* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Monday 25 January 2021

Republic Day 2021-Sunrise Kyathasandra VSR Sanmana- ಗಣರಾಜ್ಯೋತ್ಸವ, ಸನ್ಮಾನ

 ಕ್ಯಾತಸಂದ್ರದ ‘ಸನ್ ರೈಸ್’ ನಲ್ಲಿ ಗಣರಾಜ್ಯೋತ್ಸವ:

ಧ್ವಜಾರೋಹಣ, ಪುಷ್ಪಾರ್ಚನೆ, ಸನ್ಮಾನ
---------------------------------

ನಮ್ಮ ತುಮಕೂರು ನಗರದ ಕ್ಯಾತಸಂದ್ರದ “ಸನ್ ರೈಸ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ”ದಲ್ಲಿ ಇಂದು (26-01-2021, ಮಂಗಳವಾರ) ಬೆಳಗ್ಗೆ ಏರ್ಪಟ್ಟಿದ್ದ “ಗಣರಾಜ್ಯೋತ್ಸವ” ಸಮಾರಂಭದಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳುವ ಸದವಕಾಶ ಇಂದು ನಮಗೆ ಲಭಿಸಿತು.

“ಸನ್ ರೈಸ್” ನ ಅಧ್ಯಕ್ಷರೂ, ನಮ್ಮ ದೀರ್ಘಕಾಲದ ಸನ್ಮಿತ್ರರೂ ಆದ ಶ್ರೀ ಸಿ.ಪಿ.ವಿಜಯ್ ಅವರು ನೀಡಿದ್ದ ಪ್ರೀತಿಯ ಆಹ್ವಾನದ ಮೇರೆಗೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು ಮತ್ತು ವಿಶ್ವನಾಥನ್ ಭಾಗವಹಿಸಿದ್ದೆವು.

ಶ್ರೀ ವಿ.ಎಸ್.ರಾಮಚಂದ್ರನ್ ರವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಎಲ್ಲರೂ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿದರು. ಬಳಿಕ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ನಂತರ ಸಾಂದರ್ಭಿಕವಾಗಿ ಶ್ರೀ ಸಿ.ಪಿ.ವಿಜಯ್ ರವರು ಮಾತನಾಡಿದರು. ಅನಿರೀಕ್ಷಿತವಾಗಿ ನಾನೂ ಸಹ ಒಂದೆರಡು ಮಾತುಗಳನ್ನಾಡಿದೆ. ಕೊನೆಯಲ್ಲಿ ನಮ್ಮ ತಂದೆಯವರನ್ನು “ಸನ್ ರೈಸ್” ಪರವಾಗಿ ಆಡಳಿತ ಮಂಡಲಿಯವರು ಶಾಲುಹೊದಿಸಿ, ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಸಂತಸ ಪಟ್ಟರು.

“ಸನ್ ರೈಸ್” ಅಧ್ಯಕ್ಷರಾದ ಶ್ರೀ ಸಿ.ಪಿ.ವಿಜಯ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ನಿರ್ದೇಶಕರುಗಳಾದ ಶ್ರೀ ಕೆ.ಸಿ.ಶಾಂತರಾಜು, ಶ್ರೀ ಪ್ರಮೋದ್ ಕುರ್ ಬೆಟ್, ಶ್ರೀ ಕೆ.ಎ.ವಿಜಯ್, ಶ್ರೀ ಮಹೇಶ್ ರೆಡ್ಡಿ, “ಸನ್ ರೈಸ್” ನ ಆಡಳಿತಾಧಿಕಾರಿಗಳಾದ ಶ್ರೀ ದಕ್ಷಿಣಾ ಮೂರ್ತಿ, ಶ್ರೀ ಆರ್.ಮಲ್ಲೇಶ್, ಶ್ರೀ ಕೃಷ್ಣಾಚಾರ್, ಮಾಜಿ ಗ್ರಾ.ಪಂ. ಸದಸ್ಯರಾದ ಶ್ರೀ ಬಿ.ಎಸ್.ವೆಂಕಟೇಶ್ ರವರು ಮೊದಲಾದ ಗಣ್ಯರುಗಳು, “ಸನ್ ರೈಸ್” ಸ್ನೇಹಿತರುಗಳು ಪಾಲ್ಗೊಂಡಿದ್ದರು.

ಈ ವರ್ಷದ ಅಂದರೆ 2021 ರ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮ ಈ ರೀತಿ ನಮ್ಮದಾಯಿತು. ಶ್ರೀ ಸಿ.ಪಿ.ವಿಜಯ್ ರವರ ಹಾಗೂ "ಸನ್ ರೈಸ್" ಬಳಗದ ಪ್ರೀತಿ-ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ.
-ಆರ್.ಎಸ್.ಅಯ್ಯರ್, ತುಮಕೂರು https://twitter.com/rsitmk












Thursday 21 January 2021

V S.R. Visit to Karigiri Oils & Naturals Tumkur 21-01-2021 ಕರಿಗಿರಿ ಆಯಿಲ್ಸ್ ಗೆ ಭೇಟಿ

