* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday, 14 September 2018

Nanjanagudu Temple-2

ಕಪಿಲಾ ನದಿಯ ದಡದಲ್ಲಿ….
-----------------------------
ಭಾಗ-2
ನಂಜನಗೂಡಿನ ಕಪಿಲಾ ನದಿಯ ದಡದಲ್ಲಿಬಂದು ಕುಳಿತಾಗ (09-09-2018, ಭಾನುವಾರ) ಸಂಜೆಯಾಗಿತ್ತು. ಇತ್ತೀಚಿನ ಪ್ರವಾಹ ತಗ್ಗಿದ್ದರೂ, ನೀರು ಗಣನೀಯ ಪ್ರಮಾಣದಲ್ಲಿದ್ದು ರಭಸವಾಗಿಯೇ ಹರಿಯುತ್ತಿತ್ತು. ಮುಸ್ಸಂಜೆಯಲ್ಲಿ ಮೆಟ್ಟಿಲ ಮೇಲೆ ಕುಳಿತು ನೀರಿನ ಹರಿವನ್ನು ನೋಡುವಾಗ ಆದ ಆನಂದ ಅವರ್ಣನೀಯ.
ಹರಿವ ನದಿಯಲ್ಲಿ ತೆಪ್ಪದಲ್ಲೊಂದು ಸುತ್ತು ಬರುವ ನಿರ್ಧಾರಕ್ಕೆ ಬಂದಾಗ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ತಾವು ಮೆಟ್ಟಿಲಲ್ಲೇ ಕುಳಿತಿರುವುದಾಗಿ ತಿಳಿಸಿದರು. ನಾನು, ವಿಶ್ವನಾಥನ್, ಬೆಳಗುಂಬ ವೆಂಕಟೇಶ್ ಮತ್ತು ಕೆ.ಎಂ. ಶಿವಕುಮಾರ್ (ಆಟೋ ಯಡಿಯೂರಪ್ಪ) ತೆಪ್ಪ ಹತ್ತಿದೆವು. ತೆಪ್ಪದ ಮಾಲೀಕ ಚಂದ್ರು ಎಂಬಾತ ತೆಪ್ಪವನ್ನು ಮೆಲ್ಲಗೆ ಮುನ್ನಡೆಸುತ್ತ ಇತ್ತೀಚಿನ ಜಲಪ್ರಳಯದ ಸಂದರ್ಭದಲ್ಲಿ ಉಂಟಾಗಿದ್ದ ಸನ್ನಿವೇಶವನ್ನು ಎಳೆಎಳೆಯಾಗಿ ವಿವರಿಸಿದ. ನದಿಯ ಮತ್ತೊಂದು ಬದಿಯವರೆಗೂ ಕರೆದೊಯ್ದು ಅಲ್ಲಿನ ಎತ್ತರದ ಮರಗಳನ್ನು ತೋರಿಸುತ್ತ, ಅಷ್ಟೆತ್ತರ ನೀರು ಬಂದಿತ್ತು ಎಂದಾಗ, ಅಂದಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ನಮಗೆ ಕಷ್ಟವಾಗಲಿಲ್ಲ. ತುಂಬಿದ್ದ ನದಿಯಲ್ಲಿ ತೆಪ್ಪದಲ್ಲೊಂದು ಸುತ್ತು ಬಂದುದು ನಮಗೆಲ್ಲ ಖುಷಿ ಕೊಟ್ಟಿತು.
ಸ್ನಾನಘಟ್ಟದಲ್ಲಿ ಅನೈರ್ಮಲ್ಯ
-----------------------------
ದುಃಖದ ಸಂಗತಿಯೆಂದರೆ ಕಪಿಲಾ ನದಿಯ ಸ್ನಾನಘಟ್ಟದ ಮೆಟ್ಟಿಲುಗಳೆಲ್ಲವೂ ಅನೈರ್ಮಲ್ಯದಿಂದ ಕೂಡಿತ್ತೆಂಬುದು. ಸ್ನಾನ ಮಾಡಿದ ಜನರು ತಮ್ಮ ಉಡುಪುಗಳನ್ನು ಅಲ್ಲೇ ಮೆಟ್ಟಿಲುಗಳಲ್ಲೇ ಬಿಸಾಕಿ ಹೋಗಿರುವುದನ್ನು ನೋಡಿದಾಗ ತುಂಬ ಬೇಸರವಾಯಿತು. ಕೆಲವರು ಅಲ್ಲೇ ಪಾತ್ರೆಗಳನ್ನು ತೊಳೆಯುತ್ತಿದ್ದರು. ಬದಿಯಲ್ಲೇ ಸ್ನಾನ ಮಾಡುತ್ತಿದ್ದರು. ಅಲ್ಲೇ ಹಾಕಿದ್ದ “ಸ್ವಚ್ಛತೆ ಕಾಪಾಡಿ” ಎಂಬ ಫಲಕವನ್ನೇ ಅಣಕಿಸಿದಂತೆ ಅಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿತ್ತು. “ನಮ್ಮ ಜನರಿಗೆ ಇಂಥ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತಹ ಅರಿವು ಮೂಡುವುದು ಯಾವಾಗ?” ಎಂಬ ಪ್ರಶ್ನೆಯೊಂದಿಗೆ ಅಲ್ಲಿಂದ ತುಮಕೂರಿನತ್ತ ಪ್ರಯಾಣ ಬೆಳೆಸಿದೆವು.







No comments:

Post a Comment