ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 9 June 2025

Sriranjini Visit /2025 / ಶ್ರೀರಂಜಿನಿ ಭೇಟಿ


 ತಾತ-ಮೊಮ್ಮಗಳ ಸಂತಸದ ಕ್ಷಣಗಳು.....
ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಮತ್ತು ಪ್ರಸಿದ್ಧ ಸಂಗೀತ ಸಂಯೋಜಕರೂ, ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಶಿವಸತ್ಯ ದಂಪತಿಯ ಸುಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕು. ಶ್ರೀರಂಜಿನಿ ತನ್ನ ತಾತ (ನಮ್ಮ ತಂದೆ) ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (96) ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರಿನಿಂದ ಆಗಮಿಸಿ, ಜೂನ್ 7 ಮತ್ತು 8 ರಂದು ಎರಡು ದಿನಗಳ ಕಾಲ ತನ್ನ ತಾತನೊಂದಿಗೆ ಸಂತಸದ ಕ್ಷಣಗಳನ್ನು ಕಳೆದಳು.
ಶನಿವಾರ ವಿಶ್ವನಾಥನ್ ಜೊತೆಯಲ್ಲಿ ಹೆಬ್ಬೂರಿನ ಶ್ರೀ ಕೋದಂಡಾಶ್ರಮ ಮಠಕ್ಕೆ ತೆರಳಿ ಶ್ರೀ ಕಾಮಾಕ್ಷಿ ದೇವಿಯ ದರ್ಶನ ಪಡೆದಳು. ಭಾನುವಾರ ಸುಪ್ರಸಿದ್ಧ ಯಾತ್ರಾ ಸ್ಥಳವಾದ ದೇವರಾಯನದುರ್ಗವನ್ನು ವೀಕ್ಷಿಸಿ ಸಂತೋಷಪಟ್ಟಳು.
ಭಾನುವಾರ ಮಧ್ಯಾಹ್ನ ಶ್ರೀರಂಜಿನಿ ಬೆಂಗಳೂರಿಗೆ ಹೊರಡುವಾಗ, ಪ್ರಸ್ತುತ TCS ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಈ ಮೊಮ್ಮೊಗಳಿಗೆ ಶಾಲು ಹೊದಿಸುವ ಮೂಲಕ ತಾತ ರಾಮಚಂದ್ರನ್ ರವರು ಶುಭಾಶೀರ್ವಾದ ಮಾಡಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-06-2025 #rsiyertumakuru








Sunday, 1 June 2025

R Gayathri Visit - 01-06-2025

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರ ಯೋಗಕ್ಷೇಮ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಆರ್. ಗಾಯತ್ರಿ ಸತ್ಯನಾರಾಯಣ್ ತನ್ನ ಮಕ್ಕಳಾದ ಹೆಚ್.ಎಸ್. ಪವನ್ ಮತ್ತು ನಮಿತಾ ಅವರ ಜೊತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದು, ಈ ಭೇಟಿ ನಮ್ಮೆಲ್ಲರಿಗೂ ಸಂತಸ ಮೂಡಿಸಿತು.
ನಿನ್ನೆ (ದಿ. 31-05-2025) ಸಂಜೆ ಅಗಮಿಸಿದ ಅವರು, ಸಂಜೆಯೇ ತುಮಕೂರಿನ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು (ದಿ.01-06-2025) ಬೆಳಗ್ಗೆ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಜಯನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಸಮೀಪದ ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿಯ ಶ್ರೀ ವಿದ್ಯಾಶಂಕರ ದೇವಾಲಯ ವೀಕ್ಷಿಸಿ ಸಂತೋಷಪಟ್ಟರು. ಇಂದು ನಾಮದ ಚಿಲುಮೆ ಮತ್ತು ದೇವರಾಯನದುರ್ಗದಲ್ಲಿ ವಿಪರೀತ ಜನಜಂಗುಳಿ ಇತ್ತಂತೆ. ಮಧ್ಯಾಹ್ನಾನಂತರ ಇಲ್ಲಿಂದ ಬೆಂಗಳೂರಿಗೆ ತೆರಳಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-06-2025

 







Sunday, 4 May 2025

Shankara Jayanthi- 02-05-2025- ಶ್ರೀ ಶಂಕರ ಜಯಂತಿ ಆಚರಣೆ

 


ಶ್ರೀ ಶಂಕರ ಜಯಂತಿ ಆಚರಣೆ-2025

ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರೊಂದಿಗೆ ನಾವು (ನಾನು ಮತ್ತು ವಿಶ್ವನಾಥನ್ ) ಇಂದು (ದಿ.02-05-2025, ಶುಕ್ರವಾರ) ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜಯಂತಿಯನ್ನು ನಮ್ಮ ಮನೆಯಲ್ಲೇ ಶ್ರದ್ಧೆ-ಭಕ್ತಿಯಿಂದ ಆಚರಿಸಿದೆವು.

