* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 23 September 2018

with Dr.Sridhar & Sri Suryaprakash Pandith...

“ಜೀವನವದೊಂದು ಕಲೆ” – ನಾಡಿನ ಖ್ಯಾತ ವಿದ್ವಾಂಸರೂ, ಪತ್ರಕರ್ತರೂ, ನಮ್ಮ ಸನ್ಮಿತ್ರರೂ ಆದ ಶ್ರೀ ಸೂರ್ಯಪ್ರಕಾಶ್ ಪಂಡಿತ್ ಅವರ ಈ ಗ್ರಂಥ ಇಂದು (23-09-2018, ಭಾನುವಾರ) ಸಂಜೆ ಬೆಂಗಳೂರಿನ ರಾಜಾಜಿನಗರದ “ರಸಧ್ವನಿ ಕಲಾಕೇಂದ್ರ”ದಲ್ಲಿ ನಡೆದ ವಿದ್ವತ್ಪೂರ್ಣ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು. 
ಪ್ರಸಿದ್ಧ ಚಲನಚಿತ್ರ ಹಾಗೂ ಭರತನಾಟ್ಯ ಕಲಾವಿದರೂ, ಚಿಂತಕರೂ, ನಮ್ಮ ಸನ್ಮಿತ್ರರೂ ಆದ ಡಾ. ಶ್ರೀಧರ್ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ನಿವೃತ್ತ ಪ್ರಾಧ್ಯಾಪಕರೂ, ಬರಹಗಾರರೂ ಆದ ಡಾ. ಎಚ್.ಎನ್.ಮುರಳೀಧರ್ ಮತ್ತು ಶತಾವಧಾನಿಗಳೂ, ಬಹುಶ್ರುತ ವಿದ್ವಾಂಸರೂ ಆದ ಡಾ.ಆರ್.ಗಣೇಶ್ ಅವರು ಗ್ರಂಥವನ್ನು ಕುರಿತು ಮಾತನಾಡಿದರು.
ಇಂಥ ವಿದ್ವಾಂಸರನ್ನು ನೋಡುವ, ಅವರ ವಿದ್ವತ್ಪೂರ್ಣ ನುಡಿಗಳನ್ನಾಲಿಸುವ ಸುಯೋಗ ನಮ್ಮದಾಗಿತ್ತು. ಈ ಸಂದರ್ಭದಲ್ಲಿ ಡಾ.ಶ್ರೀಧರ್, ಶ್ರೀ ಸೂರ್ಯಪ್ರಕಾಶ್ ಪಂಡಿತ್ ಮತ್ತು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಂತ್ರಜ್ಞರೂ, ಬರಹಗಾರರೂ ಆದ ಶ್ರೀ ಸತ್ಯೇಶ್ ಬೆಳ್ಳೂರು ಅವರೊಡನೆ ನಾನು, ವಿಶ್ವನಾಥನ್, ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಹಾಗೂ ಎಂ.ಎಸ್.ಸುಹಾಸ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನೆನಪಿಗಾಗಿ ತೆಗೆದ ಫೋಟೋಗಳಿವು...
ಸನ್ಮಿತ್ರರಾದ ಪತ್ರಕರ್ತ ಶ್ರೀ ಘನಶ್ಯಾಮ್, ಖ್ಯಾತ ಆಹಾರತಜ್ಞರಾದ ಕೆ.ಸಿ.ರಘು, “ವಿವೇಕ ಹಂಸ” ಪತ್ರಿಕೆಯ ಶ್ರೀ ವಿ.ರಘು, ಪತ್ರಕರ್ತ ಶ್ರೀ ಶ್ರೀನಿವಾಸರಾವ್ ಮೊದಲಾದರವರ ಭೇಟಿಯೂ ಸಂತೋಷ ತಂದಿತು.












Thursday 20 September 2018

L R Narayanachar...ಹೋರಾಟರಾರರಾದ ಎಲ್.ಆರ್.ನಾರಾಯಣಾಚಾರ್

ಹೋರಾಟರಾರರಾದ ಎಲ್.ಆರ್.ನಾರಾಯಣಾಚಾರ್....