 ಗಾಣದಿಂದ ಶುದ್ಧ ಅಡುಗೆ ಎಣ್ಣೆ ಉತ್ಪಾದಿಸುವ ಘಟಕಕ್ಕೆ ಭೇಟಿ

************************************************
ತುಮಕೂರಿನ ಎಸ್.ಐ.ಟಿ. ಮುಖ್ಯರಸ್ತೆಯಲ್ಲಿರುವ “ಕರಿಗಿರಿ ಆಯಿಲ್ಸ್ ಅಂಡ್ ನ್ಯಾಚುರಲ್ಸ್” ಮಳಿಗೆಗೆ ಇಂದು (21-01-2021, ಗುರುವಾರ) ಸಂಜೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (92) ರವರು ಭೇಟಿ ನೀಡಿದ್ದರು.
ಮರದ ಗಾಣದಿಂದ ಶುದ್ಧವಾದ ಅಡುಗೆ ಎಣ್ಣೆಯನ್ನು ಉತ್ಪಾದಿಸುವ ಈ ಸಣ್ಣ ಘಟಕವನ್ನು (ಟ್ರೆಂಡ್ಸ್ ಮಳಿಗೆ ಪಕ್ಕ) ಯುವ ಇಂಜಿನಿಯರ್ ಶ್ರೀ ವಿ.ವಿವೇಕ್ ಅವರು ಸ್ವಾವಲಂಬಿಯಾಗಿ ಆರಂಭಿಸಿದ್ದಾರೆ.
ಕೊಬ್ಬರಿ ಎಣ್ಣೆ, ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಹುಚ್ಚೆಳ್ಳಿನ ಎಣ್ಣೆ, ಹರಳೆಣ್ಣೆ, ಸಾಸಿವೆ ಎಣ್ಣೆ, ಕುಸುಬೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮೊದಲಾದ ಅಡುಗೆ ಎಣ್ಣೆಯನ್ನು ಇಲ್ಲಿ ಮರದ ಗಾಣದಿಂದ ಶುದ್ಧವಾಗಿ ಉತ್ಪಾದಿಸಲಾಗುತ್ತಿದ್ದು, ಯಾವುದೇ ಕಲಬೆರಕೆಯಿಲ್ಲದ ಪರಿಶುದ್ಧವಾದ ಅಡುಗೆ ಎಣ್ಣೆ ಇಲ್ಲಿ ಮಾರಾಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಪ್ರಜ್ಞೆ ಜಾಗೃತವಾಗುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ಘಟಕ ಅನೇಕ ಗ್ರಾಹಕರನ್ನು ಆಕರ್ಷಿಸುತ್ತಿದೆ. “ಕೊರಟಗೆರೆಯ ಮಾಜಿ ಶಾಸಕರಾದ ಶ್ರೀ ಸುಧಾಕರ ಲಾಲ್ ರವರೂ ಸೇರಿದಂತೆ ಅನೇಕ ಜನರು ನಮ್ಮ ಖಾಯಂ ಗ್ರಾಹಕರಾಗಿದ್ದಾರೆ” ಎಂಬುದು ಶ್ರೀ ವಿವೇಕ್ ರವರ ಹೆಮ್ಮೆಯ ನುಡಿ.
Sri V.S.Ramachandran (92), Freedom Fighter, Tumkur visited Karigiri Oils & Naturals, SIT Main Road, Tumkur on 21-01-2021

Sri V.S.Ramachandran, Freedom Fighter and V. Vivek





V. Vivek with Sri V.S.Ramachandran (92) , Freedom Fighter, Tumkur

V.S.Ramachandran felicitated V. Vivek with Lord Sri Ganesha Idol




Saturday 16 January 2021

Felicitation by Dr. k R Sriharsha to VSR & R S Iyer -2021

Felicitation by Dr. k R Sriharsha, Chairman, State Environment Impact Assessment Authority, Karnataka to V S Ramachandran & R S Iyer - 15-01-2021

