ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Monday, 24 November 2025

Durgadahalli Lake & Vidyashankara Temple- 2025- ದುರ್ಗದ ಹಳ್ಳಿ ಕೆರೆ ಮತ್ತು ವಿದ್ಯಾಶಂಕರ ದೇವಾಲಯ

 





ಹಲವು ದಿನಗಳ ಮೋಡ ಮತ್ತು ಮಳೆಯ ಆಟದ ಬಳಿಕ ಇಂದು ಬೆಳಗ್ಗೆ ಬಿರುಬಿಸಿಲು ಬಂದ ಹಿನ್ನೆಲೆಯಲ್ಲಿ ನಮ್ಮ ನೆಚ್ಚಿನ ಸ್ಥಳವಾದ ದುರ್ಗದ ಹಳ್ಳಿಯ ಕೆರೆ ಮತ್ತು ಪಕ್ಕದ ಪುರಾತನ ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ನಾನು ಮತ್ತು ವಿಶ್ವನಾಥನ್ ದಿಢೀರನೆ ಹೋಗಿ ಬಂದೆವು... ದೇವರಾಯನ ದುರ್ಗದ ಅರಣ್ಯ ಪ್ರದೇಶ ಇತ್ತೀಚಿನ ಸತತ ಮಳೆಯಿಂದ ಹಸಿರಿನಿಂದ ಕಂಗೊಳಿಸುತ್ತಿದೆ..
-ಆರ್.ಎಸ್.ಅಯ್ಯರ್, ತುಮಕೂರು, ದಿ. 09-09-2025 #rsiyertumakuru














Sunday, 23 November 2025

Elephant LAKSHMi- ತುಮಕೂರಿನ ಹೆಮ್ಮೆಯ ಆನೆ "ಲಕ್ಷ್ಮೀ" - 2025

 










