* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday, 29 April 2024

VSR in Auto- 29-04-2024 ಆಟೋದಲ್ಲಿ ವಿ.ಎಸ್.ಆರ್. ಪ್ರಯಾಣ

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷ) ಅವರ ಕೋರಿಕೆ ಮೇರೆಗೆ ಇಂದು (ದಿ. 29-04-2024) ಮುಸ್ಸಂಜೆ ಮಿತ್ರರಾದ ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಅವರ ಆಟೋದಲ್ಲಿ "ನಗರ ಸಂಚಾರ" ಮಾಡಿಸಲಾಯಿತು. ಕಳೆದ ಎರಡೂವರೆ ವರ್ಷಗಳಿಂದ ಅವರಿಗೆ ಹೊರಗಡೆ ಹೋಗಲಾಗಿಲ್ಲ. ಅಲ್ಲದೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಗುಣಮುಖರಾಗಿದ್ದಾರೆ. ಹೀಗಾಗಿ ಮನೆಯೊಳಗೇ ಇದ್ದ ಅವರನ್ನು ಬದಲಾವಣೆಯಿರಲೆಂದು ಇಂದು ನಾನು ಮತ್ತು ವಿಶ್ವನಾಥನ್ ಜೊತೆಯಾಗಿ ಕರೆದೊಯ್ದೆವು.

ರಾಮಚಂದ್ರನ್ ಅವರು ಚಿಕ್ಕಪೇಟೆಯ ಪಂಚಾಂಗಂ ಬೀದಿಯ ಶ್ರೀ ಶ್ರೀನಿವಾಸ ದೇವಾಲಯದ ಮುಂದೆ ಆಟೋದಿಂದಲೇ ದೇವರ ದರ್ಶನವನ್ನು ಪಡೆದುಕೊಂಡರು. ಅಲ್ಲೇ ಮಾಜಿ ನಗರಸಭಾ ಸದಸ್ಯರಾದ ಶ್ರೀ ಹೆಚ್.ಕೆ.ನಾಗರಾಜ್ ರವರು, ದೇವಾಲಯದ ಅರ್ಚಕರಾದ ಶ್ರೀ ಕೃಷ್ಣಮೂರ್ತಿ (ಕಿಟ್ಟಣ್ಣ) ಭೇಟಿಯಾದರು. ಆಚಾರ್ಯರ ಬೀದಿಯ ಶ್ರೀ ವ್ಯಾಸರಾಜ ಮಠದ ಮುಂದೆ ಶ್ರೀ ಶಾಮಸುಂದರ್ ಸಿಕ್ಕಿದರು. ಅಗ್ರಹಾರದಲ್ಲಿ ನಮ್ಮ ತಂದೆಯ ಹಳೆಯ ಯುವ ಮಿತ್ರ ಶ್ರೀ ನಟರಾಜ್ (ಬೆಲ್ಲದ ವ್ಯಾಪಾರಿ) ಸಿಕ್ಕಿ ಅಲ್ಲಿನ ತಮ್ಮ ಅಂಗಡಿಯಿಂದ ನಾಲ್ಕೈದು ಬಿಸ್ಕೆಟ್ ಪ್ಯಾಕೇಟ್ ಗಳನ್ನು ಕೊಟ್ಟು ಸಂತೋಷಪಟ್ಟರು. ಬಸವೇಶ್ವರ ರಸ್ತೆಯಲ್ಲಿ ಬರುವಾಗ ಅಕ್ಷರ ಮುದ್ರಣದ ಶ್ರೀ ಗೌ.ತಿ. ರಂಗನಾಥ್ ಭೇಟಿಯಾದರು. ಆ ನಂತರ ಬಿ.ಹೆಚ್.ರಸ್ತೆ, ಸೋಮೇಶ್ವರ ಪುರಂ ಮೂಲಕ ಮನೆಗೆ ವಾಪಸ್ಸಾದೆವು. ನಮ್ಮ ತಂದೆಯವರಿಗೆ ಈ ಸಂಚಾರ ಹಾಗೂ ಹಳೆಯ ಪರಿಚಿತರ ಭೇಟಿಯಾದುದು ಅಪಾರ ಸಂತಸ ಮೂಡಿಸಿತು. ಅದೇ ರೀತಿ ಆ ಮಿತ್ರರಿಗೂ ಅನೇಕ ವರ್ಷಗಳ ಬಳಿಕ ಇವರನ್ನು ನೋಡಿ ಅಷ್ಟೇ ಆನಂದವಾಯಿತು.
ಮಿತ್ರರಾದ ಶ್ರೀ "ಆಟೋ ಯಡಿಯೂರಪ್ಪ"ನವರು ನಮ್ಮನ್ನು ಮನೆಗೆ ಬಿಟ್ಟು ಬಳಿಕ ತಮ್ಮ ಮನೆಗೆ ನಿರ್ಗಮಿಸಿದರು. ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 29-04-2024









