"ನಮ್ಮ ತುಮಕೂರು" ನಗರದ ಹೆಮ್ಮೆಗಳಲ್ಲೊಂದು ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ರಥೋತ್ಸವ. ಇಂದು (ದಿ.23-04-2024, ಮಂಗಳವಾರ) ಮಧ್ಯಾಹ್ನ ತುಮಕೂರು ಹಾಗೂ ಹೊರಗಿನ ಸಹಸ್ರಾರು ಭಕ್ತಾದಿಗಳ ಸಮ್ಮುಖ ಬ್ರಹ್ಮರಥೋತ್ಸವ ಸಂಭ್ರಮೋತ್ಸಾಹದಿಂದ ನೆರವೇರಿತು. ಸುಡುಬಿಸಿಲನ್ನೂ ಲೆಕ್ಕಿಸದೆ ಆಬಾಲವೃದ್ಧರಾದಿಯಾಗಿ ಪುರುಷರು-ಮಹಿಳೆಯರು ಶ್ರದ್ಧೆ-ಭಕ್ತಿಯಿಂದ ಸೇರಿದ್ದರು. ದೇವಾಲಯದಲ್ಲಷ್ಟೇ ಅಲ್ಲದೆ, ಶೆಟ್ಟಿಹಳ್ಳಿ ಊರೊಳಗೆ ಪ್ರತ್ಯೇಕ ಊಟದ ವ್ಯವಸ್ಥೆ ಇತ್ತು. ಇದಲ್ಲದೆ ಶೆಟ್ಟಿಹಳ್ಳಿಗೆ ಬರುವ ಮುಖ್ಯರಸ್ತೆಯಲ್ಲೆಲ್ಲ ಅನೇಕ ಭಕ್ತರು/ ಅಂಗಡಿಗಳವರು ಶಾಮಿಯಾನ ಹಾಕಿಸಿ, ಸ್ವಪ್ರೇರಣೆಯಿಂದ ಎಂದಿನಂತೆ ದಾಸೋಹ ವ್ಯವಸ್ಥೆ ಮಾಡಿದ್ದರು. ಪಲಾವ್, ಟೊಮೊಟೊ ಬಾತ್, ಮೊಸರನ್ನ, ರಸಾಯನ, ಕೋಸಂಬರಿ, ಮಜ್ಜಿಗೆ, ನೀರಿನ ಬಾಟಲ್ -ಹೀಗೆ ಬಗೆಬಗೆಯ ಆಹಾರವನ್ನು/ ಪಾನೀಯವನ್ನು ಪ್ರಸಾದದ ರೂಪದಲ್ಲಿ ದಾರಿಹೋಕರಿಗೆಲ್ಲ ಕೈತುಂಬ ವಿತರಿಸಿ, ಸಂತೋಷಪಟ್ಟರು. ವೈವಿಧ್ಯಮಯವಾದ ಅಂಗಡಿಗಳ ಸಾಲು ಇಲ್ಲಿಗೊಂದು ಜಾತ್ರೆಯ ಸ್ವರೂಪವನ್ನೇ ನೀಡಿತ್ತು. ಪ್ರತಿ ವರ್ಷದಂತೆ ನಾನು ಮತ್ತು ವಿಶ್ವನಾಥನ್ ತೆರಳಿದ್ದೆವು. ಈ ವರ್ಷ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ರವರು ಬೆಂಗಳೂರಿನಿಂದ ಜಾತ್ರೆ ನೋಡಲೆಂದು ಆಗಮಿಸಿದ್ದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 23-04-2024
ತುಮಕೂರಿನ ಶೆಟ್ಟಿಹಳ್ಳಿ ಶ್ರೀ ಆಂಜನೆಯ ಸ್ವಾಮಿ ರಥೋತ್ಸವ ಇಂದು (23-04-2024) ಮಧ್ಯಾಹ್ನ ನಡೆದಿತ್ತಾದರೂ, ಮುಸ್ಸಂಜೆ ದೇವಾಲಯದ ಸುತ್ತಲಿನ ವಾತಾವರಣ ರಂಗೇರಿತ್ತು. ಮಧ್ಯಾಹ್ನಕ್ಕಿಂತ ಜನಜಂಗುಳಿ ದುಪ್ಪಟ್ಟಾಗಿತ್ತು. ನಾನು ಮತ್ತು ವಿಶ್ವನಾಥನ್ ಹೋದಾಗ ದೇಗುಲದ ಮುಂದೆ ರಥ ನಿಂತಿತ್ತು. ಭಕ್ತರು ರಥದಲ್ಲಿದ್ದ ದೇವರಿಗೆ ಪೂಜಾದಿಗಳನ್ನು ಮಾಡಿಸುತ್ತಿದ್ದರು. ಅದೇ ಹೊತ್ತಿಗೆ ಹರಕೆ ಹೊತ್ತಿದ್ದ ಭಕ್ತರು ರಥದ ಸುತ್ತ "ಉರುಳುಸೇವೆ" ಮಾಡುತ್ತಿದ್ದರು. ಪುರುಷರು - ಸ್ತ್ರೀಯರು - ಮಕ್ಕಳು - ಯುವಕರು ಅತ್ಯುತ್ಸಾಹದಿಂದ, ಭಕ್ತಿಯಿಂದ "ಉರುಳುಸೇವೆ"ಯಲ್ಲಿ ತಲ್ಲೀನರಾಗಿದ್ದರು. ಇದು ಆ ಭಕ್ತರಿಗೆ ಸೇರಿದ ವಿಷಯ. ಆ ದೃಶ್ಯವಿದು.