ತುಮಕೂರಿನ ಹೆಮ್ಮೆಯ ಆನೆ - "ಲಕ್ಷ್ಮಿ" …
ಚಿಕ್ಕಪೇಟೆ ಕಡೆಯಿಂದ ಇಂದು (ದಿ. 02-09-2025) ಮುಸ್ಸಂಜೆ ನಾನು ಮತ್ತು ವಿಶ್ವನಾಥನ್ ಬೈಕ್ ನಲ್ಲಿ ಜಯನಗರದತ್ತ ಹಿಂತಿರುಗುವಾಗ “ನಮ್ಮ ತುಮಕೂರು” ನಗರದ ಹೊರಪೇಟೆಯ ಶ್ರೀ ಕರಿಬಸವಸ್ವಾಮಿಗಳ ಮಠದ ತಿರುವಿನ ಬಳಿ ಮಿತ್ರರಾದ ಪ್ರೆಸ್ ಫೋಟೋಗ್ರಾಫರ್ ರೇಣುಕಾ ಅವರು ಎದುರಾದರು. ಅಲ್ಲೇ ಎದುರುಬದಿ ಮಠದ ಆನೆ “ಲಕ್ಷ್ಮಿ” ನಿಂತಿತ್ತು. “ಬನ್ನಿ ಅಲ್ಲೇ ಆನೆ ಹತ್ತಿರ ನಿಂತು ಮಾತಾಡೋಣ” ಎನ್ನುತ್ತಾ ಮೂವರೂ ಅನಿರೀಕ್ಷಿತವಾಗಿ ಆನೆಯ ಬಿಡಾರಕ್ಕೆ ಬಂದೆವು.
ನಗರದ ಯಾವುದೋ ಒಂದು ಬಡಾವಣೆಗೆ ಬೆಳಗ್ಗೆ ಹೋಗಿ ಅಲ್ಲೆಲ್ಲ ಆರೆಂಟು ಕಿ.ಮೀ. ಸುತ್ತಾಡಿ ಸಂಜೆಯಷ್ಟೇ ಬಿಡಾರಕ್ಕೆ ವಾಪಸ್ ಬಂದಿದ್ದ “ಲಕ್ಷ್ಮಿ” ಹಸಿರು ತೆಂಗಿನ ಗರಿಯನ್ನು ತಿನ್ನುತ್ತಿದ್ದಳು. ಒಮ್ಮೊಮ್ಮೆ ಆ ಗರಿಯನ್ನು ಸೊಂಡಲಿನಲ್ಲಿ ಹಿಡಿದು ತನ್ನ ಮೈಮೇಲೆ ಸವರಿಕೊಂಡು ಸೊಳ್ಳೆ ಕಾಟವನ್ನು ನಿವಾರಿಸಿಕೊಳ್ಳುತ್ತಾ ಶಾಂತವಾಗಿ ನಿಂತಿದ್ದಳು. ಅಲ್ಲೇ ಆ ಆನೆಯ ಮಾವುತ ಅಥವಾ ಗಜಪಾಲಕ ಸಲೀಂ ಅವರು ಸಹಾ ಇದ್ದರು.
ಸಲೀಂ ಅವರೊಂದಿಗೆ ಹಾಗೆಯೇ ಮಾತನಾಡುತ್ತಾ ನಿಂತಾಗ ಆನೆಯ ದಿನಚರಿ ಕುರಿತ ಕೆಲ ಮಾಹಿತಿಗಳು ದೊರಕಿದವು. ಆನೆ “ಲಕ್ಷ್ಮಿ”ಗೆ ಈಗ 33 ವರ್ಷ ವಯಸ್ಸು. ಅದು ಇಲ್ಲಿಗೆ ಬಂದಾಗ ಸುಮಾರು ಒಂದು ಅಥವಾ ಎರಡು ವರ್ಷ ವಯಸ್ಸಿನ ಪುಟಾಣಿ ಮರಿ ಆನೆ. ಆಗಿನಿಂದ ಅದು ತುಮಕೂರಿನ ಪರಿಸರದಲ್ಲೇ, ಇಲ್ಲಿನ ಜನರ ನಡುವೆಯೇ, ಈ ಮಠದ ಆವರಣದ ಬಿಡಾರದಲ್ಲೇ ಬೆಳೆಯುತ್ತಿದೆ. ಈಗ ದೊಡ್ಡ ಆನೆಯಾಗಿ ಬೆಳೆದು ನಿಂತಿದೆ. ಸುಮಾರು 10 ಅಡಿಗಳಷ್ಟು ಎತ್ತರವಿದೆ. ಸುಮಾರು 6,300 ಕೆ.ಜಿ.ಯಷ್ಟು ತೂಕವಿದೆ. “ಲಕ್ಷ್ಮಿ”ಯು ನಗರದ ರಸ್ತೆಗಳಲ್ಲಿ ಸಂಚರಿಸುವಾಗ ಜನರು ಪ್ರೀತಿಯಿಂದ ಹಣ್ಣುಹಂಪಲು ನೀಡುತ್ತಿರುತ್ತಾರೆ. ಹಣವನ್ನೂ ನೀಡಿ ದೇವರೆಂದು ಕೈಮುಗಿಯುತ್ತಾರೆ. ಸಂಚಾರಿಗರು ಕುತೂಹಲದಿಂದ ನಿಂತು ನೋಡುತ್ತಿರುತ್ತಾರೆ.
“ಇಡೀ ರಾಜ್ಯದಲ್ಲೇ ಈ ವಯಸ್ಸಿಗೆ ಇಷ್ಟು ಎತ್ತರ ಹಾಗೂ ತೂಕ ಹೊಂದಿರುವ ಏಕೈಕ ಆನೆ ಇದು” ಎಂದು ಕಳೆದ 27 ವರ್ಷಗಳಿಂದ ಈ ಆನೆಯನ್ನು ಸಾಕಿ-ಸಲಹುತ್ತಿರುವ ಹಾವೇರಿ ಸಮೀಪದ ಹಲಗೇರಿ ಗ್ರಾಮದ ಮಾವುತ ಸಲೀಂ ಅವರು ಹೆಮ್ಮೆಯಿಂದ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ಈ ಆನೆಯನ್ನು ಕೇರಳಕ್ಕೆ ಒಯ್ದು ಗಂಡಾನೆಯೊಂದಿಗೆ ಸೇರಿಸಬೇಕೆಂಬ ಆಲೋಚನೆ ಇದೆ. ಇದಕ್ಕೆ ಅಧಿಕ ಖರ್ಚು-ವೆಚ್ಚ ಬರಲಿದ್ದು, ಕಾದುನೋಡಲಾಗುತ್ತಿದೆ” ಎಂಬ ವಿಷಯವನ್ನೂ ಅವರು ತಿಳಿಸಿದರು.
ನಾವು ಮಾತನಾಡುತ್ತಿರುವಾಗಲೇ ಗೃಹಿಣಿಯೊಬ್ಬರು ಸ್ಕೂಟರಿನಲ್ಲಿ ಬಂದರು. ಎರಡು ಬ್ಯಾಗುಗಳಲ್ಲಿ ತಂದಿದ್ದ ಬಾಳೆಹಣ್ಣುಗಳನ್ನು ಪ್ರೀತಿಯಿಂದ, ಭಕ್ತಿಯಿಂದ "ಲಕ್ಷ್ಮಿ" ಗೆ ನೀಡಿ, ನಮಿಸಿದರು. ಕುತೂಹಲದಿಂದ ವಿಚಾರಿಸಿದಾಗ ತಿಳಿದ ಸಂಗತಿಯೆಂದರೆ- “ನಗರದ ಶಿರಾಗೇಟ್ ನಿವಾಸಿಗಳಾದ ಅವರು ಈ ಆನೆಯನ್ನು ದೇವರೆಂದೇ ಭಾವಿಸಿದ್ದಾರೆ. ಈ ಆನೆಯ ಮುಂದೆ ಬಂದು ಪ್ರಾರ್ಥನೆ ಮಾಡಿ ಕೈಗೊಂಡ ಕೆಲಸಕಾರ್ಯಗಳೆಲ್ಲ ಯಶಸ್ವಿಯಾಗಿವೆಯಂತೆ. ಹೀಗಾಗಿ ಹಲವು ತಿಂಗಳುಗಳಿಂದ ಪ್ರತಿ ನಿತ್ಯ ಅವರು ಆನೆ ಬಿಡಾರಕ್ಕೆ ಬಂದು, ಆನೆಗೆ ಬಾಳೆ ಹಣ್ಣನ್ನು ನೀಡಿ ನಮಿಸುತ್ತಾರೆ.” ಅಷ್ಟರಲ್ಲೇ ಮತ್ತೊಬ್ಬ ವ್ಯಕ್ತಿ ಬಾಳೆಹಣ್ಣಿನ ಚಿಪ್ಪು ಹಿಡಿದು ಬಂದು ಆನೆಗೆ ತಿನ್ನಿಸಿ ಕೈಮುಗಿದು ಹೋದರು. ಇದು “ಲಕ್ಷ್ಮಿ” ಯು ತುಮಕೂರಿನ ಜನರಲ್ಲಿ ಮೂಡಿಸಿರುವ ಸದ್ಭಾವನೆ. ಈ ಪ್ರಸಂಗಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿರ್ಗಮಿಸಿದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-09-2025 #rsiyertumakuru.