Sunday, 28 April 2024

Shettyhalli Rathothsava 2024 ಶೆಟ್ಟಿಹಳ್ಳಿ ರಥೋತ್ಸವ-ತುಮಕೂರು

 


"ನಮ್ಮ ತುಮಕೂರು" ನಗರದ ಹೆಮ್ಮೆಗಳಲ್ಲೊಂದು ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ರಥೋತ್ಸವ. ಇಂದು (ದಿ.23-04-2024, ಮಂಗಳವಾರ) ಮಧ್ಯಾಹ್ನ ತುಮಕೂರು ಹಾಗೂ ಹೊರಗಿನ ಸಹಸ್ರಾರು ಭಕ್ತಾದಿಗಳ ಸಮ್ಮುಖ ಬ್ರಹ್ಮರಥೋತ್ಸವ ಸಂಭ್ರಮೋತ್ಸಾಹದಿಂದ ನೆರವೇರಿತು. ಸುಡುಬಿಸಿಲನ್ನೂ ಲೆಕ್ಕಿಸದೆ ಆಬಾಲವೃದ್ಧರಾದಿಯಾಗಿ ಪುರುಷರು-ಮಹಿಳೆಯರು ಶ್ರದ್ಧೆ-ಭಕ್ತಿಯಿಂದ ಸೇರಿದ್ದರು. ದೇವಾಲಯದಲ್ಲಷ್ಟೇ ಅಲ್ಲದೆ, ಶೆಟ್ಟಿಹಳ್ಳಿ ಊರೊಳಗೆ ಪ್ರತ್ಯೇಕ ಊಟದ ವ್ಯವಸ್ಥೆ ಇತ್ತು. ಇದಲ್ಲದೆ ಶೆಟ್ಟಿಹಳ್ಳಿಗೆ ಬರುವ ಮುಖ್ಯರಸ್ತೆಯಲ್ಲೆಲ್ಲ ಅನೇಕ ಭಕ್ತರು/ ಅಂಗಡಿಗಳವರು ಶಾಮಿಯಾನ ಹಾಕಿಸಿ, ಸ್ವಪ್ರೇರಣೆಯಿಂದ ಎಂದಿನಂತೆ ದಾಸೋಹ ವ್ಯವಸ್ಥೆ ಮಾಡಿದ್ದರು. ಪಲಾವ್, ಟೊಮೊಟೊ ಬಾತ್, ಮೊಸರನ್ನ, ರಸಾಯನ, ಕೋಸಂಬರಿ, ಮಜ್ಜಿಗೆ, ನೀರಿನ ಬಾಟಲ್ -ಹೀಗೆ ಬಗೆಬಗೆಯ ಆಹಾರವನ್ನು/ ಪಾನೀಯವನ್ನು ಪ್ರಸಾದದ ರೂಪದಲ್ಲಿ ದಾರಿಹೋಕರಿಗೆಲ್ಲ ಕೈತುಂಬ ವಿತರಿಸಿ, ಸಂತೋಷಪಟ್ಟರು. ವೈವಿಧ್ಯಮಯವಾದ ಅಂಗಡಿಗಳ ಸಾಲು ಇಲ್ಲಿಗೊಂದು ಜಾತ್ರೆಯ ಸ್ವರೂಪವನ್ನೇ ನೀಡಿತ್ತು. ಪ್ರತಿ ವರ್ಷದಂತೆ ನಾನು ಮತ್ತು ವಿಶ್ವನಾಥನ್ ತೆರಳಿದ್ದೆವು. ಈ ವರ್ಷ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ರವರು ಬೆಂಗಳೂರಿನಿಂದ ಜಾತ್ರೆ ನೋಡಲೆಂದು ಆಗಮಿಸಿದ್ದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 23-04-2024

