ಕೆ.ಆರ್.ಎಸ್. ಹಿನ್ನೀರಿನ ಬಳಿಯ ಚಿತ್ತಾಕರ್ಷಕ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ..
********************************************************
********************************************************
ವಿಶ್ವವಿಖ್ಯಾತ ಕೆ.ಆರ್.ಎಸ್. (ಕೃಷ್ಣರಾಜ ಸಾಗರ) ಜಲಾಶಯದ ಹಿನ್ನೀರಿನ ಕನ್ನಂಬಾಡಿ ಗ್ರಾಮದಲ್ಲಿ ಪುನರ್ ನಿರ್ಮಿತವಾಗಿರುವ 13 ನೇ ಶತಮಾನದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಅಕ್ಷರಶಃ ಚಿತ್ತಾಕರ್ಷಕವಾಗಿದೆ.
ಭಾನುವಾರ (ದಿ. 04-11-2018) ಬೆಳಗ್ಗೆ ನಾನು, ವಿಶ್ವನಾಥನ್, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಹಾಗೂ ಮಿತ್ರರಾದ ಶ್ರೀ ಜಿ.ಕೆ.ಶ್ರೀನಿವಾಸ್ ಮತ್ತು ಶ್ರೀ ಬಿ.ಎಸ್.ವೆಂಕಟೇಶ್ ಅಲ್ಲಿಗೆ ಭೇಟಿ ಕೊಟ್ಟಾಗ ಆ ಮನಮೋಹಕ ಪರಿಸರ ನೋಡಿ ಮೂಕವಿಸ್ಮಿತರಾದೆವು.
13 ನೇ ಶತಮಾನದ- ಹೊಯ್ಸಳರ ಕಾಲದ- ಶಿಲ್ಪಕಲಾವೈಭವದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯವು ಮೂಲತಃ ಮಂಡ್ಯಜಿಲ್ಲೆ ಕನ್ನಂಬಾಡಿ ಗ್ರಾಮದಲ್ಲಿದೆ. ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣದ ಬಳಿಕ ಅನಿವಾರ್ಯವಾಗಿ ಇದು ಆ ನೀರಿನಲ್ಲಿ ಮುಳುಗಿ ಕಾಲಗರ್ಭದಲ್ಲಿ ಲೀನವಾಗಿ ಹೋಗಿತ್ತು. ಈ ದೇಗುಲದ ಮೇಲೇ ಸುಮಾರು 60 ಅಡಿಗಳಷ್ಟು ಎತ್ತರದ ನೀರು ನಿಂತ ಪರಿಣಾಮ, ಕಾಲಕಳೆದಂತೆ ಎಲ್ಲರೂ ಈ ದೇಗುಲವನ್ನು ಮರೆತೇ ಹೋಗಿದ್ದರು. ಆದರೆ 2003 ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಮೂಡಿತು. ಕೆ.ಆರ್.ಎಸ್. ಬರಿದಾಯಿತು. ಆಗ ಆವರಗೆ ಮುಳುಗಿಹೋಗಿದ್ದ ಈ ಅದ್ಭುತ ದೇವಾಲಯ ಗೋಚರಿಸಿ ಎಲ್ಲರ ಕಣ್ಮನ ಸೆಳೆಯಿತು. ಇದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಯಥಾವತ್ತಾಗಿ ಪುನರ್ ನಿರ್ಮಿಸಬೇಕೆಂಬ ಆಕಾಂಕ್ಷೆಯೊಂದು ಅಂದು ಅನೇಕರ ಮನದಲ್ಲಿ ಚಿಗುರೊಡೆಯಿತು. ಬೆಂಗಳೂರಿನ ಖೋಡೆ ಫೌಂಡೇಷನ್ ನ ವತಿಯಿಂದ ಇಂತಹುದೊಂದು ಐತಿಹಾಸಿಕ ಕಾರ್ಯ ಕೈಗೊಳ್ಳಲು ಶ್ರೀ ಶ್ರೀಹರಿ ಖೋಡೆ ನಿರ್ಧರಿಸಿದರು. ಅದರ ಪರಿಣಾಮವೇ ಇಂದು ಈ ಬೃಹತ್ ಹಾಗೂ ಶಿಲ್ಪಕಲಾವೈಭವದ ದೇಗುಲ ಕನ್ನಂಬಾಡಿ ಗ್ರಾಮದಲ್ಲಿ ಕಾವೇರಿ ಹಿನ್ನೀರಿನ ಸುಂದರ ಪರಿಸರದಲ್ಲಿ ಮತ್ತೊಮ್ಮೆ ತಲೆಯೆತ್ತಿ ನಳನಳಿಸುತ್ತ, ಸಹಸ್ರಾರು ಜನರನ್ನು ಆಕರ್ಷಿಸುತ್ತಿದೆ.
