"ಈಗ ಹೊರಡುತ್ತಿದ್ದೇವೆ. 9 ಗಂಟೆ ಹೊತ್ತಿಗೆ ನಿಮ್ಮ ಮನೆಗೆ ಬರುತ್ತೇವೆ" ಎಂದು ಇಂದು (ದಿ. 23-11-2025) ಬೆಳಗ್ಗೆ 7 ಗಂಟೆಯಲ್ಲಿ ಬೆಂಗಳೂರಿನಿಂದ ನಮ್ಮ ಚಿಕ್ಕಪ್ಪ ಶ್ರೀ ಹೆಚ್.ಎಸ್.ಶ್ರೀನಿವಾಸನ್ ರವರು ವಿಶ್ವನಾಥನ್ ಗೆ ಕರೆ ಮಾಡಿದ್ದರು. ಅದರಂತೆ ಬೆಳಗ್ಗೆ 9-30 ರ ಹೊತ್ತಿಗೆ ನಮ್ಮ ಚಿಕ್ಕಮ್ಮ ಶ್ರೀಮತಿ ವಿಮಲ ಅವರೊಡನೆ ಕಾರಿನಲ್ಲಿ ಬಂದಿಳಿದರು. ದಾರಿಯುದ್ದಕ್ಕೂ ಟ್ರಾಫಿಕ್ ಇದ್ದುದರಿಂದ ಅರ್ಧ ಗಂಟೆ ವಿಳಂಬವಾಯಿತು ಎಂದರು.
ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲೆಂದೇ ಆಗಮಿಸಿದ್ದ ಶ್ರೀನಿವಾಸನ್ ಮತ್ತು ವಿಮಲ ದಂಪತಿ, ನಮ್ಮ ತಂದೆಗೆ ಫಲತಾಂಬೂಲ ನೀಡಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಒಂದರ್ಧ ಗಂಟೆ ಇದ್ದು ಮಾತುಕತೆಯಾಡುತ್ತಾ ವಿವಿಧ ಪ್ರಸಂಗಗಳನ್ನು ಮೆಲುಕು ಹಾಕಿದರು. ಬರುವಾಗ ದಾರಿಯಲ್ಲೇ ಉಪಾಹಾರ ಮಾಡಿಕೊಂಡು ಬಂದಿದ್ದುದರಿಂದ, ನಮ್ಮ ಮನೆಯಲ್ಲಿ ಚಹಾ ಸೇವಿಸಿ ಮತ್ತೆ ವಾಪಸ್ ಬೆಂಗಳೂರಿಗೆ ಹೊರಟರು. ಒಂದು ವರ್ಷದ ಬಳಿಕ ಅವರು ಇಲ್ಲಿಗೆ ಆಗಮಿಸಿ ನಮ್ಮೆಲ್ಲರನ್ನೂ ಭೇಟಿಯಾದದ್ದು ಉಭಯತ್ರರಲ್ಲೂ ಹರ್ಷೋಲ್ಲಾಸವನ್ನುಂಟುಮಾಡಿತು.
ನಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಮತ್ತು ಆಕೆಯ ಪುತ್ರ ಹೆಚ್.ಎಸ್.ಪವನ್ ಅವರು ಬೆಂಗಳೂರಿನಿಂದ ಇಂದು (ದಿ. 08-10-2025) ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಮಧ್ಯಾಹ್ನ ನಮ್ಮ ತಂದೆಯವರನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ಗೂಳೂರಿನ ಸುಪ್ರಸಿದ್ಧ ಶ್ರೀ ಗಣಪತಿ ದೇವಾಯಲಕ್ಕೆ ತೆರಳಿದೆವು. ಅವರು ನಡೆಯಲಾಗದಿರುವುದರಿಂದ ಕಾರಿನಲ್ಲಿ ಕುಳಿತೇ ವೀಕ್ಷಿಸಿದರು. ನಾನು ಜೊತೆಯಲ್ಲಿ ಹೋಗಿದ್ದೆ. ವಿಶ್ವನಾಥನ್ ಮನೆಯಲ್ಲೇ ಇದ್ದ.