ತುಮಕೂರಿನ ಶೆಟ್ಟಿಹಳ್ಳಿ ಶ್ರೀ ಆಂಜನೆಯ ಸ್ವಾಮಿ ರಥೋತ್ಸವ ಇಂದು (23-04-2024) ಮಧ್ಯಾಹ್ನ ನಡೆದಿತ್ತಾದರೂ, ಮುಸ್ಸಂಜೆ ದೇವಾಲಯದ ಸುತ್ತಲಿನ ವಾತಾವರಣ ರಂಗೇರಿತ್ತು. ಮಧ್ಯಾಹ್ನಕ್ಕಿಂತ ಜನಜಂಗುಳಿ ದುಪ್ಪಟ್ಟಾಗಿತ್ತು. ನಾನು ಮತ್ತು ವಿಶ್ವನಾಥನ್ ಹೋದಾಗ ದೇಗುಲದ ಮುಂದೆ ರಥ ನಿಂತಿತ್ತು. ಭಕ್ತರು ರಥದಲ್ಲಿದ್ದ ದೇವರಿಗೆ ಪೂಜಾದಿಗಳನ್ನು ಮಾಡಿಸುತ್ತಿದ್ದರು. ಅದೇ ಹೊತ್ತಿಗೆ ಹರಕೆ ಹೊತ್ತಿದ್ದ ಭಕ್ತರು ರಥದ ಸುತ್ತ "ಉರುಳುಸೇವೆ" ಮಾಡುತ್ತಿದ್ದರು. ಪುರುಷರು - ಸ್ತ್ರೀಯರು - ಮಕ್ಕಳು - ಯುವಕರು ಅತ್ಯುತ್ಸಾಹದಿಂದ, ಭಕ್ತಿಯಿಂದ "ಉರುಳುಸೇವೆ"ಯಲ್ಲಿ ತಲ್ಲೀನರಾಗಿದ್ದರು. ಇದು ಆ ಭಕ್ತರಿಗೆ ಸೇರಿದ ವಿಷಯ. ಆ ದೃಶ್ಯವಿದು.
ಆದರೆ, ಇದನ್ನು ಕಂಡಾಗ - 1) ದೇವಾಲಯ ಸಮಿತಿಯವರು / ಮುಜರಾಯಿ ಅಧಿಕಾರಿಗಳು "ಉರುಳು ಸೇವೆ" ಮಾಡುವ ಸ್ಥಳವನ್ನು ಭಕ್ತರ ಹಿತದೃಷ್ಟಿಯಿಂದ ಶುಚಿಯಾಗಿಡಬೇಕಿತ್ತು. 2) "ಉರುಳು ಸೇವೆ" ಮಾಡುವವರಿಗೆ ಇತರರಿಂದ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳಬೇಕು. 3) ಇತರೆ ಭಕ್ತರು ರಥದ ಮೇಲೆ ಉತ್ಸಾಹದಿಂದ ರಭಸವಾಗಿ ಎಸೆಯುತ್ತಿದ್ದ ಬಾಳೆಹಣ್ಣುಗಳು "ಉರುಳು ಸೇವೆ" ಮಾಡುತ್ತಿದ್ದ ಭಕ್ತರ ಮೈಮೇಲೂ ಅಷ್ಟೇ ರಭಸದಿಂದ ಬೀಳುತ್ತಾ, ಕಿರಿಕಿರಿಗೆ ಕಾರಣವಾಗುತ್ತಿತ್ತು. ಇದನ್ನು ತಪ್ಪಿಸಬೇಕು. 4) "ಉರುಳು ಸೇವೆ" ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು. -ಎಂದು ನಮಗನಿಸಿತು.
- ಆರ್. ಎಸ್.ಅಯ್ಯರ್, ತುಮಕೂರು, ದಿ. 23-04-2024