Ganesha Chaturthi -2025- ಗಣೇಶ ಚತುರ್ಥಿ- 27-08-2025







 ಶ್ರೀ ವಿಶ್ವಾವಸು ನಾಮ ಸಂವತ್ಸರದ ಭಾದ್ರಪದ ಶುಕ್ಲ ಚೌತಿಯಾದ ಇಂದು (ದಿ. 27-08-2025 ಬುಧವಾರ) ನಮ್ಮ ಮನೆಯಲ್ಲಿ ಶ್ರೀ ಗಣಪತಿಯ ಪೂಜೆಯೊಂದಿಗೆ ಈ ವರ್ಷದ "ಗಣೇಶ ಚತುರ್ಥಿ" ಸಂಪನ್ನಗೊಂಡಿತು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ವಿಘ್ನೇಶ್ವರನಿಗೆ ಮಂಗಳಾರತಿ ನೆರವೇರಿಸಿದರು. ನಾನು ಮತ್ತು ವಿಶ್ವನಾಥನ್ ಜೊತೆಯಲ್ಲಿದ್ದು ಪೂಜೆಯಲ್ಲಿ ಪಾಲ್ಗೊಂಡಿದ್ದೆವು. "ಲೋಕಾಃ ಸಮಸ್ತಾ ಸುಖಿನೋ ಭವಂತು" ಎಂದು ಪ್ರಾರ್ಥಿಸಿದೆವು.