ಜಯನಗರದಿಂದ ಗಾರೆನರಸಯ್ಯನ ಕಟ್ಟೆ ಮೂಲಕ ಗೂಳೂರಿಗೆ ಹೋಗಿಬರುವಾಗ ರಿಂಗ್ ರಸ್ತೆ, ಮರಳೂರು ವೃತ್ತ, ಮರಳೂರು ಕೆರೆ, ಗೂಳೂರು, ಗಣಪತಿ ದೇವಾಲಯ, ಕುಣಿಗಲ್ ರಸ್ತೆ, ಲಕ್ಕಪ್ಪ ವೃತ್ತ, ಟೌನ್ ಹಾಲ್ ವೃತ್ತ, ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕ, ಕೋಟೆ ಆಂಜನೇಯ ವೃತ್ತ, ಅಮಾನಿ ಕೆರೆ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತ, ಬಿ.ಹೆಚ್.ರಸ್ತೆ, ಎಸ್.ಐ.ಟಿ. ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಐ.ಟಿ. ಮುಖ್ಯರಸ್ತೆ, ಶೆಟ್ಟಿಹಳ್ಳಿ ಮುಖ್ಯರಸ್ತೆ -ಹೀಗೊಂದು "ತುಮಕೂರು ನಗರ ಸಂಚಾರ"ವನ್ನು ನಮ್ಮ ತಂದೆಯವರು ಕಾರಿನಲ್ಲೇ ಮಾಡಿ, ಊರನ್ನು ನೋಡಿ ಬೆರಗಿನೊಂದಿಗೆ ಸಂತೋಷಪಟ್ಟರು. ಗಾಯತ್ರಿ ಮತ್ತು ಪವನ್ ಅವರು ಸಂಜೆ ಬೆಂಗಳೂರಿಗೆ ನಿರ್ಗಮಿಸಿದರು. ಪರಸ್ಪರ ಭೇಟಿ ಉಭಯತ್ರರಲ್ಲಿ ಅಪಾರ ಸಂತೋಷವನ್ನುಂಟುಮಾಡಿತು.
ನಮ್ಮ ಹತ್ತಿರದ ಬಂಧುಗಳೂ, ತುಮಕೂರಿನ ಶ್ರೀ ಶೃಂಗೇರಿ ಶಂಕರ ಮಠದ ಉಪಾಧ್ಯಕ್ಷರೂ, ನಂದಿನಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ, ಬಿಜೆಪಿ ಮುಖಂಡರೂ ಆದ ಶ್ರೀ ಹೆಚ್.ಕೆ. ರಮೇಶ್ ಮತ್ತು ಶ್ರೀಮತಿ ಶುಭ ದಂಪತಿ ಇಂದು (ದಿ. 06-11-2025) ರಾತ್ರಿ ನಮ್ಮ ಮನೆಗೆ ಆಗಮಿಸಿ ತಮ್ಮ ಪುತ್ರನ ವಿವಾಹದ ಆಮಂತ್ರಣ ಪತ್ರಿಕೆಯನ್ನು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರಿಗೆ ನೀಡಿ ಶುಭಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಾನು ಮತ್ತು ಆರ್. ವಿಶ್ವನಾಥನ್ ಇದ್ದೆವು.
ಶ್ರೀ ಹೆಚ್.ಕೆ.ರಮೇಶ್ ಅವರ ಜ್ಯೇಷ್ಠ ಪುತ್ರ ಚಿ||ರಾ|| ರಾಹುಲ್ ಆರ್.ಭಟ್ ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡಿ ಸದ್ಯ ಅಲ್ಲೇ ವೃತ್ತಿಯಲ್ಲಿರುವ ಪ್ರತಿಭಾವಂತ. ಉತ್ತರಕನ್ನಡ ಜಿಲ್ಲೆ ಅಂಕೋಲದ ಶ್ರೀ ಜಿ.ವಿ. ಹೆಗಡೆ ಮತ್ತು ಶ್ರೀಮತಿ ಭಾಗೀರಥಿ ದಂಪತಿಯ ಸುಪುತ್ರಿ ಚಿ||ಸೌ|| ಸೌಜನ್ಯ ಹೆಗಡೆ ಅವರೊಡನೆ ದಿ. 01-12-2025 ರಂದು ಅಂಕೋಲದಲ್ಲಿ ವಿವಾಹ ಮಹೋತ್ಸವ ನೆರವೇರಲಿದೆ.
ರಮೇಶ್ ರವರು ಅತ್ಯಂತ ಗೌರವಾದರಗಳಿಂದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದು ಹಿತಾನುಭವವನ್ನುಂಟುಮಾಡಿತು. ಅವರ ಪುತ್ರನ ವಿವಾಹ ಮಹೋತ್ಸವ ಮಂಗಳಕರವಾಗಿ ನೆರವೇರಲೆಂದು ನಾವೆಲ್ಲ ಹೃದಯತುಂಬಿ ಹಾರೈಸಿದೆವು.