ತುಮಕೂರಿನಲ್ಲಿ 1968 ರಲ್ಲೇ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, ಆ ಮೂಲಕ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಮೂರೂವರೆ ದಶಕಕ್ಕೂ ಅಧಿಕ ಕಾಲ ಶ್ರೀ ಶಂಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದ ಹೆಗ್ಗಳಿಕೆ ನಮ್ಮ ತಂದೆಯವರದ್ದಾಗಿದೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-05-2025 #rsiyertumakuru #follower #highlight
Sri Shankara Jayanti Celebration-2025
--------------------------------------
With our father Sri V.S. Ramachandran (96), the founder of Sri Shankara Jayanti Sabha and a freedom fighter, we (I and Viswanathan) celebrated the Jayanti of Jagadguru Sri Adi Shankaracharya with devotion today (02-05-2025, Friday) at our home.
Our father has the distinction of having established the Sri Shankara Jayanti Sabha in Tumkur in 1968, and through this, Sri Shankara Jayanti has been celebrated meaningfully at the Sri Laxmikantha Swamy Temple in Chikkapet for more than three and a half decades.
-R.S.Iyer, Tumkur, Date. 02-05-2025









Tuesday, 1 April 2025

VSR Felicitated by MLA Jyothi Ganesh/ 2025/ ಶಾಸಕರಿಂದ ವಿ.ಎಸ್.ಆರ್. ಅವರಿಗೆ ಗೌರವಾರ್ಪಣೆ

 


ಶಾಸಕರಿಂದ ವಿ.ಎಸ್.ಆರ್. ಅವರಿಗೆ ಗೌರವಾರ್ಪಣೆ

---------------------------------

"ಎಲ್ಲಿದ್ದೀರಿ? ನಿಮ್ಮ ಮನೆಗೆ ಈಗ ಬರುತ್ತಿದ್ದೇನೆ" - ಶಾಸಕ ಮಿತ್ರರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಇಂದು (ದಿ. 31-03-2025) ಸಂಜೆ 6 ಗಂಟೆಯಲ್ಲಿ ಕರೆ ಮಾಡಿದರು. ಮುಂದಿನ ಹತ್ತು ನಿಮಿಷಗಳಲ್ಲಿ ನಮ್ಮ ಮನೆಯಲ್ಲಿದ್ದರು. "ಯುಗಾದಿ" ಹಬ್ಬದ ಹಿನ್ನೆಲೆಯಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಯೋಧರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆದುಕೊಂಡರು.

