಲಿ ನಾಗರಾಜ್ ನಿಂತಿದ್ದರು. ನಮ್ಮನ್ನು ನೋಡಿದೊಡನೆ ಓಡೋಡಿ ಬಂದರು. ನಮ್ಮ ತಂದೆಯವರಿಗೆ ಕೈಮುಗಿಯುತ್ತ “ಸ್ವಾಮಿ ಚೆನ್ನಾಗಿದ್ದೀರಾ?’’ ಎಂದು ಕುಶಲೋಪರಿ ವಿಚಾರಿಸಿದರು. ಆ ಕಾಲದಲ್ಲಿ ಹಳೆ ಮಾರ್ಕೆಟ್ ವೃತ್ತದಲ್ಲಿದ್ದ “ದಾಸ್ ಕ್ಲಿನಿಕ್” ನಲ್ಲಿ ನಮ್ಮ ತಂದೆಯವರ ಕೈಯಿಂದ ಔಷಧಿ ಸ್ವೀಕರಿಸುತ್ತಿದ್ದುದೂ ಸೇರಿದಂತೆ ಹಳೆಯದೆಲ್ಲವನ್ನೂ ನಾಗರಾಜ್ ಕೃತಜ್ಞತೆಯಿಂದ, ಖುಷಿಯಿಂದ ಮೆಲುಕು ಹಾಕಿದರು. ನಮ್ಮ ತಂದೆ ಎಂದಿನಂತೆ ಅವರಿಗೆ ಚಾಕಲೇಟ್ ಕೊಟ್ಟರು. ಸಾಮಾನ್ಯ ಜನಜೀವನದಲ್ಲಿರುವ ಇಂತಹ ನಿಷ್ಕಲ್ಮಷ ಪ್ರೀತಿ-ವಿಶ್ವಾಸಗಳಿಂದಲೇ ನಮ್ಮ ಸಮಾಜ ಇನ್ನೂ ಸುಸ್ಥಿರವಾಗಿದೆ ಅಲ್ಲವೇ?



No comments:

Post a Comment