-ಆರ್.ಎಸ್.ಅಯ್ಯರ್ ತುಮಕೂರು, ದಿ. 27-08-2925 #rsiyertumakuru


https://youtube.com/shorts/r5FaGKfMOD4?si=v4ssoIDrC7XOEzpg



Thursday, 21 August 2025

ವಿಪ್ರ ಮುಖಂಡರಿಂದ ಸನ್ಮಾನ - ದಿ.21-08-2025- Honored by Vipra leaders


 ವಿಪ್ರ ಮುಖಂಡರಿಂದ ಗೌರವಾರ್ಪಣೆ
ದಶಕಗಳ ಹಿಂದಿನ ಸ್ನೇಹಿತರಾದ ಶ್ರೀ ಹೆಚ್.ಎನ್.ಚಂದ್ರಶೇಖರ್ ರವರು ಮೊದಲೇ ತಿಳಿಸಿದ್ದಂತೆ ಇಂದು (ದಿ. 21-08-2025) ಸಂಜೆ ನಮ್ಮ ಮನೆಗೆ ಆಗಮಿಸಿದ್ದರು. ತುಮಕೂರಿನ ಹಿರಿಯ ಸ್ಟಾಂಪ್ ವೆಂಡರ್ ಆಗಿರುವ ಶ್ರೀಯುತರು, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಗೊಂಡ ಹಿರಿಮೆಯನ್ನೂ ಪಡೆದ ಸಜ್ಜನರು.
ಇವರೊಡನೆ ಯುವ ಮಿತ್ರ ಡಾ. ಹೆಚ್.ಹರೀಶ್ ರವರೂ ಆಗಮಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿಯೂ, ತುಮಕೂರು ಜಿಲ್ಲಾ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಯೂ ಆದ ಇವರು, ಅನನ್ಯ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿಯೂ ಆಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂದಡಿಯಿಡುತ್ತಿದ್ದಾರೆ. ಇವರು ನಗರದ ಪ್ರಸಿದ್ಧ ಅಡುಗೆ ಕಂಟ್ರಾಕ್ಟರ್ ಆಗಿರುವ ಹಾಗೂ ಪ್ರಸ್ತುತ ಶ್ರೀ ಶಂಕರ ಮಠದ ಅಧ್ಯಕ್ಷರೂ ಆಗಿರುವ ಶ್ರೀ ಹಿರಿಯಣ್ಣನವರ ಸುಪುತ್ರರು.
ಬ್ರಾಹ್ಮಣ ಸಮಾಜದ ಈರ್ವರೂ ಮುಖಂಡರು ನಮ್ಮ ತಂದೆಯವರನ್ನು ಭೇಟಿ ಮಾಡಬೇಕೆಂಬ ಆಶಯದಿಂದ ಮೊದಲೇ ಫೋನ್ ಮಾಡಿ ಆಗಮಿಸಿದ್ದರು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೆ, 1968 ರಲ್ಲೇ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ ಸುಮಾರು ನಾಲ್ಕು ದಶಕಗಳಕಾಲ ಮುನ್ನಡೆಸಿದವರು. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಈ ಈರ್ವರೂ ಮುಖಂಡರು ರಾಮಚಂದ್ರನ್ ರವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ಸಮರ್ಪಿಸಿ ಗೌರವಿಸಿದರಲ್ಲದೆ, ಹಿರಿಯರ ಆಶೀರ್ವಾದ ಪಡೆದುಕೊಂಡು ಹರ್ಷಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 21-08-2025








Saturday, 5 July 2025

Shivasathya Interview in DD- 02-07-2025- ಚಂದನ ವಾಹಿನಿಯಲ್ಲಿ ಶಿವಸತ್ಯ ಸಂದರ್ಶನ

 






