ನಂಜನಗೂಡಿನ ದೇಗುಲದಲ್ಲಿ
----------------------------
ಮೈಸೂರು ಜಿಲ್ಲೆಯ ನಂಜನಗೂಡಿನ ಪುರಾಣ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ದಿನಾಂಕ 11-12-2020, ಶುಕ್ರವಾರ ನಮ್ಮದು ಅನಿರೀಕ್ಷಿತ ಭೇಟಿ.
ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದ ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇಗುಲಕ್ಕೆ ತೆರಳುವಾಗ ದಿಢೀರನೇ ಈ ತೀರ್ಮಾನ ಕೈಗೊಂಡದ್ದು.
ನಂಜನಗೂಡಿನ ದೇಗುಲ ತೆರೆಯುವುದು ಸಂಜೆ 4 ಕ್ಕೆ. ಅದಕ್ಕೆ ಮೊದಲು ಶ್ರೀ ನಿಮಿಷಾಂಬ ದೇಗುಲಕ್ಕೆ ತೆರಳಲು ನಿರ್ಧರಿಸಿದೆವು. ಕಾರಣ ನಿಮಿಷಾಂಬ ದೇಗುಲದಲ್ಲಿ ಯಾವುದೇ ಬ್ರೇಕ್ ಇಲ್ಲದೆ, ನಿರಂತರ ದರ್ಶನ ಸೌಲಭ್ಯ ಇದೆ. ಅದನ್ನು ಸದ್ಬಳಕೆ ಮಾಡಿಕೊಂಡೆವು. ದೇವಾಲಯ ಮತ್ತು ಕಾವೇರಿ ನದಿಯನ್ನು ವೀಕ್ಷಿಸಿ ನೇರವಾಗಿ ತೆರಳಿದ್ದು ನಂಜನಗೂಡಿಗೆ.
ಆಗ ವೇಳೆ ಮಧ್ಯಾಹ್ನ 3-50 ಆಗಿತ್ತು. ದೇವಾಲಯ ತೆರೆಯಲು 10 ನಿಮಿಷ ಬಾಕಿ ಇತ್ತು. ಅದಾಗಲೇ ಬಹುದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸಾಲಿನಲ್ಲಿ ದೇವರ ದರ್ಶನಕ್ಕೆ ನಿಂತಿದ್ದರು. ಸಂಜೆ 4 ಕ್ಕೆ ಸರಿಯಾಗಿ ದೇವಾಲಯ ತೆರೆಯಲ್ಪಟ್ಟಿತು. ಅಷ್ಟೊಂದು ಜನದಟ್ಟಣಿಯ ನಡುವೆ ನಮ್ಮ ತಂದೆಯವರೊಡನೆ ದೇವಾಲಯ ಪ್ರವೇಶಿಸಲು ಸಾಧ್ಯವಾದೀತೇ ಎಂದು ನಾವು ಚಿಂತಿತರಾಗಿರುವಾಗಲೇ, ಅನಿರೀಕ್ಷಿತವಾಗಿ ಒದಗಿಬಂದ ಸಹಾಯದಿಂದಾಗಿ ನಾವು ನೇರವಾಗಿ ದೇವಾಲಯ ಪ್ರವೇಶಿಸಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕುಳಿತು, ದೇವರ ದರ್ಶನ ಮಾಡುವ ಸುಯೋಗ ಲಭಿಸಿತು. ಬಳಿಕ ಕಪಿಲಾ ನದಿಯ ದಡದಲ್ಲಿ ಕೆಲ ಕ್ಷಣಗಳನ್ನು ಕಳೆದೆವು.
ಈ ಬಾರಿಯ ನಂಜನಗೂಡಿನ ಭೇಟಿಯಲ್ಲಿ ಅರ್ಚಕರಾದ ಶ್ರೀ ರಾಘವೇಂದ್ರರವರು ಪರಿಚಿತರಾದುದು ಹಾಗೂ ಅವರ ಮೂಲಕ ಅಲ್ಲಿನ ನಗರಸಭಾ ಸದಸ್ಯರಾದ ಶ್ರೀ ಕಪಿಲೇಶ್ ರವರ ಪರಿಚಯವಾದದ್ದು ಸಂತೋಷವನ್ನುಂಟುಮಾಡಿತು.
ನಂಜನಗೂಡಿನಿಂದ ನೇರವಾಗಿ ತುಮಕೂರಿಗೆ ಹೊರಟೆವಾದರೂ, ದಾರಿಯಲ್ಲಿ ಒಂದು ತಿರುವು ಪಡೆದು ಮೈಸೂರಿನ ಶ್ರೀ ದತ್ತ ಪೀಠ ಆಶ್ರಮದ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ತುಮಕೂರಿಗೆ ಹಿಂತಿರುಗಿದೆವು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾನು, ವಿಶ್ವನಾಥನ್, ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಆಕೆಯ ಪುತ್ರಿ ಕು. ನಮಿತ ಇದ್ದೇವೆ.
No comments:
Post a Comment