ಬಳಿಕ ನಮ್ಮೊಡನೆ (ಅಂದರೆ ನನ್ನ ಮತ್ತು ವಿಶ್ವನಾಥನ್ ಜೊತೆ) ಚರ್ಚಿಸುತ್ತ ಕುಳಿತರು. ಮೂಲತಃ ಕೇರಳದ ಪಾಲಕ್ಕಾಡ್ ನವರಾದ ನಮ್ಮ ತಾತ ಶ್ರೀ ವಿ.ಎಸ್.ರಾಮ ಅಯ್ಯರ್ ಅವರು ಆ ಕಾಲದ ಸೈನ್ಯದಲ್ಲಿ ಸೇರಿ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಏಡನ್ ವರೆಗೆ ಹೋಗಿದ್ದದ್ದು, ಆ ಬಳಿಕ ಅವರು ಉತ್ತರ ಭಾರತದ ರೈಲ್ವೆಯಲ್ಲಿದ್ದದ್ದು, ನಂತರ ಮೈಸೂರು ರೈಲ್ವೆಗೆ ಬಂದು, ಆಗಿನ ಮೈಸೂರು ಪ್ರಾಂತ್ಯದ ಹಲವೆಡೆ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿದ್ದು ಕೊನೆಗೆ ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ ನಿವೃತ್ತರಾದುದು, ಬಳಿಕ ತುಮಕೂರಿನಲ್ಲಿ ನೆಲೆನಿಂತ ವಿಷಯದಿಂದ ಹಿಡಿದು ಅನೇಕ ವಿಷಯಗಳು ಮಾತುಕತೆಯಲ್ಲಿ ಬಂದುಹೋದವು. ಮಾತನಾಡುತ್ತಾ ಸರಿಸುಮಾರು ಎರಡು ತಾಸು ಸರಿದದ್ದು ಗೊತ್ತಾದದ್ದೇ ಅವರು ರಾತ್ರಿ 8-15 ರಲ್ಲಿ ಹೊರಟಾಗ! ಈ ಅನಿರೀಕ್ಷಿತ ಭೇಟಿ ಹಾಗೂ ಸುದೀರ್ಘ ಮಾತುಕತೆ ಉಭಯತ್ರರಲ್ಲೂ ಸಂತೋಷವನ್ನುಂಟುಮಾಡಿತು. ಕೊನೆಯಲ್ಲಿ ಅವರಿಗೆ ಶುಭ ಕೋರುತ್ತಾ, ಆತ್ಮೀಯವಾಗಿ ಬೀಳ್ಕೊಟ್ಟೆವು.
ಶ್ರೀ ಜ್ಯೋತಿಗಣೇಶ್ ರವರು ಸತತ ಎರಡನೇ ಬಾರಿ "ನಮ್ಮ ತುಮಕೂರು" ನಗರದ ಶಾಸಕರಾಗಿದ್ದಾರೆ. ಬಿ.ಇ. ಮತ್ತು ಎಂ.ಬಿ.ಎ. ಪದವೀಧರರು. ನಮಗೆ ಸುಮಾರು 25 ವರ್ಷಗಳಷ್ಟು ದೀರ್ಘಕಾಲದ ಸನ್ಮಿತ್ರರು. ಸರಳತೆ, ಸಜ್ಜನಿಕೆಗಳಿಂದ ಕೂಡಿದವರು. ಶಾಸಕರಾಗುವ ಮೊದಲು ಹಾಗೂ ಶಾಸಕರಾದ ಬಳಿಕ ನಾವು ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿಯೂ ಪಾಲ್ಗೊಂಡಿದ್ದವರು. ಶ್ರೀಯುತರ ಇಂದಿನ ಸೌಜನ್ಯಯುತ ಭೇಟಿಗೆ ಕೃತಜ್ಞತೆಗಳು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 31-03-2025, #rsiyertumakuru



-----Video---



Friday, 7 February 2025

Vishwas- Marriage Invitation- 07-02-2025- ವಿಶ್ವಾಸ್ ವಿವಾಹ ಆಮಂತ್ರಣ

 ಮೊಮ್ಮಗನ ಮದುವೆಗೆ ಶುಭ ಕೋರಿದ ತಾತ...

--------------------------
ತನ್ನ ವಿವಾಹದ ಆಮಂತ್ರಣ ಪತ್ರಿಕೆ ನೀಡಿದ ಮೊಮ್ಮಗ ಎಂ.ಎಸ್. ವಿಶ್ವಾಸ್ ಗೆ ನಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಶುಭ ಕೋರಿ ಶಾಲು ಹೊದಿಸಿ ಆಶೀರ್ವದಿಸಿ ಹರ್ಷಗೊಂಡರು.
ನಮ್ಮ ಸಹೋದರಿ ದಿವಂಗತ ಶ್ರೀಮತಿ ಆರ್. ಮಹಾಲಕ್ಷ್ಮೀ ಶ್ರೀಧರ್ ಅವರ ದ್ವಿತೀಯ ಪುತ್ರನೇ ಎಂ.ಎಸ್. ವಿಶ್ವಾಸ್. ಇಂದು (ದಿ.07-02-2025) ಬೆಂಗಳೂರಿನಿಂದ ತನ್ನ ತಂದೆ ಶ್ರೀ ಎಂ.ಎಸ್.ಶ್ರೀಧರ್ ರವರ ಜೊತೆಯಲ್ಲಿ ವಿಶ್ವಾಸ್ ನಮ್ಮ ಮನೆಗೆ ಆಗಮಿಸಿ, ವಿವಾಹ ಆಮಂತ್ರಣ ನೀಡಿದಾಗ ತಾತ ಶ್ರೀ ವಿ.ಎಸ್.ರಾಮಚಂದ್ರನ್ ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಅಳಿಯ ಮತ್ತು ಮೊಮ್ಮಗನಿಗೆ ಶಾಲು ಹೊದಿಸಿ ಶುಭ ಕೋರಿ ಸಂತಸ ಪಟ್ಟರು. ನಾನು ಮತ್ತು ವಿಶ್ವನಾಥನ್ ಸಹಾ ವಿಶ್ವಾಸ್ ನನ್ನು ಆಶೀರ್ವದಿಸಿದೆವು. ಈ ಭೇಟಿ ಉಭಯತ್ರರಲ್ಲೂ ಉಲ್ಲಾಸವನ್ನುಂಟುಮಾಡಿತು.
ವಿಶ್ವಾಸ್ ನ ವಿವಾಹವು ಸೌ|| ಎನ್.ರಕ್ಷಿತಾ ಜೊತೆಯಲ್ಲಿ ಇದೇ ಫೆಬ್ರವರಿ 23 ರಂದು ಬೆಂಗಳೂರಿನಲ್ಲಿ ನೆರವೇರಲಿದೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 07-02-2025, #rsiyertumakuru