ಬದುಕು....
ಮೊನ್ನೆ "ನಮ್ಮ ತುಮಕೂರು" ನಗರದ ಶೆಟ್ಟಿಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ/ ಜಾತ್ರೆ ಇತ್ತು. ಮುಸ್ಸಂಜೆ ನಾನು ಮತ್ತು ವಿಶ್ವನಾಥನ್ ಎರಡನೇ ಸುತ್ತಿನ ಭೇಟಿ ಕೊಡುವಾಗ ಆ ಜನಜಾತ್ರೆಯಲ್ಲಿ ಹಠಾತ್ತನೆ ಈ ದೃಶ್ಯ ನಮ್ಮನ್ನು ತಡೆದು ನಿಲ್ಲಿಸಿತು.
ನಮ್ಮ ಬಲಬದಿ ಸಣ್ಣದೊಂದು ತಗಡಿನ ಸ್ಟ್ಯಾಂಡ್ ನಲ್ಲಿ ಪುಟ್ಟ ಮಗುವೊಂದು ಗಾಢ ನಿದ್ರೆಯಲ್ಲಿತ್ತು. ಪಕ್ಕದಲ್ಲಿ ಆ ಮಗುವಿನ ತಾಯಿ ಅದಾವುದೋ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಇನ್ನೊಂದು ಪಕ್ಕದಲ್ಲಿ ದಾರಿಹೋಕರೊಬ್ಬರು "ಇದೇನು ಪುಟ್ಟ ಬೊಂಬೆಯೋ? ಅಥವಾ ನಿಜವಾದ ಮಗುವೋ?" ಎಂಬ ಕೌತುಕದಿಂದ ಬಗ್ಗಿ ನೋಡಿ ಮುಂದಕ್ಕೆ ಹೆಜ್ಜೆಹಾಕುತ್ತಿದ್ದರು. ಆ ಜನಜಂಗುಳಿಯಲ್ಲಿ ಎಲ್ಲೋ ಕೆಲವರು ಕೌತುಕದಿಂದ ನೋಡಿ "ಅಯ್ಯೋ ನೋಡಿ. ಪುಟಾಣಿ ಮಗು" ಎಂದು ಕರುಣಾಭಾವದಿಂದ ಪಿಸುಮಾತಿನಲ್ಲಿ ಹೇಳಿಕೊಳ್ಳುತ್ತಾ ಸಾಗುತ್ತಿದ್ದರು. ಮತ್ತೆ ಕೆಲವರು ಇದರತ್ತ ಗಮನವೇ ಇಲ್ಲದಂತೆ ಅಥವಾ ನೋಡಿದರೂ ಯಾವುದೇ ಭಾವನೆಗಳಿಲ್ಲದಂತೆ ಮುನ್ನಡೆಯುತ್ತಿದ್ದರು. ಆದರೆ ಆ ಮಗು ಅಷ್ಟೆಲ್ಲ ಗೌಜು-ಗದ್ದಲದ ಮಧ್ಯೆ ಆ ತಗಡಿನ ಮೇಲೆ ತನ್ನ ಪಾಡಿಗೆ "ಸುಖ ನಿದ್ದೆ" ಮಾಡುತ್ತಿತ್ತು! ಆ ಮಗುವಿನ ತಾಯಿ ತನ್ನಪಾಡಿಗೆ ತಾನು ತನ್ನ ಬದುಕಿನ ಬುತ್ತಿಗಾಗಿ ವ್ಯಾಪಾರದಲ್ಲಿ ತಲ್ಲೀನರಾಗಿದ್ದರು!!
ಬದುಕು ದೊಡ್ಡದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 25-04-2024









Saturday, 20 April 2024

Pavagada Prakash Rao and Mallepuram G Venkatesh ಪಾವಗಡ ಪ್ರಕಾಶರಾವ್ ಮತ್ತು ಮಲ್ಲೇಪುರಂ ಜಿ.ವೆಂಕಟೇಶ್ ರವರೊಡನೆ

