* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 8 January 2021

with Sri Y S V Datta- R S Iyer- 06-01-2021 ವೈ.ಎಸ್.ವಿ. ದತ್ತರವರೊಡನೆ

 ಸರಳತೆ, ಸೌಜನ್ಯದ ಶ್ರೀ ದತ್ತರವರೊಡನೆ…

‘ಡಿವಿಜಿ, ಕುಮಾರವ್ಯಾಸ ಬಗ್ಗೆ ಮಾತನಾಡಬಲ್ಲೆ’
---------------------------------------
ರಾಜ್ಯಾಡಳಿತದ ಶಕ್ತಿ ಕೇಂದ್ರವಾದ ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಸಮೀಪ ದಿ. 06-01-2021 ರಂದು ಮಧ್ಯಾಹ್ನ ಸರ್ವಸಾಧಾರಣ ವ್ಯಕ್ತಿಯಂತೆ ತಾವೊಬ್ಬರೆ ನಡೆದು ಹೋಗುತ್ತಿದ್ದರು ಶ್ರೀ ವೈ.ಎಸ್.ವಿ.ದತ್ತರವರು.
ಶ್ರೀಯುತರು ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದವರು ಹಾಗೂ ಮತ್ತೊಮ್ಮೆ ಕಡೂರು ಕ್ಷೇತ್ರದ ಶಾಸಕರಾಗಿದ್ದವರು. ಅಷ್ಟೇ ಅಲ್ಲದೆ, ಕಳೆದ ಸುಮಾರು ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದ ಅತಿರಥರೊಂದಿಗೆ ನಿಕಟ ಸಂಪರ್ಕದಲ್ಲಿರುವವರು. ವಾಗ್ಮಿಗಳಾಗಿ, ಚಿಂತಕರಾಗಿ, ಸರಳತೆ, ಸಜ್ಜನಿಕೆಗಳಿಗೆ ಹೆಸರಾದವರು. ಅಲ್ಲದೆ ‘ಗಣಿತದ ಮೇಷ್ಟ್ರು’ ಆಗಿ ಕೀರ್ತಿಗಳಿಸಿದವರು.
ಶ್ರೀ ದತ್ತರವರು ಎಂದಿನಂತೆ ಸರಳ ಉಡುಪಿನಲ್ಲಿದ್ದರು. ಬಿಳಿ ಪಂಚೆ, ಮೇಲೊಂದು ತುಂಬುತೋಳಿನ ಚೌಕಳಿ ಅಂಗಿ, ಅದರ ಮೇಲೊಂದು ಟವೆಲ್ ಧರಿಸಿದ್ದ ಅವರು ಮೊಬೈಲ್ ನಲ್ಲಿ ಮಾತನಾಡುತ್ತ ಎದುರುದಿಕ್ಕಿನಿಂದ ಬರುತ್ತಿದ್ದರು. ಸರಕ್ಕನೆ ಎಡಬದಿಯ ಮೆಟ್ಟಿಲ ಕಡೆಗೆ ತಿರುಗುತ್ತಿದ್ದರು. ಮುಖ್ಯಮಂತ್ರಿಗಳ ಕಚೇರಿ ಮುಂಭಾಗದಿಂದ ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷರವರು ಬರುತ್ತಿದ್ದೆವು. ನಾವು ಮೊದಲಿಗೆ ಇವರನ್ನು ಗಮನಿಸಿರಲೇ ಇಲ್ಲ. ಆದರೆ ಇವರು ಮೆಟ್ಟಿಲ ಕಡೆ ತಿರುಗಿ ಹೊರಟಾಗ ಸರ್ರನೆ ನಾನು ಅತ್ತ ನೋಡಿದೆ. “ಅರೆ… ಇವರು ದತ್ತರವರಲ್ಲವೇ?” ಅನಿಸಿತು. ತಕ್ಷಣವೇ ಅವರನ್ನು ಕೂಗಿ ಕರೆದೇ ಬಿಟ್ಟೆ.
ಮೊಬೈಲ್ ನಲ್ಲಿ ಮಾತನಾಡುತ್ತಲೇ ಮುನ್ನಡೆಯುತ್ತಿದ್ದ ಅವರು ಹಿಂದಕ್ಕೆ ತಿರುಗಿ ನಿಂತರು. ಮೊಬೈಲ್ ಮಾತು ಮುಗಿಸಿ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ನಮ್ಮತ್ತ ಬಂದರು. ನಾನು ಪರಿಚಯಿಸಿಕೊಂಡೆ. ಖುಷಿಯಿಂದ ಮಾತನಾಡಿದರು. ನಡುವೆ ನಮ್ಮ “ಡಿವಿಜಿ ನೆನಪು” ಕಾರ್ಯಕ್ರಮದ ವಿಷಯವೂ ಬಂತು. ಥಟ್ಟನೆ ಅವರು “ನಾನು ಡಿವಿಜಿಯವರ ಬಗ್ಗೆ, ಕುಮಾರ ವ್ಯಾಸನ ಬಗ್ಗೆ ಮಾತನಾಡಬಲ್ಲೆ” ಎಂದು ಅಭಿಮಾನದಿಂದ ಉದ್ಗರಿಸಿದರು. ನಮಗೂ ಖುಷಿಯಾಯಿತು. “ಹಾಗಾದರೆ ಮುಂದೊಮ್ಮೆ ನೀವೂ ಬನ್ನಿ” ಎಂದಾಗ, “ಖಂಡಿತವಾಗಿಯೂ” ಎಂದುತ್ತರಿಸಿದರು. ಬಳಿಕ ಅವರಿಂದ ನಾವು ಬೀಳ್ಕೊಂಡೆವು. ಸಣ್ಣಪುಟ್ಟ ಸ್ಥಾನದಲ್ಲಿರುವವರೇ ನಮ್ಮಂಥ ಶ್ರೀಸಾಮಾನ್ಯರತ್ತ ನೋಡುವುದು ಅಥವಾ ಮಾತನಾಡಿಸುವುದು ಇಂದು ಕಷ್ಟವಾಗಿರುವಾಗ, ಒಮ್ಮೆ MLC, ಒಮ್ಮೆ MLA ಆಗಿದ್ದಂಥವರ ಇಂತಹ ಸನ್ನಡತೆ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತು.



No comments:

Post a Comment