----------------------------------------
Youtube Video




Monday, 27 January 2025

H S Rajarao Visit- 24-01-2025- ಹೆಚ್.ಎಸ್.ರಾಜಾರಾವ್ ಭೇಟಿ

ನಮ್ಮ ತುಮಕೂರು ನಗರದ ಅಗ್ರಹಾರದ ನಿವಾಸಿಗಳೂ, ಪ್ರಸಿದ್ಧ ಪುರೋಹಿತರೂ, ಜ್ಯೋತಿಷಿಗಳೂ ಆಗಿರುವ ವೇ||ಬ್ರ||ಶ್ರೀ ಹೆಚ್.ಎಸ್.ರಾಜಾರಾವ್ ರವರು ತಮ್ಮ ಪತ್ನಿ ಶ್ರೀಮತಿ ನಾಗರತ್ನಮ್ಮ, ಪುತ್ರ -ಪುರೋಹಿತರಾದ ಶ್ರೀ ಮಧುಸೂಧನರಾವ್ ಮತ್ತು ಅಗ್ರಹಾರದ ಮತ್ತೋರ್ವ ಪ್ರಸಿದ್ಧ ವೈದಿಕರಾದ ವೇ||ಬ್ರ||ಶ್ರೀ ಅಶ್ವತ್ಥನಾರಾಯಣ ಶಾಸ್ತ್ರಿ ಅವರೊಂದಿಗೆ ಇಂದು (ದಿ.24-01-2025) ರಾತ್ರಿ ನಮ್ಮ ಮನಗೆ ಆಗಮಿಸಿ, ಮೊನ್ನೆಯಷ್ಟೇ 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ಫಲತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿ, ಆಶೀರ್ವಾದ ಪಡೆದುಕೊಂಡರು.
ಶ್ರೀ ರಾಜಾರಾವ್ ರವರು ನಮಗೆ ಸುಮಾರು 40 ವರ್ಷಗಳಿಗೂ ಅಧಿಕ ಕಾಲದ ಪರಿಚಯ. ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದ ಅವರು, ಆ ನಂತರ ಪೌರೋಹಿತ್ಯ ಕ್ಷೇತ್ರದಲ್ಲಿ ಸಾಗಿದರು. ಇನ್ನು ಅವರ ಕುಟುಂಬದ ಹಿರಿಯರು ನಮ್ಮ ತಂದೆಯವರಿಗೆ ಇನ್ನೂ ಹಳೆಯ ಪರಿಚಯ. ಈ ಭೇಟಿಯ ಸಂದರ್ಭದಲ್ಲಿ ಆ ಹಳೆಯ ಸವಿನೆನಪುಗಳು ಮಾತುಕತೆಯಲ್ಲಿ ಸಾಗಿ, ಸಂತೋಷ ಮೂಡಿಸಿತು. ಅವರ ಈ ಪ್ರೀತಿ-ವಿಶ್ವಾಸದ ಭೇಟಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂಥದ್ದು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 24-01-2025, #rsiyertumakuru



 