 ನಾಡಿನ ಇಬ್ಬರು ಹಿರಿಯ ಹಾಗೂ ಖ್ಯಾತ ವಿದ್ವಾಂಸರನ್ನು "ನಮ್ಮ ತುಮಕೂರು" ನಗರದಲ್ಲೇ ಭೇಟಿ ಮಾಡುವ ಸುಯೋಗ ಇಂದು (ದಿ.20-04-2024) ನನಗೆ ಮತ್ತು ವಿಶ್ವನಾಥನ್ ಗೆ ಲಭ್ಯವಾಯಿತು. "ನಡೆದಾಡುವ ವಿಶ್ವಕೋಶ"ವೆಂದೇ ಖ್ಯಾತರಾಗಿರುವ ವಾಗ್ಮಿ ಡಾ. ಪಾವಗಡ ಪ್ರಕಾಶರಾವ್ ರವರು ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ, ಚಿಂತಕರೂ ಆದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರನ್ನು ಮಾತನಾಡಿಸುವ ಸದವಕಾಶ ಒದಗಿತು. ನಾವು ನಮ್ಮ ಸರಸ್ ಸಂಸ್ಥೆ ವತಿಯಿಂದ ತುಮಕೂರಿನಲ್ಲಿ ನಡೆಸುವ "ಡಿವಿಜಿ ನೆನಪು" ಉಪನ್ಯಾಸ ಕಾರ್ಯಕ್ರಮ ಕುರಿತು ಈರ್ವರೂ ವಿದ್ವಾಂಸರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ತುಮಕೂರಿನ ಸಿದ್ಧಾರ್ಥ ಇನ್ಸ್ ಟಿಟ್ಯೂಟ್ ಆಫ್ ಬಿಜಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಅಧ್ಯಾಪಕರೂ, ನಮ್ಮ ಆತ್ಮೀಯರೂ ಆದ ಡಾ. ಪಿ.ಆರ್. ರೇಣುಕಾಪ್ರಸಾದ್ ರವರ ಪುತ್ರನ ಬ್ರಹ್ಮೋಪದೇಶ ಕಾರ್ಯಕ್ರಮ ನಾಳೆ- ದಿ. 21-04-2024 ರಂದು- ತುಮಕೂರಿನ ಜಯನಗರದ ಶ್ರೀ ವೆಂಕಟೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಏರ್ಪಟ್ಟಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಇದೇ ಸ್ಥಳದಲ್ಲಿ ಶ್ರೀ ರೇಣುಕಾಪ್ರಸಾದ್ ರವರು ಬರೆದಿರುವ "ನನ್ನೂರು" (ಪಾವಗಡ ತಾಲ್ಲೂಕು ನಲಿಗಾನಹಳ್ಳಿಯ ಸಾಂಸ್ಕೃತಿಕ ಚಿತ್ರ) ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ರೇಣುಕಾಪ್ರಸಾದ್ ರವರು ಆಯೋಜಿಸಿದ್ದರು. ಈ ಸಮಾರಂಭದಕ್ಕೆ ಈ ಇಬ್ಬರು ವಿದ್ವಾಂಸರೂ ಅತಿಥಿಗಳಾಗಿ ಆಗಮಿಸಿದ್ದರು. ರೇಣುಕಾಪ್ರಸಾದ್ ರವರು ನಮಗೂ ನೀಡಿದ್ದ ಆಮಂತ್ರಣದ ಹಿನ್ನೆಲೆ ನಾವು ಈ ಸಂಜೆ ಅಲ್ಲಿಗೆ ಹೋಗಿದ್ದಾಗ ಈ ಮಹನೀಯರ ಭೇಟಿ ಆಯಿತು. ಅಪಾರ ಸಂತಸ ಮೂಡಿಸಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-04-2024

ಖ್ಯಾತ ಚಿಂತಕರಾದ ಡಾ. ಪಾವಗಡ ಪ್ರಕಾಶರಾವ್ ರವರು ಮತ್ತು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ರವರೊಂದಿಗೆ. (ಕೊನೆಯಲ್ಲಿ ಡಾ.ಪಾವಗಡ ರೇಣುಕಾಪ್ರಸಾದ್ ರವರೂ ಇದ್ದಾರೆ)


ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ರವರೊಂದಿಗೆ.