“ಸಾರ್..ಇಂದು ಪತ್ರಿಕೆಯಲ್ಲಿ ಈ ವಿಷಯ ಓದಿದೆ. ಉಪವಿಭಾಗಾಧಿಕಾರಿಗಳ ಆದೇಶದ ಪ್ರತಿ ನನ್ನಲ್ಲಿದೆ. ಜೊತೆಗೆ ಸುಪ್ರಿಂ ಕೋರ್ಟ್ ಆದೇಶದ ಪ್ರತಿಯೂ ಇದೆ. ನೀವು ಭೇಟಿ ಆದರೆ ಅದನ್ನು ಕೊಡುತ್ತೇನೆ'' -ನಿನ್ನೆ (19-09-2018, ಬುಧವಾರ) ಬೆಳ್ಳಂಬೆಳಗ್ಗೆ ಮಿತ್ರರೂ, ಸಾರ್ವಜನಿಕ ಹೋರಾಟಗಾರರೂ ಆದ ಶ್ರೀ  ಎಲ್.ಆರ್.ನಾರಾಯಣಾಚಾರ್ ಅವರು ನನಗೆ ಕರೆ ಮಾಡಿ ಹೇಳಿದರು.
“ಆಯಿತು ಆಚಾರ್ರೇ ...ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಬರುತ್ತೇನೆ'' ಎಂದೆ. ಅಲ್ಲಿ ಅವರ ಭೇಟಿಯಾಯಿತು. ಜೊತೆಗೇ ಸಾರ್ವಜನಿಕ ಹೋರಾಟಗಾರರಾದ ಶ್ರೀ ಜಿ.ಕೆ.ಶ್ರೀನಿವಾಸ್ ( ಟೂಡಾ ಮಾಜಿ ಸದಸ್ಯರು) ಮತ್ತು  ಶ್ರೀ ಇಮ್ರಾನ್ ಪಾಷ ಅವರೂ ಬಂದರು. 
ನಗರದ ಪಟ್ಟಭದ್ರಹಿತಾಸಕ್ತಿಗಳು, ಗೋಮುಖವ್ಯಾಘ್ರದಂತಹವರು ಹಾಗೂ ಅಧಿಕಾರಸ್ಥರಿಗೆ ಬಕೀಟು ಹಿಡಿಯುತ್ತ ಒಳಗೊಳಗೇ ಲಾಭ ಮಾಡಿಕೊಳ್ಳುವ ನಕಲಿಶಾಮರಂಥವರು, ಆಷಾಢಭೂತಿಗಳು ಮಾಡುತ್ತಿರುವ ದಗಲ್ಬಾಜಿತನದ ಬಗ್ಗೆ ಆಚಾರ್ರು ಕೆಂಡಕಾರಿದರು. ವಯಸ್ಸು 63 ಆಗಿ ಆರೋಗ್ಯದಲ್ಲಿ ಏರುಪೇರಾಗಿ ಸ್ವಲ್ಪ ಮೆತ್ತಗಾದಂತೆ ಕಾಣಿಸಿದರೂ, ಅವರ ಹೋರಾಟದ ಕಿಚ್ಚು ಸ್ವಲ್ಪವೂ ಬತ್ತಿಲ್ಲವೆಂಬುದನ್ನು ಅವರ ಮಾತುಗಳು ಹೇಳುತ್ತಿದ್ದವು.
