ಗಾಂಧೀಜಿ ಪ್ರತಿಮೆಗೆ ಮುಖಾಮುಖಿಯಾದಾಗ….
----------------------------------------
“ನನ್ನ ಜೀವನವೇ ನನ್ನ ಸಂದೇಶ” –ಇದು ಮಹಾತ್ಮ ಗಾಂಧೀಜಿಯವರ ಅನುಪಮ ನುಡಿ. ಬೆಂಗಳೂರಿನ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಸುಂದರ ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ ಭವ್ಯವಾದ, ಧ್ಯಾನಶೀಲ ಗಾಂಧೀಜಿ ಪ್ರತಿಮೆಯ ಅಡಿಯಲ್ಲಿ ಈ ಸಂದೇಶವನ್ನು ಕೆತ್ತಲಾಗಿದೆ.
ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷರವರು ದಿ. 06-01-2021 ರಂದು ಮಧ್ಯಾಹ್ನ ಈ ಪ್ರತಿಮೆಯ ಮುಂದೆ ಬರುವಾಗ ಮಳೆಯ ಹನಿ ಜಿನುಗುತ್ತಿತ್ತು. ಹಾಗೆಯೇ ಕೆಲ ಕ್ಷಣ ಅದರ ಮುಂದೆ ಮುಖಾಮುಖಿಯಾಗಿ ನಿಂತೆವು. ಆಗ ಆ ಪ್ರತಿಮೆಯ ಪ್ರತಿಷ್ಠಾಪನೆಯ ಸಂದರ್ಭದ ಕೆಲ ಪ್ರಸಂಗಗಳು ಮನದಲ್ಲಿ ಹಾದು ಹೋದವು.
ಕೆಲ ವರ್ಷಗಳ ಹಿಂದೆ ಬಿಜೆಪಿಯ ಹಿರಿಯ ನಾಯಕರಾದ ಶ್ರೀಯುತ ಡಿ.ಹೆಚ್.ಶಂಕರಮೂರ್ತಿಯವರು ವಿಧಾನಪರಿಷತ್ ನ ಸಭಾಪತಿಗಳಾಗಿದ್ದಾಗ ಈ ವಿಗ್ರಹ ಪ್ರತಿಷ್ಠಾಪನೆಗೊಂಡಿತ್ತು. ಅಂದು ನಮ್ಮ ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಪ್ರಧಾನ ಭಾಷಣ ಮಾಡಿ, ಗಾಂಧೀಜಿಯವರ ಜೀವನದ ಹೃದಯಸ್ಪರ್ಶಿ ಪ್ರಸಂಗಗಳ ಬಗ್ಗೆ ಹೊಸ ಬೆಳಕು ಚೆಲ್ಲಿದ್ದರು.
ಅಂಥ ಒಂದು ಪ್ರಸಂಗ ಹೀಗಿದೆ:- ಬ್ರಿಟಿಷ್ ಸರಕಾರ ಒಮ್ಮೆ ಗಾಂಧೀಜಿಯವರನ್ನು ಬಂಧಿಸಿ, ಸೆರೆಮನೆಯಲ್ಲಿಟ್ಟಿತ್ತು. ಜೈಲರ್ ಗಾಂಧೀಜಿಯವರ ಎದೆಗೆ ಬೂಟುಕಾಲಿನಿಂದ ಒದ್ದಿದ್ದ ಅಮಾನವೀಯ ಘಟನೆಯೂ ಸಂಭವಿಸಿತ್ತು. ಜೈಲಿನಿಂದ ಬಿಡುಗಡೆ ಆಗುವಾಗ ಗಾಂಧೀಜಿಯವರು ಆ ಜೈಲರ್ ಗೆ ಒಂದು ಉಡುಗೊರೆ ಕೊಡಲು ಬಯಸಿದರು. ಅಲ್ಲಿದ್ದವರಿಗೆಲ್ಲ ಅಚ್ಚರಿಯೋ ಅಚ್ಚರಿ. ಆ ಉಡುಗೊರೆ ಏನೆಂದರೆ ಅದು ಸುಂದರವಾದ ಪಾದರಕ್ಷೆ. ಆ ಜೈಲರ್ ಅದನ್ನು ಧರಿಸಿದಾಗ ಅದು ಅವನ ಕಾಲಿನ ಅಳತೆಗೆ ಸಂಪೂರ್ಣವಾಗಿ ಸರಿಹೊಂದಿತ್ತು. ಅವನು ಅಚ್ಚರಿಯಿಂದ ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ. ಆಗ ಗಾಂಧೀಜಿ ಶಾಂತವಾಗಿ ಪ್ರತಿಕ್ರಿಯಿಸಿದರು- “ಅಂದು ನೀನು ನನಗೆ ಬೂಟು ಕಾಲಿನಿಂದ ಒದ್ದೆ. ಆಗ ನನ್ನ ಬಟ್ಟೆಯ ಮೇಲೆ ಅದರ ಅಳತೆಯ ಗುರುತು ಬಿದ್ದಿತ್ತು. ಅದನ್ನು ನಾನು ಹಾಗೆಯೇ ಜೋಪಾನವಾಗಿ ಇರಿಸಿದ್ದೆ. ಜೈಲಿನಲ್ಲಿ ಖೈದಿಗಳು ದಿನವೂ ಏನಾದರೂ ಕಾಯಕ ಮಾಡಬೇಕಲ್ಲವೇ? ಅದಕ್ಕಾಗಿ ನಾನು ಪಾದರಕ್ಷೆಯನ್ನು ತಯಾರಿಸಿದೆ. ಹೇಗಿದ್ದರೂ ನಿನ್ನ ಪಾದದ ಅಳತೆ ಇತ್ತಲ್ಲ, ಅದಕ್ಕೆ ತಕ್ಕಂತೆ ತಯಾರು ಮಾಡಿದೆ” ಎಂದಿದ್ದರಂತೆ. ಇಂತಹುದೊಂದು ಅಪೂರ್ವ ಹಾಗೂ ಅನುಪಮ ಹೃದಯಸ್ಪರ್ಶಿ ಪ್ರಸಂಗವನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಅಂದು ಹೇಳಿದ್ದುದು ಮತ್ತೆ ನೆನಪಿಗೆ ಬಂತು.
No comments:
Post a Comment