ಮನೆಗೆ ಆಮಂತ್ರಿಸಿ ಆತಿಥ್ಯ, ಗೌರವಾರ್ಪಣೆ
*********************************
“ನಿಮ್ಮ ತಂದೆಯವರೊಂದಿಗೆ ಮನೆಗೆ ಬನ್ನಿ” ಎಂದು ಪ್ರೀತಿಯಿಂದ ಆಹ್ವಾನಿಸಿದ್ದವರು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ (State Environment Impact Assessment Authority Karnataka) ಅಧ್ಯಕ್ಷರಾದ ಡಾ.ಕೆ.ಆರ್. ಶ್ರೀಹರ್ಷರವರು.
ದಿ. 15-01-2021 ರಂದು ಬೆಂಗಳೂರಿಗೆ ತೆರಳಿದ್ದಾಗ ಹಾಗೆಯೇ ಎನ್.ಆರ್. ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಭೇಟಿ ಕೊಟ್ಟೆವು. ತುಂಬ ಪ್ರೀತಿಯಿಂದ ಬರಮಾಡಿಕೊಂಡರು. ಅಲ್ಲಿ ಡಾ. ಹರ್ಷ ಅವರು ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಕನ್ನಡದ ಪ್ರಖ್ಯಾತ ವಿದ್ವಾಂಸರಾಗಿದ್ದ ಡಾ.ಎ.ಆರ್.ಕೃಷ್ಣಶಾಸ್ತ್ರಿಗಳ ಸುಪ್ರಸಿದ್ಧ ಕೃತಿ “ವಚನ ಭಾರತ” ನೀಡಿ ಗೌರವಾರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡರು. ಜೊತೆಯಲ್ಲೇ ಅನಿರೀಕ್ಷಿತವಾಗಿ ನನಗೂ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ನಂತರ ಆತಿಥ್ಯ. ಬಳಿಕ ಒಂದಿಷ್ಟು ಮಾತುಕತೆ. ಅವರ ಈ ನಿರ್ಮಲ ಪ್ರೀತಿ-ವಿಶ್ವಾಸಕ್ಕೆ ನಾವು ಅಕ್ಷರಶಃ ಮೂಕರಾದೆವು.
ಡಾ.ಕೆ.ಆರ್. ಶ್ರೀಹರ್ಷರವರು ಮೂಲತಃ ಪರಿಸರ ಇಂಜಿನಿಯರ್. BE, M Tech ಮತ್ತು Ph.D ಪದವೀಧರರು. ಸ್ವಉದ್ಯೋಗಿಗಳು. ಇತ್ತೀಚೆಗೆ ಕೇಂದ್ರ ಸರ್ಕಾರ ಇವರನ್ನು ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಛೇರ್ಮನ್ ಸ್ಥಾನಕ್ಕೆ 3 ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿಯ ಆನಂತರದ ಸ್ಥಾನದಲ್ಲಿ ಈ ಪ್ರಾಧಿಕಾರ ಕಾರ್ಯನಿರ್ವಹಿಸುತ್ತದೆ. ರಾಜ್ಯ ಮಟ್ಟದ ಕಾರ್ಯವ್ಯಾಪ್ತಿಯುಳ್ಳ ಈ ಪ್ರಾಧಿಕಾರದ ಕಚೇರಿಯು M.S. ಬಿಲ್ಡಿಂಗ್ ನಲ್ಲಿದೆ.
ಇವರ ಧರ್ಮಪತ್ನಿ ಶ್ರೀಮತಿ ನಿಧಿರವರು ಎ.ಆರ್.ಕೃಷ್ಣಶಾಸ್ತ್ರಿಗಳ ಮರಿಮಗಳು ಎಂಬುದು ವಿಶೇಷ. (ಅಂದ ಹಾಗೆ ಶ್ರೀಯುತರು ಈವರೆಗೆ ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾಗಿದ್ದ ಶ್ರೀ ಕೆ.ಆರ್.ಅಶೋಕ್ ರವರ ಕಿರಿಯ ಸಹೋದರರು.)
ಸುಸಂಸ್ಕೃತರೂ, ಸಂಸ್ಕಾರವಂತರೂ, ಸಂಭಾವಿತರೂ ಆದವರ ನಡೆ-ನುಡಿ ಹೇಗಿರುತ್ತದೆಂಬುದನ್ನು ಈ ಭೇಟಿಯು ಸೊಗಸಾಗಿ ಅನಾವರಣಗೊಳಿಸಿತು.
-ಆರ್.ಎಸ್.ಅಯ್ಯರ್, ತುಮಕೂರು





V S Ramachandran- 92 nd Birth Day Celebrations 2021

V S Ramachandran, Freedom Fighter, Tumakuru- 92 nd Birthday Celebration 14-01-2021




ಸೂರ್ಯನಿಗೆ ವಂದಿಸುವುದು ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರ ದೈನಂದಿನ ಆಚರಣೆಗಳಲ್ಲಿ ಒಂದು. ಅಂತೆಯೆ ತಮ್ಮ ಹುಟ್ಟುಹಬ್ಬದ ದಿನವಾದ "ಸಂಕ್ರಾತಿ"ಯಂದೂ (14-01-2021, ಗುರುವಾರ) ಬೆಳಗ್ಗೆ ತನ್ಮಯತೆಯಿಂದ "ಸೂರ್ಯ ನಮಸ್ಕಾರ" ಮಾಡಿದ ಕ್ಷಣ....




******************************************************************************************

'ಸಂಕ್ರಾಂತಿ'ಯಂದು 92 ನೇ ವಸಂತಕ್ಕೆ ಪದಾರ್ಪಣೆ ಮಾಡಿದ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ ಬಂಧು-ಬಳಗ...








 