"ಎಲ್.ಆರ್.ನಾರಾಯಣಾಚಾರ್ ನಮ್ಮ ತುಮಕೂರು ನಗರದ ಚಿಕ್ಕಪೇಟೆ ನಿವಾಸಿಗಳು. ಸರಿಸುಮಾರು 20-25 ವರ್ಷಗಳಷ್ಟು ಸುದೀರ್ಘ ಕಾಲದಿಂದಲೂ ಸಾರ್ವಜನಿಕ ಹೋರಾಟಗಾರರಾಗಿ ಗುರುತಿಸಲ್ಪಟ್ಟವರು. ಹಳೆಯದ್ದೊಂದು ಸೈಕಲ್ ಗೆ ಅನೇಕ ದಾಖಲಾತಿಗಳುಳ್ಳ ಬ್ಯಾಗ್ ಕಟ್ಟಿಕೊಂಡು ಊರಲ್ಲೆಲ್ಲ ಸಂಚರಿಸುತ್ತಿದ್ದವರು. ಪಾರ್ಕ್, ಆಟದ ಮೈದಾನ, ಕೆರೆಕಟ್ಟೆಗಳು ಮೊದಲಾದ ಸರ್ಕಾರಿ ಆಸ್ತಿಗಳು ಪಟ್ಟಭದ್ರರಿಂದ ಗುಳುಂ ಆಗಿರುವುದರ ವಿರುದ್ಧ ಸರ್ಕಾರಕ್ಕೆ ಸತತ ಅರ್ಜಿ ಬರೆಯುವುದು, ಬೆಂಗಳೂರಿಗೆ ತೆರಳಿ ಹಿರಿಯ ಅಧಿಕಾರಿಗಳಿಗೂ ದೂರು ಕೊಡುವುದು, ಮಾಹಿತಿ ಹಕ್ಕು ಅರ್ಜಿ ಮೂಲಕ ಮಾಹಿತಿ ಸಂಗ್ರಹಿಸುವುದು, ದೂರನ್ನು ರಾಜ್ಯ ಮಾಹಿತಿ ಆಯೋಗದವರೆಗೂ ಒಯ್ಯುವುದು, ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಹೋರಾಡುವುದು ಹೀಗೆ ಹೋರಾಡಿ-ಹೋರಾಡಿ ಅನೇಕ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾದವರು. ಅದೇ ಹೊತ್ತಿಗೆ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಆಸ್ತಿಗಳು ಪಟ್ಟಭದ್ರರಿಂದ ಗುಳುಂ ಆಗದಂತೆ ತಡೆದವರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೆಚ್ಚಿಬೀಳುವಂತೆ ಮಾಡಿದವರು. ಈ ಇಳಿ ವಯಸ್ಸಿನಲ್ಲೂ ಯಾವ್ಯಾವುದೋ ದಾಖಲಾತಿಗಳ ಫೈಲ್ ಹೊತ್ತುಕೊಂಡು ಕಚೇರಿ-ಕಚೇರಿಗೆ ಸುತ್ತಾಡುತ್ತಿರುವವರು. ಇಷ್ಟಾಗಿಯೂ ಅವರು ಸ್ವಂತದ ಕಷ್ಟಸುಖಗಳ ಬಗ್ಗೆ ಯಾರ ಬಳಿಯೂ ಏನೂ ಹೇಳಿಕೊಳ್ಳದ, ಯಾರಿಂದಲೂ ಏನನ್ನೂ ಕೇಳದ ಅಪರೂಪದ ಗುಣವುಳ್ಳವರು" ಎಂಬುದನ್ನು ತುಮಕೂರಿನ ತಿಳುವಳಿಕೆಯುಳ್ಳವರೆಲ್ಲರೂ ಬಲ್ಲರು.
- R.S. Iyer, Tumakuru