ಭವ್ಯವಾದ ಶ್ರೀ ವೇಣುಗೋಪಾಲ ಸ್ವಾಮಿಯ ಮೂಲ ವಿಗ್ರಹವು ಮನಸೂರೆಗೊಳ್ಳುತ್ತದೆ. ಪ್ರಾಕಾರದಲ್ಲಿ ಸುತ್ತಲೂ ಗಣಪತಿ, ಶಿವ-ಪಾರ್ವತಿ, ಸುಬ್ರಹ್ಮಣ್ಯ, ಅಷ್ಟ ಲಕ್ಷ್ಮಿಯರು, ಕಾವೇರಿ ಒಳಗೊಂಡು ವಿವಿಧ ನದಿಗಳ ಸ್ವರೂಪದ ಮಾತೃದೇವತೆಗಳು, ನವಗ್ರಹಗಳು, ದಶಾವತಾರದ ಪ್ರತ್ಯೇಕ ವಿಗ್ರಹಗಳು, ವಿವಿಧ ಗೋತ್ರಗಳ ಮಹರ್ಷಿಗಳ ವಿಗ್ರಹಗಳುಳ್ಳ ಪ್ರತ್ಯೇಕ ಚಿಕ್ಕ ಚಿಕ್ಕ ಗುಡಿಗಳು ಗಮನಸೆಳೆಯುತ್ತವೆ. ದೇವಾಲಯದ ಮುಂದಿನ ಭಾಗದಲ್ಲಿ ಹಂಪೆಯ ಮಾದರಿಯ ಕಲ್ಲಿನ ರಥ ಆಕರ್ಷಕವಾಗಿದೆ. ಮೂರೂ ದಿಕ್ಕುಗಳಲ್ಲಿ ಕೆ.ಆರ್.ಎಸ್.ಜಲಾಶಯದ ಹಿನ್ನೀರು ಅಂದರೆ ಕಾವೇರಿ ನದಿಯ ನೀರು ಆವರಿಸಿದ್ದು, ಅಲ್ಲೊಂದು ಅವರ್ಣನೀಯ ಸೊಬಗನ್ನು ಸೃಷ್ಟಿಸಿದೆ.
ಸುಮಾರು 35 ಎಕರೆ ಪ್ರದೇಶದಲ್ಲಿ ತಲೆಯೆತ್ತಿರುವ ಈ ಅದ್ಭುತ ದೇವಾಲಯ ಬೆಳಗಿನ 9 ರಿಂದ ರಾತ್ರಿ 7 ಗಂಟೆಯವರೆಗೂ ತೆರೆದಿರುತ್ತದೆ. ಖೋಡೆ ಫೌಂಡೇಷನ್ ಸುಪರ್ದಿನಲ್ಲಿರುವ ಈ ದೇವಾಲಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಅರ್ಚಕರನ್ನು ಒಳಗೊಂಡು ಸುಮಾರು 40 ಕ್ಕೂ ಅಧಿಕ ಭದ್ರತಾ ಮತ್ತು ಸ್ವಚ್ಛತಾ ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಈ ದೇವಾಲಯದಲ್ಲಿ ಯಾರೂ ಸಹ ಕಾಣಿಕೆಯನ್ನು ಸಮರ್ಪಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇನ್ನು ಒಳಭಾಗ ಫೋಟೋಗ್ರಫಿ ನಿಷಿದ್ಧ. ಹೊರಭಾಗ ಮೊಬೈಲ್ ನಲ್ಲಿ ಮಾತ್ರ ಫೋಟೋ ತೆಗೆದುಕೊಳ್ಳಲು ಅವಕಾಶವಿದೆ. ತಿಂಡಿ ಇತ್ಯಾದಿ ಆಹಾರ ಪದಾರ್ಥ ತಂದು ಸೇವಿಸಲು ಇಲ್ಲಿ ಅವಕಾಶವಿಲ್ಲ. ಸಮೀಪದಲ್ಲೇ ಶೌಚಾಲಯವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ವಾಹನಗಳ ಪಾರ್ಕಿಂಗ್ ಗೂ ಸ್ಥಳಾವಕಾಶವಿದೆ. ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಎಲ್ಲರನ್ನೂ ನಿಯಂತ್ರಿಸುತ್ತಾರೆ. ಅಂದಹಾಗೆ ಈ ದೇವಾಲಯ 2017 ರ ಡಿಸೆಂಬರ್ 4, 5, 6 ರಿಂದ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡು ಲೋಕಾರ್ಪಣೆಗೊಂಡಿದೆ.
V.S.Ramachandran, R.S.Iyer and R.Vishwanathan
V.S.Ramachandran, R.S.Iyer and R.Vishwanathan
No comments:
Post a Comment