Tuesday 12 January 2021

Raghavendra Swamy Mutt - R S Iyer - 11-01-2021

 ಅನಿರೀಕ್ಷಿತ ಅದೃಷ್ಟ- ರಾಯರ ಮಠದಲ್ಲಿ ಗೌರವಾರ್ಪಣೆ

----------------------------------------------
ಊಹಿಸಿಯೇ ಇರಲಿಲ್ಲ. ಇಂದು (11-01-2021, ಸೋಮವಾರ) ಸಂಜೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಾವು ಭೇಟಿಕೊಡಬೇಕಾದ ಸೌಭಾಗ್ಯ ಬರುತ್ತದೆಂದು.
ನಿನ್ನೆ ಬೆಳಗ್ಗೆ ನಾನು ಮತ್ತು ವಿಶ್ವನಾಥನ್ ಯಾವುದೋ ವಿಷಯ ಚರ್ಚಿಸುತ್ತಿರುವಾಗ ತುಮಕೂರು ನಗರದ ಶೆಟ್ಟಿಹಳ್ಳಿಯ ಹಿರಿಯ ನಾಗರಿಕರಾದ ಹಾಗೂ ಶೆಟ್ಟಿಹಳ್ಳಿ ಗೇಟ್ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾರ್ಯದರ್ಶಿಗಳಾದ ಶ್ರೀ ಪುಟ್ಟಣ್ಣನವರು ನೆನಪಾದರು. ಒಂದಾನೊಂದು ಕಾಲದಲ್ಲಿ ಸಾಮಾಜಿಕ ಕಳಕಳಿಯಿಂದ ಅವರು ಶೆಟ್ಟಿಹಳ್ಳಿ ಕೆರೆಯ ಸಂರಕ್ಷಣೆಗಾಗಿ ಹಾಗೂ ಒತ್ತುವರಿ ತೆರವಿಗಾಗಿ ಹೋರಾಟ ಮಾಡಿದ್ದುದು, ಬಳಿಕ ಲೋಕಾಯುಕ್ತದವರೆಗೆ ದೂರು ನೀಡಿದ್ದುದನ್ನು ನೆನಪಿಸಿಕೊಂಡಿದ್ದೆವು.
ನಿನ್ನೆ ಸಂಜೆ ನಾನು ದ್ವಿಚಕ್ರವಾಹನದಲ್ಲಿ ನಮ್ಮ ತಂದೆಯವರನ್ನು ಕೂರಿಸಿಕೊಂಡು ಮನೆಯತ್ತ ಬರುತ್ತಿದ್ದಾಗ ದಾರಿಯಲ್ಲಿ ಅನಿರೀಕ್ಷಿತವಾಗಿ ಶ್ರೀ ಪುಟ್ಟಣ್ಣನವರು ಭೇಟಿಯಾದರು. ನಮ್ಮನ್ನು ತಡೆದು ನಿಲ್ಲಿಸಿದ ಅವರು, “ನಿಮ್ಮ ತಂದೆಯವರನ್ನು ಬೇರೆ ಬೇರೆ ಸ್ಥಳಗಳ ದೇವಾಲಯಗಳಿಗೆ ಕರೆದೊಯ್ಯುತ್ತಿರುತ್ತೀರಿ. ನಮ್ಮ ಶ್ರೀ ರಾಯರ ಮಠಕ್ಕೂ ಬನ್ನಿ” ಎಂದು ನೇರವಾಗಿ ಆಹ್ವಾನಿಸಿದರು. ನನಗಂತೂ ಅಚ್ಚರಿಯೋ ಅಚ್ಚರಿ. “ಆಹಾ, ಇವತ್ತು ಬೆಳಿಗ್ಗೆಯಷ್ಟೇ ಇವರನ್ನು ನೆನಪಿಸಿಕೊಂಡಿದ್ದೆವು. ಸಂಜೆ ಸಿಕ್ಕೇ ಬಿಟ್ಟರು. ನೂರು ವರ್ಷ ಆಯಸ್ಸು” ಎಂದು ಮನದಲ್ಲೇ ಒಂದು ಭಾವನೆ ತೇಲಿ ಹೋಯಿತು. ಅವರ ಮೂಲಕ ರಾಯರೇ ಈ ಸೂಚನೆ ನೀಡಿದಂತೆ ಭಾಸವಾಗಿ, ಅನಿರ್ವಚನೀಯ ಆನಂದದಿಂದ ಒಡನೆಯೇ ಒಪ್ಪಿಕೊಂಡುಬಿಟ್ಟೆ.
ಅದರಂತೆ ಇಂದು ಸಂಜೆ ಶೆಟ್ಟಿಹಳ್ಳಿಗೇಟ್ ನ ಶ್ರೀ ರಾಯರ ಮಠಕ್ಕೆ ನಾನು ಮತ್ತು ವಿಶ್ವನಾಥನ್ ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರೂ ಹಾಗೂ ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ ರವರನ್ನು ಕರೆದೊಯ್ದೆವು. ಆತ್ಮೀಯರಾದ ಶ್ರೀ ಹೆಚ್.ಎನ್.ಸತೀಶ್ ರವರೂ ಜೊತೆಗೂಡಿದರು.
ಮಠದಲ್ಲಿ ನಮ್ಮನ್ನು ಶ್ರೀ ಪುಟ್ಟಣ್ಣನವರು ಪ್ರೀತಿಯಿಂದ ಬರಮಾಡಿಕೊಂಡು, ನವೀಕರಿಸಲಾದ ಮಠದಲ್ಲಿ ಆಗಿರುವ-ಆಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳು, ಸೌಲಭ್ಯಗಳನ್ನು ಹರ್ಷದಿಂದ ತೋರಿಸುತ್ತ ಮಾಹಿತಿ ನೀಡಿದರು. ನಮಗೂ ಆನಂದವಾಯಿತು.
ಬಳಿಕ ಶ್ರೀ ರಾಯರ ಬೃಂದಾವನಕ್ಕೆ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿದರಲ್ಲದೆ, ಅಲ್ಲಿನ ಹಿರಿಯ ಅರ್ಚಕರ ಮೂಲಕ ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಪ್ರಸಾದ ನೀಡಿ ವಿಶೇಷ ಗೌರವ ಸಲ್ಲಿಸಿದರು.
ಇದು ನಮಗೊದಗಿದ ಅನಿರೀಕ್ಷಿತ ಅದೃಷ್ಟ- ಸುಯೋಗ. ಶ್ರೀ ಪುಟ್ಟಣ್ಣನವರ ಮೂಲಕ ಶ್ರೀ ರಾಯರೇ ಈ ಸೂಚನೆ ನೀಡಿ ನಮಗೆ ತಮ್ಮ ದರ್ಶನಭಾಗ್ಯ ಕರುಣಿಸಿದರೆಂದೇ ನಾವು ವಿನಮ್ರತೆಯಿಂದ ನಂಬಿದ್ದೇವೆ. ರಾಯರ ಮಠದ ಅಭಿವೃದ್ಧಿಗೆ ಶ್ರದ್ಧೆ-ಭಕ್ತಿಯಿಂದ ಶ್ರಮಿಸುತ್ತಿರುವ ಶ್ರೀ ಪುಟ್ಟಣ್ಣನವರ ಹೃದಯವಂತಿಕೆಗೆ, ಹೃದಯ ವೈಶಾಲ್ಯತೆಗೆ ನಾವು ಕೃತಜ್ಞರಾಗಿದ್ದೇವೆ.
-ಆರ್.ಎಸ್.ಅಯ್ಯರ್, ತುಮಕೂರು












