ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷ) ಅವರ ಕೋರಿಕೆ ಮೇರೆಗೆ ಇಂದು (ದಿ. 29-04-2024) ಮುಸ್ಸಂಜೆ ಮಿತ್ರರಾದ ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಅವರ ಆಟೋದಲ್ಲಿ "ನಗರ ಸಂಚಾರ" ಮಾಡಿಸಲಾಯಿತು. ಕಳೆದ ಎರಡೂವರೆ ವರ್ಷಗಳಿಂದ ಅವರಿಗೆ ಹೊರಗಡೆ ಹೋಗಲಾಗಿಲ್ಲ. ಅಲ್ಲದೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಗುಣಮುಖರಾಗಿದ್ದಾರೆ. ಹೀಗಾಗಿ ಮನೆಯೊಳಗೇ ಇದ್ದ ಅವರನ್ನು ಬದಲಾವಣೆಯಿರಲೆಂದು ಇಂದು ನಾನು ಮತ್ತು ವಿಶ್ವನಾಥನ್ ಜೊತೆಯಾಗಿ ಕರೆದೊಯ್ದೆವು.
ರಾಮಚಂದ್ರನ್ ಅವರು ಚಿಕ್ಕಪೇಟೆಯ ಪಂಚಾಂಗಂ ಬೀದಿಯ ಶ್ರೀ ಶ್ರೀನಿವಾಸ ದೇವಾಲಯದ ಮುಂದೆ ಆಟೋದಿಂದಲೇ ದೇವರ ದರ್ಶನವನ್ನು ಪಡೆದುಕೊಂಡರು. ಅಲ್ಲೇ ಮಾಜಿ ನಗರಸಭಾ ಸದಸ್ಯರಾದ ಶ್ರೀ ಹೆಚ್.ಕೆ.ನಾಗರಾಜ್ ರವರು, ದೇವಾಲಯದ ಅರ್ಚಕರಾದ ಶ್ರೀ ಕೃಷ್ಣಮೂರ್ತಿ (ಕಿಟ್ಟಣ್ಣ) ಭೇಟಿಯಾದರು. ಆಚಾರ್ಯರ ಬೀದಿಯ ಶ್ರೀ ವ್ಯಾಸರಾಜ ಮಠದ ಮುಂದೆ ಶ್ರೀ ಶಾಮಸುಂದರ್ ಸಿಕ್ಕಿದರು. ಅಗ್ರಹಾರದಲ್ಲಿ ನಮ್ಮ ತಂದೆಯ ಹಳೆಯ ಯುವ ಮಿತ್ರ ಶ್ರೀ ನಟರಾಜ್ (ಬೆಲ್ಲದ ವ್ಯಾಪಾರಿ) ಸಿಕ್ಕಿ ಅಲ್ಲಿನ ತಮ್ಮ ಅಂಗಡಿಯಿಂದ ನಾಲ್ಕೈದು ಬಿಸ್ಕೆಟ್ ಪ್ಯಾಕೇಟ್ ಗಳನ್ನು ಕೊಟ್ಟು ಸಂತೋಷಪಟ್ಟರು. ಬಸವೇಶ್ವರ ರಸ್ತೆಯಲ್ಲಿ ಬರುವಾಗ ಅಕ್ಷರ ಮುದ್ರಣದ ಶ್ರೀ ಗೌ.ತಿ. ರಂಗನಾಥ್ ಭೇಟಿಯಾದರು. ಆ ನಂತರ ಬಿ.ಹೆಚ್.ರಸ್ತೆ, ಸೋಮೇಶ್ವರ ಪುರಂ ಮೂಲಕ ಮನೆಗೆ ವಾಪಸ್ಸಾದೆವು. ನಮ್ಮ ತಂದೆಯವರಿಗೆ ಈ ಸಂಚಾರ ಹಾಗೂ ಹಳೆಯ ಪರಿಚಿತರ ಭೇಟಿಯಾದುದು ಅಪಾರ ಸಂತಸ ಮೂಡಿಸಿತು. ಅದೇ ರೀತಿ ಆ ಮಿತ್ರರಿಗೂ ಅನೇಕ ವರ್ಷಗಳ ಬಳಿಕ ಇವರನ್ನು ನೋಡಿ ಅಷ್ಟೇ ಆನಂದವಾಯಿತು.
ಮಿತ್ರರಾದ ಶ್ರೀ "ಆಟೋ ಯಡಿಯೂರಪ್ಪ"ನವರು ನಮ್ಮನ್ನು ಮನೆಗೆ ಬಿಟ್ಟು ಬಳಿಕ ತಮ್ಮ ಮನೆಗೆ ನಿರ್ಗಮಿಸಿದರು. ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದೆವು.
No comments:
Post a Comment