* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday, 18 October 2018

R S Iyer R Vishwanathan with Sringeri Srigalu @ Hassan 2009 ಶ್ರೀ ಶೃಂಗೇರಿ ಜಗದ್ಗುರುಗಳ ದಿವ್ಯ ಸನ್ನಿಧಿಯಲ್ಲಿ (ಹಾಸನ)

ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ...

 

“ನೀವೂ ಬರುತ್ತೀರಾ?’’ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ದೂರವಾಣಿಯಲ್ಲಿ ಕೇಳಿದಾಗ, “ಏನು ವಿಶೇಷ?’’ ಎಂದು ನಾನು ಅಚ್ಚರಿಯಿಂದ ಪ್ರಶ್ನಿಸಿದೆ. ಅವರೆಂದರು- “ಹಾಸನದ ಶ್ರೀ ಶಂಕರಮಠದಲ್ಲಿ ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮಿಗಳು ವಾಸ್ತವ್ಯ ಮಾಡಿದ್ದಾರೆ. ಇಂದು ಸಂಜೆ ಅಲ್ಲಿ ಜಗದ್ಗುರುಗಳ ಸನ್ನಿಧಿಯಲ್ಲಿ ನಾನು ಉಪನ್ಯಾಸ ಮಾಡಬೇಕಾಗಿದೆ. ಅದಕ್ಕಾಗಿ ಮಧ್ಯಾಹ್ನ ಹಾಸನಕ್ಕೆ ಹೊರಟಿದ್ದೇನೆ’’. ಒಡನೆಯೇ “ನಿಮ್ಮೊಡನೆ ನಾನು ಮತ್ತು ವಿಶ್ವನಾಥನ್ ಬರುತ್ತೇವೆ’’ ಎಂದೆ. ಅದರಂತೆ ಅಂದು ಮಧ್ಯಾಹ್ನ  ನಾವು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರೊಡನೆ ಹಾಸನಕ್ಕೆ ತೆರಳಿದೆವು.

 

ಅದು ದಿನಾಂಕ 27-04-2009, “ಅಕ್ಷಯ ತೃತೀಯ”ದ ಶುಭದಿನ. ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಹಾಸನದ ಶ್ರೀ ಶಂಕರಮಠದಲ್ಲಿದ್ದೆವು. ವಾಹನದಿಂದ ಇಳಿದು ಜಗದ್ಗುರುಗಳ ಬಗ್ಗೆ ವಿಚಾರಿಸುವಷ್ಟರಲ್ಲೇ, ಜಗದ್ಗುರುಗಳಿಂದ ತಕ್ಷಣವೇ ಒಳಕ್ಕೆ ಬರುವಂತೆ ಸಂದೇಶ ಬಂತು. ಪಕ್ಕದ ಕೊಠಡಿಯಲ್ಲೇ ಜಗದ್ಗುರುಗಳು ಇದ್ದರು. ಒಡನೆಯೇ ನಮ್ಮ ಜೊತೆಯಿದ್ದ ಸ್ವಾಮೀಜಿಯವರು ಒಳ ಪ್ರವೇಶಿಸಿದರು. ತರಾತುರಿಯಲ್ಲಿ ನಾವು ಅಲ್ಲೇ ಹೊರಗೇ ಶಲ್ಯವನ್ನು ಹಾಕಿಕೊಂಡು ಒಳಗೆ ತೆರಳಿದೆವು. ಜಗದ್ಗುರುಗಳನ್ನು ಅಷ್ಟು ಸನಿಹದಿಂದ ಪ್ರಪ್ರಥಮ ಬಾರಿಗೆ ನೋಡಿದ ಭಾಗ್ಯ ನಮ್ಮದಾಗಿತ್ತು. ರೋಮಾಂಚನದಿಂದ ನೋಡುತ್ತಲೇ ಇದ್ದೆವು. ಜಗದ್ಗುರುಗಳು ಮಂದಸ್ಮಿತರಾಗಿದ್ದರು. ಅನಂತ ಪ್ರೀತಿ, ವಾತ್ಸಲ್ಯ, ಕಾರುಣ್ಯಭಾವದಿಂದ ಮಾತನಾಡಿಸಿದರು. ನಮ್ಮ ಸ್ವಾಮೀಜಿಯವರು ನಮ್ಮೆಲ್ಲರನ್ನೂ ಪರಿಚಯಿಸಿದಾಗ, ಜಗದ್ಗುರುಗಳು ಅಷ್ಟೇ ಪ್ರೀತಿಯಿಂದ ನಮ್ಮೆಲ್ಲರನ್ನೂ ವಿಚಾರಿಸಿದರು. ಮಾತುಕತೆಯ ಕೊನೆಯಲ್ಲಿ ನಮ್ಮ ಸ್ವಾಮಿಗಳು “ಫೋಟೋ ತೆಗೆದುಕೊಳ್ಳಬಹುದೇ” ಎಂದು ಜಗದ್ಗುರುಗಳ ಅನುಮತಿ ಕೋರಿದಾಗ, ಅವರು ಸಂತೋಷದಿಂದ ಸಮ್ಮತಿಸಿದರು. ಬಳಿಕ ಎಲ್ಲರನ್ನೂ ಆಶೀರ್ವದಿಸಿದರು. ನಂತರ ಮಠದಲ್ಲಿ ಪೂಜ್ಯ ಜಗದ್ಗುರುಗಳ ಸನ್ನಿಧಿಯಲ್ಲಿ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಉಪನ್ಯಾಸ ನೀಡಿದರು. ಕೊನೆಯಲ್ಲಿ ಪೂಜ್ಯ ಜಗದ್ಗುರುಗಳು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೆ ಶಾಲು ಹೊದಿಸಿ, ಗೌರವಿಸಿದರು. ಜಗದ್ಗುರುಗಳ ದಿವ್ಯ ಸನ್ನಿಧಿಯಲ್ಲಿಅಂದು ನಮಗಾದ ಆ ಅನನ್ಯ ಅನುಭವವನ್ನು ಮೆಲುಕು ಹಾಕುವಾಗಲೆಲ್ಲ ಮನಸ್ಸು ಪ್ರಫುಲ್ಲಗೊಳ್ಳುತ್ತಿರುತ್ತದೆ. 












No comments:

Post a Comment