Sri L.R.Narayanachar and R.S.Iyer


R.S.Iyer, Sri Imran Pasha, Activist , Sri L.R.Narayanachar,& Sri G.K.Srinivas, Activist and Ex TUDA Member
-------------------------------------------------------------------------------------


Another Photo with Sri L R Narayanachar @ D.C. Office, Tumakuru . Advocate Sri Chandrachuda and Sri Imran Pasha also seen.

〰〰〰〰〰〰〰〰〰〰〰〰〰〰〰〰〰〰〰〰〰

ಈ ಕೆಳಗಿನ ಚಿತ್ರದಲ್ಲಿರುವವರು (ಎಡದಿಂದ) ಶ್ರೀ ಹೆಚ್.ಎಸ್.ಶಿವಕುಮಾರ್, ಹನುಮಂತಪುರ ಮತ್ತು ಶ್ರೀ ಶಾಮಣ್ಣ ರವರು. 

ಈರ್ವರೂ ತುಮಕೂರಿನಲ್ಲಿ ಒಂದು ಕಾಲದಲ್ಲಿ "ಭೂಮಿ ನುಂಗಣ್ಣ"  (Land Grabbers) ಮತ್ತಿತರ ಪಟ್ಟಭದ್ರಹಿತಾಸಕ್ತಿಗಳಿಗೆ ಸಿಂಹಸ್ವಪ್ನವಾಗಿದ್ದ  ಸಾರ್ವಜನಿಕ ಹೋರಾಟಗಾರರು. ರಸ್ತೆ, ಕೆರೆ, ಉದ್ಯಾನವನ, ಆಟದ ಮೈದಾನ, ಸರ್ಕಾರಿ ಜಾಗ ಮೊದಲಾದವುಗಳ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ರಿಯಿಂದ ಸರ್ಕಾರಕ್ಕೆ ಪತ್ರ ಬರೆಯುವುದು, ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವುದು, ಪೊಲೀಸರಿಗೆ ದೂರು ನೀಡುವುದು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು -ಹೀಗೆ ನಾನಾ ಮಾರ್ಗಗಳಿಂದ "ಭೂಮಿ ನುಂಗಣ್ಣ"ರಿಗೆ ಹಾಗೂ ಪಟ್ಟಭದ್ರರಿಗೆ ಇವರಿಬ್ಬರೂ ನಿದ್ದೆಗೆಡಿಸಿದ್ದರು. ಭ್ರಷ್ಟ ಅಧಿಕಾರಿಗಳೂ ಇವರನ್ನು ಕಂಡರೆ ಬೆವರುತ್ತಿದ್ದರು. ಒಂದು ಕಾಲದಲ್ಲಿ ಇವರುಗಳು ನಡೆಸಿದ ಹೋರಾಟದ ಫಲವಾಗಿ  "ಭೂಮಿ ನುಂಗಣ್ಸ" ರ ಪಾಲಾಗಿದ್ದ  ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಆಸ್ತಿಗಳು ಪುನಃ ಸರ್ಕಾರಕ್ಕೆ ಸೇರುವಂತಾದುದನ್ನು ತುಮಕೂರಿನ ಪ್ರಜ್ಞಾವಂತರು ಮರೆಯುವಂತಿಲ್ಲ. 

Sri H.S.Shivakumar, Hanumanthapura, Tumakuru & Sri Shamanna, Tumakuru

Friday 14 September 2018

@ Durgadahalli Lake...26-08-2018

ನಮ್ಮ ನೆಚ್ಚಿನ ತಾಣ ದುರ್ಗದ ಹಳ್ಳಿಯ ಕೆರೆ ಸುತ್ತಲಿನ ನಿಸರ್ಗ ಸೌಂದರ್ಯ ನಮಗೆ ಕಾಣಿಸಿದ್ದು ಹೀಗೆ.. 26-08-2018, ಭಾನುವಾರ ಮುಸ್ಸಂಜೆ ನಾನು, ವಿಶ್ವನಾಥನ್ ಮತ್ತು ಗೆಳೆಯ "ಆಟೋ ಯಡಿಯೂರಪ್ಪ" ಎಂದೇ ಜನಪ್ರಿಯರಾದ ಶ್ರೀ ಶಿವಕುಮಾರ್ ಅನಿರೀಕ್ಷಿತವಾಗಿ ಅಲ್ಲಿಗೆ ತೆರಳಿದ್ದೆವು. ಮುಸ್ಸಂಜೆ ಸೂರ್ಯಾಸ್ತವಾಗುತ್ತಿತ್ತು. ವಾತಾವರಣ ಪ್ರಶಾಂತವಾಗಿತ್ತು. ಸುತ್ತಲಿನ ನಿಸರ್ಗ ಸೌಂದರ್ಯ ಆಕರ್ಷಕವಾಗಿತ್ತು. ನಿಃಶಬ್ದವಾಗಿದ್ದ ಆ ಪರಿಸರ ಚೈತನ್ಯದಾಯಕವಾಗಿತ್ತು.