Friday 8 January 2021

Gandhiji Statue, Vidhana Soudha- R S Iyer- 06-01-2021

 ಗಾಂಧೀಜಿ ಪ್ರತಿಮೆಗೆ ಮುಖಾಮುಖಿಯಾದಾಗ….

----------------------------------------
“ನನ್ನ ಜೀವನವೇ ನನ್ನ ಸಂದೇಶ” –ಇದು ಮಹಾತ್ಮ ಗಾಂಧೀಜಿಯವರ ಅನುಪಮ ನುಡಿ. ಬೆಂಗಳೂರಿನ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಸುಂದರ ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ ಭವ್ಯವಾದ, ಧ್ಯಾನಶೀಲ ಗಾಂಧೀಜಿ ಪ್ರತಿಮೆಯ ಅಡಿಯಲ್ಲಿ ಈ ಸಂದೇಶವನ್ನು ಕೆತ್ತಲಾಗಿದೆ.
ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷರವರು ದಿ. 06-01-2021 ರಂದು ಮಧ್ಯಾಹ್ನ ಈ ಪ್ರತಿಮೆಯ ಮುಂದೆ ಬರುವಾಗ ಮಳೆಯ ಹನಿ ಜಿನುಗುತ್ತಿತ್ತು. ಹಾಗೆಯೇ ಕೆಲ ಕ್ಷಣ ಅದರ ಮುಂದೆ ಮುಖಾಮುಖಿಯಾಗಿ ನಿಂತೆವು. ಆಗ ಆ ಪ್ರತಿಮೆಯ ಪ್ರತಿಷ್ಠಾಪನೆಯ ಸಂದರ್ಭದ ಕೆಲ ಪ್ರಸಂಗಗಳು ಮನದಲ್ಲಿ ಹಾದು ಹೋದವು.
ಕೆಲ ವರ್ಷಗಳ ಹಿಂದೆ ಬಿಜೆಪಿಯ ಹಿರಿಯ ನಾಯಕರಾದ ಶ್ರೀಯುತ ಡಿ.ಹೆಚ್.ಶಂಕರಮೂರ್ತಿಯವರು ವಿಧಾನಪರಿಷತ್ ನ ಸಭಾಪತಿಗಳಾಗಿದ್ದಾಗ ಈ ವಿಗ್ರಹ ಪ್ರತಿಷ್ಠಾಪನೆಗೊಂಡಿತ್ತು. ಅಂದು ನಮ್ಮ ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಪ್ರಧಾನ ಭಾಷಣ ಮಾಡಿ, ಗಾಂಧೀಜಿಯವರ ಜೀವನದ ಹೃದಯಸ್ಪರ್ಶಿ ಪ್ರಸಂಗಗಳ ಬಗ್ಗೆ ಹೊಸ ಬೆಳಕು ಚೆಲ್ಲಿದ್ದರು.
ಅಂಥ ಒಂದು ಪ್ರಸಂಗ ಹೀಗಿದೆ:- ಬ್ರಿಟಿಷ್ ಸರಕಾರ ಒಮ್ಮೆ ಗಾಂಧೀಜಿಯವರನ್ನು ಬಂಧಿಸಿ, ಸೆರೆಮನೆಯಲ್ಲಿಟ್ಟಿತ್ತು. ಜೈಲರ್ ಗಾಂಧೀಜಿಯವರ ಎದೆಗೆ ಬೂಟುಕಾಲಿನಿಂದ ಒದ್ದಿದ್ದ ಅಮಾನವೀಯ ಘಟನೆಯೂ ಸಂಭವಿಸಿತ್ತು. ಜೈಲಿನಿಂದ ಬಿಡುಗಡೆ ಆಗುವಾಗ ಗಾಂಧೀಜಿಯವರು ಆ ಜೈಲರ್ ಗೆ ಒಂದು ಉಡುಗೊರೆ ಕೊಡಲು ಬಯಸಿದರು. ಅಲ್ಲಿದ್ದವರಿಗೆಲ್ಲ ಅಚ್ಚರಿಯೋ ಅಚ್ಚರಿ. ಆ ಉಡುಗೊರೆ ಏನೆಂದರೆ ಅದು ಸುಂದರವಾದ ಪಾದರಕ್ಷೆ. ಆ ಜೈಲರ್ ಅದನ್ನು ಧರಿಸಿದಾಗ ಅದು ಅವನ ಕಾಲಿನ ಅಳತೆಗೆ ಸಂಪೂರ್ಣವಾಗಿ ಸರಿಹೊಂದಿತ್ತು. ಅವನು ಅಚ್ಚರಿಯಿಂದ ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ. ಆಗ ಗಾಂಧೀಜಿ ಶಾಂತವಾಗಿ ಪ್ರತಿಕ್ರಿಯಿಸಿದರು- “ಅಂದು ನೀನು ನನಗೆ ಬೂಟು ಕಾಲಿನಿಂದ ಒದ್ದೆ. ಆಗ ನನ್ನ ಬಟ್ಟೆಯ ಮೇಲೆ ಅದರ ಅಳತೆಯ ಗುರುತು ಬಿದ್ದಿತ್ತು. ಅದನ್ನು ನಾನು ಹಾಗೆಯೇ ಜೋಪಾನವಾಗಿ ಇರಿಸಿದ್ದೆ. ಜೈಲಿನಲ್ಲಿ ಖೈದಿಗಳು ದಿನವೂ ಏನಾದರೂ ಕಾಯಕ ಮಾಡಬೇಕಲ್ಲವೇ? ಅದಕ್ಕಾಗಿ ನಾನು ಪಾದರಕ್ಷೆಯನ್ನು ತಯಾರಿಸಿದೆ. ಹೇಗಿದ್ದರೂ ನಿನ್ನ ಪಾದದ ಅಳತೆ ಇತ್ತಲ್ಲ, ಅದಕ್ಕೆ ತಕ್ಕಂತೆ ತಯಾರು ಮಾಡಿದೆ” ಎಂದಿದ್ದರಂತೆ. ಇಂತಹುದೊಂದು ಅಪೂರ್ವ ಹಾಗೂ ಅನುಪಮ ಹೃದಯಸ್ಪರ್ಶಿ ಪ್ರಸಂಗವನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಅಂದು ಹೇಳಿದ್ದುದು ಮತ್ತೆ ನೆನಪಿಗೆ ಬಂತು.
ಗಾಂಧೀಜಿಯವರ ಪ್ರತಿಮೆಯ ಮುಂದೆ ದಿನವೂ ಸಾವಿರಾರು ಜನರು ಓಡಾಡಬಹುದು. ಆದರೆ ಆತ್ಮಸಾಕ್ಷಿ ಇರುವವರಿಗೆ ಆ ಪ್ರತಿಮೆಯ ಸ್ಪಂದನೆಯೇ ವಿಭಿನ್ನವಾಗಿರುತ್ತದೆ ಅನಿಸಿತು.
-ಆರ್.ಎಸ್.ಅಯ್ಯರ್, ತುಮಕೂರು