ಗೂಳೂರಿನ ಗಣಪತಿಯಂತೆಯೇ ಈಗ ಗೂಳೂರು ಕೆರೆಯೂ ಜನಾಕರ್ಷಕ ಸ್ಥಳ. ವಿಶಾಲವಾದ ಕೆರೆ ಇತ್ತೀಚಿನ ಮಳೆಯಿಂದ ಕೋಡಿ ಬಿದ್ದಿದೆ. ಕೋಡಿಯಲ್ಲಿ ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ. ಇಡೀ ಕೋಡಿ ಕಟ್ಟೆಯಲ್ಲಿ ಹಾಲು ಉಕ್ಕಿ ಹರಿಯುತ್ತಿದೆಯೇನೋ ಎಂಬಷ್ಟು ರೂಪಾಂತರ. ಆ ನೀರಿನಲ್ಲಿ ಮಿಂದೇಳಲು ಜನವೋ ಜನ. ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಅಷ್ಟೇ ಅಲ್ಲದೆ ಪುಟಾಣಿ ಕಂದಮ್ಮಗಳನ್ನೂ ಕರೆತರುವ ಪೋಷಕರು- ಹೀಗೆ ಎಲ್ಲರೂ ಆ ಹಾಲ್ನೊರೆಯಂತೆ ಧುಮ್ಮಿಕ್ಕುವ ನೀರಿನಿಂದ ಆಕರ್ಷಿತರಾದವರೇ. ಅದೆಷ್ಟೋ ಹೊತ್ತು ಆ ನೀರಿನಲ್ಲಿ ನೆನೆಯುತ್ತ ಮೈಮರೆಯುವವರೇ. "ನಮ್ಮ ತುಮಕೂರು" ನಗರದ ಪಕ್ಕದಲ್ಲೇ ಇರುವ ಗೂಳೂರು ಕೆರೆಗೆ ಇಂದು (ದಿ. 28-10-2025) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ತೆರಳಿದ್ದಾಗ ಕಂಡ ಮನಮೋಹಕ ದೃಶ್ಯಗಳಿವು. ವಿಡಿಯೋ ನೋಡಲು ಯೂಟ್ಯೂಬ್ ಲಿಂಕ್ - https://youtube.com/shorts/0goan5w5mK4?si=kyH8BaV1riQL0_py
"ನಮ್ಮ ತುಮಕೂರು" ನಗರಕ್ಕೆ ಸನಿಹದ ಗೂಳೂರು ಗ್ರಾಮದಲ್ಲಿರುವ ಸುಪ್ರಸಿದ್ಧ "ಶ್ರೀ ಗೂಳೂರು ಮಹಾಗಣಪತಿ"ಯ ಭವ್ಯ ರೂಪವಿದು. ಈ ಕಾರ್ತೀಕ ಮಾಸಪೂರ್ತಿ ನಡೆಯುವ ಗಣೇಶೋತ್ಸವವು ಗೂಳೂರಿನಲ್ಲಿ ಹಬ್ಬದ ಕಳೆ ಸೃಷ್ಟಿಸಿದೆ. ದಿನವೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು, ಪರಸ್ಥಳದವರು ಗಣಪನ ದರ್ಶನಕ್ಕೆ ಬರುತ್ತಿದ್ದಾರೆ. ಅದರಲ್ಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶ್ರದ್ಧೆ-ಭಕ್ತಿಯಿಂದ ಪೂಜಿಸುತ್ತಿದ್ದಾರೆ. ನಾನು ಮತ್ತು ವಿಶ್ವನಾಥನ್ ಇಂದು (ದಿ. 28-10-2025) ಮಧ್ಯಾಹ್ನ ಭೇಟಿಯಿತ್ತಾಗ, ಅರ್ಚಕರಾದ ಶ್ರೀ ಶಿವಕುಮಾರ್ ರವರು ದೇವರಿಗೆ ಪೂಜಿಸಿ ಹೂವಿನ ಪ್ರಸಾದ ನೀಡಿದರು. ವಿಡಿಯೋ ನೋಡಲು ಯೂಟ್ಯೂಬ್ ಲಿಂಕ್- https://youtube.com/shorts/NU1WFoawqOE?si=X4sYcr_V64rS8fyJ
