* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 12 January 2021

Raghavendra Swamy Mutt - R S Iyer - 11-01-2021

 ಅನಿರೀಕ್ಷಿತ ಅದೃಷ್ಟ- ರಾಯರ ಮಠದಲ್ಲಿ ಗೌರವಾರ್ಪಣೆ

----------------------------------------------
ಊಹಿಸಿಯೇ ಇರಲಿಲ್ಲ. ಇಂದು (11-01-2021, ಸೋಮವಾರ) ಸಂಜೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಾವು ಭೇಟಿಕೊಡಬೇಕಾದ ಸೌಭಾಗ್ಯ ಬರುತ್ತದೆಂದು.
ನಿನ್ನೆ ಬೆಳಗ್ಗೆ ನಾನು ಮತ್ತು ವಿಶ್ವನಾಥನ್ ಯಾವುದೋ ವಿಷಯ ಚರ್ಚಿಸುತ್ತಿರುವಾಗ ತುಮಕೂರು ನಗರದ ಶೆಟ್ಟಿಹಳ್ಳಿಯ ಹಿರಿಯ ನಾಗರಿಕರಾದ ಹಾಗೂ ಶೆಟ್ಟಿಹಳ್ಳಿ ಗೇಟ್ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾರ್ಯದರ್ಶಿಗಳಾದ ಶ್ರೀ ಪುಟ್ಟಣ್ಣನವರು ನೆನಪಾದರು. ಒಂದಾನೊಂದು ಕಾಲದಲ್ಲಿ ಸಾಮಾಜಿಕ ಕಳಕಳಿಯಿಂದ ಅವರು ಶೆಟ್ಟಿಹಳ್ಳಿ ಕೆರೆಯ ಸಂರಕ್ಷಣೆಗಾಗಿ ಹಾಗೂ ಒತ್ತುವರಿ ತೆರವಿಗಾಗಿ ಹೋರಾಟ ಮಾಡಿದ್ದುದು, ಬಳಿಕ ಲೋಕಾಯುಕ್ತದವರೆಗೆ ದೂರು ನೀಡಿದ್ದುದನ್ನು ನೆನಪಿಸಿಕೊಂಡಿದ್ದೆವು.
ನಿನ್ನೆ ಸಂಜೆ ನಾನು ದ್ವಿಚಕ್ರವಾಹನದಲ್ಲಿ ನಮ್ಮ ತಂದೆಯವರನ್ನು ಕೂರಿಸಿಕೊಂಡು ಮನೆಯತ್ತ ಬರುತ್ತಿದ್ದಾಗ ದಾರಿಯಲ್ಲಿ ಅನಿರೀಕ್ಷಿತವಾಗಿ ಶ್ರೀ ಪುಟ್ಟಣ್ಣನವರು ಭೇಟಿಯಾದರು. ನಮ್ಮನ್ನು ತಡೆದು ನಿಲ್ಲಿಸಿದ ಅವರು, “ನಿಮ್ಮ ತಂದೆಯವರನ್ನು ಬೇರೆ ಬೇರೆ ಸ್ಥಳಗಳ ದೇವಾಲಯಗಳಿಗೆ ಕರೆದೊಯ್ಯುತ್ತಿರುತ್ತೀರಿ. ನಮ್ಮ ಶ್ರೀ ರಾಯರ ಮಠಕ್ಕೂ ಬನ್ನಿ” ಎಂದು ನೇರವಾಗಿ ಆಹ್ವಾನಿಸಿದರು. ನನಗಂತೂ ಅಚ್ಚರಿಯೋ ಅಚ್ಚರಿ. “ಆಹಾ, ಇವತ್ತು ಬೆಳಿಗ್ಗೆಯಷ್ಟೇ ಇವರನ್ನು ನೆನಪಿಸಿಕೊಂಡಿದ್ದೆವು. ಸಂಜೆ ಸಿಕ್ಕೇ ಬಿಟ್ಟರು. ನೂರು ವರ್ಷ ಆಯಸ್ಸು” ಎಂದು ಮನದಲ್ಲೇ ಒಂದು ಭಾವನೆ ತೇಲಿ ಹೋಯಿತು. ಅವರ ಮೂಲಕ ರಾಯರೇ ಈ ಸೂಚನೆ ನೀಡಿದಂತೆ ಭಾಸವಾಗಿ, ಅನಿರ್ವಚನೀಯ ಆನಂದದಿಂದ ಒಡನೆಯೇ ಒಪ್ಪಿಕೊಂಡುಬಿಟ್ಟೆ.