Brahmana Abhivruddhi Mandali programme ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ.... 06-01-2021 R S Iyer-

 06-01-2021, ಬುಧವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು “ಪ್ರತಿಭೋತ್ಸವ” ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಣ್ಯ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಯಲ್ಲೇ ಸಮುದಾಯದ ಹಿತರಕ್ಷಣೆಗಾಗಿ ಮಂಡಳಿಯು ರೂಪಿಸಿರುವ ವಿವಿಧ ಯೋಜನೆಗಳನ್ನು ವಿಧಾನ ಸಭಾಧ್ಯಕ್ಷರೂ ಸೇರಿದಂತೆ ಉಪಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು, ಸಂಸದರುಗಳು ಚಾಲನೆಗೊಳಿಸಿದರು. ಮಂಡಳಿಯ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಆಹ್ವಾನಿತ ಗಣ್ಯರೆಲ್ಲರೂ ತಮ್ಮ ಭಾಷಣದಲ್ಲಿ ಮುಕ್ತಕಂಠದಿಂದ ಪ್ರಶಂಸಿಸಿ ಯಶ ಕೋರಿದರು.
ಕಾರ್ಯಕ್ರಮದಲ್ಲಿ ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷರವರು ಭಾಗವಹಿಸಿದ್ದೆವು. ಕಾರ್ಯಕ್ರಮದ ಬಳಿಕ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿಯವರನ್ನು ಅಭಿನಂದಿಸಿದೆವು. ಇದೇ ಸಂದರ್ಭದಲ್ಲಿ ಮಂಡಳಿಯ ನಿರ್ದೇಶಕರಲ್ಲೊಬ್ಬರಾದ ಹಾಗೂ ಮಂಡಳಿಯ ಪರವಾಗಿ ತುಮಕೂರು ಜಿಲ್ಲಾ ಜವಾಬ್ದಾರಿ ಹೊತ್ತಿರುವ ಶ್ರೀ ಎ.ಜೆ.ರಂಗವಿಠ್ಠಲರವರು ತುಮಕೂರಿನಿಂದ ತೆರಳಿದ್ದ ನಮ್ಮನ್ನು ಕಂಡು ಹರ್ಷದಿಂದ ಅಭಿನಂದಿಸಿದರಲ್ಲದೆ, ಸ್ವಯಂಪ್ರೇರಣೆಯಿಂದ ನಮ್ಮೊಡನೆ ಒಂದು ಫೋಟೋಗೂ ಜೊತೆಗೂಡಿದರು. ಕಾರ್ಯಕ್ರಮದಲ್ಲಿ ಮೈಸೂರಿನ ಯುವಮುಖಂಡರಾದ ಶ್ರೀ ಅಜಯ್ ಕುಮಾರ್ ಶಾಸ್ತ್ರಿರವರು, ಶ್ರೀ ವಿಕ್ರಂ ಅಯ್ಯಂಗಾರ್ ರವರು ಸೇರಿದಂತೆ ಕೆಲ ಮಿತ್ರರು ಭೇಟಿಯಾದರು.






