ಹಿರೇಮಠದ ಶ್ರೀಗಳೊಂದಿಗೆ…
*************************
ಹಿರೇಮಠದ ಅಧ್ಯಕ್ಷರಾದ ಪೂಜ್ಯ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆವ ಸದವಕಾಶ ಕಳೆದವಾರ (ದಿ.12-12-2020) ನಮಗೆ ಲಭಿಸಿತು.
ನಮ್ಮ ತುಮಕೂರಿನ ಚಿಕ್ಕಪೇಟೆಯತ್ತ ತೆರಳಿ ಹಿಂತಿರುಗುವಾಗ ಪಾಂಡುರಂಗ ನಗರದಲ್ಲಿರುವ ಹಿರೇಮಠದ ಆವರಣದಲ್ಲೇ ಅನಿರೀಕ್ಷಿತವಾಗಿ ಶ್ರೀಗಳ ಭೇಟಿ ಆಯಿತು. ಭಕ್ತರೊಡನೆ ಕಾರಿನಲ್ಲಿ ಹೊರಟಿದ್ದ ಶ್ರೀಗಳು ನಮ್ಮನ್ನು ನೋಡಿ ಕಾರಿನಿಂದಿಳಿದು ಆಶೀರ್ವದಿಸಿದ್ದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತು. ಕಾರಿನಲ್ಲಿದ್ದ ಭಕ್ತರಿಗೆ ನಮ್ಮನ್ನು ಕುರಿತು “ಶ್ರವಣಕುಮಾರರು” ಎಂದು ಪರಿಚಯಿಸಿದರು. ಶ್ರೀಗಳದ್ದು ಎಂದಿನಂತೆ ಅದೇ ಪ್ರೀತಿಪೂರ್ಣ ಮಾತುಗಳು, ಅದೇ ಹಸನ್ಮುಖ..
ಇಪ್ಪತ್ತೈದು ವರ್ಷಗಳ ಹಿಂದೆ ಹಿರೇಮಠದ ಸ್ಥಳದಲ್ಲಿ ಸೌದೆ ಡಿಪೋ ಇತ್ತು. ಬಳಿಕ ನಿರ್ವಹಣೆಯಿಲ್ಲದೆ ಆ ಸ್ಥಳ ಅಕ್ಷರಶಃ ಪಾಳು ಬಿದ್ದಂತಾಗಿತ್ತು. ಅಂತಹ ಸಂದರ್ಭದಲ್ಲಿ ಪೂಜ್ಯ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ತುಮಕೂರಿಗೆ ದಯಮಾಡಿಸಿ, ಇಲ್ಲಿನ ಮಠದ ಹೊಣೆ ಹೊತ್ತರು. ಅಂದಿನಿಂದಲೂ ನನಗೆ ಶ್ರೀಗಳು ಸುಪರಿಚಿತರು. ಶ್ರೀಗಳ ನಿರಂತರ ತಪಸ್ಸಿನ ಫಲವಾಗಿ ಇಂದು ಹಿರೇಮಠವು ಅಪಾರ ಜನಮನ್ನಣೆ ಗಳಿಸಿ, ತುಮಕೂರಷ್ಟೇ ಅಲ್ಲದೆ ದೇಶ-ವಿದೇಶಗಳಲ್ಲಿ ಹೆಸರು ಗಳಿಸುವಷ್ಟು ಬೆಳೆದುನಿಂತಿದೆ. ಮೊನ್ನಿನ ಭೇಟಿಯ ಸಮಯದಲ್ಲಿ ಶ್ರೀಗಳೊಂದಿಗೆ ಕೆಲಕ್ಷಣ ಮಾತನಾಡುವಾಗ ಇವೆಲ್ಲ ಸಂಗತಿಗಳು ಪ್ರಸ್ತಾಪವಾದವು. ಆದರೆ ಶ್ರೀಗಳು ಮಾತ್ರ “ಇವೆಲ್ಲವೂ ಭಗವಂತನ ಕೃಪೆ ಮತ್ತು ಭಕ್ತಾದಿಗಳಿಂದ ಸಾಧ್ಯವಾದುದಷ್ಟೇ” ಎಂದು ಅತ್ಯಂತ ವಿನೀತ ಭಾವದಿಂದ ಹೇಳಿದರು.
ಅಂದಹಾಗೆ ನಮ್ಮ ತಂದೆ ವಿ.ಎಸ್.ರಾಮಚಂದ್ರನ್ ರವರ ಬಗೆಗೂ ಶ್ರೀಗಳಿಗೆ ವಿಶೇಷವಾದ ವಿಶ್ವಾಸ. ಅವರನ್ನು ಕುರಿತು ಪ್ರಸ್ತಾಪಿಸುವಾಗಲೆಲ್ಲ “ಋಷಿಗಳಂತೆ ಕಾಣುತ್ತಾರೆ” ಎಂದೇ ಪ್ರೀತಿಯಿಂದ ಹೇಳುತ್ತಿರುತ್ತಾರೆ. ಹಿರೇಮಠದ ವತಿಯಿಂದ ಬೆಂಗಳೂರು ರಸ್ತೆಯ ಹಳೆ ನಿಜಗಲ್ ಬಳಿ ನೂತನವಾಗಿ ನಿರ್ಮಿಸಿರುವ "ತಪೋವನ"ಕ್ಕೆ ನಿಮ್ಮ ತಂದೆಯವರನ್ನು ಒಮ್ಮೆ ಕರೆದುಕೊಂಡು ಬನ್ನಿ ಎಂದು ಸಹಾ ಶ್ರೀಗಳು ಆಹ್ವಾನಿಸಿದರು. ಚಿತ್ರದಲ್ಲಿ ಶ್ರೀಗಳೊಡನೆ ನಾನು, ವಿಶ್ವನಾಥನ್, ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಆಕೆಯ ಪುತ್ರಿ ಕು. ನಮಿತ ಇದ್ದೇವೆ.
No comments:
Post a Comment