Wednesday, 22 January 2025

VSR-96 - Sanmana- C M Temple 2025

 ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದ ಧರ್ಮದರ್ಶಿಗಳೂ, ಪ್ರಧಾನ ಅರ್ಚಕರೂ ಆದ ಶ್ರೀ ಕೆ.ವೈ. ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಇಂದು (ದಿ.22-01-2025) ಸಂಜೆ ಅನಿರೀಕ್ಷಿತವಾಗಿ ನಮ್ಮ ಮನೆಗೆ ಬಂದರು. ಮೊನ್ನೆ "ಸಂಕ್ರಾಂತಿ" ಹಬ್ಬದಂದು 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ದೇವರ ಪ್ರಸಾದ ನೀಡಿ, ಕೇಸರಿ ವಸ್ತ್ರ ಹೊದಿಸಿ ಗೌರವಿಸಿ ಸಂತೋಷಪಟ್ಟರು. ಶಾಸ್ತ್ರಿಗಳ ಈ ವಿಶ್ವಾಸ ನಮ್ಮೆಲ್ಲರಲ್ಲೂ ಸಂತೋಷ ಮೂಡಿಸಿತು.

-ಆರ್.ಎಸ್.ಅಯ್ಯರ್, ತುಮಕೂರು ದಿ. 22-01-2025 #rsiyertumakuru



                                                        ___________________

                                                                Youtube Video




Vimala Visit- Date 21-01-2025

ಬೆಂಗಳೂರಿನಿಂದ ಇಂದು (ದಿ.21-01-2025) ಬೆಳಬೆಳಗ್ಗೆಯೇ ಆಗಮಿಸಿದ ನಮ್ಮ ಚಿಕ್ಕಮ್ಮ ಶ್ರೀಮತಿ ವಿಮಲ ಮತ್ತು ಚಿಕ್ಕಪ್ಪ ಶ್ರೀ ಹೆಚ್.ಎಸ್.ಶ್ರೀನಿವಾಸ್ ದಂಪತಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರಿಗೆ ಫಲತಾಂಬೂಲ ನೀಡಿ ಜನ್ಮದಿನದ ಶುಭಾಶಯ ಕೋರಿದ್ದು, ಉಭಯತ್ರರಲ್ಲೂ ಸಂತೋಷವನ್ನುಂಟುಮಾಡಿತು.