ಆದರೆ, ಇದನ್ನು ಕಂಡಾಗ - 1) ದೇವಾಲಯ ಸಮಿತಿಯವರು / ಮುಜರಾಯಿ ಅಧಿಕಾರಿಗಳು "ಉರುಳು ಸೇವೆ" ಮಾಡುವ ಸ್ಥಳವನ್ನು ಭಕ್ತರ ಹಿತದೃಷ್ಟಿಯಿಂದ ಶುಚಿಯಾಗಿಡಬೇಕಿತ್ತು. 2) "ಉರುಳು ಸೇವೆ" ಮಾಡುವವರಿಗೆ ಇತರರಿಂದ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳಬೇಕು. 3) ಇತರೆ ಭಕ್ತರು ರಥದ ಮೇಲೆ ಉತ್ಸಾಹದಿಂದ ರಭಸವಾಗಿ ಎಸೆಯುತ್ತಿದ್ದ ಬಾಳೆಹಣ್ಣುಗಳು "ಉರುಳು ಸೇವೆ" ಮಾಡುತ್ತಿದ್ದ ಭಕ್ತರ ಮೈಮೇಲೂ ಅಷ್ಟೇ ರಭಸದಿಂದ ಬೀಳುತ್ತಾ, ಕಿರಿಕಿರಿಗೆ ಕಾರಣವಾಗುತ್ತಿತ್ತು. ಇದನ್ನು ತಪ್ಪಿಸಬೇಕು. 4) "ಉರುಳು ಸೇವೆ" ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು. -ಎಂದು ನಮಗನಿಸಿತು.
- ಆರ್. ಎಸ್.ಅಯ್ಯರ್, ತುಮಕೂರು, ದಿ. 23-04-2024
ಬದುಕು....
ಮೊನ್ನೆ "ನಮ್ಮ ತುಮಕೂರು" ನಗರದ ಶೆಟ್ಟಿಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ/ ಜಾತ್ರೆ ಇತ್ತು. ಮುಸ್ಸಂಜೆ ನಾನು ಮತ್ತು ವಿಶ್ವನಾಥನ್ ಎರಡನೇ ಸುತ್ತಿನ ಭೇಟಿ ಕೊಡುವಾಗ ಆ ಜನಜಾತ್ರೆಯಲ್ಲಿ ಹಠಾತ್ತನೆ ಈ ದೃಶ್ಯ ನಮ್ಮನ್ನು ತಡೆದು ನಿಲ್ಲಿಸಿತು.
ನಮ್ಮ ಬಲಬದಿ ಸಣ್ಣದೊಂದು ತಗಡಿನ ಸ್ಟ್ಯಾಂಡ್ ನಲ್ಲಿ ಪುಟ್ಟ ಮಗುವೊಂದು ಗಾಢ ನಿದ್ರೆಯಲ್ಲಿತ್ತು. ಪಕ್ಕದಲ್ಲಿ ಆ ಮಗುವಿನ ತಾಯಿ ಅದಾವುದೋ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಇನ್ನೊಂದು ಪಕ್ಕದಲ್ಲಿ ದಾರಿಹೋಕರೊಬ್ಬರು "ಇದೇನು ಪುಟ್ಟ ಬೊಂಬೆಯೋ? ಅಥವಾ ನಿಜವಾದ ಮಗುವೋ?" ಎಂಬ ಕೌತುಕದಿಂದ ಬಗ್ಗಿ ನೋಡಿ ಮುಂದಕ್ಕೆ ಹೆಜ್ಜೆಹಾಕುತ್ತಿದ್ದರು. ಆ ಜನಜಂಗುಳಿಯಲ್ಲಿ ಎಲ್ಲೋ ಕೆಲವರು ಕೌತುಕದಿಂದ ನೋಡಿ "ಅಯ್ಯೋ ನೋಡಿ. ಪುಟಾಣಿ ಮಗು" ಎಂದು ಕರುಣಾಭಾವದಿಂದ ಪಿಸುಮಾತಿನಲ್ಲಿ ಹೇಳಿಕೊಳ್ಳುತ್ತಾ ಸಾಗುತ್ತಿದ್ದರು. ಮತ್ತೆ ಕೆಲವರು ಇದರತ್ತ ಗಮನವೇ ಇಲ್ಲದಂತೆ ಅಥವಾ ನೋಡಿದರೂ ಯಾವುದೇ ಭಾವನೆಗಳಿಲ್ಲದಂತೆ ಮುನ್ನಡೆಯುತ್ತಿದ್ದರು. ಆದರೆ ಆ ಮಗು ಅಷ್ಟೆಲ್ಲ ಗೌಜು-ಗದ್ದಲದ ಮಧ್ಯೆ ಆ ತಗಡಿನ ಮೇಲೆ ತನ್ನ ಪಾಡಿಗೆ "ಸುಖ ನಿದ್ದೆ" ಮಾಡುತ್ತಿತ್ತು! ಆ ಮಗುವಿನ ತಾಯಿ ತನ್ನಪಾಡಿಗೆ ತಾನು ತನ್ನ ಬದುಕಿನ ಬುತ್ತಿಗಾಗಿ ವ್ಯಾಪಾರದಲ್ಲಿ ತಲ್ಲೀನರಾಗಿದ್ದರು!!
ಬದುಕು ದೊಡ್ಡದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 25-04-2024
No comments:
Post a Comment