ಸುಪ್ರಸಿದ್ಧ "ಗೂಳೂರು ಶ್ರೀ ಗಣಪತಿ" ಭರದಿಂದ ಹಂತ ಹಂತವಾಗಿ ಸಿದ್ಧಗೊಳ್ಳುತ್ತಿದ್ದಾನೆ. 12 ಅಡಿ ಅಗಲ, 12 ಅಡಿ ಎತ್ತರದ ಬೃಹತ್ ಗಣಪತಿಯ ನಿರ್ಮಾಣ ಕಾರ್ಯದಲ್ಲಿ ಸ್ಥಳೀಯ ಕುಶಲಕರ್ಮಿಗಳು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ ತಲ್ಲೀನರಾಗಿದ್ದಾರೆ. ಗಣಪನ ಮೂರ್ತಿಯನ್ನು ಸಿದ್ಧಗೊಳಿಸುವುದನ್ನು ನೋಡುವುದೇ ರೋಮಾಂಚನ ಉಂಟುಮಾಡುವಂತಹುದು. ಇಂದು (ದಿ. 18-09-2025, ಗುರುವಾರ) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಗೂಳೂರಿಗೆ ತೆರಳಿದ್ದಾಗ ಕಂಡ ಚಿತ್ರಣವಿದು. ದೀಪಾವಳಿಯಂದು ಗೂಳೂರು ಗಣಪನ ಉತ್ಸವ ವಿದ್ಯುಕ್ತವಾಗಿ ಆರಂಭಗೊಂಡು, ಅಲ್ಲಿಂದ ಒಂದು ತಿಂಗಳ ಕಾಲ ವೈಭವದಿಂದ ನೆರವೇರಲಿದೆ.
ಹಲವು ದಿನಗಳ ಮೋಡ ಮತ್ತು ಮಳೆಯ ಆಟದ ಬಳಿಕ ಇಂದು ಬೆಳಗ್ಗೆ ಬಿರುಬಿಸಿಲು ಬಂದ ಹಿನ್ನೆಲೆಯಲ್ಲಿ ನಮ್ಮ ನೆಚ್ಚಿನ ಸ್ಥಳವಾದ ದುರ್ಗದ ಹಳ್ಳಿಯ ಕೆರೆ ಮತ್ತು ಪಕ್ಕದ ಪುರಾತನ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ನಾನು ಮತ್ತು ವಿಶ್ವನಾಥನ್ ದಿಢೀರನೆ ಹೋಗಿ ಬಂದೆವು... ದೇವರಾಯನ ದುರ್ಗದ ಅರಣ್ಯ ಪ್ರದೇಶ ಇತ್ತೀಚಿನ ಸತತ ಮಳೆಯಿಂದ ಹಸಿರಿನಿಂದ ಕಂಗೊಳಿಸುತ್ತಿದೆ..
ಚಿಕ್ಕಪೇಟೆ ಕಡೆಯಿಂದ ಇಂದು (ದಿ. 02-09-2025) ಮುಸ್ಸಂಜೆ ನಾನು ಮತ್ತು ವಿಶ್ವನಾಥನ್ ಬೈಕ್ ನಲ್ಲಿ ಜಯನಗರದತ್ತ ಹಿಂತಿರುಗುವಾಗ “ನಮ್ಮ ತುಮಕೂರು” ನಗರದ ಹೊರಪೇಟೆಯ ಶ್ರೀ ಕರಿಬಸವಸ್ವಾಮಿಗಳ ಮಠದ ತಿರುವಿನ ಬಳಿ ಮಿತ್ರರಾದ ಪ್ರೆಸ್ ಫೋಟೋಗ್ರಾಫರ್ ರೇಣುಕಾ ಅವರು ಎದುರಾದರು. ಅಲ್ಲೇ ಎದುರುಬದಿ ಮಠದ ಆನೆ “ಲಕ್ಷ್ಮಿ” ನಿಂತಿತ್ತು. “ಬನ್ನಿ ಅಲ್ಲೇ ಆನೆ ಹತ್ತಿರ ನಿಂತು ಮಾತಾಡೋಣ” ಎನ್ನುತ್ತಾ ಮೂವರೂ ಅನಿರೀಕ್ಷಿತವಾಗಿ ಆನೆಯ ಬಿಡಾರಕ್ಕೆ ಬಂದೆವು.