Monday, 20 January 2025

Hiremagaluru Kannan - 20-01-2025 - ಹಿರೇಮಗಳೂರು ಕಣ್ಣನ್ ರವರೊಡನೆ

ಡಿವಿಜಿ “ಕಗ್ಗ” : ಸುಬ್ಬುಲಕ್ಷ್ಮಿ ಭೇಟಿ ನೆನೆದ ಕಣ್ಣನ್…
------------------------

“ಕನ್ನಡದ ಪೂಜಾರಿ” ಶ್ರೀ ಹಿರೇಮಗಳೂರು ಕಣ್ಣನ್ ರವರು ಎದುರ್ಗೊಂಡರೆ ಸವಿಮಾತಿಗೇನು ಕೊರತೆ? ಕನ್ನಡದ ಮಂತ್ರ, ಸಾಹಿತ್ಯ ದಿಗ್ಗಜರ ನೆನಪು, ಮಂಕುತಿಮ್ಮನ ಕಗ್ಗದ ಮುಕ್ತಕ, ಮುದ್ದುರಾಮನ ಪದ್ಯ, ಮತ್ತಾವುದೋ ಕನ್ನಡದ ಕವಿತೆ, ಇನ್ನಾವುದೋ ಸ್ವಾರಸ್ಯಕರ ಪ್ರಸಂಗ…. ಹೀಗೆ ಒಂದರಹಿಂದೆ ಒಂದರಂತೆ ನೆನಪಿನಾಳದಿಂದ ಮಾತಿನ ಚಿಲುಮೆ ಓತಪ್ರೋತವಾಗಿ ಹೊಮ್ಮುತ್ತಲೇ ಇತ್ತು. ಆ ಮಾತಿನ ಓಘಕ್ಕೆ ಬೆರಗಾಗುತ್ತ, ಅದರಲ್ಲಿನ ಅಂತಃಸತ್ವವನ್ನು ಆಸ್ವಾದಿಸುತ್ತ ಕುಳಿತಾಗ ಹೊತ್ತು ಹೋದುದು ಗೊತ್ತೇ ಆಗಲಿಲ್ಲ!
ಅಂತಹುದೊಂದು ಅನುಭವ ಇಂದು ನಮ್ಮದಾಯಿತು. ಶ್ರೀ ಕಣ್ಣನ್ ರವರು ಇಂದು (ದಿ. 20-01-2025) ತುಮಕೂರಿಗೆ ಆಗಮಿಸಿದ್ದರು. ಅವರು ತಂಗಿದ್ದ ಶ್ರೀ ರಮೇಶ್ ಬಾಬುರವರ ನಿವಾಸಕ್ಕೆ ಇಂದು ಸಂಜೆ ನಾನು ಮತ್ತು ವಿಶ್ವನಾಥನ್ R. Vishwanathan Tumkur ತೆರಳಿದ್ದೆವು. ಸಂಜೆಯ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗಿದ್ದ ಶ್ರೀ ಕಣ್ಣನ್ ರವರು ನಮ್ಮನ್ನು ನೋಡಿದೊಡನೆ ಅತ್ಯಂತ ಸಂತಸದಿಂದ ಮಾತಿಗಿಳಿದರು. ಸುಮಾರು 30 ವರ್ಷಗಳ ಹಿಂದೆ ನಮ್ಮ ಶ್ರೀ ಶಂಕರ ಜಯಂತಿ ಸಭಾ ಕಾರ್ಯಕ್ರಮಕ್ಕೆ ಅವರು ಅತಿಥಿಗಳಾಗಿ ಬಂದಿದ್ದುದು, ಇತ್ತೀಚೆಗೆ ನಮ್ಮ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಸಂದರ್ಭ ಇತ್ಯಾದಿಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದೆವು. ಆಗ ಅವರು ಸುಮಾರು 35-40 ವರ್ಷಗಳ ಹಿಂದಿನ ಅವಿಸ್ಮರಣೀಯ ಪ್ರಸಂಗವೊಂದರ ನೆನಪಿಗೆ ಜಾರಿದರು.
“ಅಂತರ ರಾಷ್ಟ್ರೀಯ ಖ್ಯಾತಿ ಗಳಿಸಿದ್ದ, ಕರ್ನಾಟಕ ಸಂಗೀತದ ಅಪ್ರತಿಮ ಗಾಯಕರೆನಿಸಿದ್ದ ಶ್ರೀಮತಿ ಎಂ.ಎಸ್.ಸುಬ್ಬುಲಕ್ಷ್ಮೀರವರು ಮತ್ತು ಅವರ ಪತಿ ಶ್ರೀ ಸದಾಶಿವಂರವರು ಹಿರೇಮಗಳೂರಿನ ನಮ್ಮ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಅದೊಂದು ದಿನ ಆಗಮಿಸಿದ್ದರು. ಹೂಮಾಲೆ ಅರ್ಪಿಸಿ ಸ್ವಾಗತ ಕೋರಿದೆ. ಬಳಿಕ ಶ್ರೀ ಸದಾಶಿವಂರವರು ತಮಿಳಿನಲ್ಲೇ ನನ್ನೊಡನೆ ಮಾತನಾಡುವಾಗ, “ಕಣ್ಣನ್ ರವರ ಬಾಯಿಂದ ಡಿವಿಜಿಯವರ “ಕಗ್ಗ”ದ ಪದ್ಯ ಕೇಳಬೇಕು ಎಂದು ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ರವರು ಹೇಳಿದ್ದಾಗಿ” ನುಡಿದರು. ಇದನ್ನು ಕೇಳಿ ನನಗೆ ಆನಂದಾಶ್ಚರ್ಯವಾಯ್ತು. ಅವರ ಕೋರಿಕೆಯಂತೆ ಒಂದು ಕಗ್ಗವನ್ನು ಅರ್ಥಸಹಿತ ಹೇಳಿದೆ. ಅದನ್ನು ಕೇಳಿ ಈರ್ವರೂ ಹರ್ಷಪಟ್ಟರು’’ ಎಂದು ವಿವರಿಸುವಾಗ ಕಣ್ಣನ್ ರವರ ಮುಖದಲ್ಲಿ ಅವರ್ಣನೀಯ ಆನಂದ. ಕೇಳುತ್ತಿದ್ದ ನಮಗೂ ರೋಮಾಂಚನ.
ಹೀಗೆಯೇ ಸುಮಾರು ಮುಕ್ಕಾಲು ಗಂಟೆಯ ಮಾತುಕತೆ. ಅವರು ಕಾರ್ಯಕ್ರಮಕ್ಕೆ ಹೊರಡುವ ಸಮಯವಾಯಿತು. ಹೊರಡುವ ಮುನ್ನ ನಾವು ನಡೆಸುವ “ಡಿವಿಜಿ ನೆನಪು” ಕಾರ್ಯಕ್ರಮಕ್ಕೆ ಮತ್ತೊಮ್ಮೆ ಉಪನ್ಯಾಸ ನೀಡಲು ಬರುವುದಾಗಿ ಅವರು ಹೇಳಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 20-01-2025, #rsiyertumakuru