ಹೆಸರಾಂತ ಸಂಗೀತ ನಿರ್ದೇಶಕರೂ, ಸಂಗೀತ ಸಂಯೋಜಕರೂ, ಪಕ್ಕವಾದ್ಯ ಕಲಾವಿದರೂ (ವಿಶೇಷವಾಗಿ ತಬಲ), ಅಸಂಖ್ಯಾತ ಧಾರಾವಾಹಿಗಳಿಗೆ ಹಿನ್ನೆಲೆ ಸಂಗೀತ ನೀಡಿರುವವರೂ ಆಗಿರುವ ಬಹುಮುಖ ಪ್ರತಿಭೆಯ ಕಲಾವಿದ ಶ್ರೀ ಶಿವಸತ್ಯ ಅವರ ನೇರ ಸಂದರ್ಶನ (ಲೈವ್) ಬೆಂಗಳೂರು ದೂರದರ್ಶನ “ಚಂದನ” ವಾಹಿನಿಯಲ್ಲಿ ಇಂದು (ದಿ. 02-07-2025) ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಪ್ರಸಾರವಾಯಿತು. ನಿರೂಪಕಿ ಶ್ರೀಮತಿ ಸಂಧ್ಯಾಭಟ್ ರವರು ನಡೆಸಿಕೊಟ್ಟ ಈ ಸುಂದರ ಕಾರ್ಯಕ್ರಮದಲ್ಲಿ ಶ್ರೀ ಶಿವಸತ್ಯ ರವರು ತಮ್ಮ ಕಲಾ ಸಾಧನೆಯನ್ನು ಮನಮುಟ್ಟುವಂತೆ ವಿವರಿಸಿದರು.
ಶ್ರೀ ಶಿವಸತ್ಯ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಗಾಯಕ ದಿ|| ಶ್ರೀ ಸಿ.ಅಶ್ವಥ್ ರವರು ಹಾಡು ಹಾಡಿದ್ದಾರೆ. ಪ್ರಖ್ಯಾತ ಗಾಯಕರಾದ ದಿ|| ಶ್ರೀ ಪಿ.ಬಿ. ಶ್ರೀನಿವಾಸ್ ರವರು, ದಿ|| ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು, ಗಾನ ಕೋಗಿಲೆ ಶ್ರೀಮತಿ ಎಸ್.ಜಾನಕಿಯವರು ಮೊದಲಾದ ದಿಗ್ಗಜರಿಗೆ ಪಕ್ಕವಾದ್ಯ ನುಡಿಸಿದ ಹೆಗ್ಗಳಿಕೆಯನ್ನು ಶ್ರೀ ಶಿವಸತ್ಯ ಹೊಂದಿದ್ದಾರೆ.
ಶ್ರೀ ಶಿವಸತ್ಯರವರು ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿದ್ದ ದಿ|| ಶ್ರೀ ಎಂ.ಎಸ್.ಸತ್ಯರವರ ಸುಪುತ್ರರು. ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಅವರ ಪತಿ.
ಇಂದು ಟಿ.ವಿ.ಯಲ್ಲಿ ಈ ಕಾರ್ಯಕ್ರಮವನ್ನು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಅತ್ಯುತ್ಸಾಹದಿಂದ ವೀಕ್ಷಿಸಿ ಆನಂದಿಸಿದರು. ತಮ್ಮ ಅಳಿಯನ ಸಾಧನೆಯನ್ನು ಹೆಮ್ಮೆಯಿಂದ ನೋಡಿ ಸಂತೋಷಪಟ್ಟರು. ಆ ಸಂತೋಷದಲ್ಲಿ ನಾನು ಮತ್ತು ವಿಶ್ವನಾಥನ್ ಸಹಾ ಭಾಗಿಯಾದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-07-2025 #rsiyertumakuru