Nanjanagudu Temple-2

ಕಪಿಲಾ ನದಿಯ ದಡದಲ್ಲಿ….
-----------------------------
ಭಾಗ-2
ನಂಜನಗೂಡಿನ ಕಪಿಲಾ ನದಿಯ ದಡದಲ್ಲಿಬಂದು ಕುಳಿತಾಗ (09-09-2018, ಭಾನುವಾರ) ಸಂಜೆಯಾಗಿತ್ತು. ಇತ್ತೀಚಿನ ಪ್ರವಾಹ ತಗ್ಗಿದ್ದರೂ, ನೀರು ಗಣನೀಯ ಪ್ರಮಾಣದಲ್ಲಿದ್ದು ರಭಸವಾಗಿಯೇ ಹರಿಯುತ್ತಿತ್ತು. ಮುಸ್ಸಂಜೆಯಲ್ಲಿ ಮೆಟ್ಟಿಲ ಮೇಲೆ ಕುಳಿತು ನೀರಿನ ಹರಿವನ್ನು ನೋಡುವಾಗ ಆದ ಆನಂದ ಅವರ್ಣನೀಯ.
ಹರಿವ ನದಿಯಲ್ಲಿ ತೆಪ್ಪದಲ್ಲೊಂದು ಸುತ್ತು ಬರುವ ನಿರ್ಧಾರಕ್ಕೆ ಬಂದಾಗ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ತಾವು ಮೆಟ್ಟಿಲಲ್ಲೇ ಕುಳಿತಿರುವುದಾಗಿ ತಿಳಿಸಿದರು. ನಾನು, ವಿಶ್ವನಾಥನ್, ಬೆಳಗುಂಬ ವೆಂಕಟೇಶ್ ಮತ್ತು ಕೆ.ಎಂ. ಶಿವಕುಮಾರ್ (ಆಟೋ ಯಡಿಯೂರಪ್ಪ) ತೆಪ್ಪ ಹತ್ತಿದೆವು. ತೆಪ್ಪದ ಮಾಲೀಕ ಚಂದ್ರು ಎಂಬಾತ ತೆಪ್ಪವನ್ನು ಮೆಲ್ಲಗೆ ಮುನ್ನಡೆಸುತ್ತ ಇತ್ತೀಚಿನ ಜಲಪ್ರಳಯದ ಸಂದರ್ಭದಲ್ಲಿ ಉಂಟಾಗಿದ್ದ ಸನ್ನಿವೇಶವನ್ನು ಎಳೆಎಳೆಯಾಗಿ ವಿವರಿಸಿದ. ನದಿಯ ಮತ್ತೊಂದು ಬದಿಯವರೆಗೂ ಕರೆದೊಯ್ದು ಅಲ್ಲಿನ ಎತ್ತರದ ಮರಗಳನ್ನು ತೋರಿಸುತ್ತ, ಅಷ್ಟೆತ್ತರ ನೀರು ಬಂದಿತ್ತು ಎಂದಾಗ, ಅಂದಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ನಮಗೆ ಕಷ್ಟವಾಗಲಿಲ್ಲ. ತುಂಬಿದ್ದ ನದಿಯಲ್ಲಿ ತೆಪ್ಪದಲ್ಲೊಂದು ಸುತ್ತು ಬಂದುದು ನಮಗೆಲ್ಲ ಖುಷಿ ಕೊಟ್ಟಿತು.
ಸ್ನಾನಘಟ್ಟದಲ್ಲಿ ಅನೈರ್ಮಲ್ಯ
-----------------------------
ದುಃಖದ ಸಂಗತಿಯೆಂದರೆ ಕಪಿಲಾ ನದಿಯ ಸ್ನಾನಘಟ್ಟದ ಮೆಟ್ಟಿಲುಗಳೆಲ್ಲವೂ ಅನೈರ್ಮಲ್ಯದಿಂದ ಕೂಡಿತ್ತೆಂಬುದು. ಸ್ನಾನ ಮಾಡಿದ ಜನರು ತಮ್ಮ ಉಡುಪುಗಳನ್ನು ಅಲ್ಲೇ ಮೆಟ್ಟಿಲುಗಳಲ್ಲೇ ಬಿಸಾಕಿ ಹೋಗಿರುವುದನ್ನು ನೋಡಿದಾಗ ತುಂಬ ಬೇಸರವಾಯಿತು. ಕೆಲವರು ಅಲ್ಲೇ ಪಾತ್ರೆಗಳನ್ನು ತೊಳೆಯುತ್ತಿದ್ದರು. ಬದಿಯಲ್ಲೇ ಸ್ನಾನ ಮಾಡುತ್ತಿದ್ದರು. ಅಲ್ಲೇ ಹಾಕಿದ್ದ “ಸ್ವಚ್ಛತೆ ಕಾಪಾಡಿ” ಎಂಬ ಫಲಕವನ್ನೇ ಅಣಕಿಸಿದಂತೆ ಅಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿತ್ತು. “ನಮ್ಮ ಜನರಿಗೆ ಇಂಥ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತಹ ಅರಿವು ಮೂಡುವುದು ಯಾವಾಗ?” ಎಂಬ ಪ್ರಶ್ನೆಯೊಂದಿಗೆ ಅಲ್ಲಿಂದ ತುಮಕೂರಿನತ್ತ ಪ್ರಯಾಣ ಬೆಳೆಸಿದೆವು.