ನಗರದ ಯಾವುದೋ ಒಂದು ಬಡಾವಣೆಗೆ ಬೆಳಗ್ಗೆ ಹೋಗಿ ಅಲ್ಲೆಲ್ಲ ಆರೆಂಟು ಕಿ.ಮೀ. ಸುತ್ತಾಡಿ ಸಂಜೆಯಷ್ಟೇ ಬಿಡಾರಕ್ಕೆ ವಾಪಸ್ ಬಂದಿದ್ದ “ಲಕ್ಷ್ಮಿ” ಹಸಿರು ತೆಂಗಿನ ಗರಿಯನ್ನು ತಿನ್ನುತ್ತಿದ್ದಳು. ಒಮ್ಮೊಮ್ಮೆ ಆ ಗರಿಯನ್ನು ಸೊಂಡಲಿನಲ್ಲಿ ಹಿಡಿದು ತನ್ನ ಮೈಮೇಲೆ ಸವರಿಕೊಂಡು ಸೊಳ್ಳೆ ಕಾಟವನ್ನು ನಿವಾರಿಸಿಕೊಳ್ಳುತ್ತಾ ಶಾಂತವಾಗಿ ನಿಂತಿದ್ದಳು. ಅಲ್ಲೇ ಆ ಆನೆಯ ಮಾವುತ ಅಥವಾ ಗಜಪಾಲಕ ಸಲೀಂ ಅವರು ಸಹಾ ಇದ್ದರು.
ಸಲೀಂ ಅವರೊಂದಿಗೆ ಹಾಗೆಯೇ ಮಾತನಾಡುತ್ತಾ ನಿಂತಾಗ ಆನೆಯ ದಿನಚರಿ ಕುರಿತ ಕೆಲ ಮಾಹಿತಿಗಳು ದೊರಕಿದವು. ಆನೆ “ಲಕ್ಷ್ಮಿ”ಗೆ ಈಗ 33 ವರ್ಷ ವಯಸ್ಸು. ಅದು ಇಲ್ಲಿಗೆ ಬಂದಾಗ ಸುಮಾರು ಒಂದು ಅಥವಾ ಎರಡು ವರ್ಷ ವಯಸ್ಸಿನ ಪುಟಾಣಿ ಮರಿ ಆನೆ. ಆಗಿನಿಂದ ಅದು ತುಮಕೂರಿನ ಪರಿಸರದಲ್ಲೇ, ಇಲ್ಲಿನ ಜನರ ನಡುವೆಯೇ, ಈ ಮಠದ ಆವರಣದ ಬಿಡಾರದಲ್ಲೇ ಬೆಳೆಯುತ್ತಿದೆ. ಈಗ ದೊಡ್ಡ ಆನೆಯಾಗಿ ಬೆಳೆದು ನಿಂತಿದೆ. ಸುಮಾರು 10 ಅಡಿಗಳಷ್ಟು ಎತ್ತರವಿದೆ. ಸುಮಾರು 6,300 ಕೆ.ಜಿ.ಯಷ್ಟು ತೂಕವಿದೆ. “ಲಕ್ಷ್ಮಿ”ಯು ನಗರದ ರಸ್ತೆಗಳಲ್ಲಿ ಸಂಚರಿಸುವಾಗ ಜನರು ಪ್ರೀತಿಯಿಂದ ಹಣ್ಣುಹಂಪಲು ನೀಡುತ್ತಿರುತ್ತಾರೆ. ಹಣವನ್ನೂ ನೀಡಿ ದೇವರೆಂದು ಕೈಮುಗಿಯುತ್ತಾರೆ. ಸಂಚಾರಿಗರು ಕುತೂಹಲದಿಂದ ನಿಂತು ನೋಡುತ್ತಿರುತ್ತಾರೆ.
“ಇಡೀ ರಾಜ್ಯದಲ್ಲೇ ಈ ವಯಸ್ಸಿಗೆ ಇಷ್ಟು ಎತ್ತರ ಹಾಗೂ ತೂಕ ಹೊಂದಿರುವ ಏಕೈಕ ಆನೆ ಇದು” ಎಂದು ಕಳೆದ 27 ವರ್ಷಗಳಿಂದ ಈ ಆನೆಯನ್ನು ಸಾಕಿ-ಸಲಹುತ್ತಿರುವ ಹಾವೇರಿ ಸಮೀಪದ ಹಲಗೇರಿ ಗ್ರಾಮದ ಮಾವುತ ಸಲೀಂ ಅವರು ಹೆಮ್ಮೆಯಿಂದ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ಈ ಆನೆಯನ್ನು ಕೇರಳಕ್ಕೆ ಒಯ್ದು ಗಂಡಾನೆಯೊಂದಿಗೆ ಸೇರಿಸಬೇಕೆಂಬ ಆಲೋಚನೆ ಇದೆ. ಇದಕ್ಕೆ ಅಧಿಕ ಖರ್ಚು-ವೆಚ್ಚ ಬರಲಿದ್ದು, ಕಾದುನೋಡಲಾಗುತ್ತಿದೆ” ಎಂಬ ವಿಷಯವನ್ನೂ ಅವರು ತಿಳಿಸಿದರು.