Tuesday, 16 April 2024

Roopa- Naganna Visit 2024 ಶ್ರೀಮತಿ ರೂಪಾ ಮತ್ತು ಶ್ರೀ ನಾಗಣ್ಣ ಅವರ ಭೇಟಿ

ಮೂಲತಃ ಕೊಳ್ಳೆಗಾಲದವರಾಗಿದ್ದು, ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಹಾಗೂ ನಮ್ಮ ಬಂಧುಗಳೂ ಆದ ಶ್ರೀ ನಾಗರಾಜು (ನಾಗಣ್ಣ) ಮತ್ತು ಶ್ರೀಮತಿ ರೂಪಾ ನಾಗರಾಜ್ ದಂಪತಿ ತಮ್ಮ ಪುತ್ರ ಶರತ್ ಮತ್ತು ಸೊಸೆ ಶ್ರೀಮತಿ ಸುಷ್ಮ ಅವರೊಡನೆ ಇಂದು (ದಿ.15-04-2024) ಮಧ್ಯಾಹ್ನ ನಮ್ಮ ಮನೆಗೆ ಆಗಮಿಸಿದ್ದರು.

ತಮ್ಮ ಸೊಸೆಯ ಬಂಧುವೊಬ್ಬರ ಕುಟುಂಬದ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಬ್ಬಿ ಬಳಿಯ ಲಕ್ಕೇನಹಳ್ಳಿಗೆ ಅವರು ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಹಿಂತಿರುಗುವಾಗ ಮಾರ್ಗ ಮಧ್ಯೆ ತುಮಕೂರಿನಲ್ಲಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷ) ರವರನ್ನು ಕಂಡು, ಮಾತನಾಡಿ, ಆಶೀರ್ವಾದ ಪಡೆದುಕೊಳ್ಳುವ ಆಶಯದಿಂದ ಆಗಮಿಸಿದ್ದರು. ಆ ಆಶಯ ಈಡೇರಿದ ಸಂತಸ ಅವರಲ್ಲಿತ್ತು. ಇವರ ಮಗ ಮತ್ತು ಸೊಸೆ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೀರ್ಘ ಕಾಲದ ಬಳಿಕ ಪರಸ್ಪರ ಭೇಟಿಯಾದುದು ಎಲ್ಲರಲ್ಲೂ ಅಪಾರ ಸಂತಸ ಮೂಡಿಸಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 15-04-2024