visit to Nanjanagudu Temple -1

ನಂಜನಗೂಡಿನ ದೇಗುಲದಲ್ಲಿ…
****************************
ಭಾಗ-1
ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಮರಳುವಾಗ (09-09-2018, ಭಾನುವಾರ) ಮಾರ್ಗಮಧ್ಯೆ ಸಂಜೆ ನಂಜನಗೂಡಿನ ಸುವಿಖ್ಯಾತ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ನಾವು (ನಾನು, ವಿಶ್ವನಾಥನ್, ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್, ಮಿತ್ರರಾದ ಶ್ರೀ ಬೆಳಗುಂಬ ವೆಂಕಟೇಶ್ ಮತ್ತು ಶ್ರೀ ಶಿವಕುಮಾರ್) ಭೇಟಿ ಕೊಟ್ಟೆವು. ಭಕ್ತಾದಿಗಳ ಸಂಖ್ಯೆ ತೀರಾ ವಿರಳವಾಗಿದ್ದುದರಿಂದ ಕೆಲವೇ ನಿಮಿಷಗಳಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದರ್ಶನವಾಯಿತು. ಸಂತೋಷವೂ ಆಯಿತು. ಆದರೆ ದೇವರ ಸನ್ನಿಧಿಯಲ್ಲಿಕುಳಿತಿದ್ದ ಅರ್ಚಕರೊಬ್ಬರು ಸ್ಮಾರ್ಟ್ ಫೋನ್ ನಲ್ಲಿ ಏನನ್ನೋ ವೀಕ್ಷಿಸುತ್ತ ತನ್ಮಯರಾಗಿದ್ದುದು ನಮಗೆ ಬೇಸರ ತರಿಸಿತು. “ಹಿಮವದ್ ಗೋಪಾಲಸ್ವಾಮಿ ದೇಗುಲದ ಅರ್ಚಕರು ಮತ್ತು ಸಿಬ್ಬಂದಿಯು ಬಂದ ಭಕ್ತಾದಿಗಳೊಂದಿಗೆ ಸ್ಪಂದಿಸುತ್ತಿದ್ದ ರೀತಿಗೂ, ಇಲ್ಲಿನವರ ರೀತಿಗೂ ಎಷ್ಟೊಂದು ಅಜಗಜಾಂತರ ವ್ಯತ್ಯಾಸ” ಎಂಬ ಉದ್ಗಾರದೊಂದಿಗೇ ದೇವಾಲಯದಲ್ಲೊಂದು ಪ್ರದಕ್ಷಿಣೆ ಹಾಕಿ ಹೊರಬಂದೆವು.
“ಸ್ವಾಮೀಜಿ, ಆಶೀರ್ವಾದ್ ಕೀಜಿಯೇ”
-----------------------------------
ದೇವಾಲಯದಿಂದ ಹೊರಬಂದು ಈಶ್ವರನ ಪ್ರತಿಮೆ ಮುಂದಿನ ರಸ್ತೆಯಲ್ಲಿ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ನಡೆದು ಹೋಗುವಾಗ ಸಾತ್ವಿಕ ಮುಖಲಕ್ಷಣವಿದ್ದ ಅಪರಿಚಿತ ಮಹಿಳೆಯೊಬ್ಬರು ಅವಸರ-ಅವಸರವಾಗಿ ನಮ್ಮ ಬಳಿ ಬಂದರು. ನಾವು