with Sri Y S V Datta- R S Iyer- 06-01-2021 ವೈ.ಎಸ್.ವಿ. ದತ್ತರವರೊಡನೆ

 ಸರಳತೆ, ಸೌಜನ್ಯದ ಶ್ರೀ ದತ್ತರವರೊಡನೆ…

‘ಡಿವಿಜಿ, ಕುಮಾರವ್ಯಾಸ ಬಗ್ಗೆ ಮಾತನಾಡಬಲ್ಲೆ’
---------------------------------------
ರಾಜ್ಯಾಡಳಿತದ ಶಕ್ತಿ ಕೇಂದ್ರವಾದ ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಸಮೀಪ ದಿ. 06-01-2021 ರಂದು ಮಧ್ಯಾಹ್ನ ಸರ್ವಸಾಧಾರಣ ವ್ಯಕ್ತಿಯಂತೆ ತಾವೊಬ್ಬರೆ ನಡೆದು ಹೋಗುತ್ತಿದ್ದರು ಶ್ರೀ ವೈ.ಎಸ್.ವಿ.ದತ್ತರವರು.
ಶ್ರೀಯುತರು ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದವರು ಹಾಗೂ ಮತ್ತೊಮ್ಮೆ ಕಡೂರು ಕ್ಷೇತ್ರದ ಶಾಸಕರಾಗಿದ್ದವರು. ಅಷ್ಟೇ ಅಲ್ಲದೆ, ಕಳೆದ ಸುಮಾರು ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದ ಅತಿರಥರೊಂದಿಗೆ ನಿಕಟ ಸಂಪರ್ಕದಲ್ಲಿರುವವರು. ವಾಗ್ಮಿಗಳಾಗಿ, ಚಿಂತಕರಾಗಿ, ಸರಳತೆ, ಸಜ್ಜನಿಕೆಗಳಿಗೆ ಹೆಸರಾದವರು. ಅಲ್ಲದೆ ‘ಗಣಿತದ ಮೇಷ್ಟ್ರು’ ಆಗಿ ಕೀರ್ತಿಗಳಿಸಿದವರು.
ಶ್ರೀ ದತ್ತರವರು ಎಂದಿನಂತೆ ಸರಳ ಉಡುಪಿನಲ್ಲಿದ್ದರು. ಬಿಳಿ ಪಂಚೆ, ಮೇಲೊಂದು ತುಂಬುತೋಳಿನ ಚೌಕಳಿ ಅಂಗಿ, ಅದರ ಮೇಲೊಂದು ಟವೆಲ್ ಧರಿಸಿದ್ದ ಅವರು ಮೊಬೈಲ್ ನಲ್ಲಿ ಮಾತನಾಡುತ್ತ ಎದುರುದಿಕ್ಕಿನಿಂದ ಬರುತ್ತಿದ್ದರು. ಸರಕ್ಕನೆ ಎಡಬದಿಯ ಮೆಟ್ಟಿಲ ಕಡೆಗೆ ತಿರುಗುತ್ತಿದ್ದರು. ಮುಖ್ಯಮಂತ್ರಿಗಳ ಕಚೇರಿ ಮುಂಭಾಗದಿಂದ ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷರವರು ಬರುತ್ತಿದ್ದೆವು. ನಾವು ಮೊದಲಿಗೆ ಇವರನ್ನು ಗಮನಿಸಿರಲೇ ಇಲ್ಲ. ಆದರೆ ಇವರು ಮೆಟ್ಟಿಲ ಕಡೆ ತಿರುಗಿ ಹೊರಟಾಗ ಸರ್ರನೆ ನಾನು ಅತ್ತ ನೋಡಿದೆ. “ಅರೆ… ಇವರು ದತ್ತರವರಲ್ಲವೇ?” ಅನಿಸಿತು. ತಕ್ಷಣವೇ ಅವರನ್ನು ಕೂಗಿ ಕರೆದೇ ಬಿಟ್ಟೆ.
ಮೊಬೈಲ್ ನಲ್ಲಿ ಮಾತನಾಡುತ್ತಲೇ ಮುನ್ನಡೆಯುತ್ತಿದ್ದ ಅವರು ಹಿಂದಕ್ಕೆ ತಿರುಗಿ ನಿಂತರು. ಮೊಬೈಲ್ ಮಾತು ಮುಗಿಸಿ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ನಮ್ಮತ್ತ ಬಂದರು. ನಾನು ಪರಿಚಯಿಸಿಕೊಂಡೆ. ಖುಷಿಯಿಂದ ಮಾತನಾಡಿದರು. ನಡುವೆ ನಮ್ಮ “ಡಿವಿಜಿ ನೆನಪು” ಕಾರ್ಯಕ್ರಮದ ವಿಷಯವೂ ಬಂತು. ಥಟ್ಟನೆ ಅವರು “ನಾನು ಡಿವಿಜಿಯವರ ಬಗ್ಗೆ, ಕುಮಾರ ವ್ಯಾಸನ ಬಗ್ಗೆ ಮಾತನಾಡಬಲ್ಲೆ” ಎಂದು ಅಭಿಮಾನದಿಂದ ಉದ್ಗರಿಸಿದರು. ನಮಗೂ ಖುಷಿಯಾಯಿತು. “ಹಾಗಾದರೆ ಮುಂದೊಮ್ಮೆ ನೀವೂ ಬನ್ನಿ” ಎಂದಾಗ, “ಖಂಡಿತವಾಗಿಯೂ” ಎಂದುತ್ತರಿಸಿದರು. ಬಳಿಕ ಅವರಿಂದ ನಾವು ಬೀಳ್ಕೊಂಡೆವು. ಸಣ್ಣಪುಟ್ಟ ಸ್ಥಾನದಲ್ಲಿರುವವರೇ ನಮ್ಮಂಥ ಶ್ರೀಸಾಮಾನ್ಯರತ್ತ ನೋಡುವುದು ಅಥವಾ ಮಾತನಾಡಿಸುವುದು ಇಂದು ಕಷ್ಟವಾಗಿರುವಾಗ, ಒಮ್ಮೆ MLC, ಒಮ್ಮೆ MLA ಆಗಿದ್ದಂಥವರ ಇಂತಹ ಸನ್ನಡತೆ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತು.