Monday, 9 June 2025

Sriranjini Visit /2025 / ಶ್ರೀರಂಜಿನಿ ಭೇಟಿ


 ತಾತ-ಮೊಮ್ಮಗಳ ಸಂತಸದ ಕ್ಷಣಗಳು.....
ನಮ್ಮ ಸಹೋದರಿ ಶ್ರೀಮತಿ ಆರ್.ವಿದ್ಯಾ ಮತ್ತು ಪ್ರಸಿದ್ಧ ಸಂಗೀತ ಸಂಯೋಜಕರೂ, ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಶಿವಸತ್ಯ ದಂಪತಿಯ ಸುಪುತ್ರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಕು. ಶ್ರೀರಂಜಿನಿ ತನ್ನ ತಾತ (ನಮ್ಮ ತಂದೆ) ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎಸ್.ರಾಮಚಂದ್ರನ್ (96) ಅವರ ಕುಶಲೋಪರಿ ವಿಚಾರಿಸಲು ಬೆಂಗಳೂರಿನಿಂದ ಆಗಮಿಸಿ, ಜೂನ್ 7 ಮತ್ತು 8 ರಂದು ಎರಡು ದಿನಗಳ ಕಾಲ ತನ್ನ ತಾತನೊಂದಿಗೆ ಸಂತಸದ ಕ್ಷಣಗಳನ್ನು ಕಳೆದಳು.
ಶನಿವಾರ ವಿಶ್ವನಾಥನ್ ಜೊತೆಯಲ್ಲಿ ಹೆಬ್ಬೂರಿನ ಶ್ರೀ ಕೋದಂಡಾಶ್ರಮ ಮಠಕ್ಕೆ ತೆರಳಿ ಶ್ರೀ ಕಾಮಾಕ್ಷಿ ದೇವಿಯ ದರ್ಶನ ಪಡೆದಳು. ಭಾನುವಾರ ಸುಪ್ರಸಿದ್ಧ ಯಾತ್ರಾ ಸ್ಥಳವಾದ ದೇವರಾಯನದುರ್ಗವನ್ನು ವೀಕ್ಷಿಸಿ ಸಂತೋಷಪಟ್ಟಳು.
ಭಾನುವಾರ ಮಧ್ಯಾಹ್ನ ಶ್ರೀರಂಜಿನಿ ಬೆಂಗಳೂರಿಗೆ ಹೊರಡುವಾಗ, ಪ್ರಸ್ತುತ TCS ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಈ ಮೊಮ್ಮೊಗಳಿಗೆ ಶಾಲು ಹೊದಿಸುವ ಮೂಲಕ ತಾತ ರಾಮಚಂದ್ರನ್ ರವರು ಶುಭಾಶೀರ್ವಾದ ಮಾಡಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-06-2025 #rsiyertumakuru








Sunday, 1 June 2025

R Gayathri Visit - 01-06-2025

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರ ಯೋಗಕ್ಷೇಮ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಆರ್. ಗಾಯತ್ರಿ ಸತ್ಯನಾರಾಯಣ್ ತನ್ನ ಮಕ್ಕಳಾದ ಹೆಚ್.ಎಸ್. ಪವನ್ ಮತ್ತು ನಮಿತಾ ಅವರ ಜೊತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದು, ಈ ಭೇಟಿ ನಮ್ಮೆಲ್ಲರಿಗೂ ಸಂತಸ ಮೂಡಿಸಿತು.
ನಿನ್ನೆ (ದಿ. 31-05-2025) ಸಂಜೆ ಅಗಮಿಸಿದ ಅವರು, ಸಂಜೆಯೇ ತುಮಕೂರಿನ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು (ದಿ.01-06-2025) ಬೆಳಗ್ಗೆ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯ, ಜಯನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಸಮೀಪದ ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿಯ ಶ್ರೀ ವಿದ್ಯಾಶಂಕರ ದೇವಾಲಯ ವೀಕ್ಷಿಸಿ ಸಂತೋಷಪಟ್ಟರು. ಇಂದು ನಾಮದ ಚಿಲುಮೆ ಮತ್ತು ದೇವರಾಯನದುರ್ಗದಲ್ಲಿ ವಿಪರೀತ ಜನಜಂಗುಳಿ ಇತ್ತಂತೆ. ಮಧ್ಯಾಹ್ನಾನಂತರ ಇಲ್ಲಿಂದ ಬೆಂಗಳೂರಿಗೆ ತೆರಳಿದರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-06-2025