ಅವರತ್ತ ಅಚ್ಚರಿಯಿಂದ ನೋಡುತ್ತಿರುವಂತೆಯೇ, ನಮ್ಮ ತಂದೆಯವರ ಬಳಿ “ಸ್ವಾಮೀಜಿ, ಆಶೀರ್ವಾದ್ ಕೀಜಿಯೇ” ಎಂದು ಹಿಂದಿಯಲ್ಲಿ ತುಂಬ ವಿನಯದಿಂದ ಕೇಳಿಕೊಂಡರು. ಪಕ್ಕದಲ್ಲೇ ಇದ್ದ ನಮಗೆ ಇವರು ಯಾರೋ ಉತ್ತರ ಭಾರತೀಯರೆಂಬುದು ಅರ್ಥವಾಯಿತು. ಅವರಿಗೆ ಕನ್ನಡ ಬರುವುದಿಲ್ಲವೆಂಬುದೂ ಗೊತ್ತಾಯಿತು. ನಮ್ಮ ತಂದೆಗೆ ವಿಷಯ ತಿಳಿಸಿದೆವು. “ಒಳ್ಳೆಯದಾಗಲಿ” ಎಂದು ಹರಸಿದರು. ಆದರೆ ಆ ಮಹಿಳೆಯು ಅಷ್ಟಕ್ಕೇ ಬಿಡದೆ ನಮ್ಮ ತಂದೆಯವರ ಬಲಹಸ್ತವನ್ನು ಕ್ಷಣಕಾಲ ತನ್ನ ತಲೆಯ ಮೇಲಿಟ್ಟುಕೊಂಡು ಸಂತೋಷ ಪಟ್ಟು, ಕೃತಜ್ಞತೆ ಸಲ್ಲಿಸಿ ಹೊರಟುಹೋದರು. ನಾನು ಮತ್ತು ವಿಶ್ವನಾಥನ್ ಈ ಪ್ರಸಂಗ ನೋಡುತ್ತ ಹಾಗೆಯೇ ಮೂಕರಾಗಿ ನಿಂತಿದ್ದೆವು.







Himavad Gopalaswamy Temple -2

ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ಸುಂದರ ಪರಿಸರ...
---------------------------------------------------
* ಭಾಗ-2
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪರಿಸರ ಮನೋಹರವಾದುದು. ದೃಷ್ಟಿ ಹಾಯುವಷ್ಟು ದೂರದವರೆಗೂ ನಮಗೆ ಗೋಚರಿಸುವುದು ಬೆಟ್ಟ ಗುಡ್ಡಗಳು, ಹಸಿರು ಹೊದ್ದ ದಟ್ಟ ಅಡವಿ ಮತ್ತು ಆಗಸದಲ್ಲಿ ತೇಲಿ ಹೋಗುತ್ತಿರುವ ಮೋಡಗಳು...
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದ ಈ ಸ್ಥಳಕ್ಕೆ 09-09-2018, ಭಾನುವಾರ ಬೆಳಗ್ಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ತೆರಳಿದ್ದೆವು. ನಮ್ಮೊಡನೆ ನಮ್ಮ ಆತ್ಮೀಯ ಮಿತ್ರರಾದ ಶ್ರೀ ಬೆಳಗುಂಬ ವೆಂಕಟೇಶ್ ಮತ್ತು ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಇದ್ದರು.