with Sri Ramadas and Sri Ravisubramanya- R S Iyer - 06-01-2021

 ಬೆಂಗಳೂರು ಬಸವನಗುಡಿ ಶಾಸಕರೂ, ಆತ್ಮೀಯರೂ ಆದ ಶ್ರೀ ರವಿಸುಬ್ರಹ್ಮಣ್ಯರವರು ಮತ್ತು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕರೂ-ಮಾಜಿ ಸಚಿವರೂ ಆತ್ಮೀಯರೂ ಆದ ಶ್ರೀ ರಾಮದಾಸ್ ರವರೊಡನೆ ಬೆಂಗಳೂರಿನ ವಿಧಾನಸೌಧದಲ್ಲಿ ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷ್ ರವರು. (06-01-2021, ಬುಧವಾರ)... With Sri Ravisubramanya, MLA, Basavanagudi, Bengaluru & Sri Ramadas, MLA and Ex Minister, Mysore at Vidhanasoudha, Bengaluru.. me, Vishwanathan & Sri Ramashesha, Rtd Engineer.





with Sri Tejaswi Surya, MP- R S Iyer- 06-01-2021- ಶ್ರೀ ತೇಜಸ್ವಿ ಸೂರ್ಯರವರೊಂದಿಗೆ

 ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರೂ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ, ಆತ್ಮೀಯರೂ ಆದ ಶ್ರೀ ತೇಜಸ್ವಿಸೂರ್ಯ ಅವರೊಡನೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಾನು ಮತ್ತು ವಿಶ್ವನಾಥನ್... (ದಿನಾಂಕ 06-01-2021)

With Sri Tejaswi Surya (Member of Parliament, Bengaluru South and National President of B.J.P. Yuva Morcha) @ Vidhana Soudha,Bengaluru... me and vishwanathan..






with Sri Suresh kumar, Vidhana Soudha -R S Iyer- 06-01-2021 ಶ್ರೀ ಎಸ್.ಸುರೇಶ್ ಕುಮಾರ್ ರವರೊಡನೆ

 ಬೆಂಗಳೂರಿನ ವಿಧಾನಸೌಧದಲ್ಲಿ ಶಿಕ್ಷಣ ಸಚಿವರೂ, ಆತ್ಮೀಯ ಮಿತ್ರರೂ ಆದ ಶ್ರೀ ಎಸ್.ಸುರೇಶ್ ಕುಮಾರ್ ರವರೊಡನೆ ನಾನು ,ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷ್ ರವರು ...06.01.2021 ಬುಧವಾರ

me ,vishwanathan and Rtd Engineer Sri Ramashesha With H'ble Minister of Primary & Secondary Education and Sakala, Govt of Karnataka Sri S.Suresh Kumar




Vidhana Soudha- 06-01-2021 - R S Iyer- ವಿಧಾನಸೌಧದಲ್ಲಿ

 ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ.... ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷ್ ರವರು 06.01.2021

At Vidhana Soudha, Bengaluru.... me, vishwanathan and Sri Ramashesha, Rtd AEE