ಅದರಂತೆ ಇಂದು ಸಂಜೆ ಶೆಟ್ಟಿಹಳ್ಳಿಗೇಟ್ ನ ಶ್ರೀ ರಾಯರ ಮಠಕ್ಕೆ ನಾನು ಮತ್ತು ವಿಶ್ವನಾಥನ್ ನಮ್ಮ ತಂದೆ- ಸ್ವಾತಂತ್ರ್ಯ ಹೋರಾಟಗಾರರೂ ಹಾಗೂ ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ ರವರನ್ನು ಕರೆದೊಯ್ದೆವು. ಆತ್ಮೀಯರಾದ ಶ್ರೀ ಹೆಚ್.ಎನ್.ಸತೀಶ್ ರವರೂ ಜೊತೆಗೂಡಿದರು.
ಮಠದಲ್ಲಿ ನಮ್ಮನ್ನು ಶ್ರೀ ಪುಟ್ಟಣ್ಣನವರು ಪ್ರೀತಿಯಿಂದ ಬರಮಾಡಿಕೊಂಡು, ನವೀಕರಿಸಲಾದ ಮಠದಲ್ಲಿ ಆಗಿರುವ-ಆಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳು, ಸೌಲಭ್ಯಗಳನ್ನು ಹರ್ಷದಿಂದ ತೋರಿಸುತ್ತ ಮಾಹಿತಿ ನೀಡಿದರು. ನಮಗೂ ಆನಂದವಾಯಿತು.
ಬಳಿಕ ಶ್ರೀ ರಾಯರ ಬೃಂದಾವನಕ್ಕೆ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿದರಲ್ಲದೆ, ಅಲ್ಲಿನ ಹಿರಿಯ ಅರ್ಚಕರ ಮೂಲಕ ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಪ್ರಸಾದ ನೀಡಿ ವಿಶೇಷ ಗೌರವ ಸಲ್ಲಿಸಿದರು.
ಇದು ನಮಗೊದಗಿದ ಅನಿರೀಕ್ಷಿತ ಅದೃಷ್ಟ- ಸುಯೋಗ. ಶ್ರೀ ಪುಟ್ಟಣ್ಣನವರ ಮೂಲಕ ಶ್ರೀ ರಾಯರೇ ಈ ಸೂಚನೆ ನೀಡಿ ನಮಗೆ ತಮ್ಮ ದರ್ಶನಭಾಗ್ಯ ಕರುಣಿಸಿದರೆಂದೇ ನಾವು ವಿನಮ್ರತೆಯಿಂದ ನಂಬಿದ್ದೇವೆ. ರಾಯರ ಮಠದ ಅಭಿವೃದ್ಧಿಗೆ ಶ್ರದ್ಧೆ-ಭಕ್ತಿಯಿಂದ ಶ್ರಮಿಸುತ್ತಿರುವ ಶ್ರೀ ಪುಟ್ಟಣ್ಣನವರ ಹೃದಯವಂತಿಕೆಗೆ, ಹೃದಯ ವೈಶಾಲ್ಯತೆಗೆ ನಾವು ಕೃತಜ್ಞರಾಗಿದ್ದೇವೆ.
-ಆರ್.ಎಸ್.ಅಯ್ಯರ್, ತುಮಕೂರು












No comments:

Post a Comment