 






Friday, 17 January 2025

VSR-96 Happy moments ವಿ.ಎಸ್.ಆರ್.-96 ಸಂತಸದ ಕ್ಷಣಗಳು...

96 ರ ಹೊಸ್ತಿಲಲ್ಲಿ ಸಂತಸದ ಕ್ಷಣಗಳು…
-------------------------------------
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ವಿ.ಎಸ್.ರಾಮಚಂದ್ರನ್ ರವರು ಇದೇ ಜನವರಿ 14 “ಸಂಕ್ರಾಂತಿ”ಯಂದು (ದಿ.14-01-2025) 96 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು.

ಅಂದೇ ರಾತ್ರಿ ಮೊಮ್ಮಗ ವಿ.ವಿವೇಕ್ - ಶ್ರೀಮತಿ ರಶ್ಮಿ ದಂಪತಿ (ಈರ್ವರೂ ಇಂಜಿನಿಯರ್ ಗಳು) ತಮ್ಮ ಏಳು ತಿಂಗಳ ಪುಟಾಣಿ ಗಂಡು ಮಗುವಿನೊಡನೆ ಆಗಮಿಸಿದ್ದರು. ನಮ್ಮ ತಂದೆಗೆ ಸಂಕ್ರಾಂತಿಯ ಎಳ್ಳುಬೆಲ್ಲದೊಡನೆ, ಫಲತಾಂಬೂಲ ನೀಡಿ ಜನ್ಮದಿನದ ಶುಭ ಕೋರಿದರು. ಇದೇ ಸಂದರ್ಭದಲ್ಲಿ 7 ತಿಂಗಳ “ಮರಿಮಗ” 96 ನೇ ವಸಂತಕ್ಕೆ ಕಾಲಿಟ್ಟ ತನ್ನ “ಮುತ್ತಜ್ಜನ ಮಡಿಲಲ್ಲಿ” ಕೆಲ ನಿಮಿಷ ಇದ್ದು ಮುತ್ತಜ್ಜನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಲಿದದ್ದು ಹಾಗೂ ವಿಶ್ವನಾಥನ್ ಎತ್ತಿಕೊಂಡಾಗ ಜೋರು ನಗುವಿನ ಪ್ರತಿಕ್ರಿಯೆ ನೀಡಿದ್ದು ಚೇತೋಹಾರಿಯಾಗಿತ್ತು.

ಹಿಂದಿನ ದಿನವಷ್ಟೇ ವಿವೇಕ್ ತನ್ನ ಹುಟ್ಟುಹಬ್ಬ ಆಚರಿಸಿದ್ದು, ಆ ಹಿನ್ನೆಲೆಯಲ್ಲಿ ನಮ್ಮ ತಂದೆ ತನ್ನ ಮೊಮ್ಮಗನಿಗೆ ಶಾಲುಹೊದಿಸಿ, ಹಾರ ಹಾಕಿ ಜನ್ಮದಿನದ ಶುಭಾಶಯ ಕೋರಿ ಸಂತಸ ಹಂಚಿಕೊಂಡರು.

ಜನವರಿ 15 ರಂದು ಮಗಳು ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಬೆಂಗಳೂರಿನಿಂದ ಆಗಮಿಸಿ, ತಂದೆಗೆ ಶುಭಾಶಯ ಕೋರಿದ್ದು ಉಭಯತ್ರರಲ್ಲೂ ಉಲ್ಲಾಸವನ್ನುಂಟುಮಾಡಿತು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 17-01-2025



 








------------------------------







_______________________________


Youtube Video