V S R Voting -2024 Loksabha Election ವಿ.ಎಸ್.ಆರ್. ಮತದಾನ

ಸ್ವಾತಂತ್ರ್ಯಯೋಧ ವಿ.ಎಸ್.ರಾಮಚಂದ್ರನ್

ಅವರಿಂದ ಮನೆಯಿಂದಲೇ ಮತದಾನ
-----------------
ನಮ್ಮ ತಂದೆ, ತುಮಕೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (95 ವರ್ಷ) ರವರು ಇಂದು ( ದಿನಾಂಕ 15-04-2024 ರಂದು ಸೋಮವಾರ) ಮಧ್ಯಾಹ್ನ ತುಮಕೂರು ನಗರದ ಜಯನಗರದ ತಮ್ಮ ನಿವಾಸದಲ್ಲೇ 2024 ರ ಲೋಕಸಭಾ ಚುನಾವಣೆಯ ಮತದಾನ ಮಾಡಿದರು. ಇವರ ಅಧಿಕೃತ ಕೋರಿಕೆಯಂತೆ ಆರ್.ವಿಶ್ವನಾಥನ್ ಜೊತೆಯಲ್ಲಿದ್ದು ಸಹಕಾರ ನೀಡಿದರು.
ಚುನಾವಣಾ ಆಯೋಗವು 85 ವರ್ಷ ದಾಟಿರುವ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯ ಕಲ್ಪಿಸಿದೆ. ಅದರಂತೆ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪೊಲೀಸ್ ಭದ್ರತೆಯಲ್ಲಿ ಅಗತ್ಯ ಪರಿಕರಗಳೊಂದಿಗೆ ಇಂದು ಮಧ್ಯಾಹ್ನ ನಮ್ಮ ಮನೆಗೇ ಆಗಮಿಸಿದ್ದರು. ನಿಯಮಾನುಸಾರ ಎಲ್ಲ ಪ್ರಕ್ರಿಯೆಗಳನ್ನು ನಡೆಸಿ ಬ್ಯಾಲೆಟ್ ಪೇಪರ್ ನೀಡಿದರು. ರಹಸ್ಯ ಮತದಾನಕ್ಕೆ ವ್ಯವಸ್ಥೆ ಮಾಡಿದರು. ಎಡಗೈ ಬೆರಳಿಗೆ ಮಸಿ ಹಾಕಿದರು. ಮತದಾನದ ಬಳಿಕ ಮಡಿಚಿದ್ದ ಬ್ಯಾಲೆಟ್ ಪೇಪರ್ ಅನ್ನು ಕವರ್ ಒಂದರಲ್ಲಿ ಇರಿಸಿ, ಸೀಲ್ ಮಾಡಿದರು. ಬಳಿಕ ಅದನ್ನು ರಾಮಚಂದ್ರನ್ ಅವರ ಮೂಲಕ ಮತಪೆಟ್ಟಿಗೆಗೆ ಹಾಕಿಸಲಾಯಿತು. ಇವಿಷ್ಟೂ ಪ್ರಕ್ರಿಯೆಗಳನ್ನು ವಿಡಿಯೋ ಮಾಡಿಕೊಳ್ಳಲಾಯಿತು. ಸುಮಾರು 15 ನಿಮಿಷಗಳಲ್ಲಿ ಇಷ್ಟು ಪ್ರಕ್ರಿಯೆಗಳನ್ನು ಮುಗಿಸಿ ಅಧಿಕಾರಿಗಳು ನಿರ್ಗಮಿಸಿದರು. ಒಟ್ಟಾರೆ ಅಷ್ಟೂ ಹೊತ್ತು ನಮ್ಮ ಮನೆಯೇ ಒಂದು ರೀತಿ ಮತಗಟ್ಟೆಯಂತಾಗಿಬಿಟ್ಟಿತ್ತು!
ಇಂತಹ ಸೌಲಭ್ಯ ಒದಗಿಸಿರುವ ಚುನಾವಣಾ ಆಯೋಗಕ್ಕೆ, ಇದನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿರುವ ಸ್ಥಳೀಯ ಅಧಿಕಾರಿ-ನೌಕರರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 15-04-2024
---------------------------------------------------
Freedom fighter VS Ramachandran
Voting from home
-----------------
Our father, V.S. Ramachandran (95 years old), a veteran freedom fighter of Tumkur, cast his vote for the 2024 Lok Sabha elections today (Monday 15-04-2024) afternoon at his residence at Jayanagar, Tumkur city. As per his official request, R. Viswanathan accompanied and cooperated.
The Election Commission has provided special facilities to senior citizens above 85 years of age and persons with disabilities to vote from home. Accordingly, the election officers and staff arrived at our house this afternoon with necessary equipment under police security. Officers conducted all the procedures as per the rules and gave the ballot paper. Arranged for secret ballot. Put soot on the left finger. After voting, the folded ballot paper was placed in a cover and sealed. Later it was put in the ballot box by Ramachandran. All these proceedings were videotaped. After completing all these procedures in about 15 minutes, the officers left. All that time our house had become like a polling booth!
Our heartfelt thanks to the Election Commission for providing such a facility, and to the local officers and employees who are doing it neatly.
-R S Iyer, Tumkur, The. 15-04-2024




------------------------------------------------------------------------------------------


----------------------------------------------------------------


----------------------------------------------------------------------------------

ನಮ್ಮ ಹಕ್ಕು ಚಲಾಯಿಸಿದ ಸಂಭ್ರಮದ ಕ್ಷಣ....






Ugadi Greetings V S R 2024 - ಯುಗಾದಿ ಶುಭಾಶಯ- 2024