Visit to Himavad Gopalaswamy Hills 09-09-2018 Sunday

ಹಿಮವದ್ ಗೋಪಾಲಸ್ವಾಮಿ ಸನ್ನಿಧಿಯಲ್ಲಿ...
************************************
ಭಾಗ-1
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಾಕೃತಿಕ ಸೊಬಗನ್ನು ಅಲ್ಲಿಗೆ ತೆರಳಿಯೇ ಅನುಭವಿಸಬೇಕು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿಯ ಸುಂದರ ದೇಗುಲವಿದೆ. ಪುರಾತನವಾದರೂ ಆಕರ್ಷಕವಾಗಿದೆ. ದಟ್ಟ ಕಾನನದ ನಡುವಿನ ಬೆಟ್ಟದಲ್ಲಿದೆ ಈ ದೇಗುಲ. ಸುತ್ತಲೂ- ಕಣ್ಣು ಹಾಯ್ದಷ್ಟು ದೂರವೂ ನಮಗೆ ಕಾಣುವುದು ಬೆಟ್ಟಗುಡ್ಡಗಳು ಹಾಗೂ ದಟ್ಟ ಕಾನನ. ಅದೃಷ್ಟವಿದ್ದರೆ ಕಾಡಾನೆಗಳ ದರ್ಶನ!! (ನಮಗಂತೂ ಕಾಡಾನೆಗಳ ದರ್ಶನ ಆಗಿದ್ದು ರೋಮಾಂಚನ ಉಂಟುಮಾಡಿತು). ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಬೆಟ್ಟದ ಬುಡದಲ್ಲಿ ಮಾಡಿರುವ "ಪಾರ್ಕಿಂಗ್ ಜಾಗ"ದಲ್ಲಿ ಶುಲ್ಕ ನೀಡಿ ವಾಹನ ನಿಲುಗಡೆ ಮಾಡಬೇಕು. ಬಳಿಕ ಬೆಟ್ಟಕ್ಕೆ 20 ರೂ. ಟಿಕೆಟ್ ಪಡೆದು, ಸಾರಿಗೆ ಸಂಸ್ಥೆ ಬಸ್ ನಲ್ಲಿ ಮಾತ್ರ ಹೋಗಿ ಬರಬೇಕು. ಬೆಳಗ್ಗೆ 11-30 ರಿಂದ ಮಧ್ಯಾಹ್ನದವರೆಗೂ ಇಲ್ಲಿಗೆ ಬಂದವರೆಲ್ಲರಿಗೂ "ಪ್ರಸಾದ" (ಊಟ)ದ ವ್ಯವಸ್ಥೆ ಮಾಡಿರುವುದು ಭಕ್ತಾದಿಗಳ ಪಾಲಿಗೆ ವರಪ್ರದವಾಗಿದೆ. ದೇವಾಲಯದಲ್ಲಿ ಅರ್ಚಕರು ಮತ್ತು ಸಿಬ್ಬಂದಿಯವರು ಇಲ್ಲಿಗೆ ಬರುವ ಭಕ್ತಾದಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ಮತ್ತು ಭಕ್ತಾದಿಗಳಿಗೆ ಪ್ರಸಾದ ಸ್ವೀಕರಿಸಿ ಹೋಗುವಂತೆ ಪ್ರೀತಿಯಿಂದ ಮನವಿ ಮಾಡುವುದು ವಿಶೇಷವಾಗಿ ನಮ್ಮ ಗಮನ ಸೆಳೆಯಿತು. ಇಂದು (09-09-2018, ಭಾನುವಾರ) ಬೆಳಗ್ಗೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಬೆಟ್ಟಕ್ಕೆ ತೆರಳಿದ್ದೆವು. ನಮ್ಮೊಡನೆ ನಮ್ಮ ಆತ್ಮೀಯ ಮಿತ್ರರಾದ ಶ್ರೀ ಬೆಳಗುಂಬ ವೆಂಕಟೇಶ್ ಮತ್ತು ಶ್ರೀ ಕೆ.ಎಂ.ಶಿವಕುಮಾರ್ (ಆಟೋ ಯಡಿಯೂರಪ್ಪ) ಇದ್ದರು.