ನಾವು ಮಾತನಾಡುತ್ತಿರುವಾಗಲೇ ಗೃಹಿಣಿಯೊಬ್ಬರು ಸ್ಕೂಟರಿನಲ್ಲಿ ಬಂದರು. ಎರಡು ಬ್ಯಾಗುಗಳಲ್ಲಿ ತಂದಿದ್ದ ಬಾಳೆಹಣ್ಣುಗಳನ್ನು ಪ್ರೀತಿಯಿಂದ, ಭಕ್ತಿಯಿಂದ "ಲಕ್ಷ್ಮಿ" ಗೆ ನೀಡಿ, ನಮಿಸಿದರು. ಕುತೂಹಲದಿಂದ ವಿಚಾರಿಸಿದಾಗ ತಿಳಿದ ಸಂಗತಿಯೆಂದರೆ- “ನಗರದ ಶಿರಾಗೇಟ್ ನಿವಾಸಿಗಳಾದ ಅವರು ಈ ಆನೆಯನ್ನು ದೇವರೆಂದೇ ಭಾವಿಸಿದ್ದಾರೆ. ಈ ಆನೆಯ ಮುಂದೆ ಬಂದು ಪ್ರಾರ್ಥನೆ ಮಾಡಿ ಕೈಗೊಂಡ ಕೆಲಸಕಾರ್ಯಗಳೆಲ್ಲ ಯಶಸ್ವಿಯಾಗಿವೆಯಂತೆ. ಹೀಗಾಗಿ ಹಲವು ತಿಂಗಳುಗಳಿಂದ ಪ್ರತಿ ನಿತ್ಯ ಅವರು ಆನೆ ಬಿಡಾರಕ್ಕೆ ಬಂದು, ಆನೆಗೆ ಬಾಳೆ ಹಣ್ಣನ್ನು ನೀಡಿ ನಮಿಸುತ್ತಾರೆ.” ಅಷ್ಟರಲ್ಲೇ ಮತ್ತೊಬ್ಬ ವ್ಯಕ್ತಿ ಬಾಳೆಹಣ್ಣಿನ ಚಿಪ್ಪು ಹಿಡಿದು ಬಂದು ಆನೆಗೆ ತಿನ್ನಿಸಿ ಕೈಮುಗಿದು ಹೋದರು. ಇದು “ಲಕ್ಷ್ಮಿ” ಯು ತುಮಕೂರಿನ ಜನರಲ್ಲಿ ಮೂಡಿಸಿರುವ ಸದ್ಭಾವನೆ. ಈ ಪ್ರಸಂಗಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿರ್ಗಮಿಸಿದೆವು.
ಶ್ರೀ ವಿಶ್ವಾವಸು ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯಾದ ಇಂದು (ದಿ. 27-08-2025 ಬುಧವಾರ) ನಮ್ಮ ಮನೆಯಲ್ಲಿ ಶ್ರೀ ಗಣಪತಿಯ ಪೂಜೆಯೊಂದಿಗೆ ಈ ವರ್ಷದ "ಗಣೇಶ ಚತುರ್ಥಿ" ಸಂಪನ್ನಗೊಂಡಿತು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ವಿಘ್ನೇಶ್ವರನಿಗೆ ಮಂಗಳಾರತಿ ನೆರವೇರಿಸಿದರು. ನಾನು ಮತ್ತು ವಿಶ್ವನಾಥನ್ ಜೊತೆಯಲ್ಲಿದ್ದು ಪೂಜೆಯಲ್ಲಿ ಪಾಲ್ಗೊಂಡಿದ್ದೆವು. "ಲೋಕಾಃ ಸಮಸ್ತಾ ಸುಖಿನೋ ಭವಂತು" ಎಂದು ಪ್ರಾರ್ಥಿಸಿದೆವು.